ವಿಜಯಪುರ

‘ಸಂವಹನ ಕೌಶಲ್ಯದಿಂದ ವೈದ್ಯಕೀಯ ವೃತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯ’

‘ಸಂವಹನ ಕೌಶಲ್ಯದಿಂದ ವೈದ್ಯಕೀಯ ವೃತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯ’

ವಿಜಯಪುರ 08: ಸರಿಯಾದ ಸಂವಹನ ಕೌಶಲ್ಯದಿಂದ ವೈದ್ಯಕೀಯ ವೃತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯ ಎಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವೈದ್ಯಕೀಯ ಅಧ್ಯಯನ ವಿಭಾಗದ ಸಂಯೋಜಕ ಡಾ. ಸಂಜಯ ನೀರಲಗಿ ಹೇಳಿದ್ದಾರೆ. 

ಶನಿವಾರ ನಗರದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ  ವೈದ್ಯಕೀಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ವೈದ್ಯಕೀಯ ವೃತ್ತಿಯಲ್ಲಿ ಸಂಹವನ ಕೌಶಲ್ಯದ ಮಹತ್ವ ಕುರಿತು ಅವರು ಅತಿಥಿ ಉಪನ್ಯಾಸ ನೀಡಿದರು. ಸಕ್ರಿಯವಾಗಿ ಆಲಿಸುವುದು, ಸ್ಪಷ್ಟವಾಗಿ ಮಾತನಾಡುವುದು, ಕರುಣೆ, ಸಹಾನುಭೂತಿ ತೋರಿಸುವುದು ಇಲ್ಲಿ ಮುಖ್ಯವಾಗಿವೆ.  ಅಷ್ಟೇ ಅಲ್ಲ, ಸರಿಯಾದ ದೇಹಭಾಷೆಯಿಂದ ರೋಗಿಗಳ ಮತ್ತು ಸಂಬಂಧಿಕರ ಆತ್ಮವಿಶ್ವಾಸವನ್ನು ಗೆಲ್ಲಬಹುದು.  ಸರಿಯಾದ ಸಂವಹನ ಕೌಶಲ್ಯದಿಂದ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಸಂಬಂಧಗಳನ್ನು ಬಲಪಡಿಸಲು ಮತ್ತು ವೈದ್ಯಕೀಯ ವೃತ್ತಿಯಲ್ಲಿ ಏಳ್ಗೆ ಹೊಂದಲು ಸಾಧ್ಯವಿದೆ ಎಂದು ಅವರು ಹೇಳಿದರು.  

ಇದೇ ವೇಳೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಮತ್ತು ಉದಾಹರಣೆಗಳೊಂದಿಗೆ ಅವರು ಪ್ರಾತ್ಯಕ್ಷಿಕವಾಗಿ ತಿಳಿಹೇಳಿದರು.  ಅಲ್ಲದೇ, ರೋಗಿಗಳ ಪರಿಣಾಮಕಾರಿ ಚಿಕಿತ್ಸೆಯಲ್ಲಿ ವೈದ್ಯರ ಜ್ಞಾನ ಭಂಡಾರ, ವೃತ್ತಿ ನೈಪುಣ್ಯತೆ ಜೊತೆಗೆ ಸಂವಹನ ಕೌಶಲ್ಯತೆಯೂ ಪ್ರಾಮುಖ್ಯತೆ ಹೊಂದಿದೆ ಎಂದು ಅವರು ಹೇಳಿದರು. 

ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಓಷಧಿಯಿಂದ ಗುಣಪಡಿಸಲಾಗದ ಕಾಯಿಲೆಗಳಿಗೆ ವೈದ್ಯರ ಸಹಾನುಭೂತಿಯ ಸಮಾಲೋಚನೆಯಿಂದ ರೋಗಿ ಮತ್ತು ರೋಗಿಗಳ ಸಂಬಂಧಿಕರನ್ನು ತೃಪ್ತಿ ಪಡಿಸಬಹುದು ಮತ್ತು ವೈದ್ಯೋನಾರಾಯಣೋ ಹರಿ  ಎಂಬ ಉಕ್ತಿಯಂತೆ ರೋಗಿಗಳು ವೈದ್ಯರಲ್ಲಿ ವಿಶ್ವಾಸ ಹೊಂದಲು ಸಂವಹನ ಕೌಶಲ್ಯ ತುಂಬಾ ಸಹಾಯಕಾರಿಯಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಡಾ. ಆನಂದ ಅಂಬಲಿ, ರೋಗನಿದಾನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ, ಪ್ರಾಧ್ಯಾಪಕರಾದ ಡಾ.ವಿಜಯಾ ಪಾಟೀಲ, ಡಾ. ರೇಖಾ ಬಿರಾದಾರ, ಡಾ. ಶ್ರವಣಕುಮಾರ ಉಪಸ್ಥಿತರಿದ್ದರು. ವೈದ್ಯಕೀಯ ಅಧ್ಯಯನ ವಿಭಾಗದ ಸಂಯೋಜಕ ಮತ್ತು ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರವೀಣ ಗಂಗನಹಳ್ಳಿ ಸ್ವಾಗತ, ಪರಿಚಯ ಮಾಡಿ ವಂದಿಸಿದರು. 


ಸುದ್ದಿ ಓದಿ