ಬಳ್ಳಾರಿ

ಬಳ್ಳಾರಿ ಜಿಲ್ಲೆ ಕಲಾಧೀಮಂತರ ನಾಡು ಸಂಸ್ಕೃತಿಯ ನೆಲೆವೀಡು

ಬಳ್ಳಾರಿ ಜಿಲ್ಲೆ ಕಲಾಧೀಮಂತರ ನಾಡು ಸಂಸ್ಕೃತಿಯ ನೆಲೆವೀಡು

ಬಳ್ಳಾರಿ 26: ಕರ್ನಾಟಕದಲ್ಲಿಯೇ ಬಳ್ಳಾರಿ ಜಿಲ್ಲೆ ಕಲಾಧೀಮಂತರ ನಾಡು, ಸಂಸ್ಕೃತಿಯ ನೆಲೆವೀಡು ಹಾಗೆಯೇ ಆಗರ್ಭ ಶ್ರೀಮಂತರ ತವರುಮನೆಯೂ ಆಗಿದೆ. ಯುವಕರು ಈ ಕಲಾ ಶ್ರೀಮಂತಿಕೆಯನ್ನು ಅರಿತುಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕು. ಅದಕ್ಕಾಗಿ ಕಲಾ ಸಾಧಕರ ಸಾಧನೆ ಮಾದರಿ ಆಗಲಿ ಎಂದು ನಾಡಿನ ಹಿರಿಯ ಮುತ್ಸದ್ಧಿ ಬಸವರಾಜ ಪಾಟೀಲ ಸೇಡಂ ಅವರು ಹಾರೈಸಿದರು.

ಅವರು ನಗರದ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಸಂಸ್ಕೃತಿಗೂ ಬದುಕಿಗೂ ಅವಿನಾಭಾವ ಸಂಬಂಧ ಇದೆ ಎಂದ ಅವರು ಘನ ತಪಸ್ವಿಗಳು, ಕಠಿಣ ಪರಿಶ್ರಮಗಳಿಂದ ಪಡೆದ ಆನಂದವನ್ನು ಜನಸಾಮಾನ್ಯರು ನಿತ್ಯ ಕಾಯಕದೊಂದಿಗೆ ಹಾಡು ಹಸೆ ಆಟ ಕೋಲಾಟ, ಭಜನೆಗಳಿಂದ ಸುಲಭವಾಗಿ ಕಂಡುಕೊಂಡರು. ದುಡ್ಡಿನಿಂದ ದರ್ಪ ದುಷ್ಕೃತ್ಯಗಳು ಹೆಚ್ಚುತ್ತಿವೆ. ಆದರೂ ಕಾಲ ಕೆಟ್ಟಿಲ್ಲ, ಕಲೆ ಕಲಾವಿದರು ಇದನ್ನು ಬದಲಾಯಿಸಲು ಸಾಧ್ಯ ಕಲಾವಿದರ ಸಾಧನೆಯ ಮೂಲಮುಟ್ಟಬೇಕು, ಯುವಕರು ಈ ಕಲಾ ಶ್ರೀಮಂತಿಕೆಗೆ ಆಕರ್ಷಿತರಾಗಬೇಕೆಂದರು.

ಸಾನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿಯವರು 2010ರಲ್ಲಿ ಜೋಳದರಾಶಿ ದೊಡ್ಡನಗೌಡರ ಜನ್ಮಶತಮಾನೋತ್ಸವ ಆಚರಿಸಿದ್ದನ್ನು ಸ್ಮರಿಸುತ್ತ ದೊಡ್ಡನಗೌಡರ ಸಾಹಿತ್ಯ ಗಮಕ ಪ್ರವಚನಗಳ ಸಾಧನೆಯನ್ನು ಬಿಚ್ಚಿಟ್ಟರು. ಜೀವನದ ಕೊನೆಯಲ್ಲಿ ಗಮಕ ಸಾಹಿತ್ಯದ ಕುರಿತು ಅತ್ಯಂತ ಭಾವುಕರಾಗಿದ್ದ ಅವರು ಶೋಕ-ಗೀತೆಗಳನ್ನು ಬರೆದು ತಮ್ಮ ಆಸೆ ತೋರಿಕೊಂಡಿದ್ದಾರೆ. ಗಿಡಬಳ್ಳಿಗಿಂತ ಕಡೆಯಾದೆನಲ್ಲ, ಗೌಡತಿ ಬರಲಿಲ್ಲ, ಹೋಗಿ ಬರ್ತಿನ್ರಯ್ಯ ಹೀಗೆ... ಇಡೀ ಕನ್ನಡ ಸಾಹಿತ್ಯದಲ್ಲಿ ಶೋಕಗೀತೆಗೂ ಸ್ಥಾನ ಕಲ್ಪಿಸಿದ ಬೆರಳಣಿಕೆಯವರಲ್ಲಿ ದೊಡ್ಡನಗೌಡರು ಒಬ್ಬರು. ಹಂಪಿಯನ್ನು ಹಳೆ ಮುತ್ತೈದೆ ಎಂದು ಬರೆದ ಅವರ ಕಾವ್ಯಗಳನ್ನು ಓದಬೇಕು. ಗಮಕ ಗಾಯನ ಕೇವಲ ರಾಮಾಯಣ, ಮಹಾಭಾರತಗಳಿಗೆ ಮೀಸಲಾಗಿದ್ದುದನ್ನು ವಚನ ಸಾಹಿತ್ಯಕ್ಕೂ ವಿಸ್ತರಿಸಿ ಶೂನ್ಯ ಸಂಪಾದನೆಯನ್ನು ಹಾಡಿ ಧನ್ಯರಾಗಿದ್ದಲ್ಲದೇ ಬಯಲು ಗಳಿಕೆಯ ಬೆಳಗು ಎಂದು ಪ್ರತಿಪಾದಿಸಿದ್ದನ್ನು ನೆನೆದರು. ಅವರನ್ನು ಚಿರಸ್ಥಾಯಿಗೊಳಿಸುವ ಹಾದಿಯಲ್ಲಿ ರಂಗತೋರಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಟಾನ ಹಾಗೂ ರಾಮೇಶ ಟ್ರಸ್ಟ್ಗಳು ರಾಜ್ಯಮಟ್ಟದ ರಂಗಕಲಾ ಸಾಧಕರನ್ನು ಗುರುತಿಸಿ 25 ಸಾವಿರ ಗೌರವಧನ, ಸ್ಮರಣಿಕೆಯೊಂದಿಗೆ ಪ್ರತಿವರ್ಷ ಗೌರವಿಸುತ್ತಿರುವುದು ಅಭಿನಂದನೀಯವೆಂದರು.

2020ರ ರಂಗತೋರಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೃತ್ತಿ ಕಂಪನಿ ಮಾಲಿಕರಾಗಿರುವ ಎಲ್.ಬಿ. ಶೇಖ ಮಾಸ್ತರ ಅವರು-ದೊಡ್ಡನಗೌಡರು ನಾಟಕದಿಂದ ಹೊರಳಿ ಸಂಗೀತಕ್ಕೆ ನೆಲೆಯಾದರು, ನಾನು, ಮದಿರೆ ಮರಿಸ್ವಾಮಿ, ಸಿರಿಗೆರಿ ನಾಗನಗೌಡರಂತವರು ಸಂಗೀತದಿಂದ ನಾಟಕಕ್ಕೆ ಸೀಮಿತರಾದೆವು ಎಂದರು. ರಂಗತೋರಣ ಯುವ ವಿದ್ಯಾಥರ್ಿಗಳ ನಾಟಕೋತ್ಸವಗಳಿಂದ ಪ್ರಸಿದ್ಧರಾಗಿದ್ದರೂ ವೃತ್ತಿ ಕಂಪನಿ ಕಲಾವಿದರ ಬಗ್ಗೆ ಅವರಿಗಿರುವ ಕಾಳಜಿ ಅಪಾರವಾದದ್ದು. ವೃತ್ತಿ ಕಂಪನಿ ರಂಗ ಪರಂಪರೆ ಉಳಿಸಲು ಅವರು ಒಂದು ಸಮಾವೇಶ ಮಾಡಲು ಪ್ರಯತ್ನಿಸಿದ್ದನ್ನು ಬಲ್ಲೆ. ಇಂತಹ ಕಾಳಜಿ ಪೂರ್ಣ ಕಾರ್ಯಗಳಿಂದ ಈ ಪರಂಪರೆ ಉಳಿದು ಬೆಳೆಯಲಿ. ಸಕರ್ಾರವೂ ಈ ಕಡೆ ಗಮನಹರಿಸಬೇಕೆಂದರು. ದುಡ್ಡು ದುಡ್ಡನ್ನು ಸೆಳೆಯುತ್ತದೆ ಆದರೆ ಕಲೆ ಕಲೆಯನ್ನು ಪ್ರೀತಿಸುತ್ತದೆ ಎಂದ ಅವರು ಸುಭದ್ರಮ್ಮ ಮನ್ಸೂರು ಅವರು ಹಾಡುತ್ತಿದ್ದ ಕಂದಗಲ್ ಹನುಮಂತರಾಯರ ಅಕ್ಷಯಾಂಬರ ಹಾಗೂ ಹೇಮರೆಡ್ಡಿ ಮಲ್ಲಮ್ಮ ನಾಟಕದ ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು.

