ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯಕ್ಕೆ ದಾರಿದೀಪ
ಡಾ. ಯಶವಂತ್ ಭೂಪಾಲ್ ಅಭಿಮತ: ಬಿಐಟಿಎಂ ರಜತ ಮಹೋತ್ಸವ ಸಂಭ್ರಮಾಚರಣೆ
ಬಳ್ಳಾರಿ 20: ಶಿಕ್ಷಣ ಎಂಬುದು ಯಾರು ಕಸಿದುಕೊಳ್ಳುವ ವಸ್ತುವಲ್ಲ, ಕಲಿಸಿದ ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಕಾಲೇಜಿನ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ಹೇಳಿದರು.ಅವರು ಪ್ರತಿಷ್ಠಿತ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಬಿಐಟಿಎಂ ಕಾಲೇಜಿನಲ್ಲಿ ರಜತ ಮಹೋತ್ಸವದ ಸಂಭ್ರಮಾಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
ಈ ಹಿಂದೆ ಹೈದರಾಬಾದ್ ಕರ್ನಾಟಕ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಸವಲತ್ತು ಸಮರ್ಪಕವಾಗಿ ಇರಲಿಲ್ಲ. ಇದನ್ನು ಅರಿತು ಕೇಂದ್ರ ಸಚಿವರಾಗಿ ಜನಮನ್ನಣೆ ಪಡೆದಿದ್ದ ಬಸವರಾಜೇಶ್ವರಿ ಅವರ ಹೆಸರಿನಲ್ಲಿ ನಮ್ಮ ಭಾಗದ ಮಕ್ಕಳು ಎಲ್ಲರಂತೆ ಮುಂದೆ ಬರಲಿ ಎಂದು ಈ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ 95 ಮಕ್ಕಳನ್ನು ಹೊಂದಿದ್ದ ಈ ಪ್ರತಿಷ್ಠಿತ ಕಾಲೇಜು, ಇಂದು 3700ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದೆ. ಅತ್ಯಂತ ಸಂಭ್ರಮ ಸಾರ್ಥಕತೆಯಿಂದ 25ನೇ ವರ್ಷದ ರಜತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಇದು ಅತ್ಯಂತ ಹೆಮ್ಮೆ ಮತ್ತು ಸಂತಸ ಮೂಡಿಸಿದೆ ಎಂದರು.ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ ನಮ್ಮ ಭಾಗದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇತರರಂತೆ ಸಾಧನೆ ಮಾಡಲಿ ಎಂದು ಹಾರೈಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ವಿದ್ಯಾಶಂಕರ್ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಿಂದಾಗಿ ರಾಜ್ಯವು ಸೇರಿದಂತೆ ಎಲ್ಲಾ ರಾಷ್ಟ್ರದಲ್ಲಿ ಶಿಕ್ಷಣದ ಪಥವೇ ಬದಲಾಗುತ್ತಿದೆ. ಇಂದಿನ ಬೆಳೆಯುತ್ತಿರುವ ತಾಂತ್ರಿಕ ಶಿಕ್ಷಣದಲ್ಲಿ ಎನ್.ಇ.ಪಿ ಯಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಪ್ರಗತಿ ಕಾಣಬಹುದಾಗಿದೆ ಎಂದು ತಿಳಿಸಿದರು.ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅಳವಡಿಸಿಕೊಳ್ಳಲು ವಿಶ್ವವಿದ್ಯಾಲಯವು ಕ್ರಮಕೈಗೊಂಡಿದೆ. ರಾಜ್ಯದಲ್ಲಿ ನೂತನ ಶಿಕ್ಷಣ ಪದ್ಧತಿ ಜಾರಿಗೆ ಐದು ಜನ ಪರಿಣಿತರ ತಂಡವನ್ನು ರಚಿಸಲಾಗಿದೆ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮಹೋನ್ನತ ಸ್ಥಾನ ಪಡೆಯಲಿದೆ. ನಮ್ಮ ಕರ್ನಾಟಕ ರಾಜ್ಯವು ಕೂಡ ಅತ್ಯುತ್ತಮ ಸ್ಥಾನ ಅಲಂಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಮ್ಮ ವಿಟಿಯು ವ್ಯಾಪ್ತಿಯಲ್ಲಿ ಅಭ್ಯಾಸ ಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಯು ಪ್ರಾಯೋಗಿಕ ಶಿಕ್ಷಣವನ್ನು ಪಡೆಯಲು ಎಲ್ಲಾ ಅನುಕೂಲತೆ ಕಲ್ಪಿಸಲು ಸೂಕ್ತ ವೇದಿಕೆ ನಿರ್ಮಿ ಸಲು ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲೆಡೆ ತರಬೇತಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ದೇಶದಲ್ಲಿ ವರ್ಷ ವರ್ಷವೂ ಕೂಡ ಲಕ್ಷಾಂತರ ಜನ ಇಂಜಿನಿಯರ್ಗಳು ಹೊರಹೊಮ್ಮುತ್ತಿದ್ದಾರೆ. ಇವರೆಲ್ಲರಿಗೂ ಉದ್ದಿಮೆಗಳಲ್ಲಿ ಇಂಟರ್ನ್ಶಿಪ್ ಮೂಲಕ ಪ್ರಾಯೋಗಿಕ ಶಿಕ್ಷಣ ನೀಡುವುದು ಕಷ್ಟ ಸಾಧ್ಯ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಅಂದಾಜು 60 ಕೋಟಿ ರೂಪಾಯಿ ವೆಚ್ಚದಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಿದ್ದೇವೆ ಎಂದು ಡಾ. ವಿದ್ಯಾಶಂಕರ್ ಎಸ್ ತಿಳಿಸಿದರು.
ಮೈಂಡ್ ಟ್ರೀ ಸಹ ಸಂಸ್ಥಾಪಕ ಪಾರ್ಥಸಾರಥಿ ಎನ್ ಎಸ್ ಮಾತನಾಡುತ್ತಾ ಭೌತಿಕ, ಡಿಜಿಟಲ್ ಅಂಡ್ ಎಮೋಷನಲ್ ಇನ್ಫ್ರಾಸ್ಟ್ರಕ್ಚರ್ ಇದ್ದರೆ ಯಾವುದೇ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ. ಒಂದು ಕೊರತೆಯಾದರೂ ಬೆಳವಣಿಗೆಗೆ ಸಮಸ್ಯೆ ಆಗುತ್ತದೆ ಎಂದರು.ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜೆ.ವಿ.ಮಹಿಪಾಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಈ ಸಂಸ್ಥೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಿದೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿರುವ ನಮ್ಮ ಸಂಸ್ಥೆ ರಜತ ಮಹೋತ್ಸವ ಆಚರಿಸುತ್ತಿದೆ ಎಂದರು.