ಲೇಖನಗಳು

‘ಗಣಪತಿ’ ಸಹ ಜೀವನದ ಪ್ರತೀಕ

‘ಗಣಪತಿ’ ಸಹ ಜೀವನದ ಪ್ರತೀಕ

ಹಿಂದೂ ಧರ್ಮದ ಎಲ್ಲಾ ದೇವರುಗಳಲ್ಲಿ ಗಣೇಶನಿಗೆ ವಿಶಿಷ್ಟ ಸ್ಥಾನವಿದೆ. ಹಿಂದೂಗಳ ಎಲ್ಲಾ ಶುಭ ಕಾರ್ಯಗಳು ಹಾಗೂ ಜ್ಞಾನಾಧಾರಿತ ಚಟುವಟಿಕೆಗಳು ಗಣೇಶ ಪೂಜೆಯಿಂದಲೇ ಆರಂಭವಾಗುತ್ತವೆ. ಕಾಲಗರ್ಭದಲ್ಲಿ ಅಡಗಿರುವ ಗಣೇಶ ಪೂಜೆಯ ಇತಿಹಾಸ ಅತ್ಯಂತ ಕುತೂಹಲ.  

‘ಗಣಪತಿ’ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ‘ಗಣ’ ಎಂದರೆ ‘ಗುಂಪು’, ’ಪತಿ’ ಎಂದರೆ ನಾಯಕ. ‘ಗಣಪತಿ’ ಎನ್ನುವುದು ‘ಗುಂಪು ಜೀವನ’, ‘ಸಹ ಜೀವನ’ದ ಪ್ರತೀಕ. ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಂತೆ ಮನುಷ್ಯನ ಎಲ್ಲಾ ಮೂಲ ಕೆಲಸಗಳಿಗೆ ‘ಮೂಲಾಧಾರ ಚಕ್ರ’ ಅತ್ಯಂತ ಅಗತ್ಯ. ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ‘ಮೂಲಾಧಾರ ಚಕ್ರ’ವನ್ನು ಪ್ರಾಪ್ತಿಗೊಳಿಸಿಕೊಳ್ಳಬಹುದು. ಗಣೇಶನನ್ನು ‘ಓಂಕಾರ ಸ್ವರೂಪ’; ‘ವೃದ್ಧಿ-ಸಿದ್ಧಿ’ ಎಂದು ಹೊಗಳಲಾಗಿದೆ. ಇದರ ಅರ್ಥವಿಷ್ಟೆ ಗಣೇಶನೇ ನಮ್ಮ ಜೀವನ ಸುಖ ಮಯವಾಗಿರಲೆಂದು ಆಶೀರ್ವದಿಸು. ನಮ್ಮ ಮನದಲ್ಲಿ ನೆಲಸಿ ನಮ್ಮ ವಿಚಾರಗಳನ್ನು ಉದಾತ್ತಗೊಳಿಸು.  

ಗಣೇಶ ಪೂಜೆಯ ಉಲ್ಲೇಖಗಳು ವೇದ, ಉಪನಿಷದ್, ಪುರಾಣಗಳು, ತೈತ್ತಿರೀಯ ಅರಣ್ಯಕ ಗ್ರಂಥ, ಮೈತ್ರೇಯಿ ಸಂಹಿತಾ ಹಾಗೂ ವ್ಯಾಜಸನೇಯ ಗ್ರಂಥಗಳಲ್ಲಿವೆ. ವಾಯುವ್ಯ  

ದಿಕ್ಕಿನಿಂದ ಬಂದ ಆರ್ಯರೊಂದಿಗೆ ಗಣೇಶ ಪೂಜೆ ಭಾರತಕ್ಕೆ ಕಾಲಿಟ್ಟಿತು ಎಂಬುದಾಗಿ ಕೆಲವು ವಿದ್ವಾಂಸರು ವಾದಿಸುತ್ತಾರೆ. ಪ್ರಾಚೀನ ಚೀನಾ, ಅಫಘಾನಿಸ್ಥಾನ್, ಶ್ರೀಲಂಕಾ, ಈಜಿಪ್ಟ್‌ ಹಾಗೂ ಇಂಡೊನೇಷಿಯಾ ದೇಶಗಳಲ್ಲಿ ಗಣೇಶ ಪೂಜೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಕುರುಹುಗಳಿವೆ ಎಂದೂ ಅವರು ಹೇಳುತ್ತಾರೆ.  

