ಬಿ.ಸಿ. ಚೆನ್ನಿ ಅವರ ಜನ್ಮಶತಮಾನೋತ್ಸವ; ಜ. 23 ರಂದು ಸಂಜೆ ‘ಸ್ವರಾಂಜಲಿ’ ಸಂಗೀತ
ಧಾರವಾಡ 22 : ನಾಡಿನ ಖ್ಯಾತ ನ್ಯಾಯವಾದಿ, ಸಂಗೀತಪ್ರೇಮಿ ಬಿ.ಸಿ. ಚೆನ್ನಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಜ. 23 ರಂದು ಸಂಜೆ 5.30 ಕ್ಕೆ ಸ್ವರಾಂಜಲಿ ಸಂಗೀತ ಸಂಜೆ ಕಾರ್ಯಕ್ರಮವು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ. ಭಾರತೀಯ ಸಂಗೀತ ವಿದ್ಯಾಲಯ ಹಮ್ಮಿಕೊಂಡಿರುವ ಗಾಯನ-ವಾದನಗಳ ಈ ಕಾರ್ಯಕ್ರಮವು ನ್ಯೂಯಾರ್ಕ್ನ ರವಿ-ಜಯಾ ಭೂಪಲಾಪೂರ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿದ್ದು, ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನಿಷ್ಕ್ ಹುಬ್ಬಳ್ಳಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಪ್ರಶಾಂತ ಆಸ್ಪತ್ರೆಗಳು ಕೈಜೋಡಿಸಿವೆ. ಧಾರವಾಡ ಘರಾಣೆಯ ಉ. ಶಫೀಕ್ ಖಾನ್ ಅವರ ಶಿಷ್ಯ ಪ್ರವೀಣ ಹೂಗಾರ ಅವರಿಂದ ಸಿತಾರ ತಂತುಗಳ ಝೇಂಕಾರ ಮೊಳಗಲಿದೆ. ನಂತರ ಕಿರಾನಾ ಘರಾಣೆಯ ಪಂ. ಜಯತೀರ್ಥ ಮೇವುಂಡಿ ಅವರಿಂದ ಗಾನಸುಧೆ ಹರಿದುಬರಲಿದೆ. ಸಹಕಲಾವಿದರಾಗಿ ಸಂವಾದಿನಿಯಲ್ಲಿ ಬಸವರಾಜ ಹಿರೇಮಠ, ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಹಾಗೂ ಹೇಮಂತ ಜೋಶಿ ಪಾಲ್ಗೊಳ್ಳಲಿದ್ದಾರೆ.