ಲೇಖನಗಳು

ಶತ್ರುಗಳಿಂದಲೂ ಹೊಗಳಿಸಿಕೊಳ್ಳುವ ದೇಶ “ಮೇರಾ ಭಾರತ್ ಮಹಾನ್‌”

ಶತ್ರುಗಳಿಂದಲೂ ಹೊಗಳಿಸಿಕೊಳ್ಳುವ ದೇಶ  “ಮೇರಾ ಭಾರತ್ ಮಹಾನ್‌”

ಭಾರತದ ಅಸ್ಮಿತೆಗೆ ಅಪ್ಪಟ ಸಾಕ್ಷಿಯಾಗಿರುವ “ಮೇರಾ ಭಾರತ್ ಮಹಾನ್‌” ಎಂಬ ಭಾರತೀಯನ ಎದೆಯ ಝೇಂಕಾರ ಈಗ ಇನ್ನೊಮ್ಮೆ ಜೋರಾಗಿ ಝೇಂಕರಿಸುತ್ತಿದೆ. ಏಕೆಂದರೆ ಇದೀಗ ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಭಾರತೀಯರ ಆತ್ಮಾಭಿಮಾನಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ. 

ಭಾರತದ ಈ ಸಾಧನೆಗೆ ವಿದೇಶದ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಶುಭ ಹಾರೈಸಿದ್ದಾರೆ. ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಅವರು ಭಾರತದ ಚಂದ್ರಯಾನ ಯಶಸ್ಸಿನ ಬಗ್ಗೆ ನೀಡಿರುವ ಹೇಳಿಕೆ ಸಖತ್ ಸೌಂಡ್ ಮಾಡುತ್ತಿದ್ದು, ಭಾರತ ಹಾಗೂ ಇಸ್ರೋ ಯಶಸ್ಸಿಗೆ ಅಭಿನಂದನೆ ಸಲ್ಲಿಸಿರುವ ಶಿನ್ವಾರಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಿ ಭಾರತಕ್ಕಿಂತ ತಮ್ಮ ದೇಶ ಎಷ್ಟು ಹಿಂದೆ ಬಿದ್ದಿದೆ ಎಂಬುದನ್ನು ಈ ಚಂದ್ರಯಾನ-3 ಯಶಸ್ಸು ತೋರಿಸಿದೆ ಎಂದು ಒಪ್ಪಿಕೊಂಡಿದ್ದಾರೆ. 

ಉಭಯ ದೇಶಗಳ ನಡುವಿನ ಹಗೆತನವನ್ನು ಹೊರತುಪಡಿಸಿ, ಚಂದ್ರಯಾನ 3 ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಇತಿಹಾಸ ಬರೆದ ಇಸ್ರೋಗೆ ನಾನು ನಿಜವಾಗಿಯೂ ಅಭಿನಂದನೆ ಸಲ್ಲಿಸುತ್ತೇನೆ. ಪಾಕಿಸ್ತಾನ ಮತ್ತು ಭಾರತ ನಡುವೆ ಇರುವ ಎಲ್ಲ ಅಂತರವು ಎಲ್ಲ ಅಂಶಗಳಲ್ಲಿ ಎಷ್ಟು ಮಟ್ಟಕ್ಕೆ ವಿಸ್ತರಿಸಿದೆ ಎಂದರೆ ಭಾರತದ ಸರಿಸಮಾನಕ್ಕೆ ಬರಲು ಪಾಕಿಸ್ತಾನಕ್ಕೆ ಎರಡರಿಂದ ಮೂರು ದಶಕಗಳನ್ನೇ ತೆಗೆದುಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ಪಾಕ್‌ಗಿಂತ ಭಾರತದ ಮುನ್ನಡೆಯನ್ನು ಅವರು ಶ್ಲಾಘಿಸಿದ್ದಾರೆ. 

