ಲೇಖನಗಳು

"ಈ ದೇಶದ ಇತಿಹಾಸ ಯಾರನ್ನು ಮೆರೆಸಿತು? ಯಾರನ್ನು ತುಳಿಯಿತು? ಎನ್ನುವುದನ್ನು ತಿಳಿಯುವದರಲ್ಲಿ ಬದುಕೇ ಮುಗಿಯುತ್ತದೆ" -ಸಾವರ್ಕರ ತಾತ್ಯಾನ ಕುರಿತು ಹೇಳಿದ ಮಾತು ಈ ಧೀರನಿಗೂ ಕೂಡ ಸಲ್ಲುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ

"ಈ ದೇಶದ ಇತಿಹಾಸ ಯಾರನ್ನು ಮೆರೆಸಿತು? ಯಾರನ್ನು ತುಳಿಯಿತು? ಎನ್ನುವುದನ್ನು ತಿಳಿಯುವದರಲ್ಲಿ ಬದುಕೇ ಮುಗಿಯುತ್ತದೆ" -ಸಾವರ್ಕರ ತಾತ್ಯಾನ ಕುರಿತು ಹೇಳಿದ ಮಾತು ಈ ಧೀರನಿಗೂ ಕೂಡ ಸಲ್ಲುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ

ನಾನು 1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಓದತ್ತಲಿದ್ದೆ. ಅದರಲ್ಲಿ ಬರೆದಂತ ಸಾಲುಗಳ ಆಳಕ್ಕೆ ಇಳಿತಯುತ್ತಲಿದ್ದೆ. ಸ್ವಾತಂತ್ರ್ಯದ ಗಂಗೆಯ ಒಡಲಿಗೆ ಧುಮುಕಿ ಈಜಾಡುತ್ತಿದ್ದೆ. ಏನದ್ಭುತ ಹೋರಾಟ ಅದು. ಸಾವಿಗಾಗಿ ಯಾರೂ ಅಂಜಲೇ ಇಲ್ಲ. ಬದುಕಿನ ಭಿಕ್ಷೆಯನ್ನು ಬೇಡುವ ಹೇಯ ಕಾರ್ಯಕ್ಕೆ ಯಾರೂ ಇಳಿಯಲೇ ಇಲ್ಲ. ಆದರೂ ನಾವು ಸೋತು ಹೋದೆವು. ಅದು ಹೇಗೆ ಇಷ್ಟು ಪರಾಕ್ರಮ ಹಾಗೂ ದೇಶಾಭಿಮಾನ ಮೈ ಮೆತ್ತಿಕೊಂಡು ಹೋರಾಡುತ್ತಿದ್ದ ನಮ್ಮ ಹೋರಾಟಗಾರರ ಸುಲಭವಾಗಿ ಸೋಲೊಪ್ಪಿಕೊಂಡರು? ಖಂಡಿತ ಇಲ್ಲ. ಇದು ಸುಲಭದ ಸೋಲಲ್ಲ. ಅದರ ಹಿಂದೆ ಕಾಣದ ಕೈಗಳು ಮಾಡಿದಂತ ಮೋಸ, ನೀಚತನ, ಸ್ವಾರ್ಥ ಸಾಧನೆ, ಕಿತ್ತು ತಿನ್ನುವ ಕಿರಾಕತನ, ಜೊತೆಯಲ್ಲಿಯೇ ಇದ್ದು ಬೆನ್ನಿಗೆ ಚೂರಿ ಹಾಕುವ ಹೊಲಸುತನದ ಹೊರತು ಬೇರೇನು ಇಲ್ಲಿ ಇಲ್ಲವೇ ಇಲ್ಲ. ಅಂದವರು ಮಾಡಿದ ಮೋಸಕ್ಕೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವೇ ಎಕ್ಕುಟ್ಟು ಹೋಯಿತು. ಹೆದರಿ ಓಡಬೇಕೆಂದುಕೊಂಡ ಕೆಂಪು ಕುನ್ನಿಗಳು ಇನ್ನೂ ಇಲ್ಲೇ ಇರೋಣ ಎನ್ನುವ ನಿರ್ಧಾರಕ್ಕೆ ಬಂದರು. ಹತಭಾಗ್ಯದ ಹೋರಾಟಗಾರರು ಇತಿಹಾಸದಲ್ಲಿ ಮರಿಚಿಕೆ ಆಗಿ ಹೋಗಿ; ಇನ್ಯಾರೋ ಈ ದೇಶವನ್ನು ಆಳುವುದಕ್ಕೆ ಸಿದ್ಧರಾದರೆ; ಇನ್ಯಾರಾ​‍್ಯರೋ ಅದರ ಲಾಭ ಪಡೆದುಕೊಂಡು ಕೃತಾರ್ಥರಾದರು. ಹೀಗೆ ಓದುತ್ತ ಮುಂದೆ ಹೆಜ್ಜೆ ಹಾಕುತ್ತಲೇ ಮನದಲ್ಲಿ ಮಿಂಚು ಹೊಡೆದ ಅನುಭವ, ಕಣ್ಣಿಗೆ ಕಾರ್ಗತ್ತಲೆ, ಏನಿದು ಈ ವ್ಯಕ್ತಿ ಹೀಗೆ ಉಲ್ಲೇಖಿಸುತ್ತಿದ್ದಾರಲ್ಲ ಎನ್ನುವ ಕುತೂಹಲ. ಅದರ ಮಧ್ಯದಲ್ಲಿ  ನಾನು ಆ ಮಹಾನ್ ದೇಶಪ್ರೇಮಿಯ ಬರವಣಿಗೆಯಲ್ಲರಳಿದ ಅಪ್ಪಟ ದೇಶಾಭಿಮಾನದ ಸಾಲುಗಳನ್ನು ಓದುತ್ತಲಿದ್ದಾಗ ನನ್ನಲ್ಲೇ ನಾನು ಕಳೆದು ಹೋಗಿದ್ದೆ. ಅದರಲ್ಲೂ ಆ ದೇಶಭಿಮಾನಿ ತಾತ್ಯಾ ಟೋಪಿಯ ಕುರಿತು ಓದುವಾಗಲಂತೂ ಕರಳು ಹಿಂಡಿದಂತ ವೇದನೆಯಾಗುತ್ತಿತ್ತು. 

