ಕಳ್ಳರೇ ತುಂಬಿರುವ ಈ ಕಾಲಘಟ್ಟದಲ್ಲಿ ಆ ಒಳ್ಳೆಯ ಮುತ್ಸದ್ದಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಾರೆ...!
ಇತಿಹಾಸದ ಕಾಲಗರ್ಭದಲ್ಲಿ ಅದೇಷ್ಟೋ ಮಹಾತ್ಮರು ಹುತಾತ್ಮರಾಗಿ ಅಮರತ್ವ ಪಡೆದುಕೊಂಡಿದ್ದಾರೆ. ಅವರನ್ನೇಲ್ಲ ಮೀರಿಸುವ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಆ ವ್ಯಕ್ತಿ ಇಂಥ ಕಠೋರ ಜಗತ್ತಿನಲ್ಲೂ ಆಧುನಿಕ ಅಜಾತ ಶತ್ರು ಎಂದು ಕರೆಸಿಕೊಳ್ಳುತ್ತಾರೆ ಎಂದರೆ ಅದು ಸಾಮಾನ್ಯವಾದ ಮಾತಲ್ಲ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡ ಭಾರತ ದೇಶದ ರಾಜಕೀಯ ವ್ಯವಸ್ಥೆಗೆ ಕತ್ತಲು ಆವರಿಸಿದಾಗ ಜನರ ಆಲೋಚನಾ ರೀತಿಯನ್ನೇ ಬದಲಿಸಿದ ಆ ವ್ಯಕ್ತಿ ನಿಜಕ್ಕೂ ಅದ್ಭುತ. ಆಳುವವರ ದಬ್ಬಾಳಿಕೆಯಿಂದ ದೇಶವೇ ನುಜ್ಜುಗುಜ್ಜಾಗಿತ್ತಿದ್ದಾಗ ‘ಕರುನಾಳು ಬಾ ಬೆಳಕೆ ಮುಸುಕೀದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎನ್ನುವಂತೆ ಅಂಧಃಕಾರದ ಕೂಪದಲ್ಲಿ ತೊಳಲಾಡುತ್ತಿದ್ದ ವ್ಯವಸ್ಥೆಯನ್ನು ಬದಲಾಯಿಸಿ, ಹೊಸ ದೆಸೆಯನ್ನು ತೋರಲು ಬಂದ ಪ್ರಖರ ಸೂರ್ಯ ಅವರು. ಇಂದಿನ ಕಾಲಘಟ್ಟದಲ್ಲಿ ಅಧಿಕಾರಕ್ಕಾಗಿ ಆಡಬಾರದ ಆಟ ಆಡುವ ಜನಗಳನ್ನು ಕಂಡಾಗ ಆ ವ್ಯಕ್ತಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಾರೆ. ಸ್ವಾರ್ಥ ಸಾಧನೆಗಾಗಿ ದೇಶವನ್ನು ಬಲಿಕೊಡುವ ಇಂದಿನ ನಾಯಕರನ್ನು ಕಂಡಾಗ ಆ ವ್ಯಕ್ತಿಯು ದೇಶಪ್ರೇಮದ ಮೂಲಕ ಕಣ್ಣಮುಂದೆ ಪ್ರಜ್ವಲಿಸುತ್ತಾರೆ. ಎಲುಬಿಲ್ಲದ ನಾಲಿಗೆಯನ್ನು ಎಲ್ಲಿಬೇಕಲ್ಲಿ ಹರಿ ಬಿಟ್ಟು ಬಾಯಿಚಪಲ ತೀರಿಸಕೊಳ್ಳುವ ಮಂತ್ರಿಗಳನ್ನು ಕಂಡಾಗ ಆ ವ್ಯಕ್ತಿಯು ತಮ್ಮ ತೂಕದ ಮಾತುಗಳಿಂದ ನಮ್ಮನ್ನು ಸೆಳೆಯುತ್ತಾರೆ. ಅಕ್ಷರ ಕಲಿತ ಅನಾಗರಿಕರು ಅಧಿಕಾರ ಮಾಡುವ ಇಂಥ ಸಂದರ್ಭದಲ್ಲಿ ಅತ್ಯುತ್ತಮ ಕನಸುಗಳನ್ನು ಕೊಟ್ಟು ಹೋದ ಆ ವ್ಯಕ್ತಿ ತಮ್ಮ ಕಾರ್ಯದ ಮೂಲಕವೇ ಇಂದು ನಮ್ಮನ್ನು ಕೆಣಕುತ್ತಾರೆ. ಅದ್ಭುತ ಆಡಳಿತದ ಮೂಲಕ, ಕಟ್ಟಿದ ಕನಸುಗಳ ಮೂಲಕ, ಮೆಟ್ಟಿದ ಮಾರ್ಗದ ಮೂಲಕ, ಕುಟ್ಟಿ ಪುಡಿ ಮಾಡಿದ ಸಮಸ್ಯೆಗಳ ಮೂಲಕ, ಮರೆಯಲಾರದ ಮಾತುಗಳ ಮೂಲಕ, ಪ್ರಖರ ಲೇಖನಿಗಳ ಮೂಲಕ, ಹರಿತವಾದ ಕವಿತಗಳ ಮೂಲಕ, ಬೋರ್ಗರೆದು ಹೊರಬಂದ ವಾಕ್ಝರಿಯ ಮೂಲಕ, ಜ್ಞಾನದ ಮೂಲಕ, ಪರಿವರ್ತನೆಯ ಪರ್ವದ ಮೂಲಕ ಆ ವ್ಯಕ್ತಿ ಸದಾ ಶಾಶ್ವತವಾಗುತ್ತಾರೆ. ಮತ್ತೆ ಮತ್ತೆ ನೆನಪಾಗುತ್ತಾರೆ. ಎಲ್ಲರೂ ಕಳ್ಳರೇ ತುಂಬಿರುವ ಈ ಕಾಲಘಟ್ಟದಲ್ಲಿ ಹೇಗೆ ಆಡಳಿತ ಮಾಡಬೇಕು ಎಂದು ಹೇಳಿಕೊಟ್ಟಂತ ಆ ಪುಣ್ಯಾತ್ಮನ ನೆನಪು ಇತ್ತೀಚೆಗಂತೂ ಬಿಟ್ಟೂ ಬಿಡದೇ ನನನ್ನು ಕಾಡುತ್ತಾರೆ. ಅವರೇ; ತಮ್ಮ ಮಾತುಗಳ ಮೂಲಕವೇ ಎದುರಾಳಿಯ ಹೃದಯವನ್ನು ಬದಲಿಸುತ್ತ, ನಾಟಕೀಯತೆಯನ್ನು ತೋರುವವರ ಮುಖವಾಡವನ್ನು ಛಿದ್ರ ಮಾಡಿದ ದೀಮಂತ ನಾಯಕ, ಉತ್ತಮ ಮನಸ್ಸುಳ್ಳ ರಾಜಕೀಯ ಮುತ್ಸದ್ದಿ ಅಟಲಬಿಹಾರಿ ವಾಜಯಪೇಯಿ.
‘ಧರ್ಮ ಸಂಸ್ಥಾಪನಾರ್ಥಾಯಃ ಸಂಭವಾಮಿ ಯುಗೆ ಯುಗೆ’ ಎಂದು ಮಹಾಭಾರತದಲ್ಲಿ ಕೃಷ್ಣ ಗೀತೆ ಬೋಧಿಸಿದ್ದ. ಅದರರ್ಥ ಯಾವಾಗ ಅಧರ್ಮದ ಗೆಲವಾಗಲಾರಂಭವಾಗುತ್ತದೆಯೋ ಆವಾಗ ಧರ್ಮ ಸಂಸ್ಥಾಪನೆಗೆ ನಾನು ಮತ್ತೆ ಮತ್ತೆ ಹೊಸ ಹೊಸ ರೂಪದಲ್ಲಿ ಅವತರಿಸುತ್ತೇನೆ ಎಂದು ಹೇಳಿದ್ದ. ಹಾಗೆ ಈ ಆಧುನಿಕ ಭಾರತದಲ್ಲಿ ಜನತೆಗೆ ಆಗುವ ಅನ್ಯಾಯವನ್ನು ಸರಿ ಪಡಿಸಲು, ಉತ್ತಮ ಜೀವನ ನೀಡಲು ಅವತರಿಸಿದ ದೇಶಪ್ರೇಮದ ಚಿಲುಮೆಯೆ ಅಟಲ್ ಬಿಹಾರಿ ವಾಜಪೇಯಿ. “ಚೋಟೇ ಮನ್ ಸೆ ಕೋಯಿ ಬಡಾ ನಹಿ ಹೋತಾ, ಟೂಟೆ ಮನ್ ಸೆ ಕೋಯಿ ಖಡಾ ನಹಿ ಹೋತಾ” ಎನ್ನುವ ಅದ್ಭುತ ಚಿಂತನೆಯನ್ನು ಹೊತ್ತು ಬದುಕಿದವರವರು. ಬದುಕಿಗಾಗಿ ರಾಜಕೀಯ ಮಾಡುವ ಜಗತ್ತಿನಲ್ಲಿ ರಾಜಕೀಯಕ್ಕಾಗಿ ಬದುಕನ್ನೇ ಮುಡುಪಾಗಿಟ್ಟ ಅವರು; ತುತ್ತಿಗಾಗಿ ಬದುಕದೆ ತತ್ವಕ್ಕಾಗಿ ಬದುಕು ಮಾಡಿದವರು. ದೇಶಪ್ರೇಮವನ್ನೇ ಉಸಿರಾಡಿದವರು. ದೇಶದ ವಿಷಯಕ್ಕೆ ಬಂದರೆ ಯಾರನ್ನೂ ಬಿಡದೇ ಕುಟುಕಿ, ತಪ್ಪುಗಳನ್ನು ಎತ್ತಿ ತೋರಿಸಿ, ಪರಿವರ್ತನೆಗೆ ತೆರೆದುಕೊಳ್ಳುವ ಸಲಹೆಯನ್ನು ನೀಡಿ ಅಧ್ಭುತ ವಾಗ್ಮಿಯಾಗಿ ಮೆರೆದವರು. 1924ರಲ್ಲಿ ಜನಿಸಿ 2018ರಲ್ಲಿ ಮರಣಿಸಿ ದೇಶದ ಕೋಟಿ ಜನರ ಹೃದಯವೀಣೆಯ ತಂತಿ ಮೀಟಿದ ಮೇರು ವ್ಯಕ್ತಿತ್ವದ ಚಿಲುಮೆ ಅವರು. ಹೇಗೆ ಹೂವು ಹುಟ್ಟಿ ಸಾಯುವುದರೊಳಗೆ ದೇವರ ತಲೆಯ ಮೇಲೋ ಇಲ್ಲ ದೇವಸ್ವರೂಪಿ ಮಾತೆಯ ಮುಡಿಯಲ್ಲೋ ಕುಳಿತು ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತದೆಯೋ ಹಾಗೆ ಅಟಲ್ಜೀ ಸಹ ಭಾರತ ಮಾತೆಯ ಮುಡಿಯೇರಿ ಜೀವನವನ್ನು ಸಾರ್ಥಕ ಪಡಿಸಿಕೊಂಡರು. ಇವರು ಕೇವಲ ರಾಜಕಾರಣಿಯಾಗಿದ್ದರೆ ಬಹುಶಃ ನಾನಿಷ್ಟು ಇವರ ಬಗ್ಗೆ ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಅವರ ಕುರಿತು ಬರೆವಾಗ ಹೃದಯ ಭಾರವಾಗಿ ನೊಂದುಕೊಳ್ಳುತ್ತಲೇ ಇರುತ್ತಿರಲಿಲ್ಲ. ಅಟಲ್ಜಿ ಕೇವಲ ರಾಜಕಾರಣಿಯಲ್ಲ, ಸಂಸದಿಯ ಪಟುವಲ್ಲ ಆದರಾಚೆ ಅವರೊಬ್ಬ ಅತ್ಯದ್ಭುತ ಚಿಂತಕ, ಉತ್ತಮ ವಾಕ್ಪಟು, ಅದ್ಭುತ ಲೇಖಕ, ಬಹುಮುಖಿ ಬರಹಗಾರ, ರಾಜಕೀಯವನ್ನು ಅಳೆದು ತೂಗಿದ ಧೀಮಂತ, ಎಲ್ಲಕ್ಕೂ ಮಿಗಿಲಾಗಿ ಒಬ್ಬ ದೇಶಪ್ರೇಮದ ಸುಧೆಯ ಸಾಗರದಲ್ಲಿ ಮಿಂದೆದ್ದು ಸುಂದರ ಭಾವನೆಗಳನ್ನು ಅಕ್ಷರ ಹಂದರಲ್ಲಿ ಕಟ್ಟಿ ಕೊಟ್ಟ ಕವಿ. ಅವರ ಹಲವು ಮುಖಗಳಲ್ಲಿ ಕೆಲವು ಮುಖಗಳ ಪರಿಚಯ ಮಾಡಿಕೊಡುವ ತವಕದ ಪ್ರತಿಬಿಂಬವೇ ಈ ಲೇಖನ. ಅವರಲ್ಲಿದ್ದ ಅಪಾರ ಆತ್ಮ ವಿಶ್ವಾಸ ಹಾಗೂ ಅಖಂಡ ದೇಶಭಕ್ತಿಯೇ ಅವರ ಶಕ್ತಿಯ ಮೂಲ. ಅವರ ಒಂದು ಕವಿತೆಯೇ ಅವರಲ್ಲಿನ ದೇಶಭಕ್ತಿಯನ್ನು ಇಡಿಯಾಗಿ ಕಟ್ಟಿಕೊಟ್ಟು ಓದುಗನ ಎದೆ ತಟ್ಟಿ ಎಬ್ಬಿಸುತ್ತದೆ.
“ಹಿಮಾಲಯ ಭಾರತ ಮಾತೆಯ ಕಿರಿಟ
ಕಾಶ್ಮೀರ ಅವಳ ಲಲಾಟ
ಆಕಾಶದ ಮೋಡಗಳೇ ಮುಂಗುರುಳುಗಳು
ದೆಹಲಿ ಅವಳ ಹೃದಯ
ಬಲೂಚಿಸ್ಥಾನ ಬರ್ಮಾಗಳೇ ಅವಳ ಭುಜಗಳು
ಗಂಗಾ ಯಮುನಾ ಅವಳ ಮಾಂಗಲ್ಯ
ನಾಗಪುರ ಅವಳ ನಾಭಿ
ವಿಂಧ್ಯಪರ್ವತವೇ ಅವಳ ಸೊಂಟ
ವಿಂಧ್ಯ ಪರ್ವತದಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ
ನರ್ಮದಾ ನದಿಯೇ ಚಿನ್ನದ ಡಾಬು
ಪೂರ್ವ ಪಶ್ಚಿಮ ಘಟ್ಟಗಳು ಅವಳ ಕೈಗಳು
ಕನ್ಯಾಕುಮಾರಿ ಅವಳ ಚರಣ ಕಮಲಗಳು
ಶ್ರೀಲಂಕ ಅವಳ ಚರಣಕ್ಕೆ ದೇವರು ಅರ್ಿಸಿದ ಕಮಲದ ಹೂ
ಸಮುದ್ರ ರಾಜ ಅವಳ ಕಾಲು ತೊಳಿಯುತ್ತಾನೆ
ವಾಯು ದೇವ ಚಾಮರ ಬೀಸುತ್ತಾನೆ
ಇದು ವಂದನೆಯ ಭೂಮಿ, ಅಭಿನಂದೆಯ ಭೂಮಿ
ಇಲ್ಲಿ ಹನಿ ಹನಿಯೂ ಗಂಗೆ, ಕಣ ಕಣವು ಶಂಕರ
ಬದುಕು ಇಲ್ಲೇ ಅವಸಾನವು ಇಲ್ಲೆ”
ಈ ಕವಿತೆಯನ್ನು ಓದುತ್ತಿದ್ದಂತೆ ಈಡೀ ಭಾತವೇ ನನ್ನ ಕಣ್ಣಮುಂದೆ ಬರುತ್ತದೆ. ನನಗೆ ಅರಿವಿಲ್ಲದಂತೆ ನಾನು ಭಾರತದ ಅಭಿಮಾನದಲಿ ಲೀನವಾಗಿ ಅಖಂಡ ಭಾರತದ ಅಣು ಅಣುವಲ್ಲಿ ಬೆರೆತು ಹೋದಂತೆ ಭಾಸವಾಗುತ್ತದೆ. ನಾನು ಅಡಿ ಇಟ್ಟರೆ ಇಡೀ ಭಾರತವೇ ಅಡಿ ಇಟ್ಟಂತೆ ಕಾರಣ ನಾನೊಬ್ಬ ಭಾರತೀಯ ಎನ್ನುವ ಭಾವ ನನ್ನಲ್ಲಿ ಹುಟ್ಟುತ್ತದೆ. ಇದು ಅಟಲ್ಜಿ ಅವರ ಕವಿತೆಗಿರುವ ತಾಕತ್ತು.
ಬುದ್ಧನ ಉಪದೇಶಗಳನ್ನು ಓದಿ ಬುದ್ಧರಾಗದ ನಾವುಗಳು, ಬಸವನ ವಚನಗಳನ್ನು ಓದಿಯು ಜ್ಞಾನಿಯಾಗದ ನಾವುಗಳು ನುಡಿದಂತೆ ನಡೆಯಲಿಲ್ಲ. ನಡೆಯಂತೆ ನುಡಿಯಿಲ್ಲ. ಆದರೆ ಅಟಲ್ ಜಿ ನುಡಿದಂತೆ ನಡೆದವರು. ಯಾರಿಗೂ ಕೇಡು ಬಯಸದೇ ತಮ್ಮ ಮಾತಿನ ಮೋಡಿಗೆ ಮುಂದಿರುವವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದ್ದರು. ಇವರ ಮಾತಿನ ಸೆಳೆತಕ್ಕೆ ವಿರೋಧ ಪಕ್ಷಗಳೇ ಎದ್ದೆದ್ದು ಕುಣಿಯುತ್ತಿದ್ದವು. ತಮಗೆ ಅರಿವಿಲ್ಲದಂತೆ ಚಪ್ಪಾಳೆ ತಟ್ಟುತ್ತಿದ್ದವು. ಕಾರಣ ಆ ಮಾತಿನಲ್ಲಿದ್ದ ತಾಕತ್ತು ಅಂತಹದಿತ್ತು. ಎದರಾಳಿಗಳಿಗೆ ಕೊಡುವ ಉತ್ತರ ಹೇಗಿತ್ತೆಂದರೆ ಉತ್ತರಕ್ಕೆ ಮರು ಪ್ರಶ್ನೆಯೇ ಬರುತ್ತಿರಲಿಲ್ಲ. ಬರುತ್ತಿರಲಿಲ್ಲ ಅಲ್ಲ ಪ್ರಶ್ನೆ ಮೂಡಲು ಅವಕಾಶವೇ ಇರುತ್ತಿರಲಿಲ್ಲ. ಹಾಗಿತ್ತು ಅವರ ಮಾತಿನ ಪ್ರೌಢಿಮೆ. ಎದರಾಳಿಗಳಿಗೂ ಸಹ ಕೇಡು ಬಯಸದ ಅವರು, ಟೀಕಿಸುವ ಕಾಲದಲ್ಲೂ ತಮ್ಮ ಪದ ಪ್ರಯೋಗದ ಮೇಲೆ ಹಿಡಿತವಿಟ್ಟುಕೊಂಡಿರುತ್ತಿದ್ದರು. ಇದು ಅವರ ಬೆಳವಣಿಗೆಗೆ ಪೂರಕವಾದರೇ ಇಂದಿನವರಿಗೆ ಮಾದರಿಯಾಗಿದೆ. ಇದು ಅಟಲ್ಜಿಯವರ ಮತ್ತೋಂದು ಮುಖ.
