ಗಾನ ಸರಸ್ವತಿ ಸಂಗೀತಾ ಕಟ್ಟಿ
ಧಾರವಾಡ ನಗರವು ಸಾಹಿತ್ಯ ಸಂಗೀತ ಕ್ಷೇತ್ರಗಳ ಸಾಧಕರಿಂದಾಗಿ ಸಾಂಸ್ಕೃತಿಕ ನಗರೀಯಾಗಿ ಪ್ರಸಿದ್ಧಿ ಪಡೆದಿದೆ. ದ.ರಾ ಬೇಂದ್ರೆ, ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು ಅವರಂತಹ ದಿಗ್ಗಜರು ಈ ನೆಲದಲ್ಲಿ ಉದಯಿಸಿ ನಾಡನ್ನು ಬೆಳಗಿದ್ದಾರೆ. ಅಂತೆಯೇ ಈ ನೆಲದಲ್ಲಿ ಜನಿಸಿದ ಮಹಾನ್ ಪ್ರತಿಭೆ ಸಂಗೀತಾ ಕಟ್ಟಿ ಅವರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆ ಹಾಗೂ ಚಿತ್ರಗೀತೆಗಳೂ ಸೇರಿದಂತೆ ಎಲ್ಲ ಪ್ರಕಾರಗಳಲ್ಲಿ ಹಾಡಿ ಮನೆಮಾತಾಗಿದ್ದಾರೆ.
ಸಂಗೀತಾ ಅವರು ಧಾರವಾಡದಲ್ಲಿ 1970ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಡಾ.ಎಚ್.ಎ.ಕಟ್ಟಿ, ತಾಯಿ ಭಾರತಿ. ತಂದೆಯವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಸಂಗೀತಾ ಸಂಗೀತಗಾರರ ಕುಟುಂಬದಲ್ಲಿ ಹುಟ್ಟಿದವಳಲ್ಲ. ಆದರೆ ಸಂಗೀತ ಪ್ರೇಮಿಗಳಾಗಿದ್ದ ತಂದೆ-ತಾಯಿ ಮನೆಯಲ್ಲಿ ರೇಡಿಯೋ ಮೂಲಕ ಹಾಡುಗಳನ್ನು ಕೇಳುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಸಂಗೀತಾಳಿಗೆ ಸಂಗೀತದಲ್ಲಿ ಆಸಕ್ತಿ ಮೂಡಿತ್ತು. ಸಂಗೀತಗಾರ ನೌಷಾದ್ ಅಲಿಯವರು ಆಕಸ್ಮಿಕವಾಗಿ ಅವರ ಮನೆಗೆ ಭೇಟಿಯಿಟ್ಟಿದ್ದರು. ಆ ಸಮಯದಲ್ಲಿ ಸಂಗೀತಾ ಅವರ ಮುಂದೆ ಹಾಡಿ ಅಚ್ಚರಿಗೊಳಿಸಿದ್ದಳು. ಆಗ ಸಂಗೀತಾಳಿಗೆ ಕೇವಲ ನಾಲ್ಕು ವರ್ಷ. ನೌಷಾದ್ರವರು ಬಾಲಕಿಯನ್ನು ಒಳ್ಳೆಯ ಗುರುಗಳ ಬಳಿ ಸಂಗೀತ ಕಲಿಯಲು ಕಳಿಸಿರಿ ಎಂದು ಪಾಲಕರಿಗೆ ಸೂಚನೆಯಿತ್ತಿದ್ದರು.