“ತಾತ್ಯಾ ಈ ದೌರ್ಭಾಗ್ಯಪೂರ್ಣ ದೇಶದಲ್ಲಿ ಯಾಕೆ ಹುಟ್ಟಿದಿ? 

ನೀನು ಇಲ್ಲಿ ಹುಟ್ಟುವ ಬದಲು 

ಜಪಾನಿನಲ್ಲೋ ಜರ್ಮನಿಯಲ್ಲೋ ಹುಟ್ಟಿದ್ದಿದ್ದರೆ 

ನಿನ್ನನ್ನು ಗುಡಿ ಕಟ್ಟಿ ಪೂಜಿಸುತ್ತಿದ್ದರು” 

ಎಂದು ವೇದನೆಯಿಂದ ವಿನಾಯಕ ದಾಮೋದರ ಸಾವರ್ಕರ ತಾತ್ಯಾನನ್ನು ನೆನದು ಹತಾಸೆ ವ್ಯಕ್ತ ಪಡಿಸಿದ ಸಾಲುಗಳು ಅಂಬಿನಂತೆ ನನ್ನೆದೆಯನ್ನು ಘಾಸಿ ಮಾಡಿದವು. ದೇಶಕ್ಕಾಗಿ ಸರ್ವಸ್ವವನ್ನು ಅರ​‍್ಿಸಿದ ಮಹಾನ್ ಯೋಧರ ಕುರಿತು, ನಾವು ನಡೆದುಕೊಳ್ಳುವ ರೀತಿಯ ಕುರಿತು ನೆನಪಾಗಿ ನೋವು ಮಡುಗಟ್ಟಿದಂತಾಯಿತು. ಸುಮ್ಮನೇ ಶೂನ್ಯಕ್ಕೆ ಜಾರಿ ಕಣ್ಣುಮುಚ್ಚಿ ಕುಳಿತು ಈ ದೇಶದ ಇತಿಹಾಸ ವಾಸ್ತವದ ಸ್ಥಿತಿ ಮುಂದಿನ ಭವಿಷ್ಯ ಕಣ್ಣೆದುರು ಬಂದು ಹೃದಯ ಕಂಪಿಸಿದ ಅನುಭವವಾಯಿತು. ಸ್ವಲ್ಪ ಹೊತ್ತು ಕೂತ ಭಂಗಿಯಿಂದ ಕದಲಲೇ ಇಲ್ಲ. ಅವಾಗ ಇದ್ದಕ್ಕಿದ್ದಂತೆ ್ಲ ತಾತ್ಯಾನ ಜಾಗದಲ್ಲಿ ನನ್ನ ಕಣ್ಣಿಗೆ ಮತ್ತೊಬ್ಬ ಯೋಧನ ಮುಖ ಗೋಚರಿಸತೊಡಗಿತು. ಅಂದು ತಾತ್ಯಾಟೋಪಿಯನ್ನು ಮರೆತ ನಾವುಗಳು ಇಂದು ವ್ಯವಸ್ಥೆಯ ಪಿತೂರಿಯಲ್ಲಿ, ಸತ್ತ ನಂತರವೂ ಕೂಡ ಸುಳ್ಳಲ್ಲಿಯಾದರೂ ಶಾಶ್ವತವಾಗಿ ಉಳಿದರಾಯಿತು ಎನ್ನುವ ಹೇಯ ಮನಸ್ಸಿನವರ ಪೂರ್ವ ನಿಯೋಜಿತ ಸಂಚಲ್ಲಿ, ಸತ್ಯ ಮರೆ ಮಾಚಿ ರಚಿಸಿದ ಸುಳ್ಳಿನ ಇತಿಹಾಸದಲ್ಲಿ ಮತ್ತೊಬ್ಬ ಮಹಾಯೋಧನನ್ನು, ಇಡೀ ಸೂರ್ಯ ಮುಳಗದ ಸಾಮ್ರಾಜ್ಯವನ್ನೇ ಗಡಗಡ ನಡುಗಸಿದ ಬಿರುಗಾಳಿಯನ್ನು, ದೇಶಕ್ಕಾಗಿ ರಕ್ತ ಕೊಡಿ ಎಂದ ಆ ಪರಾಕ್ರಮಶಾಲಿಯನ್ನು ಸಹ ತಾತ್ಯಾನ ಸಾಲಿನಲ್ಲಿಯೇ ಸೇರಿಸಿ ಮರೆತು ಬಿಟ್ಟೆವಾ ಎನ್ನುವ ನೋವು ನನ್ನನ್ನು ಇನ್ನಿಲ್ಲದಂತೆ ಕಾಡಿ ಕಂಗೆಡಿಸಿ ಬಿಟ್ಟಿತು. ಅಧಿಕಾರದ ಆಸೆಯಿಂದ ಹಾಗೂ ಸಾಮ್ರಾಜ್ಯದ ವಿಸ್ತರಣೆಯ ದುರಾಶೆಯ ದಾಹದಿಂದ ಲಗ್ಗೆ ಇಟ್ಟವರನ್ನು ಹೆಮ್ಮೆಯಿಂದ ಉಲ್ಲೇಖ ಮಾಡುತ್ತೇವೆ. ‘ಅಲೇಕ್ಸಾಂಡರ್ ದಿ ಗ್ರೇಟ್‌’ ಎಂದು ಉಲ್ಲೇಖಿಸಿ ಪಾಠಮಾಡುತ್ತೇವೆ. ಆದರೆ ಇಡೀ ದೇಶವೇ ದಾಸ್ಯದ ಮದಿರೆಯ ನಶೆಯಲ್ಲಿದ್ದಾಗ ಸಿಡಿದೆದ್ದ ಸಾಮ್ರಾಟನನ್ನು ನಾವಿಂದು ಮರೆತು ಬಿಟ್ಟಿದ್ದೇವೆ. ದಾಸ್ಯದಿಂದ ಬಿಡುಗಡೆ ಹೊಂದಲು ಮನವಿ ಪತ್ರಗಳಿಂದ ಸಾಧ್ಯವಾಗುವುದಿಲ್ಲ ಎನ್ನುವ ಸತ್ಯವನ್ನರಿತು ಹುಮ್ಮಸ್ಸಿನ ದೇಶಾಭಿಮಾನಿ ಪಡೆಯನ್ನೇ ಕಟ್ಟಿದ ಆ ಸಮರ ಸೇನಾನಿಯನ್ನು ನಾವ್ಯಾವತ್ತು “ಸುಭಾಶ್ಚಂದ್ರ ದಿ ಗ್ರೇಟ್‌” ಎಂದು ಹೇಳಲೇ ಇಲ್ಲ. ಕಾರಣ ಆತನ ಕುರಿತು ನಮಗೆ ಪೂರ್ಣ ಪ್ರಮಾಣದಲ್ಲಿ ತಿಳಿಸುವ ಕಾರ್ಯವನ್ನು ಮಾಡದಂತೆ ಮಾಡಿದ ಪೂರ್ವ ನಿಯೋಜಿತ ಸಂಚಿನ ಪ್ರತಿಫಲ. ಅದೇ ಸಾರ್ವಕರ ಉಲ್ಲೇಖಿಸಿದ ತಾತ್ಯಾ ಟೋಪಿಯಂತೆ ಸುಭಾಶ್ಚಂದ್ರ ಬೋಸರಂತ ದೀಮಂತ ನಾಯಕ ಹತಭಾಗ್ಯ ಭಾರತದಲ್ಲಿ ಹುಟ್ಟುವ ಬದಲು ಅದೇ ಇಂಗ್ಲಂಡೋ, ಜರ್ಮನಿಯೋ, ಜಪಾನಿನಲ್ಲೋ ಹುಟ್ಟಿದ್ದರೆ ಅವನಿಗಾಗಿ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ಬರೀ ಪ್ರತಿಮೆಯಲ್ಲ ಬದಲಿಗೆ ಅವನಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸಿ ಬಿಡುತ್ತಿದ್ದರು. ಆದರೆ ಇಂದು ಕಣ್ಮರೆಯಾದ ಆ ಭಾರತ ಮಾತೆಯ ಕಂದನನ್ನು ನೆನಪಿಸುವ ಕನಿಷ್ಠ ಕಾರ್ಯವು ಸಹ ನಡೆಯುತ್ತಿಲ್ಲ ಎನ್ನುವುದೇ ನನ್ನನ್ನು ಇನ್ನಷ್ಟು ಕಾಡುತ್ತಿದೆ. ಅಂದು ಭಾರತ ಮಾತೆಯ ಮುಕ್ತಿಯ ಹೆಸರಲ್ಲಿ ಬರೀ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೇಸ್ ಎದುರಿಗೆ ದಿಟ್ಟ ಸವಾಲಾಗಿ, ಬ್ರಿಟೀಶ ಆಡಳಿತಕ್ಕೆ ತಕ್ಕ ಜವಾಬಾಗಿ ಕಾಣಿಸಿಕೊಂಡ ಆ ಮಹಾನಾಯಕ ಇಂದು ಇತಿಹಾಸದಲ್ಲಿ ಮಿಂಚಿ ಮರೆಯಾದ ದೃವತಾರೆಯಾಗಿ ಬಿಟ್ಟಿದ್ದಾನೆ. 

 ಗುಲಾಮಗಿರಿಯನ್ನೇ ಮೈಗೂಡಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಅಂಗಲಾಚುತ್ತಿದ್ದವರನ್ನು ಕಂಡು ಮರುಗಿದ ಆ ಮಹಾನ್ ಸೇನಾನಿ ಶತ್ರುಗಳೆದುರು ತೊಡೆ ತಟ್ಟಿ ನಿಂತ. ಒಂದು ಕೆನ್ನೆಗೆ ಬಾರಿಸಿದವರಿಗೆ ಮತ್ತೊಂದು ಕೆನ್ನೆ ನೀಡಿ ಎನ್ನುವ ಸಿದ್ಧಾಂತವನ್ನು ಧಿಕ್ಕರಿಸಿ ಬಾರಿಸಿದವರ ತಲೆಯನ್ನೇ ಎಗರಿಸಲು ಸನ್ನದ್ಧವಾಗಿ ಬಿಟ್ಟಿದ್ದ. ಮುಳ್ಳನ್ನು ಮುಳ್ಳಲ್ಲೇ ತೆಗೆಯಬೇಕು ಬಂದುಕಿಗೆ ಪ್ರತಿಯಾಗಿ ಬಂದುಕಿನಿಂದಲೇ ಉತ್ತರಿಸಬೇಕು ಎನ್ನುವ ಈತನ ನಿಲುವನ್ನು ಕಂಡೇ ಆಂಗ್ಲರ ಪಡೆ ತತ್ತರಿಸಿ ಬಿಟ್ಟಿತ್ತು. ಇಡೀ ಜಗತ್ತನ್ನೇ ವಸಾಹತುವನ್ನಾಗಿ ಆಳ್ವಿಕೆ ಮಾಡುತ್ತ ಎದೆಯುಬ್ಬಿಸಿ ನಡೆಯುತ್ತಿದ್ದವರ ಎದೆಗೆ ಒದ್ದು ಬುದ್ದಿ ಕಲಿಸುವ ಬಲಶಾಲಿಯ ದರ್ಶನದಿಂದ ಪಾಶ್ಚಾತ್ಯರು ಅಕ್ಷರಶಃ ಕನಲಿ ಕಂಗೆಟ್ಟು ಹೋಗಿದ್ದರು. ಆ ವ್ಯಕ್ತಿಯ ಹೆಸರನ್ನು ಕನಸಿನಲ್ಲಿ ಕೇಳಿದರೂ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಆ ಬಲಶಾಲಿ ಶತ್ರುಗಳ ಮೇಲೆ ತನ್ನ ದೃಷ್ಠಿ ನೆಟ್ಟು ಬಿಟ್ಟಿದ್ದ. ಭಾರತಾಂಬೆಯ ಮುಕ್ತಿಗಾಗಿ ಯುದ್ಧ ಖೈದಿಗಳು ಸೇರಿದಂತೆ ಸರಿ ಸುಮಾರು ಇಪ್ಪತ್ತು ಲಕ್ಷ ಸೈನಿಕರನ್ನು ಸನ್ನದ್ದು ಗೊಳಿಸಿ ಆಜಾದ್ ಹಿಂದ್ ಫೌಜ್‌ನ್ನು ನಿರ್ಮಾಣ ಮಾಡಿದ್ದು ಸಾಮಾನ್ಯ ಮಾತೆ? ಅದು ತಾನು ಹುಟ್ಟಿ ಬೆಳೆದ ತನ್ನ ದೇಶದಲ್ಲಲ್ಲ. ಬೇರೆ ಬೇರೆ ದೇಶಗಳಿಗೆ ಹೋಗಿ ಶತ್ರುವಿನ ಶತ್ರು ಮಿತ್ರ ಎನ್ನುವ ಚಾಣಕ್ಯನ ತಂತ್ರವನ್ನಿಟ್ಟುಕೊಂಡು ಪ್ರಳಯಾಂತಕ ಪಡೆಯನ್ನೇ ಸನ್ನದ್ದು ಮಾಡಿದ್ದ ಇಂಥ ಕ್ರಾಂತಿಯ ಕಥೆ ಜಗತ್ತಿನ ಯಾವುದೇ ದೇಶದ ಚರಿತ್ರೆಯ ಪುಟದಲ್ಲೂ ಮತ್ತೊಂದು ದಾಖಲಾಗುವುದಿಲ್ಲ. ಅಂಥಹ ಸಾಹಸ ಭಾರತ ಮಾತೆಯ ಮಕ್ಕಳಿಗಲ್ಲದೇ ಬೇರಾ​‍್ಯರಿಂದಲೂ ಬರಲೂ ಸಾಧ್ಯವೇ ಇಲ್ಲ. ಅದಕ್ಕೆ ಭಾರತ ಮಾತೆಯನ್ನು ರತ್ನಗರ್ಭ ಭಾರತಿ ಎಂದು ಕರೆಯವುದು. ನೆಹರು ಅವರಾದಿಯಾಗಿ ಎಷ್ಟೋ ಜನ ಐಸಿಎಸ್ ಪರಿಕ್ಷೆ ಬರೆಯಲು ಪ್ರಯತ್ನಿಸಿ ವಿಫಲರಾದರೆ; ಒಂದೇ ಪ್ರಯತ್ನದಲ್ಲಿ ಅದೂ ಕೇವಲ ಎಂಟು ತಿಂಗಳಲ್ಲಿ ಓದಿ ನಾಲ್ಕನೇ ರಾ​‍್ಯಂಕ್ ಪಡೆದುಕೊಂಡರೂ ಸಹ ವಿದೇಶಿ ಸರ್ಕಾರದ ಗುಲಾಮಿ ಕೆಲಸ ಕಸಕ್ಕೆ ಸಮ ಎಂದು ತಿರಸ್ಕರಿಸುವ ಅವರ ನಿಲುವನ್ನು ಕಂಡಾಗ ಅವರಲ್ಲಿನ ದೇಶಭಕ್ತಿ ಅರ್ಥವಾಗುತ್ತದೆ. 

 ಭಾರತ ದೇಶದ ಸ್ವಾತಂತ್ರ್ಯಗಂಗೆಗೆ ಸಾವಿರ ತೊರೆಗಳು ಎನ್ನುವ ಮಾತಿದೆ. ಆದರೆ ಎಲ್ಲವು ತೊರೆಗಳಾದರೆ ಸುಭಾಶ್ಚಂದ್ರರು ಮಾತ್ರ ಉಕ್ಕಿ ಹರಿಯುವ ಮಹಾ ಪ್ರವಾಹ. ಇಡೀ ದೇಶವೇ ಶಾಂತಿಮಂತ್ರಕ್ಕೆ ಶರಣಾದ ಸಂದರ್ಭದಲ್ಲಿ ಕ್ರಾಂತಿಯ ಖಡ್ಗವನ್ನು ಹಿಡಿದು ಹೋರಾಟಕ್ಕೀಳಿದಿದ್ದು ಈ ಪ್ರವಾಹದ ಆರ್ಭಟವನ್ನು ಎತ್ತಿ ತೋರಿಸುತ್ತದೆ. ಶಾಂತಿಯ ಧಾತ ಮಹಾತ್ಮಾ ಗಾಂಧಿಯವರ ವಿಚಾರಗಳು ಹಾಗೂ ಬೋಸರ ವಿಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿದ್ದರೂ ಸಹ ಗಾಂಧೀಯನ್ನು ಸುಭಾಸರು ಅತ್ಯಂತ ಗೌರವದಿಂದ ಕಾಣುತ್ತಿದ್ದರು ಮಾತ್ರವಲ್ಲ ಅವರನ್ನು ರಾಷ್ಟ್ರಪಿತ ಎಂದು ಆರಧಿಸುತ್ತಿದ್ದರು. ಒಂದು ಬಾರಿ ಅಂದರೆ; 1929ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೋಸರು ಸ್ಪರ್ಧಿಸಿದ್ದು ಮಹಾತ್ಮಾಗಾಂಧೀಜಿಗೆ ಇಷ್ಟವಾಗಲಿಲ್ಲ. ಕ್ರಾಂತಿಯ ನಿಲುವಿನಿಂದ ಬಂದ ಬೋಸರು ಈ ಸ್ಥಾನ ಅಲಂಕರಿಸುವುದು ಮಾರಕವಾದ ಬೆಳವಣಿಗೆ ಎಂದು ಬೋಸರ ವಿರುದ್ಧ ಪಟ್ಟಾಭಿ ಸೀತಾರಾಮಯ್ಯನವರನ್ನು ಕಣಕ್ಕಿಳಿಸಿ ಸೀತಾರಾಮಯ್ಯನವರ ಸೋಲು ಸ್ವತಃ ತನ್ನ ಸೋಲು; ಅಂದರೆ ಗಾಂಧೀಜಿಯ ಸೋಲು ಎಂದು ಕರೆಕೊಟ್ಟರು. ಆದರೂ ಸೀತಾರಾಮಯ್ಯ ಹೀನಾಯವಾಗಿ ಸೋತರು ಈ ಸೋಲನ್ನು ಒಪ್ಪದ ಗಾಂಧೀ ಪಕ್ಷ ತೊರೆಯುವ ಬೆದರಿಕೆ ಒಡ್ಡಿ ಸ್ವತಃ ಈ ಬೋಸರೆ ಪಕ್ಷದಿಂದ ಹೊರ ಬರುವಂತೆ ಮಾಡಿದರು. ಇದಾದ ಮೇಲೂ ಸಹ ಬೋಸರು ಗಾಂಧಿಯವರನ್ನು ಯಾವತ್ತು ದ್ವೇಶಿಸದೇ ಸದಾ ಗೌರವದಿಂದಲೇ ಕಂಡರು. ತಾನು ಸ್ಥಾಪಿಸಿದ ಆಝಾದ ಹಿಂದ್ ಪೌಜ್ ಸೈನ್ಯದ ತುಕಡಿಗೆ ಮಹಾತ್ಮ ಗಾಂಧೀ ಹೆಸರನ್ನು ಇಡುವ ಮೂಲಕ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದರು. ಇದರಿಂದಾಗಿಯೇ ಯಾವುದೇ ಸ್ವಾತಂತ್ರ್ಯ ಹೋರಾಟಗಾರ ಮಾಡಲಾಗದ ಆ ಮಹಾನ್ ಕಾರ್ಯವನ್ನು ಈ ದಿಟ್ಟ ಹೋರಾಟಗಾರ ಮಾಡಿ ತೋರಿಸಿದ್ದು. ಇವೆಲ್ಲ ಘ

ಟನೆಗಳು ಅವರ ವ್ಯಕ್ತಿಕ್ಕೆ ಒದಗಿಸುವ ಸಾಕ್ಷ್ಯಗಳಾಗಿವೆ. 

“ಗಾಜಿಯೋ ಮೇ ಬೂರಹೆಗೀ ಜಬ್‌ತಕ್ ಇಮಾನ್ ಕೀ 

ತಬ್ ತೋ ಲಂಡನ್ ತಕ್ ಚಲೇಗೀ ತೇಗ್ ಹಿಂದುಸ್ಥಾನ್ ಕಿ” 

“ಭಾರತದ ಸ್ವಾತಂತ್ರ್ಯದ ಹೋರಾಟಗಾರರ ಅಂತರಂದಲ್ಲಿ ಕಟ್ಟ ಕಡೆಯ ತುಣುಕಿನಷ್ಟು ವಿಶ್ವಾಸ ಇರುವವರೆಗೆ ಹಿಂದೂಸ್ಥಾನದ ಖಡ್ಗ ಲಂಡನ್ನಿನ ಬಸಿರನ್ನು ಬೇಧಿಸಲು ಮುಂದೆ ಸಾಗುತ್ತಿರುತ್ತದೆ” ಎನ್ನುವ ಬಹುದ್ದೂರ ಶಹನ ದ್ವೀಪದಿಯನ್ನು ಪ್ರತಿಕ್ಷಣ ಲಾಂಛನಧ್ವನಿಯಾಗಿ ಬಳಸುತ್ತ ಸೇನೆಯನ್ನು ಸನ್ನದ್ದುಗೊಳಿಸುತ್ತಿದ್ದ ಸುಭಾಶ್ಚಂದ್ರರ ಅಚಲ ನಿಲುವನ್ನು ಕಂಡರೆ ಎಂಥವರಲ್ಲಿಯೂ ದೇಶಾಭಿಮಾನ ಮೈಮೆತ್ತಿ ಮೆರೆಯುತ್ತಿತ್ತು. ಭಾರತ ಸಿಡಿಲ ಸನ್ಯಾಸಿ ವಿವೇಕಾನಂದ ಹಾಗೂ ಮಹಾತ್ಮ ಅರವಿಂದ ಘೋಷ್‌ರ ಆಧ್ಯಾತ್ಮದಿಂದ ಪ್ರಭಾವಿತರಾಗಿದ್ದ ಸುಭಾಶ್ ನಿಶ್ಚಲ ಮನಸ್ಸನ್ನು ಪಡೆದುಕೊಂಡಿದ್ದರು. ವಿವೇಕಾನಂದರ ಆತ್ಮವಿಶ್ವಾದ ನುಡಿಗಳು ಹೊತ್ತಿಸುತ್ತಿದ್ದ ದೇಶಾಭಿಮಾನದ ಕಿಡಿಯನ್ನು ಎಳೆಯ ವಯಸ್ಸಿನಲ್ಲಿಯೇ ಬಲ್ಲವರಾಗಿದ್ದ ಅವರು ದೇಶಾಭಿಮಾನ ಎನ್ನುವುದು ಕೇವಲ ಆಡುವ ಮಾತಿನಲ್ಲಿರದೇ ರಕ್ತದ ಕಣದಲ್ಲೂ ಇರಬೇಕು ಎನ್ನುವ ನುಡಿಗಳಿಂದ ಪ್ರೇರಿತರಾಗಿಯೇ ಸಿಡಿಮದ್ದಿನ ಹೋರಾಟಕ್ಕೆ ಶುರುವಿಟ್ಟುಕೊಂಡಿದ್ದು. ಇದು ಅವರಲ್ಲಿನ ದೃಢತೆಯನ್ನು ಎತ್ತಿ ತೋರಿಸುತ್ತದೆ. 