‘ಪಿಲುಸಾರ’ ಎಂಬುದು ಏಳನೆ ಶತಮಾನದಲ್ಲಿ ಅಫಘಾನಿಸ್ಥಾನದಲ್ಲಿದ್ದ ಪ್ರಮುಖ ದೇವತೆ. ‘ಪಿಲುಸಾರ’ ದೇವಾಲಯ ಕಪಿಷಾನಗರಿ ಎಂಬ ಪಟ್ಟಣದಲ್ಲಿತ್ತು. ಈ ದೇವತೆಗೆ ಆನೆಯ ಮುಖವಿತ್ತು, ಎಂಬುದಾಗಿ ಖ್ಯಾತ ಪ್ರವಾಸಿ ತ್ಸಾಂಗ್ ವಿವರಿಸುತ್ತಾನೆ.  

ಕಾಬೂಲಿನ ಸಭಾಂಗಣವೊಂದರಲ್ಲಿ ಕಲ್ಲಿನಿಂದ ಕೆತ್ತಿದ ಗಣೇಶ ವಿಗ್ರಹವೊಂದು ಪತ್ತೆಯಾಗಿದೆ. ಆ ವಿಗ್ರಹದಲ್ಲಿರುವ ಸಂಸ್ಕೃತ ಭಾಷೆಯ ಲಿಪಿ ಹೀಗೆ ಹೇಳುತ್ತದೆ: “ತನ್ನ ಸಿಂಹಾಸನಾರೋಹಣದ ಎಂಟನೆ ವಾರ್ಷಿಕೋತ್ಸವದ ನೆನಪಿಗಾಗಿ ಪರಮಭಟ್ಟಾರಕ ರಾಜಾಧಿರಾಜ ಖಿಂಗಲ್ ಗಣೇಶ ವಿಗ್ರಹವನ್ನು ಕೆತ್ತಿಸಿದನು.”  

ವಾಂಡೆನ್ ಬರ್ಗ್‌ ಎಂಬ ಲೇಖಕ ತನ್ನ ಕೃತಿ ‘ಬರ್ರಾಸಿ-ಏ-ತರೀಖಿ’ಯಲ್ಲಿ ಗಣೇಶನನ್ನು ಹೋಲುವ ಕಲ್ಲಿನ ವಿಗ್ರಹವೊಂದು ಪಶ್ಚಿಮ ಇರಾನ್ ದೇಶದ ಲೂರಿಸ್ಥಾನ ಎಂಬ ಪ್ರದೇಶದಲ್ಲಿ ಉತ್ಖನನದ ವೇಳೆ ಪತ್ತೆಯಾಗಿತ್ತು ಎಂದು ದಾಖಲಿಸಿದ್ದಾನೆ.  

ಆರ್‌. ಹೆಚ್‌. ಹೇರಾಸ್ ಅವರ ‘ದಿ ಪ್ರಾಬ್ಲಮ್ ಆಫ್ ಗಣಪತಿ’ ಕೃತಿಯನ್ನು ಉಲ್ಲೇಖಿಸುತ್ತ ಸಂಶೋಧಕ ಜಮುನಾದಾಸ್ ಭಕ್ತರ್ ಹೀಗೆ ಬರೆಯುತ್ತಾರೆ: "ಗಣೇಶ ಪೂಜೆ ಸುಮಾರು ಕ್ರಿ.ಪೂ. 1200 ವರ್ಷಗಳ ಹಿಂದೆ ಆಚರಣೆಯಲ್ಲಿತ್ತು. ಗುಪ್ತರ ಕಾಲದಲ್ಲಿಯೂ ಗಣೇಶ ಪೂಜೆ ನಡೆಯುತ್ತಿತ್ತು ಎಂಬುದಕ್ಕೆ ಉದಾಹರಣೆಗಳಿವೆ.  