ಜಗತ್ತು ತಾನು ಶಕ್ತಿಶಾಲಿ ಎಂದು ತೋರಿಸಿಕೊಳ್ಳಲು ಹವಣಿಸುತ್ತಿದ್ದ ಕಾಲವದು. ಎಲ್ಲ ರಾಷ್ಟ್ರಗಳು ತನ್ನಷ್ಟು ಬಲಿಷ್ಟ ಯಾರೂ ಇಲ್ಲ ಎಂದು ತೋರಿಸುವ ತವಕದಲ್ಲಿದ್ದವು. ಅಣುಶಕ್ತಿಯ ಉತ್ಪಾದನೆ ಮಾಡಿದ ದೇಶಗಳು ಬೇರೆ ರಾಷ್ಟ್ರಗಳ ಮೇಲೆ ಅಧಿಕಾರ ಚಲಾಯಿಸುತ್ತಿದ್ದವು. ಅದರಲ್ಲೂ ಅಮೇರಿಕಾದಂತ ರಾಷ್ಟ್ರ ಉಪಗ್ರಹಗಳ ಸಮೇತ ನಮ್ಮ ಮೇಲೆ ಹದ್ದಿನಕಣ್ಣು ನೆಟ್ಟಿದ್ದವು. ಅಂಥ ಸಂದರ್ಭದಲ್ಲಿ 1999ರಲ್ಲಿ ಅವರ ಕಣ್ಣು ತಪ್ಪಿಸಿ ಯಶಸ್ವಿ ಅಣುಬಾಂಬ ಪ್ರಯೋಗ ಮಾಡಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಶ್ರೇಯ ವಾಜಪೇಯಿ ಅವರಿಗೆ ಸಲ್ಲುತ್ತದೆ. ಅಂದಿನಿಂದ ಇಡೀ ಜಗತ್ತು ಭಾರತವನ್ನು ನೋಡುವ ದೃಷ್ಠಿಯೇ ಬದಲಾಯಿಸಿತು. ಇಂದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗುವುದಕ್ಕೆ ಅಂದು ವಾಜಪೇಯಿ ಬರೆದ ಮುನ್ನುಡಿಯೇ ಕಾರಣವೆಂದರೆ ಅತಿಶಯೋಕ್ತಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಎದುರಿಸಬಹುದಾದ ಸಂಕಷ್ಟವನ್ನು ಅದಾಗಲೇ ಅರಿತಿದ್ದ ಅಟಲ್ ಜಿ ಅಂದು ತೆಗೆದುಕೊಂಡ ದೃಢ ನಿರ್ಧಾಕ್ಕೆ ಇಂದು ನಾವು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಕಾರಣವಾಯಿತು. 104 ನೇ ಸ್ಥಾನದಲ್ಲಿದ್ದ ಭಾರತ 04 ಸ್ಥಾನಕ್ಕೆ ಬಂದು ತಲುಪಿದೆ ಎಂದರೆ ಅದರ ಹಿಂದೆ ಅಟಲ್ಜಿಯವರ ದೂರದೃಷ್ಠಿಯು ಕಾರಣವಾಗಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ನಮಗೆ ಶಾಂತಿ ಮಂತ್ರದ ಜೊತೆಗೆ ಯುದ್ಧ ತಂತ್ರವು ಗೊತ್ತಿದೆ. ಸ್ನೇಹಕ್ಕೆ ಬದ್ಧವಾದ ಭಾರತ ಅವಶ್ಯಕತೆ ಬಿದ್ದರೆ ಸಮರಕ್ಕೂ ಸಿದ್ಧವಾಗುತ್ತದೆ ಎನ್ನುವುದನ್ನು ಅಂದೇ ತೋರಿಸಿದ ವಾಜಪೇಯಿಯವರು ವಿಶ್ವದ ಎದುರು ಭಾರತದ ನಿಜವಾದ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಹಿಂದುಸ್ಥಾನದ ತಾಕತ್ತು ಕೆಣಿಕಿ ನೋಡಿದರೆ ಆಪತ್ತು ಎನ್ನುವುದನ್ನು ಜಗತ್ತು ಅರಿವಂತೆ ಮಾಡಿದ್ದು ಅಟಲ್ ಜಿ ಅವರ ದೃಷ್ಠಿಕೋನ. ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಕೆಂಗಣ್ಣನ್ನು ಲೆಕ್ಕಿಸದೆ ಅಂದುಕೊಂಡ ಕಾರ್ಯವನ್ನು ಮಾಡುವುದಕ್ಕೆ ಬದ್ಧವಾದ ಅವರ ಗಟ್ಟಿಗುಂಡಿಗೆ ಎಂತವರಿಗೂ ಮಾದರಿಯಾಗಿ ನಿಲ್ಲುವಂತದ್ದು. ತಾವಂದುಕೊಂಡ ಕಾರ್ಯ ಮಾಡಿದರೆ ಶಕ್ತಿಶಾಲಿ ರಾಷ್ಟಗಳ ಮುನಿಸಿಗೆ ಕಾರಣವಾಗಬಹುದು ಎನ್ನುವುದನ್ನು ಮೊದಲೇ ಅರಿತಿದ್ದರೂ ಕೂಡ ದೇಶದ ಹಿತದ ಮುಂದೆ ಯಾವ ರಾಷ್ಟ್ರವನ್ನು ಬೇಕಾದರೂ ನಾನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ಅವರ ಆತ್ಮ ವಿಶ್ವಾಸವನ್ನು ನಾವು ಒಪ್ಪಿಕೊಳ್ಳಲೇ ಬೇಕು.