“ತೇರಿ ಹಿಮ್ಮತ ಬಢತೀ ರಹೇ 

ಖುದಾ ತೇರೀ ಸುನ್‌ತಾ ರಹೇ 

ಜೋ ಸಾಮನೇ ತೇರೇ ಚಢೆ 

ತೂ ಖಾಕ್ ಮೇ ಮಿಲಾಯೇ ಜಾ 

ಕದಂ ಕದಂ ಬಡಾಯೇ ಜಾ 

ಖುಶೀ ಕಾ ಗೀತ್ ಗಾಯೇಜಾ 

ಯಹ ಜಿಂದಗಿ ಹೈ ಕೌಮ್ ಕೀ 

ತೂ ಕೌಮ್ ಪೇ ಲುಟಾಯೇಜಾ” 

ಎನ್ನುವ ಸಂಚಲನ ಗೀತೆಯ ಮೂಲಕ ಭಾರತದ ಕ್ಷಾತ್ರ ಪರಂಪರೆಯನ್ನು ಎತ್ತಿ ಹಿಡಿದಿದ್ದು ಈ ಆಧುನಿಕ ಯುಗದ ಶೂರ ಸೇನಾನಿ. ಪ್ರಕಟಣೆಗೂ ಮುನ್ನವೇ ಎರಡೆರೆಡು ದೇಶದಲ್ಲಿ ನಿಷೇಧಕ್ಕೆ ಒಳಗಾದ ವೀರ ಸಾವರಕರ್ ಅವರ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಕೃತಿಯನ್ನು ಐಎನ್‌ಎ ಯ ಭಗವದ್ಗಿತೆಯನ್ನಾಗಿ ಮಾಡಿಕೊಂಡು ವಿದೇಶದಿಂದಲೇ ಘರ್ಜನೆ ಆರಂಭಿಸಿದರು. ಇವರ ಸೈನ್ಯದ ಆರ್ಭಟ ಹೇಗಿತ್ತು ಎಂದರೆ “ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ: ಅದು ನಾವು ಪಡೆದುಕೊಳ್ಳಬೇಕಾದದ್ದು” ಎಂದು ಸುಭಾಷ ಗುಡುಗಿದರೆ ಬ್ರಿಟೀಷರು ನಡುಗಿದರು. ಸುಭಾಷ್‌ರ ಸಿದ್ಧಾಂತಕ್ಕೆ ಸೊಪ್ಪು ಹಾಕದ ಕಾಂಗ್ರೇಸ್ ನಿಂತಲ್ಲೆ ಕುಸಿದರು. ಅದರ ಹೊಡೆತ ಎಷ್ಟು ಜೋರಾಗಿತ್ತೆಂದರೆ ನಾಯಕತ್ವಕ್ಕಾಗಿ ಸದಾ ಬಡಿದಾಡುತ್ತಿದ್ದ ನೆಹರು ಈ ಬಾರಿ ನಮ್ಮವರ ವಿರುದ್ಧವೇ ಕರೆಕೊಟ್ಟುಬಿಟ್ಟರು. “ಸುಭಾಷ್‌ಚಂದ್ರ ಬೋಸ ಏನಾದರು ತಮ್ಮ ಸೈನ್ಯದೊಂದಿಗೆ ಬ್ರಿಟೀಷರ ಮೇಲೆ ಯುದ್ಧಕ್ಕೆ ಬಂದರೆ ಸ್ವತಃ ನಾನೇ ಅವರ ವಿರುದ್ಧ ಕತ್ತಿಯನ್ನು ಹಿಡಿದು ಹೋರಾಟಕ್ಕಿಳಿಯುತ್ತೇನೆ” ಎನ್ನುವ ಮೂಲಕ ತಮ್ಮ ಅಸಮಾಧಾನದ ಹಾಗೂ ಹೇಯ ಮನಸ್ಸಿನ ಪರಿಚಯ ಮಾಡಿಸಿ ಬಿಟ್ಟರು. ಇಡೀ ಬ್ರಿಟೀಷ್ ಸಾಮ್ರಜ್ಯವೇ ನಮ್ಮನ್ನು ಬೂಟುಗಾಲಿನಿಂದ ಒದೆಯುತ್ತಿದ್ದರು ಸಹ ಅವರ ವಿರುದ್ಧ ಒಂದೇ ಒಂದು ಹುಲ್ಲುಕಡ್ಡಿ ಎತ್ತದ ನೆಹರು ನಮ್ಮ ದೇಶಕ್ಕಾಗಿ ಕತ್ತಿ ಹಿಡಿದ ನಮ್ಮವರ ಮೇಲೆ ಹೋರಾಟ ಮಾಡುತ್ತೇನೆ ಎನ್ನುವ ಮೂಲಕ ಉತ್ತರಕುಮಾರನ ಪೌರುಷವನ್ನು ಮತ್ತೋಮ್ಮೆ ಮೆರೆದು ಬಿಟ್ಟಿದ್ದು ನಿಜಕ್ಕೂ ಅಸಹ್ಯವೆನಿಸುತ್ತದೆ. ಆದರೂ ನೆಹರುರ ಮೇಲೆ ಅಸೂಹೆ ವ್ಯಕ್ತ ಪಡಿಸದ ಸುಭಾಷ್ ತಮ್ಮ ಸೈನ್ಯದ ಇನ್ನೊಂದು ತುಕಡಿಗೆ ನೆಹರು ಹೆಸರಿಟ್ಟು ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಮಾಡಿದರು. ಇದು ಆ ಕೆಚ್ಚೆದೆಯ ಕಲಿಯ ಹೋರಾಟದ ಹಾದಿ. ದಿಲ್ಲಿ ಚಲೋ ಎಂದು ಹೊರಟ ಸೈನ್ಯ ಮೊದಲು ಅಂಡಮಾನ್ ಮತ್ತು ನಿಕೋಬಾರ್‌ಗಳನ್ನು ವಶಪಡಿಸಿಕೊಂಡು ಅದಕ್ಕೆ ಶಹೀದ್ ಮತ್ತು ಸ್ವರಾಜ್ ಎನ್ನುವ ಹೆಸರನ್ನು ನೀಡಿ ಸ್ವಾತಂತ್ರ್ಯ ಘೋಷಿಸಿತು. ಆದರೆ ಅದನ್ನು ಉಳಿಸಿದರೆ ಬೋಸರ ಹೆಸರು ಬೆಳೆದಂತಾಗುತ್ತದೆ ಎನ್ನುವ ದೃಷ್ಠಿಯಿಂದ ವ್ಯವಸ್ಥಿತವಾಗಿ ಅವುಗಳ ಹೆಸರನ್ನು ಮತ್ತೇ ಹಳೆಯದಾಗಿಯೇ ಉಳಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾದ ನಗ್ನಸತ್ಯವಾಗಿದೆ. 

