ಖ್ಯಾತ ನಿರ್ದೇಶಕ ಹರಿ ಗೋಪಾಲಕೃಷ್ಣ ಆಸ್ಪತ್ರೆಗೆ ದಾಖಲು
ಚೆನ್ನೈ, ಮಾರ್ಚ್ 20:ತೀವ್ರ ಜ್ವರದ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಹರಿ ಗೋಪಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಪಳನಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಪಳನಿಯಲ್ಲಿ ನಟ ಅರುಣ್ ವಿಜಯ್ ಜೊತೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಹರಿ ಗೋಪಾಲಕೃಷ್ಣ ತೊಡಗಿಡಿಕೊಂಡಿದ್ದರು. ಸಿನಿಮಾದ ಸೆಟ್ನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇದರ ಬೆನ್ನಲ್ಲೇ ಹರಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಕೊರೋನಾ ಪರೀಕ್ಷೆ ಸಹ ಮಾಡಲಾಗಿದೆ. ಫಲಿತಾಂಶ ನೆಗಟಿವ್ ಬಂದಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ. ಹರಿ ಗೋಪಾಲಕೃಷ್ಣ ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಾಮಿ, ಕೋವಿಲ್, ಅರುಳ್, ಅಯ್ಯ, ಸಿಂಗಂ, ಸಿಂಗಂ 2, ಸಿಂಗಂ 3, ಪೂಜೈ, ಸಾಮಿ 2 ಸೇರಿದಂತೆ ಹಲವು ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಸಿಂಗಂ ಸರಣಿ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ.