17ರಂದು ಬಿಐಟಿಎಂನ ರಜತ ಮಹೋತ್ಸವ ಸಂಭ್ರಮ: ಡಾ. ಮಹಿಪಾಲ್
ಬಳ್ಳಾರಿ 14: ನಗರದಲ್ಲಿ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಬಳ್ಳಾರಿ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ (ಬಿಐಟಿಎಂ) ನ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮವನ್ನು ಡಿ.17 ರಂದು ಬಿಐಟಿಎಂ ಕಾಲೇಜಿನ ಕ್ಯಾಂಪಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಐಟಿಎಂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಜೆ.ವಿ.ಮಹಿಪಾಲ್ ಅವರು ತಿಳಿಸಿದರು.
ನಗರದ ಬಸವ ರಾಜೇಶ್ವರಿ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಜತ ಮಹೋತ್ಸವ ನಿಮಿತ್ತ ರಸಮಂಜರಿ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಐಟಿಎಂ ಕಾಲೇಜಿನ ಅಧ್ಯಕ್ಷ ಡಾ.ಯಶವಂತ ಭೂಪಾಲ್ ಅವರು ಮಾತನಾಡಿ, ಕಾಲೇಜುನ 25ನೇ ವರ್ಷದ ರಜತ ಮಹೋತ್ಸವವನ್ನು ಡಿ.17ರಂದು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಗುವುದು, ಸಮಾರಂಭಕ್ಕೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಎಮ್ಮೆಲ್ಸಿ ವೈ.ಎಂ.ಸತೀಶ್, ಸಂಸದ ವೈ.ದೇವೇಂದ್ರಪ್ಪ, ರಾಜ್ಯಸಭಾ ಸದಸ್ಯ ಡಾ.ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಈ.ತುಕಾರಾಂ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾಲೇಜಿನಲ್ಲಿ ಹಬ್ಬದ ವಾತಾವರಣ ಇರಲಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಕಾಲೇಜಿನ ಕಾರ್ಯದರ್ಶಿ ಡಾ.ಪೃಥ್ವಿರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು