ಲೇಖನಗಳು

ವಿಜಯವನ್ನು ವಿಕೃತವಾಗಿ ಸಂಭ್ರಮಿಸುವುದು ಶತ್ರುತ್ವವನ್ನು ಗಟ್ಟಿಗೊಳಿಸಿಕೊಂಡಂತೆ..

ವಿಜಯವನ್ನು ವಿಕೃತವಾಗಿ ಸಂಭ್ರಮಿಸುವುದು ಶತ್ರುತ್ವವನ್ನು  ಗಟ್ಟಿಗೊಳಿಸಿಕೊಂಡಂತೆ..
ಗೆಲುವು ಶ್ರಮದ ಸಂಕೇತ. ಗೆಲುವು ಉತ್ತುಂಗಕ್ಕೆ ಅಡಿ ಇಡಲು ಬೇಕಾದ ಅವಕಾಶ. ಗೆಲುವು ಸಾಧನೆಗೆ ಮುನ್ನುಡಿ. ಗೆಲುವು ಆತ್ಮ ಸಾಕ್ಷಿಯ ನಡೆಗೆ ಆದರ್ಶ. ಗೆಲುವು ಹೊಸ ಸಂಶೋಧನಾ ಹೊತ್ತಿಗೆಯ ಮೊದಲ ಪುಟ. ಇಂತಹ ವಿಶೇಷ ವಿಶೇಷಣಗಳ ಚತನ್ಯ ಶಕ್ತಿಯನ್ನು ಆನಂದಿಸುವುದು ಎಲ್ಲರಿಗೂ ಒಳ್ಳೆಯದು. ಪರಮ ಆನಂದದ ಕ್ಷಣವನ್ನು ಅನುಭವಿಸಿ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ವೃದ್ದಿಸಿಕೊಳ್ಳುವ ಇಂತಹ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳಲಾಗದು. ಸಣ್ಣ ಸಣ್ಣ ಗೆಲುವುಗಳೇ ದೊಡ್ಡ ಸಾಧನೆಯ ಅಡಿಗಲ್ಲುಗಳು. ಸಣ್ಣ ಸಣ್ಣ ಖುಷಿಗಳೇ ದೊಡ್ಡ ಖುಷಿಯ ಇಡಿ ಗಂಟುಗಳು. ಅಂತಹ ಇಂತಹ ಆನಂದಗಳೇ ಜೀವನ ಸಾರ್ಥಕತೆಯ ಮೂಲಾಧಾರಗಳಾಗಿವೆ.
ಇವುಗಳ ಗಳಿಕೆಗಾಗಿಯೇ ಮಾನವ ಸದಾ ಒಂದಿಲ್ಲೊಂದು ಪ್ರಯತ್ನವನ್ನು ಮಾಡುತ್ತಿರುತ್ತಾನೆ. ಹಾಗೂ ಒತ್ತಡಮುಕ್ತನಾಗಿ ಬದುಕಲು ಬಯಸುತ್ತಾನೆ. ಹಾಗೆಯೇ ಇರಬೇಕು ಕೂಡ. ಶಾಂತಿ. ನೆಮ್ಮದಿಯಿಂದ ಸುಖಕರ ಬದುಕನ್ನೂ ಕಟ್ಟಿಕೊಂಡು ಪ್ರಗತಿಯನ್ನು ಸಾಧಿಸಬೇಕಾದರೆ ನೆರೆಹೊರೆಯವರೊಂದಿಗೆ ಪ್ರೀತಿ ವಿಶ್ವಾಸ. ಸಹಕಾರ. ಸೌಹಾರ್ದತೆ ಹಾಗೂ ಹೊಂದಾಣಿಕೆಯಂತಹ ಸಾಂಗಿಕ ಜೀವನದ ಅಂಶಗಳನ್ನು ರೂಢಿಸಿಕೊಂಡು ಅನುಸರಿಸಬೇಕಾಗುತ್ತದೆ. ಆದರೂ ವೈವಿಧ್ಯಮಯ ಪರಿಸರ. ನಡೆನುಡಿ. ಆಚಾರ ವಿಚಾರ. ಭಾಷೆ ಹಾಗೂ ಸಂಸ್ಕೃತಿಯಲ್ಲಿ ಬದುಕುತ್ತಿರುವುದರಿಂದ ಭಿನ್ನಾಭಿಪ್ರಾಯಗಳು. ವೈಮನಸ್ಸುಗಳು. ತಪ್ಪು ತಿಳುವಳಿಕೆಗಳು ಉಂಟಾಗುವುದು ಸಹಜ. ಅನಿರೀಕ್ಷಿತವಾಗಿಯೋ ಅಥವಾ ಅನಿವಾರ್ಯವಾಗಿಯೋ ಉಂಟಾದ ಈ  ಪ್ರಮಾದಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು. ಸರಿಪಡಿಸಿಕೊಂಡು ಆಪ್ತರಂತೆ ಬದುಕುವುದು ಮಾನವನ ಮಹತ್ವದ ಗುಣವಾಗಿದೆ.
ಇಂತಹ ವೈಮನಸ್ಸುಗಳನ್ನು. ತಪ್ಪು ಅಭಿಪ್ರಾಯಗಳನ್ನು ಹಾಗೂ ವೈರತ್ವವನ್ನು ಶಮನ ಮಾಡಿಕೊಂಡು ಸೌಹಾರ್ದತೆಯನ್ನು ತರಲು ಜೀವನದಲ್ಲಿ ಅನೇಕ ಸುಸಂದರ್ಭದ ಅವಕಾಗಳು  ಒದಗಿ ಬರುತ್ತವೆ. ಅವುಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಮಾರಂಭಗಳು ಮತ್ತು ಸ್ಪರ್ಧೆಗಳು ಅತ್ಯಂತ ಮುಖ್ಯವಾದವುಗಳಾಗಿವೆ.
ವೈರತ್ವವನ್ನು ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಕಾರಣ ಪರಸ್ಪರರಲ್ಲಿ ನಂಬಿಕೆಯನ್ನು. ಪ್ರೀತಿ ಗೌರವ ಆದರಗಳನ್ನು ಉಂಟು ಮಾಡಿ ಸಹೋದರರಂತೆ ಬದುಕಲು ಈ ಚಟುವಟಿಕೆಗಳು ಸಹಕಾರಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ದಿನಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ಸಮಾಜದಲ್ಲಿ ಅಸ್ತಿತ್ವಗೊಳ್ಳುತ್ತಿದೆ. ಸೌಹಾರ್ದತೆಯನ್ನು ಉಂಟು ಮಾಡಬೇಕಾದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆಯ ಸಂದರ್ಭಗಳು ಯುವಕರಲ್ಲಿ ಹಾಗೂ ರಾಜಕೀಯ ನಾಯಕರಲ್ಲಿ ಮತ್ತು ಸಮಾಜದಲ್ಲಿ ದ್ವೇಷವನ್ನು. ಜಗಳವನ್ನು. ವೈಮನಸ್ಸನ್ನು ಹಾಗೂ ಯುದ್ದ ಸಂಭವಿಸುವ ಸಂದರ್ಭಗಳನ್ನು ಸೃಷ್ಠಿ ಮಾಡುತ್ತಿವೆ. ಧರ್ಮ ಧರ್ಮಗಳ ಮಧ್ಯೆ. ಜಾತಿ ಜಾತಿಗಳ ಮಧ್ಯೆ. ದೇಶ ದೇಶಗಳ ಮಧ್ಯೆ  ವೈರತ್ವವನ್ನು ಬಿತ್ತಿ ಮೋಜು ನೋಡುವ ಅನೀತಿಯ ಹಾಗೂ ಅಮಾನವೀಯ ಸಂದರ್ಭಗಳು ಒದಗಿ ಬರುತ್ತಿವೆ.  ಇದಕ್ಕೆಲ್ಲ ಕಾರಣ ಹುಡುಕಿ ಸರಿಪಡಿಸುವ ಅನಿವಾರ್ಯದ ಸಮಯವನ್ನು ಕಂಡುಕೊಳ್ಳಬೇಕಿದೆ.
ಒಪ್ಪೋಣ.. ದೇಶ. ಭಾಷೆ ನೆಲಜಲ. ಸಂಸ್ಕೃತಿಯ ಬಗ್ಗೆ ಅಭಿಮಾನ ಆಯಾ ದೇಶದ ಪ್ರತಿಯೊಬ್ಬರಿಗೂ ಇರುತ್ತದೆ. ಇದು ಸೌಹಾರ್ದತೆಗೆ ಧಕ್ಕೆ ತರಲು ಪ್ರೇರಣೆಯಾಗಬಾರದು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸ್ಪರ್ಧೆಗಳು ಏರ್ಪಟ್ಟಾಗ ಜಯ ಯಾರಿಗಾದರು ಒಬ್ಬರಿಗೇ ದಕ್ಕುವಂತದ್ದು. ಹರಸಿ ಬಂದ ವಿಜಯದ ಕ್ಷಣವನ್ನು ಆನಂದಿಸೋಣ. ಸಿಹಿ ಹಂಚಿ ಸಂಭ್ರಮಿಸೋಣ. ಆದರೆ ನಾವು ಆಚರಿಸುವ ಸಂಭ್ರಮಾಚರಣೆ ಸೋತವರ ಮನ ನೋಯಿವಂತಿರಬಾರದು. ಅವರನ್ನು ಮೂದಲಿಸಿ. ವಿಕೃತಿಗೊಳಿಸಿ. ಅವಮಾನಿಸಿ ಆನಂದಪಡುವುದು ಕ್ರೀಡಾ ಮನೋಧರ್ಮ ಅಲ್ಲ ಅನಿಸುತ್ತೆ. ಯಾಕೆಂದರೆ ಸೋಲು ಅಥವಾ ಗೆಲುವು ಸಂದರ್ಭನುಸಾರ ಎಲ್ಲರಿಗೂ ಒದಗಿ ಬರುವಂತವುಗಳೇ ಆಗಿವೆ. ಇಂದು ಗೆದ್ದವನು ನಾಳೆ ಸೋಲಬಹುದು. ಸೋತವನು ನಾಳೆ ಗೆಲ್ಲಲೂ ಬಹುದು.
