ಕೊರೋನಾ ಸೋಂಕಿತರ ಸಹಾಯಕ್ಕೆ ಬೈಕ್ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್
ಹೈದರಾಬಾದ್, ಮೇ 03:ದೇಶದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಂಕಿತರು ಆಕ್ಸಿಜನ್, ಆಸ್ಪತ್ರೆ, ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಹಾಂ, ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ನ ಅರ್ಜುನ್ ಗೌಡ, ಭುವನ್ ಪೊನ್ನಣ್ಣ ಸೇರಿದಂತೆ ಅನೇಕ ಸಿನಿತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ನಟ ಹರ್ಷವರ್ಧನ್ ಆಮ್ಲಜನಕ ಕೊರತೆ ನೀಗಿಸಲು ತನ್ನ ಪ್ರೀತಿಯ ಬೈಕ್ ಅನ್ನೇ ಮಾರಾಟಕ್ಕೆ ಇಟ್ಟಿದ್ದಾರೆ.
ಈ ಬಗ್ಗೆ ಹರ್ಷವರ್ಧನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ಬೈಕ್ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ 'ಆಗತ್ಯ ಇರುವವರಿಗೆ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ನನ್ನ ಬೈಕ್ ಮಾರಾಟ ಮಾಡುತ್ತಿದ್ದೇನೆ. ಹೈದರಾಬಾದ್ ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕ ಎಲ್ಲಿ ಸಿಗುತ್ತೆ ಹೇಳಿ' ಎಂದು ಪೋಸ್ಟ್ ಹಾಕಿದ್ದಾರೆ. ಸನಮ್ ತೇರಿ ಕಸಮ್ ಸಿನಿಮಾ ಮೂಲಕ ಸಿನಿಪ್ರೇಕ್ಷಕರ ಹೃದಯ ಗೆದ್ದಿರುವ ತೆಲುಗು ನಟ ಹರ್ಷವರ್ಧನ್ ಅವರ ಮಾನವೀಯ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ ಹರ್ಷವರ್ಧನ್ ಬಳಿ ಉತ್ತಮ ಬೈಕ್ ಮತ್ತು ಕಾರ್ ಕಲೆಕ್ಷನ್ ಗಳಿವೆ. ಇದೀಗ ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ತನ್ನ ನೆಚ್ಚಿನ ಬೈಕ್ ಅನ್ನೇ ಮಾರಾಟಕ್ಕೆ ಇಡುವ ಮೂಲಕ ರಿಯಲ್ ಹೀರೋ ಆಗಿದ್ದಾರೆ.