‘ಶಿವಪ್ರಸಾದ್ ಅವರ ಕಲಾ ಸಾಧನೆ ಕನ್ನಡ ಕಲಾ ಲೋಕಕ್ಕೆ ಮಾದರಿ’
ಲೋಕದರ್ಶನ ವರದಿ
ಕಲಬುರಗಿ 02: ನಗರದ ಮಾನಕರ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ 01.07.2026 ರಂದು ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರ ಕಲಾ ಸಾಧನೆಗೆ ಗಣ್ಯರು ಗೌರವ ಸಲ್ಲಿಸಿದರು.
ಹಿರಿಯ ಕಲಾವಿದ ವಿ.ಬಿ. ಬಿರಾದಾರ ಮಾತನಾಡಿ, ಶಿವಪ್ರಸಾದ್ ಅವರ ಚಿತ್ರಕಲಾ ಕೊಡುಗೆ ಕನ್ನಡ ದೃಶ್ಯಕಲಾ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಅವರ ಆರಂಭಿಕ ಹಂತದ ವಾಸ್ತವ ಶೈಲಿಯ ಚಿತ್ರಗಳಿಂದ ಹಿಡಿದು ಇಂದಿನ ಆಧುನಿಕ ಶೈಲಿಯವರೆಗೆ ಅವರ ಕಲಾಕೃತಿಗಳು ಅತ್ಯಂತ ಉನ್ನತ ಮಟ್ಟವನ್ನು ತಲುಪಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಕೇಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು ಮಾತನಾಡಿ, 1990ರ ದಶಕದಿಂದಲೇ ಶಿವಪ್ರಸಾದ್ ಅವರ ಕೃತಿಗಳನ್ನು ಗಮನಿಸುತ್ತಿದ್ದು, ಅವರಲ್ಲಿ ಚಿತ್ರಕಲೆಯ ಮೇಲಿನ ನಿಷ್ಠೆ ಮತ್ತು ನಿರಂತರ ಪರಿಶ್ರಮ ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದರು. ದೇವನೂರು ಮಹಾದೇವ ಅವರ ‘ಒಡಲಾಳ’ ಕಾದಂಬರಿಯನ್ನು ಆಧರಿಸಿ ಅವರು ರಚಿಸಿದ ಚಿತ್ರಗಳು ಗಮನಾರ್ಹವಾಗಿವೆ ಎಂದರು.
ಕಲಾವಿದ-ಶಿಕ್ಷಕ ಸೂರ್ಯಕಾಂತ್ ನಂದೂರು ಮಾತನಾಡಿ, ಶಿವಪ್ರಸಾದ್ ಅವರ ಕಲೆ ಸಮಾಜಮುಖಿ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ಅವರ ಕಲಾಕೃತಿಗಳು ಹೊಸ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಡೀನ್ ಶಾಂತಲಾ ನಿಷ್ಠಿ ಮಾತನಾಡಿ, ಶಿವಪ್ರಸಾದ್ ಅವರ ಕಲೆ ಶ್ರೇಷ್ಠತೆ ಹಾಗೂ ಆದರ್ಶಪ್ರಾಯತೆಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪರಶುರಾಮ ಪಿ. ಅವರು, ಶಿವಪ್ರಸಾದ್ ಅವರು ಮುಂಬೈನ ಜೆ.ಜೆ. ಕಲಾ ಶಾಲೆಯಲ್ಲಿ ಶಿಕ್ಷಣ ಪಡೆದು ನಂತರ ತಮ್ಮ ಕಲೆ ಮತ್ತು ವ್ಯಕ್ತಿತ್ವದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಭೋಸಾವಳೆ, ಬಾಬುರಾವ್ ಎಚ್., ಚಂದ್ರಶೇಖರ್ ಪಾಟೀಲ್, ಶೈಲಜಾ ಬಿರಾದಾರ, ಕುಪೇಂದ್ರ, ಗೀರೀಶ್ ಕುಲಕರ್ಣಿ, ಶಂಕರ್ ಗೌಡ, ಮೌನೇಶ್ ವಿಶ್ವಕರ್ಮ, ದಾನಯ್ಯ ಚೌಕಿಮಠ, ಶಿವಕುಮಾರ್ ಜಾಧವ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.