ನ.29ರಂದು ಸಿಎಂ ಆಗಮನ: ಪೂರ್ವಭಾವಿ ಸಭೆ
ರಾಮದುರ್ಗ: ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನ.29ರಂದು ಮುಖ್ಯಮಂತ್ರಿಗಳು ಆಗಮಿಸುವ ಕಾರ್ಯಕ್ರಮದ ತಯಾರಿ ಕುರಿತು ಏರ್ಪಡಿಸಿದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಮಹಾದೇವಪ್ಪ ಯಾದವಾಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಇದೇ ವೇಳೆ ಶಾಸಕ ಯಾದವಾಡ ಅವರು ಮಾತನಾಡುತ್ತಾ ರೂ. 671 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಹಲವು ಸಚಿವರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಕಿಂಚಿತ್ತೂ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ 50 ಸಾವಿರ ಜನತೆ ಸೇರುವ ನಿರೀಕ್ಷೆ ಇದೆ. ಊಟ, ವಾಹನ ಪಾರ್ಕಿಂಗ್, ಮುಖ್ಯಮಂತ್ರಿಗಳಿಗೆ ಸಾರ್ವಜನಿಕ ಅಹವಾಲು ಸಲ್ಲಿಸುವುದು, ಕುಡಿಯುವ ನೀರು, ಪೆಂಡಾಲ್ ಒಳಗೊಂಡಂತೆ ಎಲ್ಲವನ್ನು ಪರಿಶೀಲಿಸಬೇಕು. ಕಾರ್ಯಕ್ರಮದ ಅಚ್ಚು ಕಟ್ಟತೆಗೆ ಸರ್ವ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಕೆಲವು ಕಿರಾಣಿ ಅಂಗಡಿ, ಪಾನ್ ಬೀಡಾ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದು ಕೇಳಿ ಬರುತ್ತಿದೆ. ಕಾರ್ಯಕ್ರಮ ಹಿನ್ನಲೆಯಲ್ಲಿ ಸುಮಾರು 25 ಕಿ.ಮೀ. ಪ್ರದೇಶಗಳಲ್ಲಿ ಮದ್ಯ ಮಾರಾಟ ನಡೆಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಂತಹ ಅಹಿತಕರ ಘಟನೆಗಳು ನಡೆದಲ್ಲಿ ಇಲಾಖೆಯ ಅಧಿಕಾರಿಗಳೇ ಹೊಣೆ ಹೊತ್ತು ಕೊಳ್ಳಬೇಕಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಯಾದವಾಡ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಹಾಗೂ ಸರಕಾರದ ಸಚಿವರು ಕಾರ್ಯಕ್ರಮ ನಿಮಿತ್ತ ರಾಮದುರ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಬಂದೂಬಸ್ತ್ ಮಾಡಲಾಗುತ್ತಿದೆ. ಇತ್ತೆಚೆಗೆ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ಹಾಗೂ ವಿಶೇಷ ಭದ್ರತೆ ನಿಯೋಜನೆ ಮಾಡಲಾಗುವುದು ಎಂದು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಹೇಳಿದರು.
ಮುಖ್ಯಮಂತ್ರಿಗಳು ಆಗಮನದ ಹಿನ್ನಲೆಯಲ್ಲಿ ಹೆಲಿಪ್ಯಾಡ್, ಬಸವೇಶ್ವರ ಪುತ್ಥಳಿ ಅನಾವರಣದಿಂದ ಹಿಡಿದು ಕಾರ್ಯಕ್ರಮದ ಮುಖ್ಯ ವೇದಿಕೆ ಮತ್ತು ನಿರ್ಗಮನದ ವರೆಗೆ ಅಗತ್ಯ ಪೊಲೀಸ್ ಬಂದೋಬಸ್ತ ಕಲ್ಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಪಾಕರ್ಿಂಗ್ ಮತ್ತು ಊಟದ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ. ಇಒ ಪ್ರವೀಣಕುಮಾರ ಸಾಲಿ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರಿದ್ದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಮುಖ್ಯಮಂತ್ರಿಗಳು ಆಗಮಿಸುವ ಸಲುವಾಗಿ ನಿರ್ಮಿಸಲಾದ ಹೆಲಿಪ್ಯಾಡ್, ಬಸವೇಶ್ವರ ಪುತ್ಥಳಿ ಅನಾವರಣದ ಸ್ಥಳಗಳನ್ನು ಶಾಸಕ ಮಹಾದೇವಪ್ಪ ಯಾದವಾಡ, ಎಸ್ಪಿ ಸಂಜೀವ ಪಾಟೀಲ ಪರಿಶೀಲನೆ ನಡೆಸಿದರು.