ಧಾರವಾಡದಲ್ಲಿ ಜಿಲ್ಲಾ ಮಟ್ಟದ ‘ಗ್ಯಾರಂಟಿ ಉತ್ಸವ’ ಹಾಗೂ ಕಾರ್ಯಾಗಾರ; ಜನವರಿ 5 ರಂದು ಬೃಹತ್ ಸಮಾವೇಶ
ಧಾರವಾಡ 02: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ "ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ವಿವರ: ದಿನಾಂಕ: 05-01-2026, ಸೋಮವಾರ ಸಮಯ: ಬೆಳಿಗ್ಗೆ 10:00 ಗಂಟೆಗೆ ಸ್ಥಳ: ಅಣ್ಣಾಜೀರಾವ್ ಶಿರೂರ್ ರಂಗಮಂದಿರ (ಸೃಜನಾ), ಕೆ.ಸಿ.ಡಿ. ಕಾಲೇಜು ಆವರಣ, ಧಾರವಾಡ.ಪೂರ್ವಭಾವಿ ಸಭೆಯ ಮುಖ್ಯಾಂಶಗಳು:ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅರವಿಂದ ಏಗನಗೌಡರ ಅವರು ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಅವರು, "ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಮನೆಗೆ ತಲುಪಿವೆ. ಈ ಉತ್ಸವವು ಫಲಾನುಭವಿಗಳ ಸಂಭ್ರಮದ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಮತ್ತು ಸಾರ್ವಜನಿಕರನ್ನು ಸೇರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ಅಧಿಕಾರಿಗಳಿಗೆ ಮತ್ತು ಸಮಿತಿ ಸದಸ್ಯರಿಗೆ ಕರೆ ನೀಡಿದರು.ಧಾರವಾಡ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ (ಇಓ) ಶ್ರೀ ಗಂಗಾಧರ ಕಂದಕೂರ್ ಅವರು ಮಾತನಾಡಿ, "ಗ್ಯಾರಂಟಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಾಗಾರದಲ್ಲಿ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಾಗುವುದು. ಯಾವುದೇ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುವುದು. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ," ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸದಸ್ಯರಾದ ಚಂದ್ರಶೇಖರ ಕದಂ, ರೇಣುಕಾ ಕಳ್ಳಿಮನಿ, ಕಲಾವತಿ ಭೀಮಕ್ಕನವರ,ಸಿದ್ದಪ್ಪ ಕಳ್ಳಿಮನಿ, ಮಂಜು ಉಡಕೇರಿ, ಕಾರ್ತೀಕ ಗೋಕಾಕ, ಮೈಲಾರಗೌಡ ಪಾಟೀಲ, ರಾಜೇಶ ಚವ್ವಾನ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.