ಲೇಖನಗಳು

ಹೋರಾಟದ ಹಾದಿಯಲ್ಲರಳಿದ ಸ್ವಾಭಿಮಾನದ ಕಾಡುಮಲ್ಲಿಗೆಯ 'ದಂಡಿ'...!

ಹೋರಾಟದ ಹಾದಿಯಲ್ಲರಳಿದ ಸ್ವಾಭಿಮಾನದ ಕಾಡುಮಲ್ಲಿಗೆಯ 'ದಂಡಿ'...!

ಮಹಾತ್ಮಾ ಗಾಂಧೀ ಎನ್ನುವ ಮನುಷ್ಯ ಒಂದು ವೇಳೆ ಭಾರತದಲ್ಲಿ ಹುಟ್ಟದೇ ಹೋಗಿದ್ದರೆ? ಈ ಪ್ರಶ್ನೆಯು ನನ್ನನ್ನು ಬಹಳಷ್ಟು ಬಾರಿ ಕಾಡಿದೆ. ಇದು ಕೇವಲ ನನ್ನನ್ನು ಮಾತ್ರ ಕಾಡುವುದಿಲ್ಲ. ನನ್ನಂತೆ ಆಲೋಚನೆ ಮಾಡುವ ಸಾವಿರಾರು ಜನರಿಗೆ ಈ ಪ್ರಶ್ನೆ ಒಂದು ಬಾರಿಯಾದರೂ ತಲೆಯಲ್ಲಿ ಬಂದು ಹೋಗಿರುತ್ತದೆ. ಆದರೆ ಉತ್ತರ ಮಾತ್ರ ಒಂದಕ್ಕೊಂದು ತಾಳೆಯಾಗದಂತ ತಾಳ ಮೇಳವಿಲ್ಲದೇ ಸಾಗುವ ರಾಗವಾಗುತ್ತದೆ. ಒಬ್ಬೊಬ್ಬರ ಉತ್ತರ ಒಂದೊಂದು ರೀತಿಯಲ್ಲಿರುತ್ತದೆ. ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ, ಬಿಡುವುದಕ್ಕೂ ಸಾಧ್ಯವಾಗದೇ ಗೊಂದಲದ ಗೂಡಲ್ಲಿ ಕಳೆದು ಹೋಗುವ ಸ್ಥಿತಿ ಮಾತ್ರ ನಮ್ಮದಾಗಿರುತ್ತದೆ. ಕಾರಣ ಗಾಂಧೀಜಿ ಕೆಲವರ ಪಾಲಿಗೆ ಹೀರೋ ಆಗಿ ಮತ್ತೆ ಕಲೆವರ ಪಾಲಿಗೆ ಖಳನಾಯಕನಂತೆ ಗೋಚರಿಸುತ್ತಾರೆ. ನೋಡುವ ದೃಷ್ಠಿಕೋನದಲ್ಲಿನ ವ್ಯತ್ಯಾಸವೋ, ಇಲ್ಲ ಆ ಮಹಾತ್ಮ ಮಾಡಿದ ಅಚಾತುರ್ಯವೋ ಗೊತ್ತಿಲ್ಲ ಇಡೀ ಜಗತ್ತೇ ಆತನನ್ನು ಒಪ್ಪಿಕೊಂಡರೂ ಕೂಡ ಕೆಲವರು ಅವರನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ಗಾಂಧೀ ಎನ್ನುವ ಪದವೇ ಕೆಲವರಿಗೆ ಕಷ್ಟವಾಗುತ್ತದೆ. ಹೀಗಿರುವಾಗ ಮಹಾತ್ಮನ ಹೋರಾಟದ ಆದರ್ಶಗಳನ್ನೇ ಒಂದು ಕಾದಂಬರಿಯಲ್ಲಿ ಕಥಾವಸ್ತುವಾಗಿ ಬಳಸಿಕೊಂಡು ಸಾಗುವುದಿದೆಯಲ್ಲಿ ಅದು ನಿಜಕ್ಕೂ ಬಹಳ ಕಷ್ಟದ ಕೆಲಸವೇ ಸರಿ. ಏಕೆಂದರೆ ಮೊದಲೇ ಸೈದ್ಧಾಂತಿಕ ವೈರುದ್ಯಗಳು ಹಾಗೂ ವೈಚಾರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಗಾಂಧೀಜಿಯನ್ನು ಅಳೆದು ತೂಗುವವರೇ ಅಧಿಕವಾಗಿರುವಾಗ ಅವರ ಆದರ್ಶಗಳ ಅಡಿಯಲ್ಲಿ ನಡೆಯುವ ಒಂದು ಕಥಾನಕವನ್ನು ಹೇಗೆ ಸ್ವೀಕರಿಸಬೇಕೋ ಗೊತ್ತಾಗದಂತಾಗುತ್ತದೆ. ಆದರೂ ಬಂದೂಕಿನ ನಳಿಗೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವಂತೆ ಮಾಡಬಲ್ಲ ತಾಕತ್ತೂ ಒಬ್ಬ ಸೃಜನಶೀಲ ಸಾಹಿತಿಗೆ ಮಾತ್ರ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಒಂದು ಕಾದಂಬರಿ ಸಾಕ್ಷಿಯಾಗುತ್ತದೆ ಎಂದರೆ ನಾವದನ್ನು ಒಪ್ಪಿಕೊಳ್ಳಲೇ ಬೇಕು.

ಪ್ರತಿಬಾರಿ ಬರೆಯುವಾಗಲೂ ಏನಾದರು ಹೊಸತನ್ನು ತಂದು ನಿಮ್ಮ ಮುಂದಿಡಬೇಕು ಎನ್ನುವ ಹಂಬಲದಿಂದಲೇ ನನ್ನ ಬರವಣಿಗೆಯನ್ನು ಆರಂಭಿಸುತ್ತೇನೆ. ತಾವು ಓದಿದ ಮೇಲೆ ನೀಡುವ ಪ್ರತಿಕ್ರೀಯೆಗಳಿಗೆ ಅನುಗುಣವಾಗಿ ಮುಂದಿನವಾರ ಏನು ಹೇಳಬೇಕು ನಾನು ಎನ್ನುವ ನಿಧರ್ಾರ ಮಾಡುತ್ತೇನೆ. ಹೀಗಿರುವಾಗ ಈ ವಾರ ಏನಾದರೂ ಹೊಸತನ್ನು ಕೊಡಬೇಕು ಎನ್ನುತ್ತಾ ಹಾಗೆ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ಓದಲು ಶುರುವಿಟ್ಟುಕೊಂಡೆ. ಅಷ್ಟೇ...! ಈ ವಾರ ಏನು ಹೇಳಬೇಕು ಎನ್ನುವುದನ್ನು ಆ ಪುಸ್ತಕವೇ ನನ್ನಿಂದ ಎಲ್ಲವನ್ನು ಹೇಳಿಸಿತು. 'ದಂಡಿ' ಎನ್ನುವ ಹೆಸರಿನ ಪುಸ್ತಕ ನನ್ನಂತ ಓದುಗನನ್ನು ಸಾರ್ಥಕತೆಯ ದಂಡೆಗೆ ತಲುಪಸುವ ಮೂಲಕ ಬೇರೊಬ್ಬರಿಗೆ ಅದರಲ್ಲಿನ ರೋಚಕ ತಿರುವುಗಳ ಹೋರಾಟದ ಹಾದಿಯನ್ನು ತಿಳಿಸಿಕೊಡಲು ಪ್ರೇರಣೆ ನೀಡಿತು. ಆಗ ಈ ಬಾರಿ ಅಂಕಣದಲ್ಲಿ 'ದಂಡಿ'ಯ ಕುರಿತು ದಂಡು ದಂಡಾಗಿ ಬರೆಯಲು ಮುಂದಾದೆ. ಅದು ಕಡಲು ಹಾಗೂ ಕಾನನದ ಮಧ್ಯದಲ್ಲಿ ಜರುಗುವ ಸ್ವಾತಂತ್ರ್ಯ ಸಂಗ್ರಾಮ. ಪ್ರತಿ ಸಾಲುಗಳಲ್ಲಿ ಸ್ಪೋಟಗೊಳ್ಳುವ ಸ್ವಾಭಿಮಾನದಕ್ರಾಂತಿ ಓದುಗನ ಹೃದಯವನ್ನು ಆದ್ರ್ರವಾಗಿಸುತ್ತಾ ಸಾಗುತ್ತದೆ. ಇತಿಹಾಸದ ಘಟನೆಗಳನ್ನು ಮೆಲುಕು ಹಾಕುವ ಆ ಪುಸ್ತಕದ ಒಂದೊಂದು ಪುಟಗಳು ಒಂದೊಂದು ಚಿತ್ರಣವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತವೆ. ವರ್ತಮಾನದಲ್ಲಿದ್ದವನನ್ನು ದರದರನೇ ಎಳೆದೊಯ್ದು ಭೂತಕಾಲದಲ್ಲಿ ನಿಲ್ಲಿಸುತ್ತದೆ. ಒಂದೇ ಉಸಿರಿನಲ್ಲಿ ಪುಸ್ತಕ ಓದಿ ಮುಗಿಸುತ್ತಿದ್ದಂತೆ ಭೂತದಲ್ಲಿರುವವನನ್ನು ವರ್ತಮಾನಕ್ಕೆ ಕರೆತಂದು ಭವಿಷ್ಯದ ಭಾರತದ ಬಗ್ಗೆ ಚಿಂತನೆಗೆ ತೊಡಗಿಸುತ್ತದೆ. ನಿಜಕ್ಕೂ ಅದೊಂದು ಅದ್ಭುತವಾದ ಪುಸ್ತಕ. ಹೀಗಾಗಿ ನೀವು ಕೂಡ ಇದನ್ನು ಓದಬೇಕು. ಇಲ್ಲ ನಾನು ಹೇಳುವುದನ್ನಾದರೂ ಕೇಳಬೇಕು.