ಹೀಗಿರುವಾಗ ಗೆದ್ದ ಆನಂದವು ವೈರಿಗೂ (ಸೋತವನಿಗೂ) ಖುಷಿ ಕೊಡುವಂತಿರಬೇಕು. ಅವರೂ ನಮ್ಮನ್ನು ಅಭಿನಂದಿಸುವಂತಿರಬೇಕು. ಆಗಲೇ ನಮ್ಮ ಗೆಲುವಿಗೆ ಹಾಗೂ ಗೆಲುವಿನ ಸಾಧನೆಗೆ ಬೆಲೆ ಬರುತ್ತದೆ.
ಸೋತವನನೂ ಗೆಲುವಿನ ಹತ್ತಿರದಲ್ಲೇ ಸೋತಿರುತ್ತಾನೆ. ಸರಿ ಸಮಾನವಾದ ಪೈಪೋಟಿ ನೀಡಿರುತ್ತಾನೆ. ಸಂಘರ್ಷ ನಡೆಸಿರುತ್ತಾನೆ ಗೆಲುವಿಗಾಗಿ ತಿಣುಕಾಡುವಂತೆ ಮಾಡಿರುತ್ತಾನೆ. ಅವನ ಶ್ರಮವನ್ನೂ ಪರಿಗಣಿಸಿ ಗಗೆಲುವನ್ನು ಸಂಭ್ರಮಿಸುವುದು ನಿಜವಾದ ಸಂಭ್ರಮಾಚರಣೆಯಾಗುತ್ತದೆ. ಗೆದ್ದೆ ಎನ್ನುವುದೇ ಮುಖ್ಯವಲ್ಲ ಹೇಗೆ ಗೆದ್ದೆ ಎನ್ನುವುದು ಮುಖ್ಯ ಎನಿಸಿದಾಗ ವಿಜಯವನ್ನು ವಿಕೃತವಾಗಿ ಆಚರಿಸಲು ಯಾವ ಸ್ಪರ್ಧಾಳುಗಳೂ ಮುಂದಾಗುವುದಿಲ್ಲ. ಗೌರವಯುತವಾಗಿ. ಸಮಚಿತ್ತ ಮುತ್ಸದ್ದಿಯಾಗಿ ಸಂತುಷ್ಟ ಭಾವದಿಂದ ಯಾರಿಗೂ ನೋವಾಗದಂತೆ ವಿಜಯದ ಕ್ಷಣಗಳನ್ನು ಆನಂದಿಸುತ್ತಾನೆ. ಅದು ಆತನಿಗೂ ಮತ್ತು ಸಮಾಜಕ್ಕೂ ಪ್ರೇರಣೆ ನೀಡುತ್ತದೆ. ವೈಶಮ್ಯವನ್ನು ದೂರ ಮಾಡಿ ಸ್ನೇಹ ಬೆಳೆಯುವಂತೆ ಮಾಡುತ್ತದೆ. ಪರಸ್ಪರರು ಮತ್ತೆ ಮತ್ತೆ ಸಂಧಿಸುವಂತೆ ಅವಕಾಶ ನೀಡುತ್ತದೆ. ಸಂಕಷ್ಟದ ಸಮಯದಲ್ಲಿ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ. ತಾನೂ ಬೆಳೆದು ಇತರರನ್ನು ಬೆಳೆಯಲು ಅವಕಾಶ ದೊರಕಿಸಿ ಕೊಡುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ದೇಶವೂ ಇದೆ ಆಗಿದೆ.