ಆ ಕಾಲಘಟ್ಟದಲ್ಲಿ ದೊರೆತ ಎರಡು ಗಣೇಶ ವಿಗ್ರಹಗಳು ಕುಶಾನರ ಕಾಲದ್ದು ಎಂದು ಸಂಶೋಧಕರು ನಂಬುತ್ತಾರೆ. ಈ ವಿಗ್ರಹಗಳನ್ನು ಮಥುರಾ ನಗರದ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಈ ವಿಗ್ರಹಗಳನ್ನು ಸುಮಾರು ಕ್ರಿ.ಪೂ. 2-3ನೇ ಶತಮಾನದಲ್ಲಿ ಕೆತ್ತಿರಬಹುದೆಂಬುದು ವಿದ್ವಾಂಸರಾದ ವಾಸುದೇವ್ ಶರಣ್ ಅವರ ವಾದ.  

ಶಾತವಾಹನ, ರಾಷ್ಟ್ರಕೂಟ, ಚಾಲುಕ್ಯ ಹಾಗೂ ಪೇಶ್ವೆಗಳ ಕಾಲಘಟ್ಟದಲ್ಲಿ ಗಣೇಶ ಪೂಜೆ ನಡೆಯುತಿತ್ತು ಎಂಬುದು ಸ್ಪಷ್ಟವಾಗಿದೆ. ದಕ್ಷಿಣ ಭಾರತದ ಕೆಲವು ಕಡೆ ಗಣೇಶನಿಗೆ ‘ಪಿಳ್ಳೆಯಾರ್‌’ ಎಂದು ಕರೆಯಲಾಗುತ್ತದೆ. ಬಹುಶ: ಇದು ‘ಪಿಲುಸಾರದ’ ಶಬ್ದದ ವಿರೂಪಗೊಂಡ ರೂಪವಿರಬಹುದೆಂದು ಅನೇಕರು ನಂಬುತ್ತಾರೆ.  

ಮಹಾರಾಷ್ಟ್ರದ ಪೇಶ್ವೆಗಳ ಮನೆ ದೇವರು ಗಣೇಶ. ಗ್ವಾಲಿಯರ್ ರಾಜ ವಂಶಸ್ಥರು ಗಣೇಶ ಪೂಜೆಯನ್ನು ಪ್ರಾರಂಭಿಸದ್ದಕ್ಕೆ ದಾಖಲೆಗಳು ಲಭ್ಯವಿವೆ. ಕ್ರಿ.ಶ. 1890 ಪೂರ್ವಕ್ಕೂ ಗಣೇಶ ಪೂಜೆ ಕೇವಲ ಮನೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಗಣೇಶ ಪೂಜೆಗೆ ರಾಷ್ಟ್ರೀಯತೆಯ ಸ್ವರೂಪ ನೀಡಿದವರು ಬಾಲ ಗಂಗಾಧರ್ ತಿಲಕ್ ಅವರು. ಗ್ವಾಲಿಯರ್ ರಾಜ ವಂಶಸ್ಥರು ನಡೆಸುತ್ತಿದ್ದ ಗಣೇಶ ಪೂಜೆ, ಭಾರತದ ಮೇಲೆ ಆಗತೊಡಗಿದ್ದ ಪಾಶ್ಚಿಮಾತ್ಯ ಪ್ರಭಾವ, ಹಿಂದೂ-ಮುಸ್ಲಿಂ ದಂಗೆಗಳು ಹಾಗೂ ಸ್ವಾತಂತ್ರ್ಯಕ್ಕಾಗಿನ ಐಕ್ಯತೆಗಾಗಿ ಅವರು ಸಾರ್ವಜನಿಕವಾಗಿ ಕ್ರಿ.ಶ. 1890 ರಿಂದ ಗಣೇಶ ಪೂಜೆಯನ್ನು ಆರಂಭಿಸಿದರು.  

ಒಟ್ಟಾರೆಯಾಗಿ ಗಣೇಶನ ಹುಟ್ಟಿನಷ್ಟೇ ಆತನ ಪೂಜೆಯ ಇತಿಹಾಸವೂ ಸಂಕೀರ್ಣವಾಗಿದೆ. ಎಲ್ಲಾ ರೂಪದಲ್ಲಿಯೂ ನೋಡಬಹುದಾದ ಹಾಗೂ ಆರಾಧಿಸಬಹುದಾದ ದೇವತೆ ಗಣೇಶ ಎಂದು ಹೇಳಲಡ್ಡಿಯಿಲ್ಲ.  

- ಸಿ ವಿ ಚಂದ್ರಶೇಖರ್ 

 - * * * - 


ಸುದ್ದಿ ಓದಿ