"ಮಣ್ಣನ್ನು ಉಳಿಸೋಣ, ಭವಿಷ್ಯವನ್ನು ಸುರಕ್ಷಿತಗೊಳಿಸೋಣ"
ಪ್ರತಿ ವರ್ಷದಂತೆ ಡಿಸೆಂಬರ್ 5ರಂದು “ವಿಶ್ವ ಮಣ್ಣಿನ ದಿನ”ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಾನವ ಜೀವನಕ್ಕೆ, ಕೃಷಿಗೆ, ಪರಿಸರಕ್ಕೆ, ಭೂಮಿಯ ಸಮತೋಲನಕ್ಕೆ ಅತ್ಯಂತ ಅಗತ್ಯವಾದ ಮಣ್ಣಿನ ಮಹತ್ವವನ್ನು ಜನರಿಗೆ ಅರ್ಥಮಾಡಿಕೊಡುವ ಉದ್ದೇಶ ಇದು. ಮಣ್ಣು ಎಂಥದು? ಅದು ಕೇವಲ ನಮ್ಮ ಪಾದಗಳ ಕೆಳಗಿನ ಧೂಳು ಅಲ್ಲ; ಲಕ್ಷಾಂತರ ವರ್ಷಗಳಲ್ಲಿ ರೂಪುಗೊಂಡ ಜೀವಂತ ಸಂಪತ್ತು. ಈ ಮಣ್ಣೇ ಬೆಳೆಗೆ ಆಹಾರ, ಮನುಷ್ಯರಿಗೆ ಜೀವನ, ಜಾನುವಾರುಗಳಿಗೆ ಮೇವು, ಮರಗಳಿಗೆ ನಿಲುವು, ಎಲ್ಲವನ್ನೂ ನೀಡುತ್ತಿದೆ. ಆದರೆ ಇಂದು ಈ ಅಮೂಲ್ಯವಾದ ಮಣ್ಣು ಗಂಭೀರ ಅಪಾಯಗಳ ಕಡೆ ಹೆಜ್ಜೆಯಿಡುತ್ತಿದೆ.
ಮಣ್ಣು ಪ್ರಕೃತಿಯ ನಿಶ್ಶಬ್ದ ಬಹುಮಾನ, ಮಣ್ಣು ನಿಧಾನವಾಗಿ, ಸಾವಿರಾರು ವರ್ಷಗಳ ಕಾಲ, ಕಲ್ಲುಗಳ ಕುಯಿಕೆಯಿಂದ, ಗಾಳಿಯ ಕ್ರಿಯೆಯಿಂದ, ನೀರಿನ ಜಲ್ಲಿ ಸಾಗುವಿಕೆಯಿಂದ, ದೈನಂದಿನ ಜೀವಾವಶೇಷಗಳ ಕುಸಿತದಿಂದ ರೂಪುಗೊಳ್ಳುತ್ತದೆ. ಒಂದು ಸೆಂ.ಮೀ ದಪ್ಪದ ಮಣ್ಣು ರೂಪಗೊಳ್ಳಲು ಎಷ್ಟು ಸಮಯ ಬೇಕು ಗೊತ್ತೇ? ಸುಮಾರು ನೂರಾರು ವರ್ಷಗಳು! ಆದರೆ ನಾವು ಅದನ್ನು ಕಳೆದುಕೊಳ್ಳುವುದಕ್ಕೆ ಕೆಲವೇ ವರ್ಷಗಳು ಸಾಕು.
ಕೃಷಿ ಉದ್ದಿಮೆಗಳಲ್ಲಿ, ಕಟ್ಟಡ ನಿರ್ಮಾಣಗಳಲ್ಲಿ, ಅರಣ್ಯ ಸಂಹಾರದಲ್ಲಿ, ರಾಸಾಯನಿಕಗಳ ಅತಿಯಾದ ಬಳಕೆಯಲ್ಲಿ ಮಣ್ಣಿನ ನಾಶ ಕ್ಷಿಪ್ರವಾಗಿ ನಡೆಯುತ್ತಿದೆ. ಮಣ್ಣಿನ ಮಹತ್ವ : ಮಣ್ಣಿಗೆ ಐದು ಮುಖ್ಯ ಕರ್ತವ್ಯಗಳಿವೆ, ಆಹಾರದ ಮೂಲ, ವಿಶ್ವದ 95ಅ ಆಹಾರ ಮಣ್ಣಿನಲ್ಲೇ ಬೆಳೆಯುತ್ತದೆ.
ನೀರಿನ ಸಂಗ್ರಹ ಮತ್ತು ಶುದ್ಧೀಕರಣ, ಮಣ್ಣು ಮಳೆಯ ನೀರನ್ನು ಜೀರ್ಣಿಸಿಕೊಳ್ಳುತ್ತದೆ, ಅದು ಹನಿಹನಿಯಾಗಿ ಭೂಗರ್ಭ ಜಲವಾಗಿ ಸೇರುತ್ತದೆ. ಜೀವ ವೈವಿಧ್ಯತೆಯ ಆಶ್ರಯ, ಮಣ್ಣಿನಲ್ಲೇ ಕೋಟಿ ಕೋಟಿ ಸೂಕ್ಷ್ಮ ಜೀವಿಗಳು, ಹುಳುಗಳು, ಕೀಟಗಳು ವಾಸಿಸುತ್ತವೆ. ಕಾರ್ಬನ್ ಸಂಗ್ರಹಣೆ, ಮಣ್ಣು ಹೆಚ್ಚಿನ ಕಾರ್ಬನ್ ಅನ್ನು ಹಿಡಿದಿಟ್ಟು, ಹವಾಮಾನ ಬದಲಾವಣೆಯನ್ನು ನಿಯಂತ್ರಿಸುತ್ತದೆ.
ನಿರ್ಮಾಣ ಹಾಗೂ ಕೈಗಾರಿಕೆಗಳಿಗೆ ಮೂಲಸಂಪತ್ತು, ಮಣ್ಣಿನಿಂದ ಮಣ್ಣಿನ ವಸ್ತುಗಳು, ಮಣ್ಣು ಪಾತ್ರೆಗಳು, ಅನೇಕ ಪರಂಪರೆಯ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಸಾಧನೆಯ ಹಿಂದೆ ಮಣ್ಣಿನ ನಿರಂತರ ಜೀವಂತಿಕೆ ಕಾರಣ. ಮಣ್ಣಿನ ಮುಂದೆ ನಿಂತಿರುವ ಅಪಾಯಗಳು; ಇಂದಿನ ಯುಗದಲ್ಲಿ ಮಣ್ಣು ಎದುರಿಸುತ್ತಿರುವ ದೊಡ್ಡ ಸವಾಲುಗಳು ಮಣ್ಣಿನ ಕರಗುವಿಕೆ, ಮಳೆ, ಗಾಳಿ, ನೀರಿನ ಪ್ರವಾಹ ಇತ್ಯಾದಿಗಳಿಂದ ಉರ್ವರಿತ ಮಣ್ಣು ಮೇಲ್ತಟ್ಟುಗಳು ಕೊಚ್ಚಿಹೋಗುತ್ತಿವೆ. ಪ್ರತಿ ವರ್ಷ ಲಕ್ಷಾಂತರ ಟನ್ ಮಣ್ಣು ನದಿಗಳಲ್ಲಿ ಸೇರುವುದರಿಂದ ಭೂಮಿಯ ಫಲವತ್ತತೆ ಕುಂಠಿತವಾಗುತ್ತಿದೆ.