ಅಷ್ಟಕ್ಕೂ ಆ ಪುಸ್ತಕದ ಕುರಿತು ನಾನೇಕೆ ಕೇಳಬೇಕು ಎನ್ನುವುದಕ್ಕೆ ಕಾರಣ ಇಲ್ಲಿದೆ. ನೆನ್ನೆತಾನೇ ಗಾಂಧಿ ಜಯಂತಿಯನ್ನು ಆಚರಣೆ ಮಾಡಿ, 'ರಘುಪತಿ ರಾಘವ ರಾಜಾರಾಮ' ಎನ್ನುವ ಪ್ರಾರ್ಥನೆ ಮಾಡಿ, 'ವೈಷ್ಣವ ಜನತೊ' ಭಜನ್ ಹಾಡಿ, ಮಹಾತ್ಮನ ಗುಣಗಾನ ಮಾಡಿಯಾಗಿದೆ. ಪೂಜೆಗಾಗಿ ಕೆಳಗಿಳಿದಿದ್ದ ಮಹಾತ್ಮ ಫೋಟೋ ಮತ್ತೇ ಗೋಡೆ ಏರಿದೆ. ಒಂದು ದಿನಕ್ಕೆ ಬಂದ ಮಹಾತ್ಮನ ವಿಚಾರಗಳು ನಿನ್ನೆ ಕಾರ್ಯಕ್ರಮ ಮುಗಿಯುತ್ತಲೇ ಮಣ್ಣಾಗಿ ಹೋಗಿವೆ. ಆದರೂ ಈ ಪುಸ್ತಕ ಓದಿದ ಮೇಲೆ ಅದನ್ನು ಹೆಳಬೇಕು ಎನ್ನುವ ಆಸೆಯಲ್ಲಿ ನಾನು ಬರೆಯಲು ಮುಂದಾಗಿರುವೆ. ಎಲ್ಲರಿಗೂ ಮಹಾತ್ಮನ ಬಗ್ಗೆ ಗೊತ್ತು. ಆದರೆ ಅದೇ ಮಹಾತ್ಮನ ಹೋರಾಟದಿಂದ ಪ್ರೇರಿತರಾಗಿ ಬದುಕು ಬದಲಿಸಿಕೊಂಡವರ ಕುರಿತು ಯಾರೂ ತಿಳಿದುಕೊಳ್ಳಲು ಇಚ್ಚಿಸುವುದಿಲ್ಲ. ಬ್ರಿಟೀಷರೆದುರು ಕತ್ತಿ ಎತ್ತದೆ ಮಹಾತ್ಮ ಶಾಂತಿಯನ್ನು ಅಸ್ತ್ರಮಾಡಿಕೊಂಡು ಅವರೆದುರು ಮಂಡಿ ಊರಿದರು ಎನ್ನುವ ಕಾರಣಕ್ಕೆ ಅವರನ್ನು ಹೀಯಾಳಿಸುವವರು ಬಹಳ ಜನ ಇದ್ದಾರೆ. ಆದರೆ ಸ್ವಾಭಿಮಾನಕ್ಕಾಗಿ ಅವರು ಮಾಡಿದ ಹೋರಾಟದ ಬಗ್ಗೆ ಅರಿತವರು ಎಷ್ಟು ಜನ ಇದ್ದಾರೆ ಎನ್ನುವುದೇ ನನಗೆ ತಿಳಿಯದ ವಿಷಯವಾಗಿದೆ. ಅದರಲ್ಲೂ ಪ್ರಸ್ತುತ ಸನ್ನಿವೇಶದಲ್ಲಿ ಮಹಾತ್ಮನ ಹೋರಾಟ ಏನು? ಅವರು ನೀಡಿದ ಸಂದೇಶವೇನು? ವಾಸ್ತವ ಬದುಕಿಗೆ ಅವೆಷ್ಟು ಅಅವಶ್ಯಕ ಎನ್ನುವುದನ್ನು ಈ ಪುಸ್ತಕ ಓದಿದ ಮೇಲೆಯೇ ನನಗೆ ಅರ್ಥವಾಗಿದ್ದು. ಓದುಗರೇ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಬರೆದು ಬರೆದು, ರಾಶಿ ರಾಶಿ ಪುಸ್ತಕಗಳನ್ನು ಸಾರಸ್ವತ ಲೋಕಕ್ಕೆ ಅಪರ್ಿಸುತ್ತಿರುವ 'ರಾಗಂ' ಗಾಂಧೀಜಿ ಬದುಕಿನ ಕಥಾನಕವನ್ನು ಇಟ್ಟುಕೊಂಡು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಮೊಗೆದಷ್ಟು ಹೊರಸೂಸುವ ಒರತೆಯಂತೆ ಬರೆದಷ್ಟು ಗಾಂಧೀಯ ವಿಚಾರಗಳು ಪದೇ ಪದೇ ಬಂದು ನಿಲ್ಲುತ್ತವೆ. ಹಾಗೆ ರಾಗಂ ಅವರು ಕೂಡ ಗಾಂಧೀ ಮಹಾತ್ಮ ಕುರಿತು ಬರೆದೇ ಬರೆಯುತ್ತಾರೆ. ಈ ಬಾರಿ ಅವರು ಐತಿಹಾಸ ವಿಷಯವನ್ನಿಟ್ಟುಕೊಂಡು ಸೃಷ್ಟಿಸಿದ ಕೂಸು 'ದಂಡಿ'. 

ಈ ಕಾದಂಬರಿಯು ಒಂದು ಕ್ಷಣ 'ದಂಡಿ' ಎನ್ನುವ ಹೆಸರಿನ ಮೂಲಕವೇ ನಮ್ಮನ್ನು ಕಾಡುತ್ತದೆ. ಬಹುಶಃ ಇದು ಮಹಾತ್ಮಾ ಗಾಂಧೀಜಿಯವರು ಮಾಡಿದ ದಂಡಿ ಸತ್ಯಾಗ್ರಹದ ಕುರಿತಾಗಿ ಬರೆದಿರುವ ಪುಸ್ತಕವಾಗಿರಬಹುದು ಎನ್ನುವ ಆಲೋಚನೆ ಕ್ಷಣಮಾತ್ರದಲ್ಲಿ ನಮ್ಮಲ್ಲಿ ಮೂಡುತ್ತದೆ. ಆದರೆ ಒಳಪುಟದ ಹಾದಿಯಲ್ಲಿ ಓದಿನ ಪಯಣ ಆರಂಭವಾಗುತ್ತಿದ್ದಂತೆ 'ದಂಡಿ' ಎನ್ನುವುದು ಹೋರಾಟವಲ್ಲ ಬದಲಿಗೆ ಹೋರಾಟಗಾರನ ಹೆಸರು ಎನ್ನುವುದು ಅರ್ಥವಾಗಿ ಇಡೀ ಕಾದಂಬರಿಯೂ ಅಲ್ಲಾವುದ್ದಿನ್ನ ಮಾಯಾ ಪ್ರಪಂಚದಂತೆ, ಒಂದು ತರಹದ ಆಶ್ಚರ್ಯದ ಮೂಟೆಯಾಗಿ ಕಾಣುತ್ತದೆ. ಒಳಗೇನಿದೆ ಎಂದು ಒಂದು ಬಾರಿ ಓದಿ ನೋಡೇ ಬಿಡೋಣ ಎನ್ನುತ್ತ ಓದಿಗಿಳಿದು ಮೇಲೆ ಬರುವುದರೊಳಗೆ ಇದು ಕೇವಲ ದಂಡಿ ಮಾಡಿದ ಕಾರ್ಯವಲ್ಲ, ಇದು ಕೇವಲ ದಂಡಿಯ ಬದುಕಲ್ಲ, ಇದು ಕೇವಲ ದಂಡಿ ಮಾಡಬೇಕಾದ ಕರ್ತವ್ಯವಲ್ಲ ಬದಲಿಗೆ ಪ್ರತಿಯೊಬ್ಬ ಭಾರತೀಯನು ಮಾಡಬೇಕಾದ ಕಾರ್ಯ. ಇದು ಕೇವಲ ಕಾದಂಬರಿಯಲ್ಲ ಪ್ರತಿಭಟನೆಯ ಮಹಾ ಅಸ್ತ್ರ, ಸ್ವಾಭಿಮಾನದ ಪ್ರತಿಬಿಂಬ, ಹೋರಾಟದ ಸಮರ ಭೈರವಿ. ಎನ್ನುವ ಭಾವನೆ ನಮ್ಮಲ್ಲಿ ಮೂಡದೇ ಇರಲಾರದು. ಜಗದ್ವಂದ್ಯ ಭಾರತ ಕೃತಿಯಲ್ಲಿ ದೇಶಾಭಿಮಾನಕ್ಕೆ ಜಾತಿ ಧರ್ಮವಿಲ್ಲ ಎನ್ನುವುದನ್ನು ಭಾವುಟದ ಮೂಲಕ ಸಾರಿ ಹೇಳಿದ್ದ ರಾಗಂ ಅವರು ಉಪ್ಪಿನ ಸತ್ಯಾಗ್ರಹವನ್ನಿಟ್ಟುಕೊಂಡು ಹೆಣೆದಿರುವ ಕಾದಂಬರಿಯು ಸ್ವಾಭಿಮಾನವನ್ನು ಸಾರಿ ಹೇಳುತ್ತದೆ. ಅದರಲ್ಲೂ ಉಪ್ಪಿನ ಋಣ ತೀರಿಸದವನು ತಿಪ್ಪೆಯ ಮೇಲಿದ್ದರೇನು ಉಪ್ಪರಿಗೆಯ ಮೇಲಿದ್ದರೇನು ಇದ್ದು ಇಲ್ಲದಂತೆಯೇ ಸರಿ ಎನ್ನುವ ರೀತಿಯಲ್ಲಿ ಹೆಣೆದಿರುವ ಕಥಾನಕವು ಇಡೀ ಕಾದಂಬರಿಯ ಜೀವಾಳ ಮಾತ್ರವಲ್ಲ ಅಂದು ಉಪ್ಪಿಗಾಗಿ ನಡೆದ ಹೋರಾಟವು ಇಂದು ಪ್ರತಿಯೊಂದಕ್ಕೂ ನಡೆಯಬೇಕಾಗಿದೆ ಎನ್ನುವುದನ್ನು ತಿಳಿಸುತ್ತದೆ. ಓದುತ್ತ ಸಾಗಿದಂತೆ ಅಂದು ತಾವಾಗಿಯೇ ಬಂದ ಬ್ರಿಟೀಷರನ್ನು ಹೋಗಲಾಡಿಸುವುದಕ್ಕಾಗಿ ಅಷ್ಟು ದೊಡ್ಡ ಹೋರಾಟವನ್ನು ಮಾಡಬೇಕಾಯಿತು. ಆದರೆ ಇಂದು ಬೇಕು ಬೇಕೆಂದು ಕರೆದುಕೊಂಡು ಬಂದಿರುವ ವಿದೇಶಿಯರಿಂದ ಭಾರತವನ್ನು ಉಳಿಸುವುದಕ್ಕೆ ಇನ್ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ಭಾರತೀಯತೆ ಹಾಗೂ ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ದಂಡಿಯಂತ ನಾಯಕ ಬೇಕು. ಉಪ್ಪಿನ ಸತ್ಯಾಗ್ರಹದಂತ ಸ್ವಾಭಿಮಾನದ ಹೋರಾಟಬೇಕು ಎನ್ನುವುದನ್ನು ನಮಗೆ ಈ ಕಾದಂಬರಿ ಸೂಕ್ಷ್ಮವಾಗಿ ತಿಳಿಸಿಕೊಡುತ್ತದೆ.

ಅಂಕೋಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹವು ತೆರಿಗೆಯ ಸಂಕೋಲೆಯನ್ನು ಕಿತ್ತೊಗೆಯಲು ಪ್ರೇರಣೆ ನೀಡಿತು. ಗಾಂಧೀಯ ಮಾತಿನಿಂದ ಹೋರಾಟದ ಹಾದಿ ಹಿಡಿದ ಎಷ್ಟೋ ಮಹಾನ್ ವ್ಯಕ್ತಿಗಳೆಲ್ಲ ಮನೆ ಮಠವನ್ನು ಲೆಕ್ಕಿಸದೇ ಈ ದೇಶಕ್ಕೆ ಹಾಕಿದ್ದ ಶ್ರಂಕಲೆಗಳನ್ನು ಬಿಡಿಸುವುದಕ್ಕೆ ನಿರಂತರ ಹೋರಾಟ ಮಾಡುವಂತಾಯಿತು. ಅದರಲ್ಲೂ ಮಲೆನಾಡು ಹಾಗೂ ಉಪ್ಪಿನ ಸಾಗರದ ಭಾಗದಲ್ಲಿ ಜರುಗುವ ಹೋರಾಟದ ಹಾದಿಯಲ್ಲಿ ದಂಡಿ ಎನ್ನುವ ಕ್ರಾಂತಿಕಾರಿ ಯುವಕನ ಪಾತ್ರವನ್ನು ಸೃಷ್ಠಿಸುವ ರಾಗಂ ಅವರು ಆತನ ಮೂಲಕವಾಗಿ ಹಿಂಸೆಯ ಹಿಂದೆ ಏನೇ ಕಾರಣವಿರಬಹದು, ಆದರೆ ಜಗತ್ತನ್ನು ಗೆಲ್ಲುವುದಕ್ಕೆ ಅಹಿಂಸಾ ಮಾರ್ಗವೇ ಮುಖ್ಯ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಜಗತ್ತನ್ನೇ ಗೆಲ್ಲಬೇಕೆಂದು ಹೊರಟ ಅಲೇಕ್ಸಾಂಡರ್ ಸಾಯುವಾಗ ಇಲ್ಲಿ ಎಲ್ಲವೂ ನಶ್ವರ ಎನ್ನುವುದನ್ನು ಮನಗಾಣುತ್ತಾನೆ. ಕಳಿಂಗ ಯುದ್ಧದಲ್ಲಾದ ಸಾವು ನೋವಿಗೆ ಮಿಡಿದ ಅಶೋಕ ಯುದ್ಧ ಸನ್ಯಾಸ ಸ್ವೀಕಾರ ಮಾಡಿ ಶಾಂತಿ ಧರ್ಮಕ್ಕೆ ಶರಣಾಗುತ್ತಾನೆ. ರಾಜ್ಯಕ್ಕೆ ರಾಜಕುಮಾರನಾದ ಸಿದ್ಧಾರ್ಥನು ನಾಲ್ಕು ಆರ್ಯ ಸತ್ಯಗಳನ್ನು ಮನಗಂಡು ಬುದ್ಧನಾಗಿ ಪರಿವರ್ತನೆಯಾಗುತ್ತಾನೆ. ಹಾಗೆಯೇ ಈ ಕಾದಂಬರಿಯಲ್ಲಿ ಬರುವ 'ದಂಡಿ'ಯು ಪರಸ್ಥಿತಿಯ ಪಿತೂರಿಗೆ ಬಲಿಯಾಗಿ ಹಿಂಸೆಯ ದಾರಿ ತುಳಿಯುತ್ತಾನೆ. ಆದರೆ ಅಹಿಂಸಾವಾದಿಗಳ ಜೊತೆ ಸೇರಿ ಬದುಕೆಂದರೆ ಬರೀ ಹೊಡೆದಾಡುವುದಲ್ಲ. ಬದಲಿಗೆ ಅಹಿಂಸೆಯಿಂದಲೇ ಹೋರಾಡುವುದು, ಪ್ರೀತಿಯಿಂದಲೇ ಎಲ್ಲವನ್ನು ಗೆಲ್ಲವುದು ಎಂದು ತಿಳಿದುಕೊಂಡು ಸಾಗುವಾಗ ದಂಡಿ ನಮ್ಮ ಬದುಕಿನಲ್ಲೂ ಹೊಸ ಭರವಸೆಯನ್ನು ಹುಟ್ಟು ಹಾಕುತ್ತಾನೆ. ಧರ್ಮಗಳ ತಿಕ್ಕಾಟವನ್ನು ಹಾಗೂ ಜಾತಿಯ ಜಂಜಡವನ್ನೇ ಬಂಡವಾಳ ಮಾಡಿಕೊಂಡು ಆಳ್ವಿಕೆಗೆ ಅಣಿಯಾದ ಬ್ರಿಟೀಷರೆದುರು ತೊಡೆ ತಟ್ಟಬೇಕೆಂದರೆ ನಮ್ಮ ಜನರ ಮಾನಸಿಕ ಸ್ಥಿತಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆ ತರಬೇಕು ಎನ್ನುವ ದೃಷ್ಠಿಕೋನದಿಂದ ಗಾಂಧೀಜಿ ಉಪ್ಪನ್ನು