ಪಾಲಕರು ಅವರ ಸೂಚನೆಯಂತೆ ಧಾರವಾಡದ ಮಂಗಳವಾರ ಪೇಟೆಯ ಪಂಡಿತ ಶೇಷಗಿರಿ ದಂಡಾಪುರ ಅವರ ಬಳಿ ಸಂಗೀತಾಳನ್ನು ಸಂಗೀತ ಕಲಿಯಲು ಸೇರಿಸಿದರು. ನಂತರ ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸಿದರು. ಸಂಗೀತಾರವರು ಸಂಗೀತದ ಜೊತೆ ಜೊತೆಗೆ ಶಾಲಾ ಶಿಕ್ಷಣವನ್ನು ಮುಂದುವರೆಸಿದರು. ಅವರು ಧಾರವಾಡ ಆಕಾಶವಾಣಿಯ ಗಿಳಿವಿಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಧುರವಾಗಿ ಹಾಡಿ, ಶೋತೃಗಳನ್ನು ರಂಜಿಸುವ ಮೂಲಕ ಬಾಲಪತ್ರಿಭೆಯಾಗಿ ಹೊರಹೊಮ್ಮಿದರು. ಸಂಗೀತಾಳಿಗೆ ವರಕವಿ ದ.ರಾ ಬೇಂದ್ರೆ ಅವರ ಎದುರು ಹಾಡುವ ಅವಕಾಶ ದೊರಕಿತು. ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಬೇಂದ್ರೆಯವರ ಕವನ ಹಾಡಿ, ಅಜ್ಜನ ಆಶೀವರ್ಾದ ಪಡೆದರು. ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ದಾಸಮಂಜರಿ ಎಂಬ ಭಕ್ತಿ ಸಂಗೀತದ ಕ್ಯಾಸೆಟ್ ಹೊರತಂದರು.
ನಂತರ ಪಂಡಿತ ಬಸವರಾಜ ರಾಜಗುರು ಅವರಲ್ಲಿ ಹನ್ನೆರಡು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದರು. ಸಂಗೀತಾರವರು ಮುಂಬೈನ ಹಿಂದೂಸ್ತಾನಿ ಸಂಗೀತದ ಮಹಾನ್ ಕಲಾವಿದೆ ಕಿಶೋರಿ ಅಮೋನ್ಕರ್ ಅವರಲ್ಲಿ ಮನೆಯಲ್ಲಿದ್ದುಕೊಂಡೇ ಐದು ವರ್ಷಗಳವರೆಗೆ ಗುರುವಿನ ಮಾರ್ಗದರ್ಶನ ಪಡೆದರು. ಹೀಗೆಯೇ ಅವರು ಸಂಗೀತಕ್ಕೆ ಸಂಬಂಧಪಟ್ಟ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದರು. ಸಂಗೀತಾರವರು ಸಂಗೀತ ಶಿಕ್ಷಣದ ಜೊತೆಗೆ ಕಾಲೇಜು ಶಿಕ್ಷಣವನ್ನು ಮುಂದುವರೆಸಿ, ರಸಾಯನಶಾಸ್ತ್ರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದರು. ಅವರು ಕನ್ನಡವಷ್ಟೇ ಅಲ್ಲದೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳನ್ನು ಚೆನ್ನಾಗಿ ಬಲ್ಲರು. ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದೆಯಾಗಿರುವ ಸಂಗೀತಾ ಕಟ್ಟಿಯವರು ಶಾಸ್ತ್ರೀಯ ಸಂಗೀತ, ವಚನ, ಜಾನಪದ ಗೀತೆ, ಭಾವಗೀತೆ, ದಾಸರ ಪದ, ಚಿತ್ರಗೀತೆ ಸೇರಿದಂತೆ ಎಲ್ಲ ಪ್ರಕಾರಗಳಲ್ಲೂ ಹಾಡಿ ಕೇಳುಗರ ಮನಸ್ಸನ್ನು ಗೆದ್ದಿದ್ದಾರೆ.