ರಾಸಾಯನಿಕ ವಿಷಕಾರಿ ಪದಾರ್ಥಗಳು, ಅತಿಯಾಗಿ ಬಳಕೆ ಮಾಡಲಾಗುವ ರಾಸಾಯನಿಕ ರಸಗೊಬ್ಬರ, ಕೀಟನಾಶಕಗಳು ಮಣ್ಣಿನ ಜೀವಿಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನು ನಾಶಮಾಡಿ ಮಣ್ಣಿನ ಆರೋಗ್ಯವನ್ನು ಹಾನಿಗೊಳಿಸುತ್ತವೆ. ಅರಣ್ಯ ಸಂಹಾರ ಮರಗಳು ಮಣ್ಣನ್ನು ಹಿಡಿದುಕೊಳ್ಳುವ ನೈಸರ್ಗಿಕ ಬಲ. ಆದರೆ ಅರಣ್ಯಗಳ ಕಡಿತದಿಂದ ಮಣ್ಣು ಬತ್ತಿಹೋಗುತ್ತಿದೆ.
ನಗರೀಕರಣ ಮತ್ತು ಕೈಗಾರಿಕರಣ, ಕಟ್ಟಡಗಳು, ರಸ್ತೆಗಳು, ಕೈಗಾರಿಕೆಗಳು ಮಣ್ಣಿನ ಮೇಲೆ ಶಾಶ್ವತ ಕಾಕ್ರೆಟ್ ಹೊದಿಕೆ ಹಾಕುತ್ತವೆ. ಇದರಿಂದ ಮಣ್ಣಿನ ಉಸಿರಾಟ ನೀಗುತ್ತದೆ, ಮಣ್ಣು ಸತ್ತಮಣ್ಣಾಗುತ್ತದೆ. ಹವಾಮಾನ ಬದಲಾವಣೆ, ಅತಿ ಉಷ್ಣತೆ, ಅನಿಯಮಿತ ಮಳೆ, ಬರಗಾಲ ಇವೆಲ್ಲ ಮಣ್ಣಿನ ನರನಾಳವನ್ನು ಬದಲಾಯಿಸುತ್ತಿವೆ. ಕೃಷಿಕರ ಭವಿಷ್ಯ ಮಣ್ಣಿನ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಜನರ ಜೀವನ ಕೃಷಿಯ ಮೇಲೆ ನಿಂತಿದೆ. ಕೃಷಿಗೆ ಮಣ್ಣು ಜೀವ. ಮಣ್ಣು ಒಣಗಿದರೆ, ಫಲವತ್ತತೆ ಕಡಿಮೆಯಾದರೆ, ಜಲಶಕ್ತಿ ಕಡಿಮೆಯಾದರೆ ನಮ್ಮ ಆಹಾರ ಸುರಕ್ಷತೆ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ, ಮಣ್ಣಿನ ಆರೋಗ್ಯ ಸುಧಾರಣೆ ಎಂದರೆ ಕೃಷಿಕರ ಭವಿಷ್ಯವನ್ನು ಉಳಿಸುವುದು.
ವಿಶ್ವ ಮಣ್ಣಿನ ದಿನ: ಏಕೆ ಆಚರಣೆ ?ಜಾಗತಿಕ ಮಟ್ಟದಲ್ಲಿ ಮಣ್ಣಿನ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಂಓ (ಈಠರಜ ಚಿಟಿಜ ಂರಡಿಛಿಣಟಣಣಡಿಜ ಓಡಿರಚಿಟಿದಚಿಣಠ) ಪ್ರಾರಂಭಿಸಿದ ಅಭಿಯಾನವೇ ವಿಶ್ವ ಮಣ್ಣಿನ ದಿನ. ಈ ದಿನದ ಉದ್ದೇಶ, ಮಣ್ಣಿನ ಮಹತ್ವವನ್ನು ಜನರಿಗೆ ತಿಳಿಸುವುದು. ಮಣ್ಣಿನ ಸಂರಕ್ಷಣೆಗಾಗಿ ಕ್ರಮಗಳನ್ನು ವಿಸ್ತರಿಸುವುದು, ನೀತಿ ರೂಪಿಸುವಲ್ಲಿ ಸರ್ಕಾರದ ಗಮನ ಸೆಳೆಯುವುದು, ಕೃಷಿಯಲ್ಲಿ ನೈಸರ್ಗಿಕ ವಿಧಾನಗಳನ್ನು ಉತ್ತೇಜಿಸುವುದು. ಪ್ರತಿ ವರ್ಷ ಮಣ್ಣಿನ ದಿನಕ್ಕೆ ವಿಶೇಷ ವಿಷಯವೊಂದನ್ನು ಆಯ್ಕೆ ಮಾಡಲಾಗುತ್ತದೆ. ಅದರ ಮೂಲಕ ವಿಶ್ವದ ದೇಶಗಳು ಮಣ್ಣಿನ ಸಮಸ್ಯೆ ಪರಿಹಾರಕ್ಕೆ ನಿಜವಾದ ಯೋಜನೆಗಳನ್ನು ತಯಾರಿಸುತ್ತವೆ.
