ಮೊಬೈಲ್ ರೀಚಾರ್ಜ್, ಡೇಟಾ ಪ್ಯಾಕ್ ದರಗಳ ಹೆಚ್ಚಳ ಕೈಬಿಡುವಂತೆ ಎಐಡಿವೈಓ ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ 04: ಹೊಸಪೇಟೆಯ ತಹಶೀಲ್ದಾರ ಕಚೇರಿ ಮುಂದುಗಡೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ವತಿಯಿಂದ ದಿ. 4ರಂದು ಮೊಬೈಲ್ ರಿಚಾರ್ಜ್ ಮತ್ತು ಡಾಟಾ ಪ್ಯಾಕ್ ದರಗಳ ಹೆಚ್ಚಳವನ್ನು ವಿರೋಧಿಸಿ ಆಖಿಲ ಭಾರತ ಸಮಿತಿಯ ತರೆಯ ಮೇರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಹೆಚ್ ಯರಿ್ರಸ್ವಾಮಿ ಮುಂಡ್ರಿಗಿ ಅವರು ಮಾತನಾಡುತ್ತಾ ಇಂದು ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ಗ್ರಾಹಕರನ್ನು ಮತ್ತು ಜನಸಾಮಾನ್ಯರನ್ನು ಹಗಲು ದರೋಡೆ ನಡೆಸುತ್ತಿವೆ. ಸಾರ್ವಜನಿಕ ಸಂಸ್ಥೇಯಾದ ಬಿಎಸ್ಎನ್ಎಲ್ ಸಂಸ್ಥೆಯನ್ನು ಕೇಂದ್ರ ಸರ್ಕಾರವೇ ನಷ್ಟದ ನೆಪ ಹೇಳಿ ಅದನ್ನು ಸಂಪೂರ್ಣವಾಗಿ ಮುಚ್ಚುವ ನಿಟ್ಟಿನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ ಹಿತ ಕಾಪಾಡಲು ಮುಂದಾಗಿರುವುದು ಮೊಬೈಲ್ ಕಂಪನಿಯ ಮಾಲೀಕರ ಹಿತ ಕಾಯಲು ಕೇಂದ್ರ ಮತ್ತು ಟ್ರೈ ಸಂಸ್ಥೆಯು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ. ಈ ಕೋವಿಡ್-19 ಪರಿಸ್ಥಿತಿಯಲ್ಲಿ, ಸಾಮಾನ್ಯ ಜನರ ಆರ್ಥಿಕ ಸ್ಥಿತಿಯು ತೀವ್ರ ಸಂಕಷ್ಟದಲ್ಲಿದೆ. ಈ ನಡುವೆ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಮೇಲಿನ ಅವಲಂಬನೆಯು ಅಸಾಧಾರಣವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಮೊಬೈಲ್ ಬಳಕೆಯನ್ನು ಅಗಾಧವಾಗಿ ಅವಲಂಬಿಸಿದ್ದಾರೆ. ಆನ್ಲೈನ್ ತರಗತಿಗಳು, ಆನ್ಲೈನ್ ಅಪ್ಲಿಕೇಶನ್ಗಳು, ಆನ್ಲೈನ್ ವಹಿವಾಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎಲ್ಲವುಗಳಿಂದ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಪರಿಸ್ಥಿತಿಯಲ್ಲಿ, ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾದಂತಹ ಎಲ್ಲಾ ಮೊಬೈಲ್ ಕಂಪನಿಗಳು ನೆಟ್ ಪ್ಯಾಕ್ ಮತ್ತು ರೀಚಾರ್ಜ್ ದರಗಳನ್ನು ಶೇಕಡಾ 20 ರಿಂದ 25ಅ ವರೆಗೆ ಹೆಚ್ಚಿಸಿವೆ, ಇದು ಸಂಪೂರ್ಣವಾಗಿ ಜನವಿರೋಧಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಎಐಡಿವೈಓನ ವಿಜಯನಗರ ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುಳಾ ಡೋಳಿ, ಕಲ್ಮೇಶ್, ಪ್ರಕಾಶ್ ನಾಯ್ಕ್, ಶೇಖರ್ ಮತ್ತು ಯುವಜನರಾದ ಮಲ್ಲಿಕಾರ್ಜುನ್, ಸುದೀಪ್, ಅಂಬರೀಶ್, ಸಮೀರ್, ಸಂದೀಪ್, ಮಹೇಶ್ ಹೊನ್ನುರಸ್ವಾಮಿ ಮುಂತಾದವರು ಭಾಗವಹಿಸಿದರು.