ಅದನ್ನು ತಲುಪುವುದು ನಮಗೆ ದೊಡ್ಡ ವಿಷಯವೇ ಅಲ್ಲ ಎಂದೂ ಹೇಳುವ ಮೂಲಕ ತಮ್ಮ ಹಳೆ ಚಾಳಿಯನ್ನೂ ಮುಂದುವರೆಸಿದ್ದರೂ ಕೂಡ ಅವರು, ದುರದೃಷ್ಟವಶಾತ್, ನಮ್ಮ ಇಂದಿನ ದುಸ್ಥಿತಿಗೆ ನಾವೇ ಕಾರಣ ಹೊರತು ಬೇರೆ ಯಾರೂ ಅಲ್ಲ. ಮೌಲ್ವಿ ತಮೀಜುದ್ದೀನ್ ಅವರ ಅಸೆಂಬ್ಲಿಯನ್ನು ಅಕ್ರಮವಾಗಿ ವಿಸರ್ಜಿಸಿದಾಗಿನಿಂದ ನಾವು ದೇಶದಲ್ಲಿ ಕಾನೂನು ಮತ್ತು ಸಂವಿಧಾನದ ಪರಮಾಧಿಕಾರಕ್ಕಾಗಿ ಶ್ರಮಿಸುತ್ತಿದ್ದೇವೆ. ಇದರ ನಡುವೆ ಇಂದು ಭಾರತ ಎಲ್ಲಿಗೆ ತಲುಪಿದೆ ಎಂಬುದನ್ನು ನೋಡಿ ನಮ್ಮ ತಲೆಗಳು ನಿಜವಾಗಿಯೂ ನಾಚಿಕೆಯಿಂದ ಇಂದು ಬಾಗುತ್ತಿವೆ. ಇಂದು ನಮ್ಮ ನಡುವೆ ಪ್ರಾರಂಭವಾದ ಅಂತರವು ಎಷ್ಟರಮಟ್ಟಿಗೆ ಬೆಳೆದಿದೆ ಎಂಬುದನ್ನು ಭಾರತ ಸಾಬೀತುಪಡಿಸಿದೆ. ಇದನ್ನು ನೋಡಿ ನಮಗೆ ನಾಚಿಕೆಯಾಗಬೇಕು ಎಂದು ಪಾಕ್‌ಗೆ ಮುಟ್ಟಿಕೊಂಡು ನೋಡಿಕೊಳ್ಳುವಂತೆ ತಿವಿದಿದ್ದಾರೆ.  

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನ್ ಬಂಧನ ಬೆನ್ನಲ್ಲೇ ದೇಶಾದ್ಯಂತ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ ಭಾರತದ ಪ್ರಧಾನಿ ಮೋದಿ ಅವರೇ ಕಾರಣ. ನನ್ನ ದೇಶ ಪಾಕಿಸ್ತಾನದಲ್ಲಿ ಈಗ ಉಂಟಾಗಿರುವ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆಯಾದ ‘ರಾ’ (ಆರ್‌ಎಡಬ್ಲ್ಯೂ) ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ, ಯಾರಾದರೂ ದೆಹಲಿ ಪೊಲೀಸರ ವೆಬ್‌ಸೈಟ್ ಲಿಂಕ್ ಇದ್ದರೆ ಕಳುಹಿಸಿಕೊಡಿ ಎಂದು ಕೇಳಿದ್ದಳು. ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ ಅಲ್ಲಿನ ಸುಪ್ರೀಂ ಕೋರ್ಟ್‌ ನನಗೆ ನ್ಯಾಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದೂ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಳು. 

ಈಕೆಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟರ್‌ನೆಟ್ ಸೌಲಭ್ಯ ಕಡಿತಗೊಂಡಿದ್ದರೂ ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಕೌಂಟರ್ ಕೊಟ್ಟಿದ್ದರು. ಆಕೆ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಆಕೆಗೆ ಹಿಗ್ಗಾಮುಗ್ಗ ನಿಂದಿಸಿ ನೆಟ್ಟಿಗರು ಆಕೆಯ ಮುಖಕ್ಕೆ ಮಹಾ ಮಂಗಳಾರತಿ ಮಾಡಿದ್ದರು. 