ಮಣ್ಣು ಉಳಿಸುವ ಸರಳ ಮಾರ್ಗಗಳು; ಮಣ್ಣು ಸಂರಕ್ಷಣೆ ಕೇವಲ ಸರ್ಕಾರ, ವಿಜ್ಞಾನಿಗಳು ಮಾಡಬೇಕಾದ ಕೆಲಸವಲ್ಲ. ಪ್ರತೀ ವ್ಯಕ್ತಿಯೂ ತನ್ನ ಮಟ್ಟಿಗೆ ಕೈಜೋಡಿಸಬೇಕು. ತೋಟ ಬೆಳೆಯುವುದು, ಮನೆಗಳಲ್ಲಿ, ಶಾಲೆಗಳಲ್ಲಿ, ಸಂಸ್ಥೆಗಳಲ್ಲಿ ಗಿಡ ನೆಡುವುದು ಮಣ್ಣನ್ನು ಸ್ಥಿರವಾಗಿ ಹಿಡಿದಿಡುತ್ತದ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು. ಕೃಷಿಯಲ್ಲಿ ಜೈವಿಕ ಗೊಬ್ಬರ, ಗೊಮಾಯ, ಬಳಸಿ ಮಣ್ಣಿನ ಜೀವಂತಿಕೆ ಉಳಿಸಬಹುದು. ಮಲೀನೀಕರಣ ನಿಯಂತ್ರಣ, ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯಗಳು ಮಣ್ಣಿಗೆ ದೊಡ್ಡ ಶತ್ರು. ಅವುಗಳನ್ನು ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು. ಮಣ್ಣು ಪರೀಕ್ಷೆ ಮಾಡಿಸುವ ಅಭ್ಯಾಸ, ಕೃಷಿಕರು ಮಣ್ಣಿನ ತಪಾಸಣೆ ಮಾಡಿಸಿಕೊಂಡರೆ ಯಾವ ಗೊಬ್ಬರ ಎಷ್ಟು ಬೇಕು ಎಂಬುದು ತಿಳಿದು, ಮಣ್ಣಿಗೆ ಹಾನಿ ತಗ್ಗುತ್ತದೆ.
ಮಳೆನೀರು ಸಂಗ್ರಹಣೆ, ನೀರನ್ನು ಭೂಮಿಯೊಳಗೆ ಹೀರಿಕೊಳ್ಳುವ ಪದ್ದತಿ ಮಣ್ಣಿನ ಜಲಬಲವನ್ನು ಹೆಚ್ಚಿಸುತ್ತದೆ. ಅರಣ್ಯ ಸಂರಕ್ಷಣೆ, ಕಟ್ಟಡ ನಿರ್ಮಾಣಕ್ಕಾಗಿ ಅರಣ್ಯಗಳ ನಾಶ ತಡೆಯುವುದು ಮಣ್ಣು ಮತ್ತು ಪರಿಸರಕ್ಕೆ ಅತ್ಯವಶ್ಯಕ. ಮಣ್ಣು ಜೀವಂತ, ನಾವು ಬದುಕಿರುವಷ್ಟರಲ್ಲೇ ಅದು ಬದುಕುತ್ತದೆ.