ಆಯುಧವನ್ನಾಗಿ ಮಾಡಿಕೊಂಡರು. ಮೇಲ್ನೋಟ್ಟಕ್ಕೆ ಉಪ್ಪು ತಯಾರು ಮಾಡುವುದು ಕೇವಲ ತೆರಿಗೆಯನ್ನು ವಿರೋಧಿಸುದಕ್ಕೆ ಎನಿಸಿದರು ಕೂಡ ಇದು ಆಂತರ್ಯದಲ್ಲಿ ಇಡೀ ದೇಶದ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಪ್ರಯತ್ನವಾಗಿತ್ತು. ಮೇಲಾಗಿ ಯಾವುದು ಎಲ್ಲರಿಗೂ ಅತ್ಯಗತ್ಯವಾಗಿದೆಯೋ ಅದನ್ನು ಅಸ್ತ್ರವಾಗಿಸಿದರೆ ಎಲ್ಲರೂ ಇದರಲ್ಲಿ ಒಂದಾಗೇ ಅಗುತ್ತಾರೆ ಎನ್ನುವುದು ಗಾಂಧೀ ಮಹಾತ್ಮನ ನಂಬಿಕೆಯಾಗಿತ್ತು. ಅದಕ್ಕೆ ಓಗೊಟ್ಟ ಕಡಲತೀರದ ಚಳುವಳಿಗಾರರು ಉಪ್ಪಿನ ಸತ್ಯಾಗ್ರಹ ಮಾಡುವ ಮೂಲಕ ಮಹಾತ್ಮನ ನಂಬಿಕೆಗೆ ಇಂಬು ನೀಡಿದರು. ಇದನ್ನೇ ಕಥೆಯ ಉದ್ದಕ್ಕೂ ಆಧಾರವಾಗಿಟ್ಟುಕೊಂಡು ಸಾಗುವ ರಾಗಂ ಚಳುವಳಿ ಎನ್ನುವ ಯುದ್ಧಭೂಮಿಯಲ್ಲಿ ಪ್ರೀತಿಯ ಗುಲಾಬಿಯನ್ನು ಅರಳಿಸುವಲ್ಲಿಯೂ ಯಶಸ್ವಿಯಾಗುತ್ತಾರೆ. 

ಮಲ್ಲಿಗೆಯ ಮೈಯಲ್ಲಿ ವಿದ್ರೋಹದ ಬೆಂಕಿ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುವ ರಾಗಂ ಅವರು ಬಟ್ಕಳದ ಬದುಕನ್ನು ನೆನೆಸಿಕೊಳ್ಳುತ್ತಲೇ ನಮ್ಮನ್ನು ಕಡಲ ತಡಿಗೆ ತಂದು ನಿಲ್ಲಿಸುತ್ತಾರೆ. ಹಾಲಕ್ಕಿ ಜನಗಳ ಹಾಡು ಪಾಡನ್ನು ತಿಳಿಸುತ್ತಲೇ ನಮ್ಮನ್ನು ಕಾಡು ಮೇಡುಗಳಲ್ಲಿ ಸುತ್ತಿಸುತ್ತಾರೆ. ಅಲ್ಲಿನ ಜನಗಳ ಭಾವನೆಗಳು ಹಾಗೂ ಮಲ್ಲಿಗೆಯ ಸುವಾಸನೆಯ ಜೊತೆಗೆ ರಕ್ತದ ಕಮಟುವಾಸನೆಯನ್ನು ತೋರಿಸುವ ಅವರು ಬದಲಾವಣೆಯ ದಾರಿಯನ್ನು ತೋರಿಸುತ್ತ ಇತಿಹಾಸವನ್ನು ವಾಸ್ತವದ ಜೊತೆಯಲ್ಲಿ ಹೋಲಿಸಿಕೊಂಡು ನೋಡುವಂತೆ ಮಾಡುತ್ತಾರೆ. ಈ ಕಾದಂಬರಿಯು ವಿದೇಶಿಯರನ್ನು ಈ ದೇಶದಿಂದ ಓಡಿಸಲು ಮುಂದಾದರೆ ಸ್ವದೇಶಿಯರೇ ಪೊಲೀಸರಾಗಿ ನಮ್ಮ ವಿರುದ್ಧ ತಿರುಗಿ ಬಿದ್ದಾಗ ಬೇಲಿ ಎದ್ದು ಹೊಲ ಮೇಯ್ದ ಅನುಭವ ನೀಡುತ್ತದೆ. ಅಂದು ಪೊಲೀಸರು ಅಧಿಕಾರದ ಆಸೆಗಾಗಿ ಅಥವಾ ಸಕರ್ಾರಿ ಕೆಲಸಕ್ಕಾಗಿ ತಮ್ಮ ದೇಶದವರನ್ನೇ ಸಾಯುವಂತೆ ಹೊಡೆಯುತ್ತಾರೆನ್ನುವುದನ್ನು ಓದಿದಾಗ ಅಹಿಂಸಾ ಪರಮಧರ್ಮ ಎಂದ ಬುದ್ಧನ ಮಾತಾಗಲಿ, ದಯವೇ ಧರ್ಮದ ಮೂಲ ಎಂದು ಹೇಳಿ ಇವ ನಮ್ಮವ ಇವ ನಮ್ಮವ ಎಂದು ಎದೆಗವಚಿಕೊಂಡ ಬಸವಣ್ಣನ ವಾಣಿಯಾಗಲಿ ಇಲ್ಲಿ ಕೆಲಸಕ್ಕೆ ಬಾರದ ವಸ್ತುಗಳಾಗುತ್ತವೆ. ದಂಡಿಯಾಗುವ ಮುನ್ನ ಶಂಕರನಾಗಿದ್ದ ಹುಡುಗನಿಗೆ ಆತನ ತಾಯಿ ನತ್ಲಳು ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ತಯಾರಿಸಿದ ಹಿಡಿ ಉಪ್ಪಿನಲ್ಲಿಯೇ ಕೆಲವು ಕಾಳುಗಳನ್ನು ಹೆಕ್ಕಿ ತಂದು ಮಗನ ಬಾಯಿಗೆ ಹಾಕಿ ಇದು ದಂಡಿಯ ಪ್ರಸಾದ ಇದನ್ನು ತಿಂದರೆ ಎಂಥಹ ವಯಸ್ಸಾದವನ ಎದೆಯಲ್ಲೂ ರಕ್ತ ಕುದಿಯುತ್ತದೆ ಎಂದು ಹೇಳಿ ಶಂಕರನನ್ನು ದಂಡಿಯನ್ನಾಗಿ ಪರಿವತರ್ಿಸಿ ಸ್ವಾತಂತ್ರ್ಯದ ಸೂರ್ಯನನ್ನಾಗಿ ಮಾಡುತ್ತಾಳೆ. ಆದರೆ ಗಾಂಧೀಯ ದಾರಿಯಿಂದ ವಿಮುಖನಾಗುವ ದಂಡಿ ತನ್ನ ತಂದೆಯ ಸಾವಿಗೆ ಕಾರಣವಾಗುವ ಪೊಲೀಸಪ್ಪ ಲತೀಫನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹಾತೊರೆಯಲಾರಂಭಿಸುತ್ತಾನೆ. ಅದರಲ್ಲೂ ದಿನಗಳೆದಂತೆ ಯಾವುದೇ ಪೊಲೀಸರನ್ನು ಕಂಡರೆ ಅವರಲ್ಲಿ ಲತೀಫನೇ ಕಾಣುತ್ತಾನೆ, ಸ್ಮಶಾನಕ್ಕೆ ಹೋಗುವ ಪ್ರತಿ ಶವದಲ್ಲಿಯೂ ತನ್ನ ತಂದೆಯನ್ನೇ ಕಾಣುತ್ತಾನೆ, ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ಪ್ರತಿ ಮಗುವಿನಲ್ಲಿಯೂ ತನ್ನನ್ನೆ ಕಲ್ಪಿಸಿಕೊಳ್ಳುತ್ತಾನೆ. ಕೊನೆಗೆ ಈ ಎಲ್ಲದಕ್ಕೂ ಕಾರಣನಾದ ಲತೀಫನ ರುಂಡವನ್ನು ಚಂಡಾಡುವ ಮೂಲಕ ತನ್ನ ಎದೆಯಲ್ಲಿ ಚಿಮ್ಮಿದ ದ್ವೇಷದ ಲಾವಾರಸವನ್ನು ಶಾಂತವಾಗಿಸಿಕೊಳ್ಳಲು ಯತ್ನಿಸುತ್ತಾನೆ. ಅದು ಕೇವಲ ಅಂದಿನ ಚಳುವಳಿಯ ಕಾಲದಲ್ಲಿ ಅಲ್ಲ ಬದಲಿಗೆ ಇಂದೂ ಕೂಡ ಅದೇ ನಡೆದಿದೆ ಆದರೆ ಅದರ ಸ್ವರೂಪ ಮಾತ್ರ ಬದಲಾಗಿದೆ. ವಾಸ್ತವದಲ್ಲಿಯೂ ನಮ್ಮ ಸುತ್ತಮುತ್ತಲೂ ಅನೇಕ ಜನ ಲತೀಫರು ಇದ್ದರೆ. ನಾವುಗಳೇ ದಂಡಿಗಳಾಗಿದ್ದೇವೆ. ಆದರೆ ಅಂದು ಸ್ವಾಭಿಮಾನದಿಂದ ನಡೆದ ಹೋರಾಟ ಮಾತ್ರ ಇಂದು ನಡೆಯುತ್ತಿಲ್ಲ. ಬದಲಿಗೆ ದೇಶ ಏನಾದರೆ ನನಗೇನು ನಾನು ಮಾತ್ರ ಚನ್ನಾಗಿದ್ದರೆ ಸಾಕು ಎನ್ನುವ ಮಟ್ಟಕ್ಕೆ ಬಂದು ತಲುಪಿರುವುದು ನಮಗೇ ಅರಿವಾಗದಂತೆ ನಮ್ಮ ಮನದಲ್ಲಿ ಅಡಗಿರುವ ಸ್ವಾರ್ಥವನ್ನು ನಮಗೇ ತೊರಿಸುವ ರಾಗಂ ತಮ್ಮ ಬರವಣಿಗೆಯ ಮೆರವಣಿಗೆಯಲ್ಲಿ ಎಲ್ಲವನ್ನು ಬಟಾಬಯಲು ಮಾಡುತ್ತಾರೆ.

