ಹಿರೇಪಡಸಲಗಿ ಗ್ರಾಮಕ್ಕೆ ಮೊಸಳೆ ಪ್ರತ್ಯಕ್ಷ: ಮೀನುಗಾರನ ಮೇಲೆ ಹಲ್ಲೆ
ಲೋಕದರ್ಶನ ವರದಿ,
ಜಮಖಂಡಿ : ತಾಲೂಕಿನ ಹಿರೇಪಡಸಲಗಿ ಗ್ರಾಮಕ್ಕೆ ಮೊಸಳೆಯೊಂದು ನುಗ್ಗಿ ಓರ್ವ ಮೀನುಗಾರನ ಮೇಲೆ ಹಲ್ಲೆ ಮಾಡಿ ಗಂಭೀರ ಪ್ರಮಾಣದ ಗಾಯ ಮಾಡಿದ ಘಟನೆ ನಡೆದಿದೆ.
ತಾಲೂಕಿನಲ್ಲಿನ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ನದಿಯಲ್ಲಿನ ಜಲಚರ ಪ್ರಾಣಿಗಳು ನೀರಿಗಾಗಿ ಭೂಮಿಗೆ ಬರುತ್ತಿದ್ದು, ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮೀನಿಗೆ ಭಾರೀ ಗ್ರಾತ್ರದ ಮೊಸಳೆಯೊಂದು ನುಗ್ಗಿದ ಪರಿಣಾಮ ಓರ್ವನಿಗೆ ಭಾರಿ ಪ್ರಮಾಣದ ಗಂಭೀರ ಗಾಯವಾಗಿದ್ದು, ಆತನನ್ನು ಸದ್ಯ ಮಹಾರಾಷ್ಟ್ರದ ಸೋಲ್ಲಾಪೂರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸಮಯಕ್ಕೆ ಅರಣ್ಯ ಸಿಬ್ಬಂದಿ ಬಾರದಿದ್ದಕ್ಕೆ ಕೆಲ ಯುವಕರು, ರೈತರು ಸೇರಿಕೊಂಡು ಭಾರೀ ಗಾತ್ರದ ಮೊಸಳೆಯನ್ನು ಟಂಟಂ ವಾಹನದಲ್ಲಿ ಹಾಕೊಕೊಂಡು ಆಲಮಟ್ಟಿ ಜಲಾಶಯಕ್ಕೆ ಬಿಟ್ಟು ಬಂದಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ತಾಲೂಕಿನ ನದಿ ತೀರದ ಗ್ರಾಮಸ್ಥರು ನದಿಯಿಂದ ಯಾವುದೇ ಅಪಾಯಕಾರಿ ಪ್ರಾಣಿಗಳನ್ನು ಕಂಡರೇ ಕೂಡಲೇ 1926 ಸಂಖ್ಯೆಗೆ ದೂರವಾಣಿ ಕರೆ ಮಾಡಬೇಕೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.