ಸಂಗೀತಾ ಕಟ್ಟಿಯವರು ಮನಮೋಹನ ಕುಲಕರ್ಣಿ ಅವರನ್ನು ಮದುವೆಯಾಗಿ ಬೆಂಗಳೂರಿಗೆ ತೆರಳಿದರು. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗುರುವಾಗಿ ಸಂಗೀತಾಸಕ್ತರಿಗೆ ಸಂಗೀತವನ್ನು ಧಾರೆಯೆರೆಯುತ್ತಿದ್ದಾರೆ. ಅವರು ಮಗಳು ಸಾವನಿ ಹಾಗೂ ಮಗ ನಿನಾದ ಜೊತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ಟಿ.ವಿ ಧಾರವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡಿ ಸೈ ಅನ್ನಸಿಕೊಂಡಿರುವ ಸಂಗೀತಾ ಕಟ್ಟಿ ಅವರು ಹೆಸರಾಂತ ನಿರ್ದೇಶಕರಾದ ಉಪೇಂದ್ರ ಕುಮಾರ, ವಿಜಯಭಾಸ್ಕರ, ರಾಜನ್ ನಾಗೇಂದ್ರ, ಸಿ.ಅಶ್ವಥ್ ಮೊದಲಾದವರ ಜೊತೆ ಕೆಲಸ ಮಾಡಿದ್ದಾರೆ. ಅಲ್ಲದೇ ಪ್ರಸಿದ್ಧ ಹಿನ್ನೆಲೆ ಗಾಯಕರಾದ ಡಾ.ಕೆ.ಜೆ ಏಸುದಾಸ್ ಮತ್ತು ಡಾ.ಎಸ್.ಪಿ ಬಾಲಸುಬ್ರಮಣ್ಯಂ ಅವರೊಂದಿಗೂ ಹಾಡಿದ್ದಾರೆ. ಅವರು ಹಾಡಿದ ಮೂಡಲಮನೆ, ಮನ್ವಂತರ, ಮಹಾಪರ್ವ, ಮಳೆಬಿಲ್ಲು, ಧಾರವಾಹಿಗಳ ಶೀಷರ್ಿಕೆ ಗೀತೆಗಳು ಪ್ರಸಿದ್ಧಿ ಪಡೆದಿವೆ. ಅವರು ಪತ್ರಿಕೆಗಳಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಗೀತದ ಕುರಿತು ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದಾರೆ.
1975 ರಿಂದ ಹಾಡಲು ಪ್ರಾರಂಭಿಸಿದ ಸಂಗೀತಾ ಕಟ್ಟಿ ಅವರು ಸಂಗೀತ ಪಯಣದಲ್ಲಿ ಅಪಾರ ಸಾಧನೆ ಮಾಡಿ, ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹೊಸ ಪೀಳಿಗೆಯ ದಿಗ್ಗಜರಲ್ಲಿ ಪ್ರಮುಖರೆನಿಸಿಕೊಂಡಿದ್ದಾರೆ. ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ, ರೆಂಭೆ ಕೊಂಬೆ ಮ್ಯಾಗ ಗೂಡ ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ, ಹೇಳು ಹೇಳೆನ್ನ ಮರಿಯೇ ಇತ್ಯಾದಿ ಗೀತೆಗಳನ್ನು ಅವರಿಂದ ಕೇಳುವದೇ ಒಂದು ಹಬ್ಬ. ಏಳು ಸಾವಿರಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ಮಾಡಿರುವ ಸಂಗೀತಾರವರು ಜಗದುದ್ದಗಲಕ್ಕೂ ಸಂಚರಿಸಿ ಹಾಡುಗಳ ರಸಸ್ವಾದನೆಯನ್ನು ಒದಗಿಸಿರುವರು. ಹಲವಾರು ವೈವಿಧ್ಯಮಯ ಸಂಗೀತದ ಅಲ್ಬಮ್ಗಳಲ್ಲದೇ ನಾಲ್ಕುನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ ಹಾಡಿರುವ ಪ್ರತಿಭೆ ಅವರದು. ವೃದ್ಧಾಶ್ರಮಗಳಿಗೆ ಮತ್ತು ಹೀಮೊಫೆಲಿಕ್ ಸೊಸೈಟಿ ಆಫ್ ಇಂಡಿಯಾ ನಿಧಿಸಂಗ್ರಹದ ಉದಾತ್ತ ಉದ್ದೇಶಕ್ಕಾಗಿ ಅವರು ಅನೇಕ ದತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಂಗೀತಾ ಕಟ್ಟಿ ಅವರು ಅಮೇರಿಕದ ಕನ್ನಡ ಕೂಟ ಅಕ್ಕ ಸೇರಿದಂತೆ ಆಸ್ಟ್ರೇಲಿಯ, ಇಂಗ್ಲೆಂಡ್, ಕೆನಡಾ, ನ್ಯೂಜಿಲ್ಯಾಂಡ್, ಬಹ್ರೇನ್, ಹಾಂಗ್ಕಾಂಗ್ ಇತ್ಯಾದಿ ದೇಶಗಳಲ್ಲೂ ಸಂಗೀತದ ಕಛೇರಿಗಳನ್ನು ನಡೆಸಿರುವರು. ಅಲ್ಲದೇ ಸಂಗೀತದಲ್ಲಿ ಮಹಿಳೆಯ ಪಾತ್ರ ಮತ್ತು ಭಾರತೀಯ ಸಂಗೀತದ ಪ್ರಾಮುಖ್ಯತೆ ಕುರಿತು ಅಮೇರಿಕದ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಅವರದೆ ಆದ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳಾದ ಸಂಗೀತಸರಿತಾ, ನಿನಾದ, ಆರ್.ಡಿ ಬರ್ಮನ್ಗೆ ಗೌರವ, ಮುಖೇಶ್ ಮತ್ತು ಪರಂಪರಾ ಭಾರತದಲ್ಲಿ ಸಂಗೀತದ ವಿಕಸನಗಳು ಎಲ್ಲಾ ಕಡೆಗಳಿಂದ ಮೆಚ್ಚುಗೆಯನ್ನು ಗಳಿಸಿವೆ. 2007ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಪಂ.ರಾಜಗುರು ರಾಷ್ಟ್ರೀಯ ಪುರಸ್ಕಾರ, 2016ರಲ್ಲಿ ರಮಣಶ್ರೀ ಪ್ರಶಸ್ತಿ, ಸಾರ್ಥಕ ನಾರಿ ಪ್ರಶಸ್ತಿ, ಬಸವಶ್ರೀ ವಚನ ಸಾಹಿತ್ಯಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ.
ತಂದೆ ತಾಯಿ ಸಂಗೀತಾ ಎಂಬ ಹೆಸರನ್ನು ನಾಮಕರಣ ಮಾಡಿರುವುದು ಸಾರ್ಥಕವೆನಿಸುವಂತೆ ಸಂಗೀತಾ ಕಟ್ಟಿ ಎಂಬ ಗಾನ ವಿಶಾರದೆ ನಮ್ಮ ಕನ್ನಡ ನಾಡಿನ ಅಪೂರ್ವ ಕೊಡುಗೆಯಾಗಿ ಸಂಗೀತ ಕ್ಷೇತ್ರದಲ್ಲಿ ಇಂದಿಗೂ ಪ್ರಜ್ವಲಿಸುವ ತಾರೆಯಾಗಿದ್ದಾರೆ. ಸಂಗೀತದ ಕ್ಷೇತ್ರ ಬೆಳೆಯಬೇಕು ಎಂಬ ಉದ್ದೇಶದಿಂದ ಸುರ್ಬಹಾರ್ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಸಂಗೀತ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ಸಂಗೀತಾ ಕಟ್ಟಿಯವರ ವೆಬ್ಸೈಟಿನಲ್ಲಿ ಅವರು ನಡೆಸಿರುವ ಸಂಗೀತ ಕಛೇರಿಗಳು, ಅವರ ಜೊತೆ ಧ್ವನಿಗೂಡಿಸಿರುವ ಸಂಗೀತ ಲೋಕದ ದಿಗ್ಗಜರು, ಅವರು ವ್ಯಾಪಿಸಿರುವ ವಿಸ್ತಾರಗಳು ಅಚ್ಚರಿ ಮೂಡಿಸುತ್ತವೆ. ಸಂಗೀತಾರವರ ನಾದಾಲಾಪನೆ ನಮ್ಮೆಲ್ಲರ ಮನಸ್ಸು, ಹೃದಯಗಳನ್ನು ತಲುಪಿ ಮುದಗೊಳಿಸುತ್ತಿರಲಿ. ಕಳೆದ ಐದು ದಶಕಗಳಿಂದ ಸಂಗೀತ ಯಾತ್ರೆಯಲ್ಲಿ ಮಹತ್ತರವಾದ ಸಾಧನೆ ಮಾಡಿರುವ ಅವರಿಗೆ ಇನ್ನೂ ಹೆಚ್ಚಿನ ಸ್ಥಾನ-ಮಾನಗಳು ದೊರೆಯಲಿ.
-ಸುರೇಶ ಗುದಗನವರ
ಧಾರವಾಡ