ಆದರೆ ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾರತ ಗೆದ್ದು ಪಾಕಿಸ್ತಾನ ಸೋತಿತು. ವಿಶ್ವಕಪ್ ಪಂದ್ಯಾವಳಿಯಾದ ಈ ಲೀಗ್ ನಲ್ಲಿ *ಭಾರತ ಪಾಕಿಸ್ತಾನವನ್ನು ಸೋಲಿಸಿತು* ಎಂಬ ಕಾರಣಕ್ಕೆ ನಮ್ಮ ದೇಶದ ಕ್ರೀಡಾಭಿಮಾನಿಗಳು ಅತ್ಯಾನಂದದಿಂದ ವಿಕೃತವಾಗಿ ಸಂಭ್ರಮಾಚರಣೆ ಆಚರಿಸಿದರು. ಸಹಜವಾದ ವೈರತ್ವವು ಉಲ್ಬಣಿಸುವಂತೆ ಆ ದೇಶದ ಆಡಾಳುಗಳನ್ನು ಹಾಗೂ ದೇಶಿಗರನ್ನು ಅವಮಾನಿಸಿ. ಅಸಭ್ಯ ಪದ ಬಳಸಿ ನಿಂದಿಸಿ ಆನಂದವನ್ನು ಹಂಚಿಕೊಂಡರು. ಇದು ನಿಜವಾದ ಕ್ರೀಡಾಸ್ಪೂರ್ತಿಯಲ್ಲ ಎನಿಸುತ್ತದೆ. ಸೋತವರು ಸುಲಭದಲ್ಲಿ ಸೋತಿಲ್ಲ. ಅವರಿಗೂ ನಮ್ಮಂತೆ ಗೆಲ್ಲಬೇಕೆಂಬ ಛಲ. ಉತ್ಸಾಹ. ದೇಶಾಭಿಮಾನ. ಕ್ರೀಡಾ ಮನೋಧರ್ಮ ಹಾಗೂ ಗೆಲುವಿಗಾಗಿ ಶ್ರಮ ಹಾಕಿದ್ದಾರೆ. ಎಂಬ ಸಾಮಾನ್ಯ ಜ್ಞಾನ ಇರಬೇಕಾಗಿತ್ತು. ಮತ್ತು ಗೆಲುವು ಯಾವಾಗಲೂ ನಮ್ಮ ಕಡೇನೇ ಇರೋದಿಲ್ಲ. ನಾಳೆ ನಾವೂ ಸೋಲಬಹುದು ಎಂಬ ಸಮಚಿತ್ತ ಜ್ಞಾನ ಇರಬೇಕಿತ್ತು. ಇದ್ಯಾವುದನ್ನು ಅರಿಯದೆ ಶತೃ ದೇಶ ಎಂಬ ಕಾರಣಕ್ಕೆ ಅವಮಾನಿಸಿ ಗೆಲುವು ಆಚರಿಸುವುದು ಎಷ್ಟು ಸರಿ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಕೂಡ ಅತ್ಯಂತ ವಿಕೃತವಾದ ಟೈಟಲ್ ಗಳನ್ನು ಕೊಟ್ಟು ವೈರತ್ವವನ್ನು ವಿಜೃಂಬಿಸುವಂತೆ ಮಾಡುತ್ತವೆ. ಇಲ್ಲ ಸಲ್ಲದ ತರಾವರಿ  ವಿಷಯಗಳನ್ನು ಪೋಣಿಸಿ ಪರಸ್ಪರ ದೇಶದ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತವೆ. ಸಮಾಜವನ್ನು ಸುಧಾರಿಸಬೇಕಾದ ಮಾಧ್ಯಮಗಳು ಒಡೆದು ಆಳುವ ನೀತಿಯನ್ನು ಅನುಸರಿಸಿ ಸಮಾಜದ ಪ್ರಗತಿಗೆ ಧಕ್ಕೆ ತರುತ್ತಿವೆ. ಎಂಬುದನ್ನು ಮನಗಾಣುವ ಅಗತ್ಯವಿದೆ. ನಾವು ಅವರನ್ನು ಶತೃ ಎಂದು ಭಾವಿಸಿದರೆ. ಅವರೂ ನಮ್ಮನ್ನು ಶತೃವೆಂತಲೇ ಭಾವಿಸುವುದು. ಶತೃತ್ವ ನಿರಂತರವಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ನೆಮ್ಮದಿಯಾಗಿ ಬದುಕಲು ಆಗುವುದಿಲ್ಲ. ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ.ವೈರತ್ವ ಕೊನೆಯಾಗಿ ಸ್ನೇಹಿತರಂತೆ ಬದುಕಬೇಕಾದರೆ ನಮಗೆ ದೊರಕಿದ ವಿಜಯವನ್ನು ವಿಕೃತವಾಗಿ ಆಚರಿಸದೆ ವಿನಮ್ರತೆಯಿಂದ ವಿನಯವಂತಿಕೆಯಿಂದ ಸಂಭ್ರಮಿಸಿದರೆ. ಆರೋಗ್ಯಕ್ಕೂ ಒಳ್ಳೆಯದು. ಸಮಾಜಕ್ಕೂ.......

-ವೆಂಕಟೇಶ ಈಡಿಗರ*
ರಾಣೇಬೆನ್ನೂರು
9008698311

ಸುದ್ದಿ ಓದಿ