ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಿ: ಮೇಲಿನಕೇರಿ
ಲೋಕದರ್ಶನ ವರದಿ
ಜಮಖಂಡಿ 18: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಬೇಕು ಇಲ್ಲವಾದರೆ 2023 ವಿಧಾನ ಸಭೆಯ ಚುನಾವಣೆಯಲ್ಲಿ ರಾಜಕೀಯ ನಾಯಕರುಗಳಿಗೆ ಸಾವಳಗಿ ಪಟ್ಟಣದಲ್ಲಿ ಪ್ರವೇಶಿಸಲು ನಿರ್ಬಂಧ ಹೇರಲಾಗುತ್ತದೆಂದು ಡಿಎಸ್ಎಸ್ ರಾಜ್ಯಸಂಚಾಲಕ ರಾಜು ಮೇಲಿನಕೇರಿ ಎಚ್ಚರಿಕೆ ನೀಡಿದ್ದಾರೆ.
ತೇರದಾಳ, ಸಾವಳಗಿಯ ಪಟ್ಟಣ ಜನತೆ ಒಂದೇ ಜಿಲ್ಲೆಯವರಿದ್ದು ಆಡಳಿತ ಪಕ್ಷದ ನಾಯಕರ ಗಮನ ಹರಿಸುತ್ತಿಲ್ಲ. ತೇರದಾಳ ಭೌಗೋಳಿಕವಾಗಿ ಕ್ಷೇತ್ರ ಮತ್ತು ಜನಸಂಖ್ಯೆ ಇಲ್ಲದಿದ್ದರೂ ಅಲ್ಲಿನ ಜನರಿಗೆ ತಾಲೂಕಾ ಘೋಷಣೆ ,ನಾವು ಭೌಗೋಳಿಕವಾಗಿ ಜನಸಂಖ್ಯೆಯೊಂದಿಗೆ ತಾಲೂಕಾ ರಚಿಸಲು ಸೂಕ್ತವಾಗಿದ್ದರೂ ತಾಲೂಕಾ ಘೋಷಿಸಲು ಮಲತಾಯಿ ಧೋರಣೆ ತೊರುತ್ತಿದ್ದಾರೆ.
ಸಾವಳಗಿ ಪಟ್ಟಣದ ವಲಯದಲ್ಲಿ ಒಟ್ಟು 23 ಗ್ರಾಮಗಳು ಒಳಪಡುತ್ತಿದ್ದು ಭೌಗೋಳಿಕವಾಗಿ 1, 09,050 ಎಕರೆ ಗುಂ. ಕ್ಷೇತ್ರವನ್ನು ಹೊಂದಿರುತ್ತದೆ ಅಲ್ಲದೆ ಸನ್ 2011 ರ ಜನಗಣತಿಯ ಪ್ರಕಾರ 96,073 ಜನಸಂಖ್ಯೆ ಹೊಂದಿದೆ. ಅಂದಾಜು 1.25 ಲಕ್ಷ ಗಡಿ ಜನಸಂಖ್ಯೆಯನ್ನು ಹೊಂದಿದೆ. ಕನಿಷ್ಠ 20 ಕೀ. ಮೀ ದಿಂದ ಗರಿಷ್ಠ 45 ಕೀ. ಮೀ ವರೆಗೆ ಇರುತ್ತದೆ. ನಾಡ ಕಾರ್ಯಾಲಯ, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಸಮೂದಾಯ ಆರೋಗ್ಯ ಕೇಂದ್ರ, 110 ಕೆ ವ್ಹಿ ವಿದ್ಯುತ್ ಮರುಪ್ರಸರಣ ಕೇಂದ್ರ ,ಪಶು ಚಿಕಿತ್ಸಾಲಯ , ಪದವಿ ಪೂರ್ವ ಕಾಲೇಜುಗಳು ಹಾಗೂ ಪ್ರಥಮ ದರ್ಜಿ ಕಾಲೇಜು ಹೀಗೆ ಅನೇಕ ಶಿಕ್ಷಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ರಸ್ತೆ ಸಾರಿಗೆ ಸಂಸ್ಥೆಯವರು ಸುಮಾರು 2 ಕೋಟಿ ಹಣ ಮಂಜೂರು ಪಡೆದುಕೊಂಡು ನೂತನ ಬಸ್ ನಿಲ್ದಾಣ ಪ್ರಾರಂಭಿಸಿದ್ದಾರೆ. ಮಹಾರಾಜರ ಕಾಲದ ಸುಸಜ್ಜಿತವಾದ ಪ್ರವಾಸಿ ಮಂದಿರ ಮತ್ತು ಇನ್ನೂ ಅನೇಕ ವಾಣಿಜ್ಯ ಕೇಂದ್ರಗಳು ಇದ್ದು ಈ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಭಾಗದಲ್ಲಿ ತಮ್ಮ ಸರ್ಕಾರವು ಸುಮಾರು 25 ಸಾವಿರ ಎಕರೆ ನೀರಾವರಿ ಸೌಲಭ್ಯ ಒದಗಿಸಲು ಸಾವಳಗಿ -ತುಂಗಳ ಏತ ನೀರಾವರಿ ಯೋಜನೆ ಹೊಂದಿದೆ. ತಾಲೂಕಾ ಕಛೇರಿಗಳನ್ನು ಪ್ರಾರಂಭಿಸಲು ಸಂಸ್ಥಾನ ಕಾಲದ ಕಟ್ಟಡಗಳು ಒಳ್ಳೆಯ ಸ್ಥಿತಿಯಲ್ಲಿ ಇರುತ್ತವೆ. ಬೆಳಗಾವಿ ಅಧಿವೇಶನದಲ್ಲಿ ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲದೆ ಹೋದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರಾಜಕೀಯ ನಾಯಕರುಗಳಿಗೆ ಸಾವಳಗಿ ಪಟ್ಟಣದಲ್ಲಿ ಪ್ರವೇಶ ನಿರ್ಬಂಧನೆ ಹೇರಬೇಕಾಗುತ್ತದೆ ಎಂದು ಸಾವಳಗಿ ಪಟ್ಟಣದ ಜನತೆ ತೀರ್ಮಾ ನವಾಗಿದೆ ಎಂದು ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ದಲಿತ ಧುರೀಣ ರವಿ ಬಬಲೇಶ್ವರ, ತಾಲೂಕು ಸಂಚಾಲಕ ವಕೀಲ ದೊಡ್ಡಮನಿ ಸೇರಿದಂತೆ ಅನೇಕರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.