ರಾಗಂ ಅವರ ಕಾದಂಬರಿಯಲ್ಲಿನ ದಂಡಿ ಎನ್ನುವುದು ಹೋರಾಟವಲ್ಲ. ಅದು ಕೇವಲ ವ್ಯಕ್ತಿಯೂ ಅಲ್ಲ. ಅದೊಂದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ತೊಳಲಾಟ. ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಹುಡುಕಾಟ. ಬದುಕಿನ ದಾರಿಯಲ್ಲಿ ನೆಮ್ಮದಿ ಕಂಡುಕೊಳ್ಳುವುದಕ್ಕೆ ನಡೆಸುವ ಅಲೆದಾಟ. ಹುಟ್ಟಿದ ಪ್ರೀತಿಯನ್ನು ದಕ್ಕಿಸಿಕೊಳ್ಳುವುದಕ್ಕೆ ಮಾಡುವ ಪರದಾಟ. ಈ ಕಾರಣದಿಂದಲೇ ಬೆಂಕಿಯ ಹೃದಯದಲ್ಲಿಯೂ ತಣ್ಣನೆಯ ಪ್ರೀತಿಯನ್ನು ಹುಟ್ಟು ಹಾಕಿರುವ ರಾಗಂ ಅವರು ದಂಡಿಯ ಎದೆಯಲ್ಲೂ ವಸುಧೆ ಎನ್ನುವ ಪ್ರೀತಿಯ ಗಿಡ ನೆಟ್ಟು, ಪ್ರೇಮದ ಹೂ ಪಡೆಯಲು ಯತ್ನಿಸುತ್ತಾರೆ. ಹಾಲಕ್ಕಿ ಜನಗಳ ಹಾಡು ಪಾಡುಗಳನ್ನು ಪ್ರೀತಿಯ ಭಾವದಲ್ಲಿ ಮೇಳೈಸಿ ಬದುಕಿನ ಜಾಡು ಎಂದರೆ ಇದೆ ಎನ್ನುವುದನ್ನು ತಿಳಿಸುತ್ತಾರೆ. ಹೋರಾಟದ ಎದೆಯಲ್ಲಿಯೂ ಪ್ರೇಮದ ತೊಳಲಾಟವಿರುತ್ತದೆ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಬದುಕು ಬದಲು ಮಾಡುವುದಕ್ಕೆ ಅವಕಾಶ ಇರುತ್ತದೆ ಎನ್ನುವುದನ್ನು ತೋರಿಸುತ್ತಾರೆ. 'ಕೈಗಂಟಿದ ರಕ್ತವನ್ನು ನೀರಲ್ಲಿ ತೊಳೆಯಬಹದು ಆದರೆ ಎದೆಗಂಟಿದ ರಕ್ತವನ್ನು ಪ್ರೀತಿಯಿಂದ ಮಾತ್ರ ತೊಳೆಯಲು ಸಾಧ್ಯ ಎನ್ನುವುದನ್ನು ದಂಡಿಯ ಬದುಕು ತಿಳಿಸಿದರೆ, ಒಂದು ಚಿಟಿಕೆ ಉಪ್ಪು ಸ್ವಾಭಿಮಾನದ ಬದುಕಿಗೆ ಎದೆಯ ಕದವನ್ನು ತೆರಯುತ್ತದೆ ಎನ್ನುವುದು ವಸುಧಳ ಬದುಕು ತಿಳಿಸಿಕೊಡುತ್ತದೆ. ಒಂದು ಹಿಡಿ ಉಪ್ಪಿಗಾಗಿ ಹೋರಾಟ ಮಾಡುತ್ತ ರಾಜ್ಯದ ಮೂಲೆಮೂಲೆಯಿಂದ ಒಂದೆಡೆ ಬಂದು ಸೇರುವ ಜನಗಳು ಸ್ವಾಭಿಮಾನದ ಬದುಕು ಹಾಗೂ ಐಕ್ಯತೆಯನ್ನು ತಿಳಿಸಿಕೊಟ್ಟರೆ, ಬ್ರಿಟೀಷರಿಗಾಗಿ ನಿಷ್ಠೆ ತೋರುವ ಪೊಲೀಸರು ದೇಶದ್ರೋಹ ಎಂದರೆ ಏನು ಎನ್ನುವುದನ್ನು ತಿಳಿಸಿಕೊಡುತ್ತಾರೆ. ಇದರಲ್ಲಿ ಹಾಡಿದೆ. ಬಡಜನರ ಬದುಕಿನ ಪಾಡಿದೆ. ನೋವಿದೆ. ಹಿಂಸೆ ಇದೆ. ಪ್ರೀತಿ ಇದೆ. ಸ್ನೇಹವಿದೆ. ಸ್ವಾರ್ಥವಿದೆ. ನಿಸ್ವಾರ್ಥದ ನಡೆ ಇದೆ. ಯಾವುದನ್ನು ಅಪೇಕ್ಷಿಸಿದ ತ್ಯಾಗದ ಬದುಕಿದೆ. ಎಲ್ಲವನ್ನು ಓದಿ ಮುಗಿಸುವ ಮನಸ್ಸಿಗೆ ಮಹಾತ್ಮನ ಬದುಕಿನ ಸಂದೇಶವಿದೆ. ಅದರ ಜೊತೆಯಲ್ಲಿ ಸಮುದ್ರದೆಡೆಗೆ ಸಾವಿರದ ಹೆಜ್ಜೆಯ ಗುರುತುಗಳಿವೆ. ಹೀಗಾಗಿ ದಂಡಿ ಎಂದರೆ ಅದೊಂದು ಕಾದಂಬರಿಯಲ್ಲ. ಬದಲಿಗೆ ಅದೊಂದು ಬದುಕಿನ ಪ್ರತಿಬಿಂಬವಾಗಿದೆ. ವಾಸ್ತವಕ್ಕೆ ಬೇಕಾದ ಭೂತಕಾಲದ ಆದರ್ಶವಾಗಿದೆ. ಹೀಗಾಗಿ ದಂಡಿಯನ್ನು ಓದಿ. ಸಾಧ್ಯವಾಗದೇ ಇದ್ದರೆ ಬೆಳ್ಳಿ ತೆರೆಯ ಮೇಲೆ ಬಂದಾಗಲಾದರು ದಂಡಿಯನ್ನು ಕಂಡು ಖುಷಿ ಪಡಿ.

ಸುದ್ದಿ ಓದಿ