“ಕನಕದಾಸರು ಮತ್ತು ದಾಸ ಸಾಹಿತ್ಯ”
ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ ಆದರಣೀಯವಾಗಿದೆ.ಭಕ್ತಿ ಸುದೆಯನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತ ಪಾರಮಾರ್ಥಿಕ ಜೀವನದಲ್ಲಿ ಅಗೋಚರವಾದ ಶಕ್ತಿಯನ್ನು ಕಂಡುಕೊಂಡು ಹಾಗೂ ಅನುಭಾವಿಕ ಪರಂಪರೆಯಲ್ಲಿ ತಮ್ಮನ್ನು ಲೀನವಾಗಿಸಿಕೊಳ್ಳುವುದರ ಮೂಲಕ ಸಾಹಿತ್ಯದ ಪಥವನ್ನು ಭಕ್ತಿರಸವನ್ನಾಗಿ ಮಾರಿ್ಡಸಿ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದಂತಹ ಮಹನೀಯರು ಕೀರ್ತನೆಕಾರರು.ವ್ಯಾಸರಾಯರಿಂದ ಹಿಡಿದು ಪುರಂದರದಾಸರು ಕನಕದಾಸರು ಗೋಪಾಲದಾಸರು ಹೀಗೆ ಹಲವರಿಂದ ಕೂಡಿದ ದಾಸ ಸಾಹಿತ್ಯವು ನಮ್ಮ ನಡುವೆ ಸದಾ ಮುಖಾಮುಖಿಯಾಗುತ್ತ ಅನುಸಂದಾನುಗೊಳ್ಳುತ್ತಲೇ ಸಾಗುತ್ತಿದೆ.
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಕನಕದಾಸರು, ಪುರಂದರದಾಸರ ಸಮಕಾಲೀನರು ಮತ್ತು ಸ್ವತಂತ್ರ ಕ್ರಾಂತಿಯುಳ್ಳವರು. ಈ ಕೀರ್ತನೆಗಳು ಹುಟ್ಟಿದ್ದೆ ಹರಿ ನಾಮ ಸ್ಮರಣೆಯನ್ನು ಸ್ತುತಿಸುವ ಸಲುವಾಗಿ. ವೈಯಕ್ತಿಕ ನೆಲೆಯಲ್ಲಿ ದೈವವನ್ನು ಕಾಣುವ ಹಂಬಲಿಕೆ ಜಾತಿ ಧರ್ಮ ಮೇಲು ಕೇಳು ಎಂಬವುಗಳ ನಡುವೆ ಹರಿತವಾದ ತಮ್ಮ ಸಾಹಿತ್ಯವನ್ನು ಹರಿಬಿಡುವುದರ ಮೂಲಕ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. "ಕನಕದಾಸರ ವ್ಯಕ್ತಿತ್ವ ದಾಸ ಪರಂಪರೆಗೆ ಭಕ್ತಿ ಪ್ರಜ್ಞೆಗೆ ಒಳಗಾದರೂ ಕೂಡ ಅವರ ಭಕ್ತಿ ಭಾವವು ಕಾವ್ಯ ಪ್ರಜ್ಞೆಗೆ ಗೋಡೆಯಾಗಿ ನಿಂತವು ಎಂದು ಜಿ ಎಸ್ ಶಿವರುದ್ರ್ಪನವರು ತಮ್ಮ ’ಪರೀಶೀಲನ’ ಎಂಬ ವಿಮರ್ಶ ಗ್ರಂಥದಲ್ಲಿ ಉಲ್ಲೇಖಿಸುತ್ತಾರೆ" ಹಾಗೂ ಪುರಂದರದಾಸರಿಗಿಂತ ಕನಕದಾಸರು ಅತ್ಯಲ್ಪ ಪ್ರಮಾಣದಲ್ಲಿ ಬರೆದಿದ್ದರೂ ಸಹ ಪುರಂದರದಾಸರ ಕೀರ್ತನೆಗಳ ಸತ್ವದ ಮುಂದೆ ಪ್ರತಿಸ್ಪರ್ತಿಯಾಗಬಲ್ಲವು ಎಂಬ ಮಾತನ್ನು ವಿದ್ವಾಂಸರು ಉಲ್ಲೇಖಿಸುತ್ತಾರೆ.
“ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನ್ನು ಸಲಹುವನು ಇದಕ್ಕೆ ಸಂಶಯವಿಲ್ಲ" ಇಲ್ಲಿ ಆತಂಕ ಕಳವಳಗೊಂಡ ಮನವನ್ನು ಸಂತೈಸುವ ಕನಕದಾಸರ ಕಾವ್ಯದ ಮನೋಜ್ಞ ಭಕ್ತಿ ರಸವು ಎದ್ದು ತೋರುತ್ತದೆ.