ಹೀಗೆ ಆಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸೆಹರ್ ಶಿನ್ವಾರಿ ಪಾಕಿಸ್ತಾನದ ಖೈಬರ್‌ನಲ್ಲಿ “ಸೈರ್ ಸಾವಾ ಸೈರ್‌” ಎಂಬ ಹಾಸ್ಯ ಸರಣಿಯೊಂದಿಗೆ 2014 ರಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. 2015 ರಲ್ಲಿ ಕರಾಚಿ ಸ್ಟೇಷನ್ ಮಾಧ್ಯಮದಲ್ಲಿ ಬೆಳಗಿನ ಕಾರ್ಯಕ್ರಮದ ನಿರೂಪಕಿಯಾಗಿಯು ಕೆಲಸ ಮಾಡಿದ್ದಾಳೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತನ್ನ ನಟನೆ ಮತ್ತು ವೈರಲ್ ವಿಡಿಯೋಗಳಿಂದಲೇ ಹೆಸರುವಾಸಿಯಾಗಿದ್ದಾಳೆ. ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ತುಂಬಾ ಆ್ಯಕ್ಟೀವ್ ಆಗಿದ್ದಾಳೆ. ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾಳೆ. ಆಕೆಯ ಟ್ವೀಟ್‌ಗಳು ಮಾಧ್ಯಮಗಳ ಗಮನವನ್ನು ಸೆಳೆದಿದ್ದವು.  

ಇನ್ನು ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಅವರು ಭಾರತದ ಈ ಚಂದ್ರಯಾನ-3 ಲ್ಯಾಂಡಿಂಗ್‌ನ್ನು ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದರು. ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಫವಾದ್ ಚೌಧರಿ ಅವರು ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿ, ಭಾರತ ಕೈಗೊಂಡಿರುವ ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ. ಪಾಕಿಸ್ತಾನದ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದರು. 

ತಮ್ಮ ಟ್ವಿಟ್ಟರ್ (ಎಕ್ಸ್‌) ಖಾತೆಯಲ್ಲಿ ಪೋಸ್ಟ್‌ ಹಾಕಿದ್ದ ಫವಾದ್ ಚೌಧರಿ ಅವರು, ಪಾಕ್ ಮಾಧ್ಯಮಗಳು ಬುಧವಾರ ಸಂಜೆ 6:15 ಕ್ಕೆ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ನೇರ​‍್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಭಾರತೀಯರಿಗೆ, ವಿಜ್ಞಾನಿಗಳಿಗೆ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು. 

ಚಂದ್ರಯಾನ 2 ಯೋಜನೆ ವಿಫಲಗೊಂಡಾಗ ಇಸ್ರೋ ಹಾಗೂ ಭಾರತದ ಬಗ್ಗೆ ಗೇಲಿ ಇವರೇ ಈಗ ಚಂದ್ರಯಾನ-3 ಲ್ಯಾಂಡಿಂಗ್‌ನ್ನು ಮನುಕುಲದ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಇಸ್ರೋದ ಚಂದ್ರಯಾನ 2 ಯೋಜನೆಯು ಅಂತಿಮ ಕ್ಷಣದಲ್ಲಿ ವಿಫಲಗೊಂಡಿತ್ತು, ಈ ಸಮಯ ಭಾರತೀಯರಲ್ಲಿ ಬೆಟ್ಟದಷ್ಟು ಬೇಸರ ಮೂಡಿತ್ತು, ಆ ಸಮಯದಲ್ಲಿ ಪಾಕ್ ಸಚಿವರಾಗಿದ್ದ ಫವಾದ್ ಹುಸೇನ್ ಖಾನ್ ಅವರು ಭಾರತದ ಬಗ್ಗೆ ಲೇವಡಿ ಮಾಡಿದ್ದರು. ಆದರೆ ಈಗ ಅದೇ ವ್ಯಕ್ತಿ ಚಂದ್ರಯಾನ 3 ಮನುಕುಲಕ್ಕೆ ಇದೊಂದು ಐತಿಹಾಸಿಕ ಕ್ಷಣ, ಚಂದ್ರಯಾನ 3 ನೇರ ಪ್ರಸಾರ ಮಾಡುವಂತೆ ಕೇಳಿಕೊಂಡಿದ್ದರು. ಬುಧವಾರ ಸಂಜೆ ಚಂದ್ರಯಾನ-3 ರ ಚಂದ್ರನ ಲ್ಯಾಂಡಿಂಗ್‌ನ್ನು ಪ್ರಸಾರ ಮಾಡುವಂತೆ ತಮ್ಮ ದೇಶವನ್ನು ಒತ್ತಾಯಿಸಿದ್ದರು. 

ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕೇವಲ 2.1 ಕಿಮೀ ಎತ್ತರದಲ್ಲಿ ನೆಲಮಟ್ಟದೊಂದಿಗೆ ಸಂವಹನವನ್ನು ಕಳೆದುಕೊಂಡಾಗ ಕೊನೆಯ ಕಾರ್ಯಾಚರಣೆಯ ಅಂತಿಮ ಹಂತದ ವೈಫಲ್ಯದ ನಂತರ ಪಾಕ್ ಸಚಿವರಾಗಿದ್ದ ಫವಾದ್ ಹುಸೇನ್ ಖಾನ್ ಅವರು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಇಂಡಿಯಾ ಫೇಲ್ಡ್‌ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು. 2019 ರಲ್ಲಿ ಚಂದ್ರಯಾನ-2 ಮಿಷನ್ ಚಂದ್ರನ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಯಲಾಗದೇ ವಿಫಲವಾಗಿತ್ತು.  

ಆಗ ಪಿಎಂ ಮೋದಿ ನೇತೃತ್ವದ ಸರ್ಕಾರವು ಚಂದ್ರಯಾನಕ್ಕೆ 900 ಕೋಟಿ ಖರ್ಚು ಮಾಡಿದ್ದಕ್ಕಾಗಿ ಪ್ರಶ್ನಿಸಿದ್ದರು. ಹಾಗೂ ಗೊತ್ತಿಲ್ಲದೇ ಇರುವ ಪ್ರದೇಶಕ್ಕೆ ಇಷ್ಟೆಲ್ಲಾ ಹಣ ಖರ್ಚು ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದರು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕೇವಲ 2.1 ಕಿ.ಮೀ ಎತ್ತರದಲ್ಲಿ ಸಂವಹನ ಕಳೆದುಕೊಂಡಾಗ ಕೊನೆಯ ಕಾರ್ಯಾಚರಣೆಯ ಅಂತಿಮ ಹಂತದ ವೈಫಲ್ಯದ ನಂತರ ಪಾಕ್ ಸಚಿವರಾಗಿದ್ದ ಫವಾದ್ ಹುಸೇನ್ ಖಾನ್ ಭಾರತವನ್ನು ಆಡಿಕೊಂಡಿದ್ದರು.  

ಪಾಕ್ ಸಚಿವರಾಗಿದ್ದ ಇದೇ ಫವಾದ್ ಹುಸೇನ್ ಖಾನ್ ಅವರು ಇದೀಗ ಜುಲೈ 14 ರಂದು ಇಸ್ರೋ ಮೂರನೇ ಚಂದ್ರಯಾನ ಮಿಷನ್ ಪ್ರಾರಂಭಿಸಿದಾಗ ಭಾರತದ ಬಾಹ್ಯಾಕಾಶ ಮತ್ತು ವಿಜ್ಞಾನ ಸಮಯದಾಯವನ್ನು ಅಭಿನಂದಿಸಿದ್ದರು. ಅಲ್ಲದೇ ಪಾಕ್ ಮಾಧ್ಯಮಗಳು ಬುಧವಾರ ಸಂಜೆ 6:15 ಕ್ಕೆ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ನೇರ​‍್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಭಾರತೀಯರಿಗೆ, ವಿಜ್ಞಾನಿಗಳಿಗೆ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು. 

ಇನ್ನೊಂದೆಡೆ ಪಾಕ್ ನಾಗರೀಕರು ಕೂಡ ನಾವು ಚಂದ್ರನ ಮೇಲೆ ಹೋಗುವ ಅಗತ್ಯವೇ ಇಲ್ಲ. ಈಗಾಗಲೇ ನಾವು ಚಂದ್ರನ ಮೇಲೆ ಬದುಕುತ್ತಿದ್ದೇವೆ. ಚಂದ್ರನ ಮೇಲ್ಮೈ ವಾತಾವರಣವನ್ನು ಇಲ್ಲಿನ ಜನ ಅನುಭವಿಸುತ್ತಿದ್ದಾರೆ ಎಂದು ತಮ್ಮದೇ ದೇಶದ ಸರ್ಕಾರವನ್ನು ಅಣಕಿಸುತ್ತಿದ್ದಾರೆ. 

ಪಾಕ್ ಪ್ರಜೆಗಳು “ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ, ಚಂದ್ರನ ಅಂಗಳ ಮತ್ತು ಪಾಕಿಸ್ತಾನದ ಎರಡರಲ್ಲೂ ಒಂದೇ ವಾತಾವರಣ ಇದೆ. ಅಲ್ಲಿ ನೀರಿಲ್ಲ, ಇಲ್ಲಿಯೂ ಇಲ್ಲ. ಅಲ್ಲಿ ವಿದ್ಯುತ್ ಸೌಲಭ್ಯ ಇಲ್ಲ, ಇಲ್ಲಿಯೂ ಇಲ್ಲ. ಪಾಕಿಸ್ತಾನದ ಪ್ರಜೆಗಳಿಗೆ ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಚಂದ್ರನಲ್ಲಿರುವ ವಾತಾವರಣವನ್ನು ಇಲ್ಲಿನ ಪ್ರಜೆಗಳು ತಮ್ಮ ಸುತ್ತಮುತ್ತಲಿನಲ್ಲೇ ಅನುಭವಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.  

ಹೀಗೆ ತನ್ನ ದೇಶವನ್ನು ಅಣಕಿಸುತ್ತಲೇ ಪಾಕಿಸ್ತಾನಿ ಯುವಕನೊಬ್ಬ ಆಡಿದ ಮಾತುಗಳು ಎಂತಹವರಿಗೂ ನಗು ಉಕ್ಕಿಸುತ್ತಿದ್ದು, ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ. ಇಂತಹದೊಂದು ವೀಡಿಯೋ ತುಣುಕು ಸೋಶಿಯಲ್ ಮೀಡಿಯಾ ಸಮುದ್ರದಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋವನ್ನು ಪಾಕಿಸ್ತಾನಿ ಯೂಟ್ಯೂಬರ್ ಶೋಯೆಬ್ ಚೌಧರಿ ಪೋಸ್ಟ್‌ ಮಾಡಿದ್ದಾನೆ. 

ವೀಡಿಯೋದಲ್ಲಿ ಯೂಟ್ಯೂಬರ್ ಓರ್ವ ಪಾಕ್ ಯುವಕನ ಬಳಿ ಭಾರತದ ಚಂದ್ರಯಾನ-3 ಯಶಸ್ವಿಯಾದ ಬಗ್ಗೆ ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಪಾಕ್ ಯುವಕನೊಬ್ಬ “ಅವರು ದುಡ್ಡು ವೆಚ್ಚ ಮಾಡಿ ಚಂದ್ರಯಾನ ಮಾಡುತ್ತಿದ್ದಾರೆ. ಆದರೆ ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ ನಿಮಗೆ ಈ ವಿಚಾರ ಗೊತ್ತಿಲ್ವಾ ಎಂದು ಯೂಟ್ಯೂಬರ್‌ನನ್ನೇ ಮರು ಪ್ರಶ್ನಿಸಿದ್ದಾನೆ. ಈತನ ಮಾತಿಗೆ ಯೂಟ್ಯೂಬರ್ ಕುತೂಹಲದಿಂದ ಅದು ಹೇಗೆ ಎಂದು ಕೇಳಿದ್ದಾರೆ. ಆಗ ಆತ ಚಂದ್ರನ ಮೇಲೆ ನೀರಿದೆಯೇ ಎಂದು ಕೇಳಿದ್ದಾನೆ. ಯೂಟ್ಯೂಬರ್ ಇಲ್ಲ ಎನ್ನುತ್ತಾನೆ. ಹಾಗೆಯೇ ನೋಡಿ ಇಲ್ಲೂ ನೀರಿಲ್ಲ,  ಅಲ್ಲಿ ಗ್ಯಾಸ್ ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ ಇಲ್ವಲ್ಲಾ ಎಂದು ಯೂಟ್ಯೂಬರ್ ಹೇಳುತ್ತಾನೆ. ಇಲ್ಲೂ ಇಲ್ಲ ನೋಡಿ ಅಂತಾನೆ ಯುವಕ, ಅಲ್ಲಿ ವಿದ್ಯುತ್ ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ. ಇಲ್ಲ ಎಂದ ಯುಟ್ಯೂಬರ್‌ಗೆ ನೋಡಿ ಇಲ್ಲಿ ಕೂಡ ಇಲ್ಲ ಎಂದು ಯುವಕ ಹಾಸ್ಯಮಯವಾಗಿ ಉತ್ತರಿಸುತ್ತ ಪಾಕಿಸ್ತಾನವನ್ನು ಚಂದ್ರನಿಗೆ ಹೋಲಿಸಿದ್ದಾನೆ. ಪಾಕಿಸ್ತಾನ ಹಾಗೂ ಚಂದ್ರ ಎರಡೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ ಎಂಬುದರ ಮೂಲಕ ಪಾಕಿಸ್ತಾನದ ವಾಸ್ತವತೆಯನ್ನು ಹಾಸ್ಯದ ಮೂಲಕ ತೋರಿಸಿದ್ದಾನೆ. 

ಚಂದ್ರಯಾನ 3 ಮಿಷನ್ ಸಕ್ಸಸ್ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಸೃಷ್ಟಿಸಿದೆ. ಹೀಗಾಗಿ ಅಲ್ಲಿನ ಕೆಲ ಯೂಟ್ಯೂಬರ್‌ಗಳು ಬೀದಿಗಿಳಿದು ಜನರ ಅಭಿಪ್ರಾಯ ಕೇಳಲು ಶುರು ಮಾಡಿದ್ದಾರೆ. ಈ ವೇಳೆ ಕೆಲವರು ನೀಡಿದ ಪ್ರತಿಕ್ರಿಯೆಗಳು ನಗೆಯುಕ್ಕಿಸಿವೆ. ಪಾಕಿಸ್ತಾನ ಹಾಗೂ ಚಂದ್ರನಲ್ಲಿ ಮೂಲಭೂತ ಸೌಕರ್ಯವಿಲ್ಲ, ಹೀಗಾಗಿ ಪಾಕಿಸ್ತಾನ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂದು ಅಲ್ಲಿನ ಜನರು ಭಾರತವನ್ನುದ್ದೇಶಿಸಿ ತಮ್ಮ ದೇಶವನ್ನೇ ವಿಬಂಡನೆ ಮಾಡಿದ್ದಾರೆ. ಆದ್ದರಿಂದಲೇ “ಮೇರಾ ಭಾರತ್ ಮಹಾನ್‌” ಎಂದು ಹೇಳಲಾಗುತ್ತದೆ. ಏಕೆಂದರೆ ಭಾರತ ಶತ್ರುಗಳಿಂದಲೂ ಹೊಗಳಿಸಿಕೊಳ್ಳುವ ದೇಶವಾಗಿದೆ. ಏ ತೋ ಅಬೀ ಟ್ರೇಲರ್ ಹೈ, ಪಿಕ್ಚರ್ ಅಬೀ ಬಾಕೀ ಹೈ... 

- ಮಂಜುನಾಥ.ಎಸ್‌.ಕಟ್ಟಿಮನಿ 

ವಿಜಯಪುರ 


ಸುದ್ದಿ ಓದಿ