ಎರಡು ಹನಿ ನಿರ್ಲಕ್ಷಿಸಿದರೆ ಜೀವಮಾನವೀಡೀ ಸಂಕಷ್ಟ..! ಮುಂಡಗೋಡದಲ್ಲಿ ಪೋಲಿಯೋ ಜಾಗೃತಿ ಜಾಥಾದಿಂದ ಎಚ್ಚರಿಕೆ”
ಲೋಕದರ್ಶನ ವರದಿ
ಮುಂಡಗೋಡ 27 : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಮುಂಡಗೋಡದ ರೋಟರಿ ಪ್ರೌಢಶಾಲೆಯಲ್ಲಿ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಯಿತು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ರೋಟರಿ ಕ್ಲಬ್, ರೋಟರಿ ಕ್ಲಬ್ ಹೆರಿಟೇಜ್ ಹಾಗೂ ತಾಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಅವರು, “ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಮಕ್ಕಳ ಸುರಕ್ಷತೆಗಾಗಿ ಪ್ರತಿಯೊಬ್ಬ ಪೋಷಕರೂ ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ಜೂನ್ 28ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕು. ಇದರಿಂದ ಅಂಗವೈಕಲ್ಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಅವರು, “ಈ ಹಿಂದೆ ಹಲವು ಬಾರಿ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ ಜೂನ್ 28ರಂದು ಮತ್ತೊಮ್ಮೆ ಲಸಿಕೆ ಹಾಕಿಸುವುದು ಅತ್ಯಗತ್ಯ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು,” ಎಂದು ಕರೆ ನೀಡಿದರು. ರೋಟರಿ ಕ್ಲಬ್ನ ಡಾ. ಪಿ.ಪಿ. ಛಬ್ಬಿ ಮಾತನಾಡಿ, “ಭಾರತ ಪೋಲಿಯೋ ಮುಕ್ತ ರಾಷ್ಟ್ರವಾದರೂ ಕೆಲವು ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿವೆ. ಆದ್ದರಿಂದ ಪ್ರತಿಬಾರಿಯೂ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ದೇಶದ ಪೋಲಿಯೋ ಮುಕ್ತ ಸಾಧನೆಯನ್ನು ಕಾಪಾಡಬೇಕು,” ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು ಹಾಗೂ ವಂದಿಸಿದರು. ಈ ವೇಳೆಯಲ್ಲಿ ರೋಟರಿ ಕ್ಲಬ್ ಹೆರಿಟೇಜ್ ಅಧ್ಯಕ್ಷ ಕಲ್ಮೇಶ್ ಟಿಕೋಜಿ, ರೋಟರಿ ಕ್ಲಬ್ ಕಾರ್ಯದರ್ಶಿ ಜಾನಿ ಲೋಪೀಸ್, ಖಜಾಂಚಿ ರಾಜಾ ಜೇಮ್ಸ್, ನಾರಾಯಣ ದೈವಜ್ಞ, ಮಹೇಶ್ ಹೆಗಡೆ, ಜಗದೀಶ್ ಕಾನಡೆ, ಅನಿಲ್ ಬಾಂಬೆರೆ, ಐಎಂಎ ಕಾರ್ಯದರ್ಶಿ ಡಾ. ಭರತ್ ತಂತ್ರಿ,
ರೋಟರಿ ಪ್ರೌಢಶಾಲೆಯ ಮುಖ್ಯಗುರು ಗೀರೀಶ್ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗೀತಾ ಮಠಪತಿ, ಚೇತನ್ ಕಲಾಲ್, ಮಹೇಶ್ ನಾಯಕ್, ಶಶಿರೇಖಾ ಬೈಜು, ಸರೋಜಾ ಛಬ್ಬಿ, ಶಾಲಿನಿ ಮದಬಾವಿ, ಸುರೇಶ್ ಮಂಜಳಕರ್, ಪೊಲೀಸ್ ಇಲಾಖೆಯ ಎಎಸ್ಐ ಮಡ್ಲಿ, ರೋಟರಿ ಕ್ಲಬ್ನ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಿದರು.