ಸಹೋದರನನ್ನು ಕಳೆದುಕೊಂಡು ತುಂಬಾ ದುಃಖವಾಗಿದೆ - ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
ಬೆಂಗಳೂರು/ಚೆನ್ನೈ ಅ 30: ಅಪ್ಪು ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ಸಹೋದರ ಅಂತಾನೇ ಸಂಬೋದನೆ ಮಾಡಿ ನಟ ಶಿವರಾಜ್ ಕುಮಾರ್ ಅವರಿಗೆ ಎಂ.ಕೆ.ಸ್ಟಾಲಿನ್ ಪತ್ರ ಬರೆದಿದ್ದಾರೆ.
ಪುನೀತ್ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಲ್ಲದೇ ಇರೋದು ಊಹೆ ಮಾಡಿಕೊಳ್ಳಲೂ ಸಹ ಅಸಾಧ್ಯ. ರಾಜ್ ಕುಮಾರ್ ಹಾಗೂ ನಮ್ಮ ಕುಟುಂಬದ ಹಲವಾರು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಪುನೀತ್ ರಾಜ್ ಕುಮಾರ್ ಅಗಲಿಕೆ ನನಗೆ ವೈಯಕ್ತಿಕ ನಷ್ಟ ಉಂಟು ಮಾಡಿದೆ ಅಂತಾ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ನನ್ನ ತಂದೆ ಕರುಣಾನಿಧಿ ತೀರಿಕೊಂಡಾಗ ತಮಿಳುನಾಡಿನ ಗೋಪಾಲಪುರಂ ಮನೆಗೆ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಆ ದಿನ ನನ್ನ ಕಣ್ಮುಂದೆ ಅಚ್ಚಳಿಯದೆ ಉಳಿದಿದೆ. ಅಮೂಲ್ಯವಾದ ರತ್ನವನ್ನು ನಾವು ಕಳೆದುಕೊಂಡಿದ್ದೇವೆ. ದಯಮಾಡಿ ನಮ್ಮ ಸಂತಾಪವನ್ನು ಕನ್ನಡ ನಾಡಿನ ಜನರಿಗೆ ಹಾಗೂ ನಿಮ್ಮ ಕುಟುಂಬಕ್ಕೆ ತಿಳಿಸಿ. ಅಪ್ಪು ನಮ್ಮೊಂದಿಗಿದ್ದ ದಿನಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ಡಾ. ರಾಜ್ ಕುಮಾರ್ ಸರ್ ಅವರ ಹಿರಿಯ ಪುತ್ರನಾಗಿ ಹಾಗೂ ಅಪ್ಪು ಸಹೋದರನಾಗಿ ಅವರ ಕುಟುಂಬದೊಂದಿಗೆ ಈ ನೋವಿನ ಸಂದರ್ಭದಲ್ಲಿ ನಿಲ್ಲುತ್ತೀರಿ ಅಂತಾ ಭಾವಿಸಿರುತ್ತೇನೆ ಅಂತಾ ಶಿವರಾಜ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಸಿಎಂ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ.