ಹುಲಕೋಟಿಯಲ್ಲಿ “ಹಣಕಾಸು ವರದಿ ಮತ್ತು ಯೋಜನಾ ವರದಿಯಲ್ಲಿನ ಸಮಕಾಲೀನ ಸಮಸ್ಯೆಗಳು” ಕುರಿತು ಒಂದು ದಿನದ ಕಾರ್ಯಾಗಾರ
ಹುಲಕೋಟಿ 17: ಇಲ್ಲಿನ ಶ್ರೀ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಋಂಅ) ಮತ್ತು ವಾಣಿಜ್ಯ ವಿಭಾಗದ ವತಿಯಿಂದ “ಹಣಕಾಸು ವರದಿ ಮತ್ತು ಯೋಜನಾ ವರದಿಯಲ್ಲಿನ ಸಮಕಾಲೀನ ಸಮಸ್ಯೆಗಳು” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅಣ್ಣಿಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಎಫ್. ಬಿ. ಆನಿ ಅವರು ಭಾಗವಹಿಸಿ, ಹಣಕಾಸು ವರದಿ ಮತ್ತು ಯೋಜನಾ ವರದಿಗಳಲ್ಲಿನ ಸಮಕಾಲೀನ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಸಂಯೋಜಕರಾದ ಡಾ. ಜಿತೇಂದ್ರ ಜಹಾಗೀರದಾರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಇಂದಿನ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಆಧುನಿಕ ಜಗತ್ತಿನ ಸವಾಲುಗಳನ್ನು ಅರಿತುಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ಸಿ. ಮುಳಗುಂದ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಹಣಕಾಸು ವರದಿಗಳನ್ನು ಓದುವುದು, ಅವುಗಳಲ್ಲಿನ ಮಾಹಿತಿಯನ್ನು ವಿಶ್ಲೇಷಿಸುವುದು ಮತ್ತು ಯೋಜನಾ ವರದಿಗಳನ್ನು ಕ್ರಮಬದ್ಧವಾಗಿ ಸಿದ್ಧಪಡಿಸುವುದು ವಾಣಿಜ್ಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲಗಳಾಗಿವೆ ಎಂದು ಹೇಳಿದರು. ಈ ಕಾರ್ಯಾಗಾರವು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಉಪಯುಕ್ತವಾಗಿದ್ದು, ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.