ಪಾಳುಬಿದ್ದ ಲಕ್ಷಾಂತರ ರೂ. ವೆಚ್ಚದ ಒಣ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಘಟಕ
ಮುಂಡಗೋಡ 15: ತಾಲ್ಲೂಕಿನ ಪಟ್ಟಣ ಪಂಚಾಯಿತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಒಣ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಘಟಕವು ಇಂದು ಸಂಪೂರ್ಣವಾಗಿ ಪಾಳು ಬಿದ್ದು ನಿರುಪಯೋಗಿಯಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ನದೀಶ್ವರ ನಗರದ ಕಾರ್ಮಿಕ ಭವನದ ಹಿಂಭಾಗ ಹಾಗೂ ಗಾಂಧಿನಗರ ಪ್ರದೇಶದಲ್ಲಿ ಸ್ಥಾಪಿಸಲಾದ ಈ ಒಣ ತ್ಯಾಜ್ಯ ವಿಲೇವಾರಿ ಘಟಕಗಳು ಬಳಕೆಯಿಲ್ಲದೇ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದ್ದು, ಅಲ್ಲಿ ತ್ಯಾಜ್ಯ ಸಂಗ್ರಹಣೆ ನಡೆದಿರುವ ಯಾವುದೇ ಗುರುತು ಕೂಡ ಕಾಣದ ಸ್ಥಿತಿಯಲ್ಲಿವೆ.
ಘಟಕ ಆರಂಭಗೊಂಡ ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದ್ದು, ನಂತರ ಯಾವುದೇ ನಿರ್ವಹಣೆ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳದಿರುವುದು ಪಟ್ಟಣ ಪಂಚಾಯಿತಿ ಇಲಾಖೆಯ ಘೋರ ನಿರ್ಲಕ್ಷ್ಯವನ್ನು ಸ್ಪಷ್ಟಪಡಿಸುತ್ತದೆ. ಒಣ ತ್ಯಾಜ್ಯ ವಿಲೇವಾರಿಗಾಗಿ ನಿರ್ಮಿಸಲಾದ ಈ ಘಟಕಗಳು ಬಳಕೆಯಾಗದೇ ಪಾಳು ಬಿದ್ದಿರುವುದಕ್ಕೆ ಪಟ್ಟಣ ಪಂಚಾಯಿತಿ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ. ಕೂಡಲೇ ಘಟಕದ ಆವರಣದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಯುದ್ಧೋಪಾದಿಯಲ್ಲಿ ತೆರವುಗೊಳಿಸಿ, ಸಂಪೂರ್ಣವಾಗಿ ಶುಚಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಪಾಳು ಬಿದ್ದಿರುವ ಒಣ ತ್ಯಾಜ್ಯ ಸಂಗ್ರಹಣೆ ಘಟಕವನ್ನು ದುರಸ್ತಿ ಪಡಿಸಿ, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಹಣ ವ್ಯರ್ಥವಾಗದಂತೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ. “ಈ ಕುರಿತು ಪ್ರತಿಕ್ರಿಯೆ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್. ಅವರು, “ನದೀಶ್ವರ ನಗರದ ಕಾರ್ಮಿಕ ಭವನದ ಹಿಂಭಾಗ ಹಾಗೂ ಗಾಂಧಿನಗರ ಪ್ರದೇಶದಲ್ಲಿ ಸ್ಥಾಪಿಸಲಾದ ಒಣ ತ್ಯಾಜ್ಯ ವಿಲೇವಾರಿ ಘಟಕಗಳ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.