ಇದು ಕೇವಲ ಬೋಸರ ಕಥೆಯಲ್ಲ. ಅವರು ಸ್ಥಾಪಿಸಿದ ಆಜಾದ್ ಹಿಂದ್ ಪೌಜ್‌ನ ಕಥೆಯಲ್ಲ. ಬದಲಿಗೆ ನಿಜವಾದ ದೇಶಭಕ್ತರಿಗೆ ನಾವುಗಳು ಮಾಡಿದ ಅನ್ಯಾಯದ ಕರ್ಮಕಾಂಡ ಇದು. ಬೋಸರ ಸಾವು ಹೇಗೆ ರಹಸ್ಯವಾಗಿ ಉಳಿಯಿತೋ ಅವರ ಹೆಸರು ಹಾಗೂ ಸಾಧನೆಗಳನ್ನು ಸಹ ರಹಸ್ಯವಾಗಿಸುವ ಸಂಚನ್ನು ನಮ್ಮವರು ಮಾಡುವ ಮೂಲಕ ಮತ್ತೋಬ್ಬ ದೇಶಭಕ್ತನನ್ನು ಇತಿಹಾಸದಲ್ಲಿ ಮಣ್ಣುಮುಚ್ಚಲು ನೋಡಿದ್ದಾರೆ. ತಾವುಗಳು ಇನ್ನೋಬ್ಬರ ಸಹಾಯವನ್ನು ಪಡೆದು ಬೆಳಗುವ ನಕ್ಷತ್ರಗಳಂತೆ ಘೋಚರಿಸಿ ಸ್ವಯಂ ಪ್ರಕಾಶಿಸುವ ಸೂರ್ಯನನ್ನು ಮರೆ ಮಾಚಲು ಯತ್ನಿಸಿರುವುದು ಇಂದು ಜಗಜ್ಜಾಹೀರ. ಇದು ಎಂದಾದರೂ ಸಾಧ್ಯವಾಗುತ್ತದೆಯೇ? ಖಂಡಿತ ಇಲ್ಲ. ಸತ್ಯ ಯಾವತ್ತಿದ್ದರು ಸತ್ಯವೇ. ಇಂದು ಶಾಂತಿ ಹಾಗೂ ಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯ ಲಭಿಸಿದೆ ಎಂದು ಹೇಳಿಕೊಂಡು ಹೋಗುವವರು ಸಾಕಷ್ಟು ಜನ ಇದ್ದಾರೆ. ಹೋರಾಟ ಸುಳ್ಳೇಂದು ಹೇಳುವ ಹೇಯ ಮನಸ್ಸು ನನ್ನದಲ.್ಲ ಆದರೆ ಬ್ರಿಟೀಷರು ಬೆಂಡಾಗಿದ್ದು ಸತ್ಯಾಗ್ರಹಕ್ಕಲ್ಲ ಬದಲಿಗೆ ನಾವು ಒದೆಯುತ್ತಿದ್ದವರು ಇಂದು ನಮ್ಮನ್ನು ಒದೆಯಲು ಮುಂದಾದರಲ್ಲ ಇನ್ನೂ ನಮಗೆ ಉಳಿಗಾಲವಿಲ್ಲ ಎನ್ನುವ ಸತ್ಯದ ಅರಿವಿನಿಂದ. ಅದರ ಅರಿವು ಮೂಡಿಸಿದ್ದು ಬೋಸರ ಕ್ರಾಂತಿಯ ಕಿಡಿ. 1897 ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿಯೇ ಬ್ರಿಟೀಷರಿಗೆ ಪಕ್ಕೆಲುಬು ಮುರಿದ ಅನುಭವವಾಗಿತ್ತು ಅದಕ್ಕೆ ರಾಷ್ಟ್ರೀಯ ಕಂಗ್ರೆಸ್ ಎನ್ನುವ ನಾಟಿಕಟ್ಟು ಕಟ್ಟಿಕೊಂಡು ಆರೈಕೆ ಮಾಡಿಕೊಂಡಿತು. ಅದರೆ ಈ ಬಾರಿ ಐಎನ್‌ಎ ನೀಡುವ ಹೊಡೆತ ವಿಪರೀತ ಯಾತನೆಯನ್ನು ಹುಟ್ಟು ಹಾಕಿತು. ಅದರ ಪರಿಣಾಮವೇ ಸ್ವಾತಂತ್ರ್ಯಕ್ಕೆ ಬರೆದ ಮುನ್ನುಡಿ. ಆದರೆ ಆ ಸತ್ಯ ಇಂದು ಇತಿಹಾಸದಲ್ಲಿ ಎಲ್ಲೋ ಮೂಲೆಯಲ್ಲಿ ಉಳಿದು ಹೋಗುತ್ತಿರುವುದು ವಿಶಾಧನೀಯ. ಯಾರಾ​‍್ಯರದೋ ಇತಿಹಾಸವನ್ನು ಓದಿ ನೆನಪಿಡುವ ನಾವುಗಳು ನಮ್ಮವರ ಇತಿಹಾಸವನ್ನೇ ಮರೆಯುತ್ತಿದ್ದೇವೆ. ಸುಭಾಷರ ವಿಚಾರಧಾರೆಗಳಂತೂ ಹೇಳುವುದಕ್ಕೆ ಯಾರು ಮುಂದೆ ಬರುತ್ತಿಲ್ಲ. ಕಟ್ಟುಕತೆಗಳ ಮಧ್ಯದಲ್ಲಿ ವಿದ್ಯಾರ್ಥಿಗಳು ಯುವಕರು ಕಳೆದು ಹೋಗುವಂತಾಗಿದೆ. ಅವರ ವಿಚಾರಗಳು ಬಿಡಿ ಕನಿಷ್ಟ ಸುಭಾಷ ಹುಟ್ಟಿದ ದಿನ ಯಾವುದು ಎನ್ನುವುದು ಎಷ್ಟೋ ಯುವಪೀಳಿಗೆಗೆ ಗೊತ್ತೇ ಇಲ್ಲ. ಕಾರಣವಿಷ್ಟೆ ಇವರ ಹೋರಾಟದ ನೈಜ ಹಾದಿಯನ್ನು ವಿವರಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಅವರು ಯಾರಿಗೂ ಪರಿಚಯವಾಗುತ್ತಿಲ್ಲ. ಅದಕ್ಕೆ ಹೇಳಿದ್ದು ಇವರು ಇಲ್ಲಿ ಜನಿಸುವ ಬದಲು ವಿದೇಶದಲ್ಲಿ ಜನಿಸಿದ್ದರೆ ಇವರ ಸಾಧನೆಗೆ ಗುಡಿಯನ್ನೇ ಕಟ್ಟಿ ಪೂಜಿಸುತ್ತಿದ್ದರು. ಆದರೆ ನಮ್ಮವರೂ? ಅವರ ಗುಡಿಯನ್ನು ಕಟ್ಟಿ ಪೂಜಿಸುವುದು ಬೇಕಾಗಿಲ್ಲ ಕನಿಷ್ಟ ಅವರ ಸೇವೆಯನ್ನು, ಸಾಧನೆಯ ಹಾದಿಯನ್ನು ಒಮ್ಮೆಯಾದರೂ ನೆನೆದು ಅವರಿಗೆ ನಿಜ ಗೌರವ ಸಲ್ಲಿಸಬೇಕಲ್ಲವೇ? ಅದೂ ಬಿಟ್ಟು ಯಾರನ್ನೋ ಮೆರೆಸುತ್ತಾ ಇನ್ಯಾರನ್ನೋ ತುಳಿದು ಬೆಳೆಯುವ ಕಾಲಘಟ್ಟದಲ್ಲಿ ನಮ್ಮ ಹೆಮ್ಮೆಯ ವೀರಪುತ್ರರನ್ನು ಮರೆತರೆ ಅವರಿಗೆ ನಾವು ಮಾಡುವ ಅತೀ ದೊಡ್ಡ ಅವಮಾನವಾಗುವುದಿಲ್ಲವೇ? ಅದಕ್ಕೆ ಆ ಪುಸ್ತಕ ಓದುವಾಗ ಅದ್ಯಾಕೋ ತಾತ್ಯಾಟೋಪಿ ನನ್ನನ್ನು ಬಾಹಳವಾಗಿಯೇ ಕಾಡಿದ ನಂತರದಲ್ಲಿ ಸುಭಾಷ್‌ರ ಕುರಿತು ನಮ್ಮವರು ನಡೆದುಕೊಂಡಿದ್ದು ಸಹ ಯಮ ಯಾತನೆಯನ್ನು ನೀಡಿತು. ಹೀಗಾಗಿಯೇ ಸಾವರ್ಕರ ಹೇಳಿದ ಆ ಮಾತು ನಿಜ ಎನಿಸಿತು. ಆದರೂ ಜಿಡ್ಡುಗಟ್ಟಿದ ದಡ್ಡ ಮನಸ್ಸುಗಳು ಸಾವಿರ ಹೇಳಿದರೂ ಒಂದು ದೇಶಾಭಿಮಾನಿ ಒಂದು ಬಾರಿ ಹೇಳಿದರು ಅಷ್ಟೆ. ಒಂದೇ ಮಾತಲ್ಲಿ ಹೇಳುವುದಾರೆ “ಸುಭಾಶ್ಚಂದ್ರ ದಿ ಗ್ರೇಟ್‌” ಜೈಹಿಂದ...! 

- ಮಂಜುನಾಥ ಮ ಜುನಗೊಂಡ 

ವಿಜಯಪುರ 


- * * * - 



ಸುದ್ದಿ ಓದಿ