ದನಿ ಇಲ್ಲದವರ ಬದುಕಿನ ಅದಮ್ಯ ಚೇತನ 'ಅನಂತಕುಮಾರ'
- ಪ್ರವೀಣ ಗಿರಿ, ಚ. ಕಿತ್ತೂರ
ಬಹುಷಃ ಇದು ಮೂರು ವರ್ಷಗಳ ಹಿಂದಿನ ಘಟನೆ. ಅಂದು ವೈಯಕ್ತಿಕ ಯಾವುದೋ ಕೆಲಸದ ನಿಮಿತ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೋದಾಗ ಆಕಸ್ಮಿಕವಾಗಿ ನನ್ನ ಗೆಳೆಯ ತನ್ನ ಬ್ಯೂಸಿ ಶೆಡ್ಯೂಲ್ ಮಧ್ಯೆಯೂ ನನಗೆ ಭೇಟಿಯಾಗಿದ್ದನು. ಆತನ ಹಿಂದಿನ ಮತ್ತು ಅಂದಿನ ಪರಿಸ್ಥಿತಿ ಕಂಡು ಒಂದು ಕ್ಷಣ ದಂಗಾಗಿದ್ದೆ. ತಡ ಮಾಡದೇ ಏನಾಯಿತು? ಎಂದು ಪ್ರಶ್ನೆ ಹಾಕಿದೆ.
ಅಷ್ಟೊತ್ತಿಗಾಗಲೇ ಆತನ ಕಣ್ಣೀರು ಕಪಾಳ ಮುಟ್ಟಿದ್ದವು. ಅದನ್ನು ನೋಡುತ್ತಲೇ ಯಾವುದೋ ಸಮಸ್ಯೆಯಲ್ಲಿ ಆತ ಸಿಲುಕಿದ್ದಾನೆ ಎನಿಸಿತು. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತದೆಯೇ? ಎಂದು ಆತನಿಗೆ ಸಮಾಧಾನ ಹೇಳಿ ಸುಮ್ಮನಾದೆ. ಆತನ ಕಷ್ಟ ಕೇಳಿ ನನ್ನ ಮನಸಿಗೂ ತುಸು ಬೇಸರವಾಯಿತು. ಅದನ್ನು ನೋಡಿದಾಗಲೇ ನನಗೆ ಅನಿಸಿದ್ದು, ಕಷ್ಟಗಳು ಶ್ರೀಮಂತ ಮತ್ತು ಬಡವ ಎಂಬ ಭೇದಬಾವವಿಲ್ಲದೇ ಬರುತ್ತವೆಂದು. ಒಂದು ಕ್ಷಣ ಸುಮ್ಮನಾದವನೇ ನನ್ನ ಗೆಳೆಯ ನೀನು ಫ್ರೀ ಇದ್ದರೇ ನನ್ನೊಂದಿಗೆ ಬರುವೇಯಾ? ಎಂದವನೇ ನೇರವಾಗಿ ಆತ ಹೋಗಿ ನಿಂತಿದ್ದು ಭಾರತ ಸರಕಾರದ ಕೇಂದ್ರ ಮಂತ್ರಿ ಅನಂತಕುಮಾರ ಅವರ ಎದುರು.
ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ ಧೀಮಂತ ನಾಯಕನನ್ನು ಮೊದಲ ಬಾರಿಗೆ ಅತೀ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿದ್ದು ಆಗಲೇ. ಕಷ್ಟ ಎಂದು ಬಂದವರನ್ನು ಎಂದೂ ಕೈ ಬಿಡದ ವ್ಯಕ್ತಿ ಅನಂತಕುಮಾರ ಎಂದೆನಿಸಿದ್ದು ಆಗಲೇ. ಅನಂತ ಕುಮಾರ ಅವರು ನೀರು ಕುಡಿದಷ್ಟೇ ಸುಲಭವಾಗಿ ನನ್ನ ಗೆಳೆಯನ ಸಮಸ್ಯೆ ಬಗೆಹರಿಸಿದರಲ್ಲದೇ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಅದರೊಟ್ಟಿಗೆ ಪಕ್ಷದ ಸ್ಥಳೀಯ ಚಟುವಟಿಕೆಗಳ ಕುರಿತು ವಿಚಾರಿಸಿದರು. ಎಂತಹ ಅಪರೂಪದ ಮನುಷ್ಯ. ಅಂದು ಅವರಲ್ಲಿ ನನಗೆ, ನಾನೊಬ್ಬ ಕೇಂದ್ರ ಮಂತ್ರಿ ಎನ್ನುವ ಹಮ್ಮುಬಿಮ್ಮು ಸ್ವಲ್ಪವೂ ಕಂಡು ಬರಲಿಲ್ಲ.