ಇದಕ್ಕೂ ಮುನ್ನ ಬಿಎಟಿಎಂ ಕಾಲೇಜು ರಜತ ಮಹೋತ್ಸವದ ನಿಮಿತ್ತ ಸಿಲ್ವರ್ ಜುಬ್ಲಿ ಬ್ಲಾಕ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಭೋದಕ ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸಿಂಧನೂರು ಮಾಜಿ ಶಾಸಕ ಬಾದರ್ಲಾ ಹಂಪನಗೌಡ, ಮಾಜಿ ಸಚಿವ ಬಿ. ಆರ್. ಯಾವಗಲ್, ವಿವಿ ಸಂಘದ ಅಲ್ಲಂ ಬಸವರಾಜ್, ಉಪ ನಿರ್ದೇಶಕ ಪೃಥ್ವಿರಾಜ್ ಭೂಪಾಲ್, ಟ್ರಸ್ಟಿಗಳಾದ ಎಸ್. ಬಿ. ಅಶೋಕ್ ಭೂಪಾಲ್, ಡಾ.ವಿ.ಜೆ.ಭರತ್, ಅಮರ್ ರಾಜ್ ಭೂಪಾಲ್, ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್, ಆಡಳಿತಾಧಿಕಾರಿ ಪಿ ಅಮರೇಶಯ್ಯ, ಕಾಲೇಜಿನ ಡೀನ್ಸ್, ವಿಭಾಗ ಮುಖ್ಯಸ್ಥರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ, ನರಸಿಂಹ ಜೋಷಿಯವರಿಂದ ನಗೆ ಹಬ್ಬ ಮತ್ತು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಮೇಯರ್ ಇಬ್ರಾಹಿಂಬಾಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾಲೇಜಿನ ಆಡಳಿತ ಮಂಡಳಿಯವರಿಗೆ, ಬೋಧಕ-ಬೋಧಕೇತರ ಸಿಬ್ಬಂದಿಯವರಿಗೆ ಮತ್ತು ವಿದ್ಯಾರ್ಥಿಗಳಿಗೆ ಶುಭಕೋರಿದರು.ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್ ಜೆ ವಿ ಮಹಿಪಾಲ್, ಮ್ಯಾನೇಜಿಂಗ್ ಟ್ರಸ್ಟಿ, ಡಾ. ಯಶವಂತ ಭೂಪಾಲ್, ಟ್ರಸ್ಟಿ ಮತ್ತು ಗೌರವ ಕಾರ್ಯದರ್ಶಿ , ವೈ.ಜೆ. ಪೃಥ್ವಿರಾಜ್ ಭೂಪಾಲ್ ಮತ್ತು ಟ್ರಸ್ಟಿಗಳಾದ ಎಸ್ ಬಿ ಅಶೋಕ್ ಭೂಪಾಲ್, ಡಾ. ವಿ ಜೆ ಭರತ್, ಅಮರ್ ರಾಜ್ ಭೂಪಾಲ್ ಮತ್ತು ಪಿ. ಸೋಮಯ್ಯ ಅವರಿಗೆ ಕಾಲೇಜಿನ ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್, ಆಡಳಿತಾಧಿಕಾರಿ ಪಿ.ಅಮರೇಶಯ್ಯ, ಡೀನ್ಸ್, ವಿಭಾಗ ಮುಖ್ಯಸ್ಥರುಗಳು ಎಲ್ಲರೂ ಸೇರಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡಿ ಅವರ ಬದುಕು ರೂಪಿಸಿದಂತಹ ಮಹಾನೀಯರಿಗೆ ರಜತ ಮಹೋತ್ಸವ ಪ್ರಯುಕ್ತ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.ಡಾ. ಯು. ಈರಣ್ಣ, ಡಾ. ಬಿ.ಎಸ್. ಖೇಣೇದ, ಡಾ. ವಿ.ಸಿ.ಪಾಟೀಲ, ಡಾ.ರಾಘವೇಂದ್ರ ಜೋಶಿ, ಡಾ. ಆರ್. ಎನ್. ಕುಲಕರ್ಣಿ , ಡಾ. ಬಿ. ಎಂ. ವಿದ್ಯಾವತಿ, ಡಾ. ಕೆ.ಎಂ. ಸದ್ಯೋಜಾತ, ಡಾ. ಶರಣ್ ರೆಡ್ಡಿ, ಡಾ. ಟಿ.ಎಚ್. ಪಟೇಲ್, ಡಾ. ವಿ. ವೆಂಕಟ ರಮಣ, ಡಾ. ಜಾನೆಟ್ ಜ್ಯೋತಿ ಡಿಸೋಜಾ, ಡಾ. ಟಿ. ಮಾಚಪ್ಪ, ಡಾ. ಸುರೇಶ್, ಡಾ. ಕೆ. ಎಸ್. ಆರ್. ಶ್ರೀಧರ್, ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು, ಪಾಲಕ-ಪೋಷಕರು ಈ ರಜತ ಮಹೋತ್ಸವಕ್ಕೆ ಸಾಕ್ಷಿಗಳಾದರು .