ಹೆಜ್ಜೆ ಹೆಜ್ಜೆಗೂ ಮಗ್ಗಲು ಮುಳ್ಳಾಗಿ ಕಾಡುತ್ತಿದ್ದ ಪಕ್ಕದ ಪಾಕಿಸ್ತಾನವನ್ನು ಸಹ ಶಾಂತಿಯಿಂದ ಮನ ಒಲಿಸಲು ನೋಡಿದವರು ಅಟಲ್ಜಿ. “ಝಂಗ್ ನಾ ಹೋನೆ ದೆಂಗೆ” ಎಂದು ಹೇಳಿ ಎರಡು ದೇಶಗಳ ಮಧ್ಯದಲ್ಲಿ ಸಂಪರ್ಕ ಸುಧಾರಿಸಲು ಲಾಹೋರಗೆ ಬಸ್ ಸಂಚಾರ ಆರಂಭಿಸಿದರು. ಆದರೆ ಶಾಂತಿಯ ಪದದ ಪರಿಚಯವೇ ಇಲ್ಲದ ಪಾಪಿಗಳಿಗೆ ಇದೆಲ್ಲಿ ಅರ್ಥವಾಗಬೇಕು. ಶಾಂತಿಯ ಪ್ರತೀಕವಾಗಿ ಹಾರಿಸಿದ ಪಾರಿವಾಳವನ್ನೇ ತಿಂದು ತೇಗಿದ ಪಾಕೀಸ್ತಾನಿಗಳು ಅದಾಗಲೇ ಭಯೋತ್ಪಾದನೆ ಬಾಗಿಲು ತಟ್ಟಿದ್ದರು. ಹೀಗಾಗಿ ಭಾರತೀಯ ಸೈನಿಕರಿಗೆ ತೊಡೆ ತಟ್ಟುವುದು ಶತ್ರುಗಳ ಹೆಡೆಮುರಿ ಕಟ್ಟುವುದು ಅನಿವಾರ್ಯವಾಗಿ ಎದುರಾಯಿತು. ಪರಿಣಾಮವಾಗಿ ಕಾರ್ಗಿಲ್ ಯುದ್ಧ ನಡೆಯಿತು. ಯುದ್ಧವೆಂದಾಕ್ಷಣ 352ನೇ ಕಲಂ ಬಳಸಿ ರಾಷ್ಟ್ರೀಯ ತುರ್ತುಪರಸ್ಥಿತಿ ಹೊರಡಿಸಿದ್ದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಆದರೆ 1999ರ ಯುದ್ಧದ ಸಂದರ್ಭದಲ್ಲಿ ತುರ್ತುಪರಸ್ಥಿತಿ ಹೇರದೆಯೇ ಸೈನಿಕರನ್ನು ಹುರಿದುಂಬಿಸುತ್ತ, ಹೆಚ್ಚಿನ ಅಧಿಕಾರವನ್ನು ಸೈನ್ಯಕ್ಕೆ ನೀಡುತ್ತ, ಆಪರೇಷನ್ ವಿಜಯ ಹೆಸರಿನಲ್ಲಿ ವಿಜಯಪಥಾಕೆ ಹಾರಿಸಿ ಜಗತ್ತಿನ ಕಣ್ಣಲ್ಲಿ ಭಾರತ ಎಷ್ಟು ದೇಶಪ್ರೇಮಿ ಎನ್ನುವುದನ್ನು ತೋರಿಸುವುದು ಮಾತ್ರವಲ್ಲದೇ ಪಾಕಿಸ್ತಾನಿಗಳ ಮನಸ್ಸಿನಲ್ಲಿ ಭಯದ ಕರಿನೆರಳನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಶಾಂತಚಿತ್ತ ವ್ಯಕ್ತಿ ಸಿಡಿದೆದ್ದರೇ ಏನಾಗುತ್ತದೆ ಎನ್ನುವುದರ ದರ್ಶನ ಮಾಡಿಸಿದ ವ್ಯಕ್ತಿ ಎಂದರೆ ಅದು ಅಟಲ್ ಜಿ.