“ಪಕ್ಷಿಗಳಿಗೆ ಅನ್ನವಿತ್ತವರು, ವೃಕ್ಷಕ್ಕೆ ನೀರು ಎಳೆದವರು ಕಪ್ಪೆಗೆ ಆಹಾರ ವಿತ್ತವರು ಯಾರು?". ಎಂಬ ವಿಸ್ಮಯಾತ್ಮಕವಾದ ಪ್ರಕೃತಿಯ ಒಳಗೆ ಅಡಗಿರುವ ಬೆರಗು ಬಿನ್ನಾಣ ಕುರಿತು ಚಿಂತಿತರಾಗಿ ಉತ್ತರ ಕಂಡುಕೊಳ್ಳುತ್ತಾರೆ. "ಹುಟ್ಟಿಸಿದ ದೇವ ತಾ ಹೊಣೆಗಾರ" ಎಂಬಲ್ಲಿಗೆ ತಮ್ಮೊಳಗೆ ತುಂಬಿದ ಎಲ್ಲಾ ಪ್ರಶ್ನೆಗೆ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳುವಲ್ಲಿ ಸಾಫಲ್ಯವನ್ನು ಸಾಧಿಸುವ ಕನಕದಾಸರು ನಿರ್ಭೀಡೆಯಿಂದ ದೇವರಲ್ಲಿ ಅಚಲವಾದ ನಂಬಿಕೆಯೊಂದಿಗೆ ಆಲೌಕಿಕವಾದ ಭಾವಹೂರಣವನ್ನು ತಯಾರಿಸಿ ಸಿಹಿಸ್ವಾದವನ್ನಾಗಿ ಮಾಡಿ ಭಕ್ತಿಯ ಭಾವಾವೇಶದಲ್ಲಿ ಮುಳುಗಿ ಲೌಕಿಕದ ಹಂಗನ್ನು ತೊರೆಯುವ ಆದ್ರತೆಯು ಕಾಣಬಹುದು.
ಕನಕದಾಸರ ಬಹಳಷ್ಟು ಕೀರ್ತನೆಗಳು ಬದುಕಿನ ನಿಜವಾದ ಅರ್ಥವನ್ನು ತಿಳಿಸುತ್ತಾ ನಿರಾತಂಕವಾಗಿ ನಿರ್ಭಿಡೆಯಿಂದ ಸಾಗುತ್ತವೆ.
“ಎಳ್ಳು ಕಾಳಿನಷ್ಟು ಬಕುತಿ ಎನ್ನೊಳಗಿಲ್ಲ ಗಂಧ ಕಸ್ತೂರಿ ಲೇಪನದ ಪರಿಮಳ ಮಾಯ ಪಾಶದೊಳಗೆ ಸಿಲುಕಿರುವಂತೆ ಪಂಚೇಂದ್ರಿಗಳು". ಮನುಷ್ಯ ಜೀವಿ
ಭವಬಂಧನದಲ್ಲಿ ಸಿಲುಕಿ ಈ ಬದುಕಿನ ನಶ್ವರತೆಯನ್ನು ಅರಿಯದೆ ಮೋಹ ಪಾಶದೊಳಗೆ ಅಡಗಿಕೊಂಡು
ಅರಿಷಡ್ವರ್ಗಗಳಿಂದ ತುಂಬಿದ ಮನವು ಸದಾ ಲೋಲುಪ್ತತೆಯಲ್ಲಿ ಮುಳುಗಿ ಗಂಧ ಕಸ್ತೂರಿ ಲೇಪನವನ್ನು ಬಳಿದು ಪರಿಮಳವ ಬೀರುತ್ತಲೇ ಜೀವನವೆಂಬ ಕಮ್ಮಟದಲ್ಲಿ ಬೇಯದೆ ಭಗವಂತನ ಕುರಿತಾದ ಲೌಕಿಕ ಭಾವವನ್ನು ಹೊಂದಿದ ಬದುಕಿನ ಗತಿಯನ್ನು ಬಹಳ ಮಾರ್ಮಿಕವಾಗಿ ಚಿತ್ರಿಸುತ್ತಾರೆ.