ಮಣ್ಣು ಕೇವಲ ಸ್ಥಿರವಾದ ವಸ್ತು ಅಲ್ಲ; ಅದು ಜೀವಂತ ವ್ಯವಸ್ಥೆ. ಮಣ್ಣಿನಲ್ಲಿರುವ ಮೈಕ್ರೋಆರ್ಗಾನಿಸಂಗಳು (ಸೂಕ್ಷ್ಮ ಜೀವಿಗಳು) ಮಣ್ಣನ್ನು ಫಲವತ್ತಾಗಿಸುತ್ತವೆ. ಒಂದು ಟೀ ಸ್ಪೂನ್ ಮಣ್ಣಿನಲ್ಲಿ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳು ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇವು ಮಣ್ಣಿನ ಆರೋಗ್ಯದ ಪ್ರಮುಖ ಕೀಲಿಕೈ. ಮಣ್ಣು ಹಸನಾಗಿದ್ದರೆ ಬೆಳೆ ಒಳ್ಳೆಯದು; ಬೆಳೆ ಒಳ್ಳೆಯದಾದರೆ ಆಹಾರ ಸಮೃದ್ಧ.
ನಮ್ಮ ನಾಳೆ ನಮ್ಮ ಕೈಯಲ್ಲೇ, ಇಂದಿನ ಪೀಳಿಗೆ ಮಣ್ಣನ್ನು ಹೇಗೆ ನೋಡಿಕೊಳ್ಳುತ್ತದೋ ಅದರ ಮೇಲೇ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ. ಮಣ್ಣು ನಾಶವಾಗುವುದನ್ನು ತಡೆಯುವುದು ಎಂದರೆ, ಹಸಿವು ತಡೆಯುವುದು, ಪರಿಸರ ಉಳಿಸುವುದು,
ಭೂಗರ್ಭ ಜಲವನ್ನು ಕಾಪಾಡುವುದು,
ಕೃಷಿ ಬೆಳವಣಿಗೆ ಕಾಯ್ದುಕೊಳ್ಳುವುದು,
ಭವಿಷ್ಯದ ಅರ್ಥಿಕ ಸ್ಥಿರತೆ, ಎಲ್ಲವನ್ನೂ ಒಳಗೊಂಡ ಮಹತ್ವದ ಕಾರ್ಯವಾಗಿದೆ ಎಂದು ಹೇಳಬಹುದು.
ವಿಶ್ವ ಮಣ್ಣಿನ ದಿನ ನಮಗೆ ಒಂದು ದೊಡ್ಡ ಸಂದೇಶ ನೀಡುತ್ತದೆ. “ಮಣ್ಣು ನಿದ್ರೆ ಮಾಡುತ್ತಿಲ್ಲ; ಅದು ನಿತ್ಯವೂ ನಮಗಾಗಿ ಕೆಲಸ ಮಾಡುತ್ತಿದೆ. ಆದರೆ ನಾವು ಮಣ್ಣಿಗಾಗಿ ಏನು ಮಾಡುತ್ತಿದ್ದೇವೆ?” ಮಣ್ಣನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕುಟುಂಬ, ಶಾಲೆ, ಕೃಷಿ ಕ್ಷೇತ್ರ, ಸರ್ಕಾರ ಎಲ್ಲರೂ ಕೈಜೋಡಿಸಿದಾಗ ಮಾತ್ರ ಮಣ್ಣು ಉಳಿಯುತ್ತದೆ. “ಮಣ್ಣನ್ನು ಉಳಿಸೋಣ, ಮಣ್ಣಿನ ಆರೋಗ್ಯ ಕಾಪಾಡೋಣ” ಎಂಬ ನಂಬಿಕೆಯಿಂದಲೇ ನಮ್ಮ ಮುಂದಿನ ಪೀಳಿಗೆಯು ಸಮೃದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಭೂಮಿಯನ್ನು ಅನುಭವಿಸಿಬಹುದು.
ರುದ್ರಗೌಡ ಚ ಪಾಟೀಲ
ಸುತಗಟ್ಟಿ, ಬೈಲಹೊಂಗಲ.