ಈ ಮೊದಲು ಹತ್ತು ಹಲವು ಸಮಾರಂಭಗಳಲ್ಲಿ ತುಸು ದೂರಿನಿಂದಲೇ ಮತ್ತು ಅಲಲ್ಲಿ ಟಿವಿ ಮಾಧ್ಯಮಗಳಲ್ಲಿ ಅವರನ್ನು ನೋಡಿದ ಮತ್ತು ಅವರ ಮಾತುಗಳನ್ನು ಕೇಳಿದ್ದು ಮಾತ್ರ ನನಗೆ ನೆನಪಿತ್ತು. ಆದರೆ ಅಂದು ಮೊದಲ ಭೇಟಿಯಲ್ಲಿಯೇ ಅವರೊಂದಿಗೆ ಕುಳಿತು ಕಾಫೀ ಹೀರಿದ್ದು ಹೇಗೆ ಮರೆಯಲು ಸಾಧ್ಯ? ಇನ್ನೂ ನೆನಪಿದೆ. ನನ್ನೂರು ಕಿತ್ತೂರು, ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದರಿಂದ ನಮ್ಮೂರಿಗೆ ಸಂಬಂಧಿಸಿದ ಹತ್ತು ಹಲವಾರು ವಿಷಯಗಳನ್ನು ಅವರೊಂದಿಗೆ ಚಚರ್ಿಸಿದ್ದೆ. ಅವರು ಸಹ ಅತ್ಯಂತ ಕಾಳಜಿಯಿಂದಲೇ ಮುಕ್ತವಾಗಿ ಮಾತುಗಳನ್ನು ಹಂಚಿಕೊಂಡಿದ್ದರು. ನಮ್ಮೂರಿನ ಬಗ್ಗೆ ನನಗೆ ಗೊತ್ತಿರದ ಅದೆಷ್ಟೋ ವಿಷಯಗಳನ್ನು ಹಂಚಿಕೊಂಡಿದ್ದನ್ನು ಕಂಡ ನಾನು ಮತ್ತು ನನ್ನ ಗೆಳೆಯ ಮೂಖವಿಸ್ಮಿತನಾದ್ದೇವು. ಅಬ್ಬಾ ಅದೆಷ್ಟೋ ಆಳವಾದ ಜ್ಞಾನ ಅಂತೀರಿ. ಭಾರತ ಸರಕಾರದ ಒಬ್ಬ ಮಂತ್ರಿ ಅವರೊಂದಿಗೆ ಇಷ್ಟೊಂದು ಚಚರ್ೆ. ಆಕಾಶಕ್ಕೆ ಮೂರೇ ಗೇಣು ಎಂಬಂತಾಗಿತ್ತು ಅಂದಿನ ನನ್ನ ಪರಿಸ್ಥಿತಿ. ಇದೆಲ್ಲ ಮುಗಿದ ನಂತರ ಅಲ್ಲಿಂದ ಕಾಲ್ಕಿತ್ತು ನಮ್ಮ ದಿನನಿತ್ಯ ಜೀವನದಲ್ಲಿ ಬ್ಯೂಸಿ ಆದೇವು.
ಅವರನ್ನು ಭೇಟಿಯಾಗಿ ಅದೆಷ್ಟೋ ತಿಂಗಳುಗಳ ನಂತರ ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾದಾಗ ನನಗೆ ಅಚ್ಚರಿ ಕಾದಿತ್ತು. ಅಂದು ಕೇಂದ್ರ ಮಂತ್ರಿ ಅನಂತ ಕುಮಾರ ಅವರು ನನ್ನನ್ನು ಗುರುತಿಸಿದರಲ್ಲದೇ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದರು. ಇದಲ್ಲವೇ ಜನ ನಾಯಕ ಮತ್ತು ರಾಜಕಾರಣಿ ಇಬ್ಬರಿಗಿರುವ ವ್ಯತ್ಯಾಸ? ಅದೇ ಕೊನೆ. ನಂತರ ಮುಖಾಮುಖಿ ಭೇಟಿಯಾಗಲಿಲ್ಲ.
ನಾನು ಕೇಳಿದ ಮಟ್ಟಿಗೆ ಅನಂತ ಕುಮಾರ ಅವರದ್ದು ಸುಮ್ಮನೇ ಹಾಳು ಹರಟೆ ಹೊಡೆಯುತ್ತ ಖಾಲಿ ಕುಳಿತುಕೊಳ್ಳುವ ಜಾಯಮಾನವಲ್ಲ. ತನಗಿರುವ ನೋವನ್ನು ಸಹಿಸಿಕೊಂಡು ಹಗಲಿರುಳು ಪಕ್ಷದ ಸಂಘಟನೆಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದ ಮೂಲೆ ಮೂಲೆ ಸುತ್ತಿದವರು. ಒಂದಿಲ್ಲೊಂದು ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಕೇವಲ ನಮ್ಮ ರಾಜ್ಯದಲ್ಲಷ್ಟೇ ಸಿಮೀತರಾಗದೇ ದೇಶದ ಉಳಿದ ರಾಜ್ಯಗಳಲ್ಲಿಯೂ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದವರು. ಬೇರು ಮಟ್ಟದಿಂದ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬ ಕಲೆ ಬಲ್ಲವರು. ಜನರ ನಾಡಿ ಮಿಡಿತ ಅರಿತವರು. ಆದ್ದರಿಂದಲೇ ಚಿಕ್ಕ ವಯಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರದಲ್ಲಿ ದೇಶದ ಮಂತ್ರಿಯಾಗಿ ಹೊರ ಹೊಮ್ಮಿದ್ದರು.