“ವನಸಿರಿಯಲ್ಲಿ ಎನ್ನ ಮರೆತೆ ಎನ್ನ ದೇವ ಜಾನಕಿ ರಮಣ ಪೇಳು ನಿನ್ನಿಂದ ನಾನೇ ಜನಿಸಿ ಬಂದೇನೇ ದೇವ", ಭಕ್ತಿಯ ಆರ್ತನಾದ ಭಕ್ತಿಯ ಉತ್ಕಟತೆ ಎಲ್ಲವನ್ನು ಈ ಕೀರ್ತನೆಯಲ್ಲಿ ಕಾಣಬಹುದಾಗಿದೆ. "ಸೇವೆಯನ್ನು ಕೊಡು ಹರಿಯೇ" ಎಂಬಲ್ಲಿಗೆ ದೈನತೆ ಮತ್ತು ಸಾತ್ವಿಕ ಕೋಪವನ್ನು ಪ್ರಕಟ
ಪಡಿಸುವ ಮನೋಧರ್ಮ ವ್ಯಕ್ತಗೊಂಡಂತಿದೆ.
“ಏಕೆ ಪವಾಡಿಸಿದೆ ಜಗದೇಕ ವಿಖ್ಯಾತ ಪಶ್ಚಿಮ ರಂಗನಾಥ’" "ಮುತ್ತು ಬಂದಿದೆ ಕೇರಿಗೆ ಜನರೇ ಕೇಳಿ" ಇಲ್ಲಿ ಮಡುಗಟ್ಟಿದ ಅವರ ಕಲ್ಪಕತೆ ಸಮಾಜವನ್ನು ನೋಡುವ ರೀತಿ ಕನಕರು ಕವಿಗಳು ಎಂಬುದನ್ನು ಎತ್ತಿ ಹಿಡಿಯುತ್ತದೆ. ಜನಭಾಷೆಯಾಗಿ ಜನರ ಹತ್ತಿರ ಕಾವ್ಯವು ಎಚ್ಚರಿಕೆಯ ಕರೆಯನ್ನು ಅವರ ಕೀರ್ತನೆಗಳ ಮೂಲಕ ತಲುಪಿಸುತ್ತದೆ.
“ಹೌದಾದರೆ ಅಹುದೆನ್ನಿ ಇಲ್ಲವಾದರಲ್ಲವೆನ್ನಿ", "ದೇವರಿಲ್ಲದ ಗುಡಿಯು ಬಾಳು ಬಿದ್ದಂಗಡೆಯು". ಉಪಮೆಗಳನ್ನು ಹೊತ್ತ ಕೀರ್ತನೆಗಳು ಲಾಲಿತ್ಯಪೂರ್ಣವಾಗಿ ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿ ಅರಿವನ್ನು ಮೂಡಿಸುತ್ತವೆ.
‘ಕುಲಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ’,
‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ".ಜಾತಿ ವರ್ಣ ವರ್ಗ ತಾರತಮ್ಯದ ವಿರುದ್ಧ ಎತ್ತಿದ ಅವರ ಧ್ವನಿ ಅಂದಿನ ಜಾತಿ ವ್ಯವಸ್ಥೆಯನ್ನು ಯಾವುದೇ ಮೂಲಾಜಿರದೆ ನಿರಾಂತಕವಾಗಿ ಎತ್ತಿ ತೋರಿಸುತ್ತದೆ. ವ್ಯಂಗ್ಯ ಮೊನಚಾದ ವಿಡಂಬನೆಯುಳ್ಳ ಇವರ ಕೀರ್ತನೆ ನೊಂದ ಧ್ವನಿಯ ಪರವಾಗಿ ವ್ಯವಸ್ಥೆಯ ವಿರುದ್ಧ ತೀಕ್ಷ್ಣ ತರವಾದ ವಾಗ್ದಾಳಿಯಾಗಿದೆ.
