ವಿಜಯಪುರ

ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಡಿ.12ರಂದು ’ದೆಹಲಿ ಚಲೋ’ ಕರೆ

ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಡಿ.12ರಂದು ’ದೆಹಲಿ ಚಲೋ’ ಕರೆ

ಲೋಕದರ್ಶನ ವರದಿ 

 ವಿಜಯಪುರ 30: ಉತ್ತರ ಕರ್ನಾಟಕದ ಗುಲ್ಬರ್ಗಾದ ಐವಾನ್ ಶಾಹಿ ಗೆಸ್ಟ್‌ ಹೌಸ್ನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಹಾಗೂ ನಿವೃತ್ತ ಸರ್ಕಾರಿ ನೌಕರರ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಯಿತು.  

ಕಾರ್ಯಾಗಾರದಲ್ಲಿ ರಾಜ್ಯಾಧ್ಯಕ್ಷ ಜೈಕುಮಾರ ಎಚ್‌.ಎಸ್‌. ಮಾತನಾಡಿ, ಎನ್ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವಂತೆ ಒತ್ತಾಯಿಸಿದರು. ಗುತ್ತಿಗೆ, ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರಿಗೆ ಖಾಯಂ ನೇಮಕಾತಿ ನೀಡಬೇಕು. ರಾಜ್ಯದಲ್ಲಿನ 2.80 ಲಕ್ಷ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.  

ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕು. ಕೋವಿಡ್ ಅವಧಿಯ 18 ತಿಂಗಳ ತುಟ್ಟಿಭತ್ಯೆ ಬಾಕಿಯನ್ನು ಬಿಡುಗಡೆ ಮಾಡಬೇಕು. ಶಿಕ್ಷಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 12ರಂದು ’ದೆಹಲಿ ಚಲೋ’ ಹೋರಾಟ ನಡೆಸುವುದಾಗಿ ಘೋಷಿಸಿದರು.  

ನಿವೃತ್ತ ನೌಕರರ ಸಂಘದ ಮುಖಂಡ ಗುರುಸಿದ್ದ ಮೂರ್ಥಿ ಮಾತನಾಡಿ, 2025ರ ಡಿಎ ಕಾಯ್ದೆ ಹಿಂಪಡೆಯಬೇಕು. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.  

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಸುರೇಶ್ ಜಿ.ಬಿ., ಚಂದ್ರಶೇಖರ ಲೇಂಡಿ, ಅಶೋಕ್ ಇಲಕಲ್, ದ್ರಾಕ್ಷಾಯಿಣಿ ಹುಡೆದ, ಈರಣ್ಣ ಹೊಸಟ್ಟಿ, ಎಂ.ಎಂ. ಪಾಟೀಲ, ವಿಜಯಕುಮಾರ, ಆರ್‌.ಎಸ್‌. ಮಿನಸಗಿ, ಜಿ.ಬಿ. ಅಂಗಡಿ ಸೇರಿದಂತೆ ಉತ್ತರ ಕರ್ನಾಟಕದ 80ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