ಬಳ್ಳಾರಿ ರಾಘವ, ದೊಡ್ಡನಗೌಡರಂತಹ ಹಿರಿಯರ ನೆನಪಿನಲ್ಲಿ ನನ್ನನ್ನು ಬೆಂಗಳೂರಿನಿಂದ ಬರಮಾಡಿಕೊಂಡು ಪ್ರೀತಿಯ ಆತಿಥ್ಯದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಅತ್ಯಂತ ಋಣಿಯಾಗಿದ್ದೇನೆ ಎಂದು ಮಾತು ಆರಂಭಿಸಿದ 2021ರ ಪ್ರಶಸ್ತಿ ಸ್ವೀಕರಿಸಿದ ಗೌರಿದತ್ತು ಅವರು ಗೌಡರ ಸಾಧನೆಯಂತೆ ತಮ್ಮ ತಾತ ಅ.ನ. ಸುಬ್ಬರಾಯರ ಸಾಮ್ಯತೆಯನ್ನು ಸ್ಮರಿಸಿಕೊಂಡರು. ಹಿರಿಯ ಸಾಧಕರ ಜೊತೆಗೆ ನನ್ನ ಬಗ್ಗೆ ಏನೂ ತಿಳಿಯದವರೂ ಕೂಡ ನನಗೂ ಈ ದಿನ ಶಾಲು ಹಾರ ಹಾಕಿ ಗೌರವಿಸಿದ್ದು ಜೀವನದ ಅನುಪಮ ಮರೆಯಲಾಗದ ಕ್ಷಣವೆಂದರು.

ಬಹಳ ದಿನಗಳ ನಂತರ ಸಿಂಗಾರಗೊಂಡ ಬಯಲು ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಸಮಾರಂಭದ ಮೊದಲು ಹಾರ್ಮೋನಿಯಂ  ಮಾಂತ್ರಿಕ ಮದಿರೆ ಮರಿಸ್ವಾಮಿಯವರಿಂದ ರಂಗ ವಾದ್ಯ ವೈಭವ ಕಾರ್ಯಕ್ರಮ ನಡೆಯಿತು. ಜೋಳದರಾಶಿಯ ಯರ್ರೆಪ್ಪ ಗೌಡ ಅವರು ದೊಡ್ಡನಗೌಡರ ಸುಶ್ರಾವ್ಯ ಗಮಕ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಂಗತೋರಣ ಅಧ್ಯಕ್ಷ ಪ್ರೊ. ಆರ್.ಭೀಮಸೇನ ಅತಿಥಿಗಳು ಮತ್ತು ಪುರಸ್ಕೃತರನ್ನು ಸ್ವಾಗತಿಸಿ ಪರಿಚಯಿಸಿದರು. ಜೋಳದರಾಶಿ ದೊಡ್ಡನಗೌಡ ಪ್ರತಿಷ್ಟಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡರು ವಂದನಾರ್ಪಣೆ ಮಾಡಿದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಯರ್ರೆಪ್ಪ ಗೌಡರು, ದೊಡ್ಡನಗೌಡರು ಬರೆದ ಪ್ರಸಿದ್ಧ ಗೀತೆ ಹೋಗಿಬರ್ತಿನ್ರಯ್ಯ... ಗೀತೆಯನ್ನು ಗಮಕ ಶೈಲಿಯಲ್ಲಿಯೇ ಹಾಡಿ ಸಮಪರ್ಿಸಿದರು 

ಸುದ್ದಿ ಓದಿ