ಶೂದ್ರ ಕನಕರನ್ನು ಅಂದು ಅವರ ಪ್ರತಿಭೆ ಪಾಂಡಿತ್ಯ ಎಲ್ಲವನ್ನು ಬದಿಗೊತ್ತಿ ಕೇವಲ ಜಾತಿ ಎಂಬ ಕರಿಹಲಗೆಯನ್ನಿಡಿದು ಇವರನ್ನು ತೆಗಳಿ ನಿಕೃಷ್ಟವಾಗಿ ಕಂಡಾಗಲೂ ಸ್ವಯಂ ಪ್ರತಿಭಾ ಸಂಪನ್ನಶೀಲರಾದ ಕನಕರಿಂದ ಮತ್ತಷ್ಟು ಮೆರಗು ಪಡೆಯಿತು ಇವರ ಸಾಹಿತ್ಯ. ನೊಂದ ಬೆಂದ ಜೀವನ ಆಂತರ್ಯದ ಭಾವಗಳು ಮಡುಗಟ್ಟಿ ಶುದ್ಧಶೀಲಯಾಗಿ ಪೂಜೆಗೊಂಡು ಸಮಾಜಕ್ಕೆ ಅರಿವಿನ ಬೀಜ ಬಿತ್ತಿದವು. "ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ" ಮನುಷ್ಯ ಸಮಾಜದ ಲೌಕಿಕ ಗೆರೆಯನ್ನು ಮೀರಿ ಅದರಾಚಿಗಿನ ಮುಕ್ತಿ ಮಾರ್ಗವನ್ನು ಕಂಡುಕೊಳ್ಳುವ ಪರಿ ಒಂದೆಡೆಯಾದರೆ,ಲೋಭ ಆಸೆ ದುರಾಸೆ ಮೋಹ ಇತ್ಯಾದಿಗಳನ್ನಿರಿಸಿಕೊಂಡ ಜೀವಗಳ ತಾಕಲಾಟಕ್ಕೆ ಬದುಕೆಂಬುದು ಇಷ್ಟೆ ಎಂಬ ಅಂಶವನ್ನು ಹೊತ್ತ ಬಾಳಿಗೆ ಮತ್ತಷ್ಟು ಇದೆ ಎಂಬುದರ ಅರಿವಿನ ಚೀಲದಲ್ಲಿ ಜೊಳ್ಳು ತುಂಬಿ ಸಾಗುವ ಬದುಕಿನ ಕದವನ್ನು ಸಮಾಜದ ಎದುರಿಗೆ ತೆರೆದಿಡುವ ರೀತಿಯೂ ಅನನ್ಯ. ಆತ್ಮವಿಮರ್ಶೆಯೊಂದಿಗೆ ಸಮಾಜದಲ್ಲಿ ನೆಲೆ ನಿಂತ ಗೊಡ್ಡು ಸಂಪ್ರದಾಯ ವಿರೋಧಿ ಧೋರಣೆಗಳಿಗೆ ದಿಟ್ಟ ಪ್ರತಿಭಟನೆಯ ಮೂಲಕ ಸಾಮಾನ್ಯರಿಗೆ ತಿಳಿ ಹೇಳುತ್ತಾರೆ.ಜಡ್ಡು ಗಟ್ಟಿದ ಸಂಪ್ರದಾಯಗಳ ನಡುವೆಯೂ ವೈಚಾರಿಕ ಮನೋಧರ್ಮದ ದಾರಿಯನ್ನು ಇವರ ಕೀರ್ತನೆಗಳ ಮೂಲಕ ಕಾಣಬಹುದು.
ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ದಾಸ ಪಂಥದವರು ಇವರನ್ನು "ಯಮಧರ್ಮನ ಅವತಾರ" ಎಂದು ಗೌರವಿಸುತ್ತಾರೆ. ಇಂತಹ ಗೌರವ ಹೊಂದಿದ ಮಾಣಿಕ್ಯವನ್ನು ದಾಸ ಪಂಥ ಮೊದಲು ಆದರಿಸದೆ ಇದ್ದಾಗ, ರಾಮಾನುಜ ಮಠದ ದೀಕ್ಷೆಯೇ ಹೊರತು ಮಧ್ವ ಮತದ ದೀಕ್ಷೆಯಲ್ಲ ಎಂಬುದು ವಿದ್ವಾಂಸರ ಉಲ್ಲೇಖ. ಕನಕದಾಸರ ಅನನ್ಯ ಭಕ್ತಿ ಜ್ಞಾನ ಪಾಂಡಿತ್ಯ ಸುಧೆಯನ್ನರಿತ ವ್ಯಾಸರಾಯರು "ವಟ ವಟ ಗುಟ್ಟುವ ವಟುಗಳ ಪಟಾಲಂ" ಎಂದು ಅಂಕಿತ ನೀಡಲು ವಿರೋಧಿಸಿದರು ಸಹ ಗುರು ಉಪದೇಶ ನೀಡಿ ಗೌರವಿಸಿದರು. ಕನಕರಂತಹ ಮಹನೀಯರು ಅಸಾಧ್ಯ ಜ್ಞಾನಿ ಪಂಡಿತರು ಭಕ್ತಿಯ ಜೊತೆ ಕಾವ್ಯದ ರಸಧಾರೆಯನ್ನು ಸಮಾಜಕ್ಕೆ ಎರೆದ ಅವರ ಸಾಹಿತ್ಯ ನಿತ್ಯವೂ ಜೀವಂತ.
- ವಾಣಿ ಭಂಡಾರಿ
ಶಿವಮೊಗ್ಗ
- () () () -