ಅನಂತ ಕುಮಾರ ಅವರಂತ ಸಂಘಟನಾ ಚತುರ, ಅದ್ಬುತವಾದ ಸಮಯಪ್ರಜ್ಞೆ, ಎಂತಹ ಕ್ಲಿಷ್ಟಕರವಾದ ಸನ್ನಿವೇಶವನ್ನು ಬಗೆಹರಿಸುವ ಚಾಣಾಕ್ಷತೆ ಬಹುಷಃ ಬೇರೊಬ್ಬ ಯಾವ ರಾಜಕೀಯ ನಾಯಕನಿಗೆ ಬರಲು ಸಾಧ್ಯವಿಲ್ಲ ಎನ್ನಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಕೇಂದ್ರ ಮತ್ತು ರಾಜ್ಯದ ಕೊಂಡಿಯಾಗಿ ನಾಡಿನ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಹಗಲಿರುಳು ಶ್ರಮಿಸಿದವರು. ಕೇಂದ್ರದಲ್ಲಿ ಕನ್ನಡದ ವಕ್ತಾರನಾಗಿ ಕನ್ನಡ ನೆಲ, ಜಲ, ಭಾಷೆಗಳ ವಿಷಯಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡವರು. ಎಬಿವಿಪಿ ಸಂಘಟನೆ ಮೂಲಕ ಸಾರ್ವಜನಿಕ ಜೀವನ ಆರಂಭಿಸಿ ಕೇಂದ್ರ ಸರಕಾರದಲ್ಲಿ ಹತ್ತು ಖಾತೆ ನಿಭಾಯಿಸಿದ ಏಕೈಕ ನಾಯಕ ಅನಂತ ಕುಮಾರ ಅವರು, ರಾಜಕಾರಣದ ಜೊತೆಗೆ ಸಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಅದಮ್ಯ ಚೇತನ ಸಂಸ್ಥೆಯ ಮೂಲಕ ಅದೆಷ್ಟೋ ಜನರ ಬಾಳನ್ನು ಹಸನಾಗಿಸಿದವರು.
1996ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಅವರು, ನಂತರ ಆರು ಬಾರಿ ಚುನಾಯಿತರಾಗಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಖಾತೆ, ಕೇಂದ್ರ ಸಂಸ್ಕೃತಿ ಹಾಗೂ ಯುವ ಜನಸೇವಾ ಖಾತೆ, ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆ, ರಸಗೊಬ್ಬರ, ಔಷಧ ಇಲಾಖೆ ಸಚಿವರಾಗಿ ಮತ್ತು ಕೇಂದ್ರ ಸಂಸದೀಯ ವ್ಯವಹಾರ ಇಲಾಖೆಯ ಹೆಚ್ಚುವರಿ ಹೊಣೆ ಹೊತ್ತು ಅವುಗಳನ್ನು ಯಶಸ್ವಿಯಾಗಿಯೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.
ಈ ಹಿಂದೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರದಲ್ಲಿ 2011ರಲ್ಲಿ ನಡೆದ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತು. ಆ ಸಂದರ್ಭದಲ್ಲಿ ಅನಂತ ಕುಮಾರ ಅವರೇ ಮುಂದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಂದು ಬಹುತೇಕರು ಭಾವಿಸಿದ್ದರು. ಆದರೆ ಲಾಟರೀ ಹೊಡೆದಂತೆ ಈಗಿನ ಕೇಂದ್ರ ಮಂತ್ರಿ ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದರು. ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಅನುಭವ, ಅರ್ಹತೆ ಇದ್ದರೂ ಅನಂತ ಕುಮಾರ ಮುಖ್ಯಮಂತ್ರಿ ಖುಚರ್ಿ ಏರಲಾಗಲಿಲ್ಲ ಎಂಬ ಬೇಸರ ಅವರ ಹಿತೈಸಿ ಮತ್ತು ಅಭಿಮಾನಿಗಳಲ್ಲಿ ಇಂದಿಗೂ ಇದೆ.
ಆದರೆ ಇವೆಲ್ಲವೂ ಈಗ ನೆನಪು ಮಾತ್ರ!
ದನಿ ಇಲ್ಲದವರ ಬದುಕಿನ 'ಅದಮ್ಯ ಚೇತನ'ವಾಗಿ ಹೊರಹೊಮ್ಮಿದ್ದ ಕೇಂದ್ರ ಮಂತ್ರಿ ಅನಂತ ಕುಮಾರ ಇನ್ನಿಲ್ಲ ಎಂಬುದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ. ಮತ್ತೇ ಹುಟ್ಟಿ ಬನ್ನಿ ಸರ್..!