ಲೇಖನಗಳು

"ಮನಸ್ಸಿನ ಆರೋಗ್ಯಕ್ಕೆ ಧ್ಯಾನದ ಮಹತ್ವ"

"ಮನಸ್ಸಿನ ಆರೋಗ್ಯಕ್ಕೆ ಧ್ಯಾನದ ಮಹತ್ವ"

ವಿಶ್ವ ಧ್ಯಾನ ದಿನದ ಹಿನ್ನೆಲೆಯಲ್ಲಿ ಮಾನಸಿಕ ಶಾಂತಿಯ ಅಗತ್ಯತೆಸಮಕಾಲೀನ ಸಮಾಜದ ಮಾನವನು ಭೌತಿಕ ಪ್ರಗತಿಯ ಶಿಖರ ತಲುಪುತ್ತಿದ್ದರೂ, ಆಂತರಿಕ ಶಾಂತಿಯಲ್ಲಿ ಹಿನ್ನಡೆಯಲ್ಲಿದ್ದಾನೆ. ತಂತ್ರಜ್ಞಾನ, ವೇಗ, ಸ್ಪರ್ಧೆ ಮತ್ತು ನಿರಂತರ ಒತ್ತಡಗಳು ಮಾನವನ ಮನಸ್ಸನ್ನು ಅಶಾಂತಗೊಳಿಸಿವೆ. ಇಂತಹ ಸಂದರ್ಭದಲ್ಲಿ ಮನಸ್ಸಿನ ಆರೋಗ್ಯದ ಮಹತ್ವವನ್ನು ಜಗತ್ತಿಗೆ ನೆನಪಿಸುವ ಅಗತ್ಯ ಹೆಚ್ಚಾಗಿದೆ.  

ಈ ಹಿನ್ನೆಲೆಯಲ್ಲಿಯೇ ವಿಶ್ವ ಧ್ಯಾನ ದಿನ ಎಂಬ ಮಹತ್ವದ ಜಾಗತಿಕ ಆಚರಣೆ ಪ್ರಾರಂಭವಾಗಿದೆ.ವಿಶ್ವ ಧ್ಯಾನ ದಿನದ ಘೋಷಣೆ; ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು 2024ರ ಡಿಸೆಂಬರ್ 6ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ವಾಗಿ ಆಚರಿಸುವುದಾಗಿ ಘೋಷಿಸಿತು. ಈ ನಿರ್ಣಯಕ್ಕೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಬೆಂಬಲ ನೀಡಿದವು. ಮಾನಸಿಕ ಆರೋಗ್ಯ, ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಜಾಗತಿಕವಾಗಿ ಆಚರಿಸಲು ತೀರ್ಮಾನಿಸಲಾಯಿತು.ಇದು ಕೇವಲ ಒಂದು ದಿನದ ಆಚರಣೆಯಾಗದೇ, ಮಾನವ ಜೀವನದ ದಿಕ್ಕನ್ನು ಮರುಪರೀಶೀಲಿಸಲು ನೀಡಿದ ಸಂದೇಶವಾಗಿದೆ. ಡಿಸೆಂಬರ್ 21 ಉತ್ತರಾರ್ಧಗೋಳದಲ್ಲಿ ವರ್ಷದ ಅತಿ ಚಿಕ್ಕ ದಿನ ಹಾಗೂ ಅತಿ ದೀರ್ಘ ರಾತ್ರಿ ಹೊಂದಿರುವ ದಿನ. ಇದನ್ನು ಶೀತಕಾಲದ ಸಂಕ್ರಮಣ ಎಂದು ಕರೆಯಲಾಗುತ್ತದೆ. ಪ್ರಕೃತಿಯ ದೃಷ್ಟಿಯಿಂದ ಇದು ಮೌನ, ಸ್ಥಿರತೆ ಮತ್ತು ಒಳನೋಟಕ್ಕೆ ಸೂಕ್ತ ಕಾಲ. ಹೊರಗಿನ ಅಂಧಕಾರದ ಮಧ್ಯೆ ಒಳಗಿನ ಬೆಳಕನ್ನು ಹುಡುಕುವ ಸಂಕೇತವಾಗಿ ಈ ದಿನವನ್ನು ಆಯ್ಕೆ ಮಾಡಲಾಗಿದೆ.ಧ್ಯಾನವೆಂದರೆ ಹೊರಗೆ ಓಡುವ ಮನಸ್ಸನ್ನು ಒಳಗೆ ತಿರುಗಿಸುವ ಅಭ್ಯಾಸ. ಹೀಗಾಗಿ ಡಿಸೆಂಬರ್ 21 ಧ್ಯಾನದ ಅಂತರಾರ್ಥಕ್ಕೆ ತಕ್ಕ ದಿನವೆಂದು ಪರಿಗಣಿಸಲಾಗಿದೆ.ಧ್ಯಾನದ ಅರ್ಥ ಮತ್ತು ಪರಂಪರೆ : ಧ್ಯಾನವೆಂದರೆ ಮನಸ್ಸನ್ನು ನಿಯಂತ್ರಿಸುವ, ಶುದ್ಧಗೊಳಿಸುವ ಮತ್ತು ಸಮತೋಲನದಲ್ಲಿಡುವ ಸಾಧನೆ.  

ಅದು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ; ಅದು ಮನಸ್ಸಿನ ಚಂಚಲತೆಯನ್ನು ಅರಿತು, ಅದನ್ನು ಶಾಂತಗೊಳಿಸುವ ಪ್ರಕ್ರಿಯೆ.ಭಗವದ್ಗೀತೆಯಲ್ಲಿ ಇದರ ಕುರಿತು ಒಂದು ಶ್ಲೋಕವಿದೆ.ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ಽಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ಽಽ ಮಾನವನು ತನ್ನ ಮನಸ್ಸಿನ ಮೂಲಕವೇ ತನ್ನನ್ನು ಉದ್ಧರಿಸಿಕೊಳ್ಳಬೇಕು;ಮನಸ್ಸಿನ ಮೂಲಕವೇ ತನ್ನನ್ನು ಹಾಳುಮಾಡಿಕೊಳ್ಳಬಾರದು.ಮನಸ್ಸೇ ಮನುಷ್ಯನಿಗೆ ಮಿತ್ರವೂ ಆಗಬಹುದು, ಅದೇ ಮನಸ್ಸೇ ಶತ್ರುವಾಗಿಯೂ ಮಾರ​‍್ಡಬಹುದು.ಮನಸ್ಸಿನ ನಿಯಂತ್ರಣ ಮತ್ತು ಶುದ್ಧೀಕರಣವೇ ಜೀವನದ ಯಶಸ್ಸಿನ ಮೂಲ. ಧ್ಯಾನವು ಮನಸ್ಸನ್ನು ಮಿತ್ರನಾಗಿ ರೂಪಿಸುವ ಸಾಧನ.ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ, ಉಪನಿಷತ್ತುಗಳು, ಬೌದ್ಧ ಮತ್ತು ಜೈನ ಪರಂಪರೆಗಳಲ್ಲಿ ಧ್ಯಾನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಇಂದು ಈ ಪರಂಪರೆ ಜಗತ್ತಿನಾದ್ಯಂತ ಸ್ವೀಕೃತವಾಗಿದೆ.ವಿಶ್ವ ಧ್ಯಾನ ದಿನದ ಮುಖ್ಯ ಉದ್ದೇಶಗಳು,ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವ ಸಮಾಜಕ್ಕೆ ಸರಳ ಪರಿಹಾರ ಸೂಚಿಸುವುದು, ಹಿಂಸೆ, ದ್ವೇಷ ಮತ್ತು ಅಸಹನೆಯನ್ನು ಕಡಿಮೆ ಮಾಡುವ ಮನೋಭಾವ ಬೆಳೆಸುವುದುಯುವಜನತೆಯಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು, ಧರ್ಮ, ಜಾತಿ, ರಾಷ್ಟ್ರಗಳ ಗಡಿ ಮೀರಿ ಮಾನವೀಯ ಏಕತೆಯನ್ನು ಉತ್ತೇಜಿಸುವುದು, ಧ್ಯಾನ ಯಾವುದೇ ಧರ್ಮಕ್ಕೆ ಸೀಮಿತವಲ್ಲ; ಅದು ಮಾನವನ ಅಂತರಂಗದ ಶುದ್ಧತೆಯ ಅಭ್ಯಾಸ. ಧ್ಯಾನದ ಪ್ರಯೋಜನಗಳು ಬಹುಮುಖ್ಯವಾಗಿವೆ. ಮಾನಸಿಕವಾಗಿ ಒತ್ತಡ ಕಡಿಮೆಯಾಗುತ್ತದೆ, ಆತಂಕ ನಿಯಂತ್ರಣದಲ್ಲಿರುತ್ತದೆ, ಕೋಪ ಮತ್ತು ಅಸಹನೆ ತಗ್ಗುತ್ತದೆ, ನೆನಪುಶಕ್ತಿ ಹಾಗೂ ಗಮನ ವೃದ್ಧಿಸುತ್ತದೆ. ದೈಹಿಕವಾಗಿ ರಕ್ತದ ಒತ್ತಡ ನಿಯಂತ್ರಣ, ಹೃದಯ ಆರೋಗ್ಯ ಸುಧಾರಣೆ, ನಿದ್ರಾ ಸಮಸ್ಯೆ ನಿವಾರಣೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿ ಸಾಧ್ಯವಾಗುತ್ತದೆ.ಸಾಮಾಜಿಕವಾಗಿ ಸಹನೆ, ಸಹಾನುಭೂತಿ ಮತ್ತು ಸಹಬಾಳ್ವೆ ಹೆಚ್ಚುತ್ತದೆ. ಕುಟುಂಬ ಹಾಗೂ ಸಮಾಜದಲ್ಲಿ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ.ವ್ಯಕ್ತಿತ್ವ ವಿಕಸನ ಧ್ಯಾನದಿಂದ ಆತ್ಮವಿಶ್ವಾಸ, ಧೈರ್ಯ, ಶಿಸ್ತು ಮತ್ತು ಜೀವನದ ಬಗ್ಗೆ ಧನಾತ್ಮಕ ದೃಷ್ಟಿಕೋನ ಬೆಳೆಯುತ್ತದೆ.ಇಂದಿನ ಸಮಾಜಕ್ಕೆ ಧ್ಯಾನದ ಅಗತ್ಯ; ಪ್ರಸ್ತುತವಾಗಿ ಕೆಲ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದಲ್ಲಿದ್ದಾರೆ; ಉದ್ಯೋಗಿಗಳು ಕೆಲಸದ ಒತ್ತಡದಲ್ಲಿದ್ದಾರೆ; ಹಿರಿಯರು ಏಕಾಂಗಿ ಭಾವನೆಯಲ್ಲಿ ಬಳಲುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮನಸ್ಸಿನ ಅಶಾಂತಿಯನ್ನು ಹೆಚ್ಚಿಸಿದೆ.  

ಈ ಎಲ್ಲಾ ಸಮಸ್ಯೆಗಳಿಗೆ ಓಷಧಿಯಲ್ಲದ, ಸುಲಭ ಮತ್ತು ಸುರಕ್ಷಿತ ಪರಿಹಾರವೆಂದರೆ ಧ್ಯಾನ. ಉಪನಿಷತ್ತಿನ ಶ್ಲೋಕದಲ್ಲಿ  

ಉತ್ತಿಷ್ಠತ ಜಾಗ್ರತ ಪ್ರಾಪ್ಯ  

ವರಾನ್ನಿಬೋಧತ ಽ  

ಕ್ಷುರಸ್ಯ ಧಾರಾ ನಿಶಿತಾ  

ದುರತ್ಯಯಾದುರ್ಗಂ  

ಪಥಸ್ತತ್ ಕವಯೋ ವದಂತಿ ಽ 

ಽಎದ್ದೇಳಿ, ಜಾಗರೂಕರಾಗಿರಿ. ಶ್ರೇಷ್ಠರನ್ನು ಸಂಪರ್ಕಿಸಿ ಆತ್ಮಜ್ಞಾನವನ್ನು ಅರಿಯಿರಿ.ಜೀವನದ ಪಥವು ಕತ್ತಿಯ ಧಾರೆಯಂತೆ ಸೂಕ್ಷ್ಮವೂ ಕಠಿಣವೂ ಆಗಿದೆ; ಆದುದರಿಂದ ಎಚ್ಚರಿಕೆಯಿಂದ ನಡೆಯಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. ಅಂದರೆ ಜೀವನದಲ್ಲಿ ಎಚ್ಚರ, ಜಾಗೃತಿ ಮತ್ತು ಆತ್ಮಾವಲೋಕನ ಅಗತ್ಯ.ಧ್ಯಾನವು ಈ ಜಾಗೃತಿಯನ್ನು ಬೆಳೆಸುವ ಮಾರ್ಗ. ದಿನಕ್ಕೆ ಕೇವಲ ಹತ್ತು ನಿಮಿಷ ಧ್ಯಾನ ಮಾಡಿದರೂ ಅದರ ಪರಿಣಾಮ ಜೀವನದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.ಧ್ಯಾನ ಮತ್ತು ವಿಜ್ಞಾನ, ಇಂದು ಅನೇಕ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಸಂಶೋಧನೆಗಳು ಧ್ಯಾನದ ಪ್ರಯೋಜನಗಳನ್ನು ದೃಢಪಡಿಸಿವೆ. ಮೆದುಳಿನ ಕಾರ್ಯಕ್ಷಮತೆ, ನರಮಂಡಲದ ಸಮತೋಲನ ಮತ್ತು ಹಾರ್ಮೋನ್ ನಿಯಂತ್ರಣದಲ್ಲಿ ಧ್ಯಾನ ಸಹಾಯಕವೆಂದು ವಿಜ್ಞಾನ ಒಪ್ಪಿಕೊಂಡಿದೆ. ಹೀಗಾಗಿ ಧ್ಯಾನವು ಕೇವಲ ಆಧ್ಯಾತ್ಮಿಕ ಅಭ್ಯಾಸವಲ್ಲ; ಅದು ವೈಜ್ಞಾನಿಕ ಆರೋಗ್ಯ ಪದ್ಧತಿಯೂ ಹೌದು.  

ವಿಶ್ವ ಧ್ಯಾನ ದಿನದ ಸಂದೇಶ ;ವಿಶ್ವ ಧ್ಯಾನ ದಿನ ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಹೊರಗಿನ ಜಗತ್ತನ್ನು ಬದಲಾಯಿಸುವ ಮೊದಲು ಒಳಗಿನ ಮನಸ್ಸನ್ನು ಬದಲಾಯಿಸಬೇಕು. ಶಾಂತಿಯುತ ವ್ಯಕ್ತಿಗಳಿಂದಲೇ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ.ವಿಶ್ವ ಧ್ಯಾನ ದಿನವು ಕೇವಲ ಒಂದು ದಿನದ ಆಚರಣೆಯಾಗದೆ, ಜೀವನಪೂರ್ಣ ಅಭ್ಯಾಸವಾಗಬೇಕು. ಮನಸ್ಸು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗುತ್ತದೆ; ವ್ಯಕ್ತಿ ಶಾಂತನಾದರೆ ಸಮಾಜವೂ ಶಾಂತವಾಗುತ್ತದೆ; ಸಮಾಜ ಶಾಂತವಾದರೆ ಜಗತ್ತೇ ಸುಂದರವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ಧ್ಯಾನ ದಿನ ಮಾನವಕುಲಕ್ಕೆ ದೊರೆತ ಅಮೂಲ್ಯ ಅವಕಾಶ. ಪ್ರತಿಯೊಬ್ಬರೂ ಧ್ಯಾನವನ್ನು ತಮ್ಮ ದಿನಚರಿಯ ಭಾಗವನ್ನಾಗಿ ಮಾಡೋಣ. ಶಾಂತಿಯೊಂದಿಗೆ ಬದುಕೋಣ. ಅದೇ ಈ ದಿನದ ಸಾರ್ಥಕತೆ ಪಡೆಯೋಣ.         

ರುದ್ರಗೌಡ ಚ ಪಾಟೀಲ         

ಸುತಗಟ್ಟಿ,  

ಬೈಲಹೊಂಗಲ.   


ಸುದ್ದಿ ಓದಿ