ಅಧಿಕಾರಕ್ಕೆ ಬಂದಾಗಿನಿಂದ ಹೆಜ್ಜೆ ಹೆಜ್ಜೆಗೂ ಸಂಕಷ್ಠದ ಪರಸ್ಥಿತಿ ಎದುರಿಸಿದ ಅಟಲ್ಜಿ ಯಾವುದಕ್ಕೂ ಜಗ್ಗದೆ ಮುನ್ನುಗ್ಗುತ್ತಲೇ ಸಾಗುತ್ತಿದ್ದರು. ತಾಲಿಬಾನಿ ಉಗ್ರರಿಂದ ಅಪಹರಿಸಲ್ಪಟ್ಟ ಇಂಡಿಯನ್ ಏರ್ಲೈನ್ಸ ವಿಮಾನವನ್ನು ಪ್ರಯಾಣಿಕರ ಸಮೇತ ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದು ಅವರ ರಾಜಕೀಯ ಮುತ್ಸದ್ದಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. 2001 ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಅವರು ತೋರಿಸಿದ ದಿಟ್ಟ ನಿಲುವಿನಿಂದಲೇ ಅಂದು ಪೋಟಾ ಕಾಯ್ದೆ-2002 ಜಾರಿಗೆ ಬರುವಂತಾಯಿತು. ಇದನ್ನು ಜಾರಿಗೆ ತರಲು ಪ್ರಬಲ ವಿರೋಧ ಎದುರಾಯಿತು. ಈ ಕಾರಣಕ್ಕಾಗಿಯೇ 108 ನೇ ಕಲಂ ಬಳಕೆಯಾಗಿದೆ ಎಂದರೆ ಇದರ ವಿರೋಧ ಇನ್ನೇಷ್ಟು ಭೀಕರವಾಗಿರಬಹುದು ಉಹಿಸಿಕೊಳ್ಳಿ. ಇದ್ಯಾವುದಕ್ಕೂ ಸೊಪ್ಪು ಹಾಕದೆ ಎಲ್ಲರ ಮನವೊಲಿಸಿ ಈ ಕಾಯ್ದೆ ಜಾರಿಯಾಗಲು ಕಾರಣವಾಗಿದ್ದು ಅಟಲ್ಜಿ ಅವರ ಮೇರು ವ್ಯಕ್ತಿತ್ವ.
ಪ್ರಧಾನಿಯಾಗಿದ್ದ ಕಾಲದಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿಯನ್ನು ತಂದು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾಡಿದ ಶ್ರೇಯ ಸಲ್ಲುವುದು ಅಟಲ್ಜಿಯವರಿಗೆ. ಈ ಕಾಯ್ದೆಯಿಂದ 6 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರೆಯುಂತವಾಯಿತು. ಸ್ವತಂತ್ರ ಭಾರತದಿಂದ ಸಧೃಢ ಭಾರತ ಹಾಗೂ ಸುಶಿಕ್ಷಿತ ಭಾರತ ನಿರ್ಮಾಣ ಮಾಡಲು ಇದು ಸಹಕಾರಿಯಾಯಿತು. ಇದು ಸಹ ಅವರ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ. ಇವರು ರಾಜಕೀಯ ರಂಗಕ್ಕೆ ಸೀಮಿತವಾಗಿರದೇ ಉತ್ತಮ ಆರ್ಥಿಕ ತಜ್ಞರು ಅಗಿದ್ದರು. 1998 ರಿಂದ 2004ರವರೆಗೂ ಅನೇಕ ಸಮಸ್ಯೆಗಳು ಎದುರಾದರೂ ಸಹ ಅದನ್ನು ಮೆಟ್ಟಿ ದೇಶದ ಜಿಡಿಪಿ ದರವನ್ನು ಹೆಚ್ಚಿಸಿದ್ದು ಇವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಸೂವರ್ಣ ಚಥುಸ್ಪಥ ಹೆದ್ದಾರಿಯ ಕಲ್ಪನೆಯನ್ನು ಸಾಕಾರಗೊಳಿಸಿ, ರಸ್ತೆ ನಿರ್ಮಾಣ ಮಾಡಿದ ಅಟಲ್ಜಿ ಭಾರತದ ನಾಲ್ಕುದಿಕ್ಕುಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದು ಇಂದು ಇತಿಹಾಸ. ಆದರೆ ನಿರ್ಮಾಣವಾದ ರಸ್ಥೆಗಳು ಮಾತ್ರ ವಾಸ್ತವಿಕ ಸತ್ಯ. ನದಿಗಳ ಜೋಡಣೆಯ ಕನಸು ಕಂಡ ವಾಜಪೇಯಿ ಶಾಶ್ವತ ಬರ ನಿರ್ಮೂಲನೆಯ ಕಲ್ಪನೆಯನ್ನು ಹೊತ್ತವರು. ಒಮ್ಮೆ ಈ ಯೋಜನೆ ಅನುಷ್ಠಾನಗೊಂಡು ಪೂರ್ಣವಾದರೆ ದೇಶದ ಯಾವುದೇ ಭಾಗದಲ್ಲೂ ಬರಗಾಲದ ಕರಿನೆರಳು ಮೂಡುವುದಿಲ್ಲ ಎನ್ನುವುದು ಅಟಲ್ ಕನಸಾಗಿತ್ತು. ತಮ್ಮ ಮೃಧು ಮಾತುಗಳಿಂದಲೇ ಕಠೋರ ವಿಚಾರಗಳನ್ನು ಚರ್ಚಿಸಿ ಕೇಳುಗರನ್ನು ಚಿಂತನೆಗೆ ಹಚ್ಚುವ ಹಾಗೂ ಎದುರಾಳಿಗೆ ಚಿಂತೆಗ ಥಳ್ಳುವ ಶಕ್ತಿ ಆ ಕನಸುಗಾರನ್ನಲ್ಲಿತ್ತು. ಇದರಿಂದಾಗಿಯೇ ಹತ್ತು ಬಾರಿ ಲೋಕಸಭಾ ಸದಸ್ಯರಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಮೂರು ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು. ಹೀಗೆ ಸುಂದರ ಭಾರತದ ಕನಸನ್ನು ಕಂಡ ಆ ವ್ಯಕ್ತಿ ಇಂದು ನಮ್ಮ ಮಧ್ಯದಿಂದ ಸದ್ದು ಮಾಡದೆ ಎದ್ದು ಹೋಗಿದ್ದಾರೆ. ಆದರೆ ಅವರ ಕನಸುಗಳು ನಮ್ಮ ಜೊತೆಗಿವೆ. ಆ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳುತ್ತ ಭಾರದ ಆಜಾತ ಶತ್ರು, ಸಾಹಿತ್ಯ ಲೋಕದ ಶಿಖರ ಸೂರ್ಯ, ಪತ್ರಿಕಾ ರಂಗದ ಪರಿವರ್ತಕ, ಕನಸು ಹುಟ್ಟಿಸುವ ಕವಿಗೆ, ನಿಸ್ವಾರ್ಥ ರಾಜಕಾರಣಿಯಾಗಿ, ನಾಡುಕಂಡ ಮಹಾನ್ ನಾಯಕನಾಗಿ ಮೆರೆದ ಭಾರತ ಮಾತೆಯ ಹೆಮ್ಮಯ ಕುಡಿ ಇಂದು ಸದಾ ನೆನಪಾಗುತ್ತಾರೆ. ಅದರಲ್ಲೂ ಇಂದಿನ ನಾಲಾಯಕ ನಾಯಕರನ್ನು ಕಂಡಾಗಂತೂ ಇಂಥ ಮಹಾನ್ ವ್ಯಕ್ತಿಗಳು ಕುಳಿತು ಹೋದ ಆಸನದಲ್ಲಿ, ಗುರುತಿಸಿಕೊಂಡ ಸ್ಥಾನದಲ್ಲಿ ಎಂತೆಂತವರು ಕೂರುತ್ತಿದ್ದಾರಲ್ಲ ಎನ್ನುವ ನೋವು ನನ್ನನ್ನು ಕಾಡುತ್ತದೆ. ಅವರಂತಾಗದೇ ಇದ್ದರು ಕನಿಷ್ಠ ಅವರು ಕುಳಿತ ಜಾಗದಲ್ಲಾದರು ಕುಳಿತು ಕನಿಷ್ಠ ಅವರ ಅಂಶವಾದರೂ ಆಗಲಿ ಎನ್ನುವ ಮಹದಾಸೆಯೊಂದು ಮೊಳಕೆಯೊಡೆಯುತ್ತದೆ. ಅವರ ವಿಚಾರಗಳನ್ನು ಅರಿತುಕೊಂಡು ಪ್ರತಿ ನಾಯನು ಬದಲಾಗಲಿ ಎನ್ನುವು ಸಣ್ಣ ಆಸೆ ಮನೆ ಮಾಡುತ್ತದೆ. ಆದರೆ ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧನೇ ಹೇಲಿರುವಾಗ ನನ್ನ ಆಸೆ ಆಸೆಯಾಗಿಯೇ ಉಳಿಯುತ್ತದೆ ಅಲ್ಲವೇ?
***