ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ “ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ” ಅಗತ್ಯ
ಯಾವುದೇ ದೇಶದ ನಿಜವಾದ ಶಕ್ತಿ ಅದರ ಸೈನ್ಯ, ಸಂಪತ್ತು ಅಥವಾ ತಾಂತ್ರಿಕ ಸಾಮರ್ಥ್ಯದ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ, ಒಂದು ರಾಷ್ಟ್ರದ ಮೂಲ ಶಕ್ತಿ ಅದರ ನಾಗರಿಕರು ಹಾಗೂ ಅವರ ಆರೋಗ್ಯ, ಜ್ಞಾನ ಮತ್ತು ಜೀವನಗುಣಮಟ್ಟದಮೇಲೆ ಅವಲಂಭಿತವಾಗಿರುತ್ತದೆ. ಸಮಾಜದಲ್ಲಿನ ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದರೆ ಮಾತ್ರ ದೇಶದ ಉತ್ಪಾದಕತೆ ಹೆಚ್ಚಾಗುತ್ತದೆ; ಮತ್ತು ಎಲ್ಲರೂ ಶಿಕ್ಷಣ ಪಡೆದಿದ್ದರೆ ಮಾತ್ರ ಸಮಾನತೆ, ನೂತನ ಚಿಂತನೆ, ವೈಜ್ಞಾನಿಕ ಮನೋವೃತ್ತಿ ಹಾಗೂ ಸಾಮಾಜಿಕ ಜಾಗೃತಿ ಬೆಳೆಯುತ್ತದೆ. ಇದೇ ಕಾರಣಕ್ಕೆ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ ಇವು ಎರಡೂ ಮಾನವ ಅಭಿವೃದ್ದಿಯ ಮೂಲಬಂಡವಾಳ. ಇವುಗಳನ್ನು ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ಮಾಡುವುದು ಒಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಧ್ಯೇಯ ಕಾರ್ಯ.
ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ಮುಖ್ಯ. ಒಂದು ರಾಷ್ಟ್ರದ ಪ್ರಗತಿ ಅದರ ಭೂಸಂಪತ್ತು, ಕೈಗಾರಿಕೆ, ಖನಿಜ ಸಂಪತ್ತು ಅಥವಾ ಮೂಲಸೌಕರ್ಯಗಳ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ. ಮಾನವ ಸಂಪನ್ಮೂಲ ಗುಣಮಟ್ಟವೇ ದೇಶವನ್ನು ವಿಶ್ವ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನಿಲ್ಲಿಸಲು ಸಾಧ್ಯ. ಆರೋಗ್ಯವಂತ ಹಾಗೂ ಶಿಕ್ಷಣ ಹೊಂದಿದ ಜನಸಂಖ್ಯೆ ಹೆಚ್ಚಾಗಿ ಬಡತನದಿಂದ ಹೊರಬಂದು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಆರೋಗ್ಯಹಿಶಿಕ್ಷಣದ ಕ್ಷೇತ್ರದಲ್ಲಿ ಬಲಿಷ್ಠವಾಗಿರುವ ರಾಷ್ಟ್ರಗಳನ್ನು ಜಾಗತಿಕ ಹೂಡಿಕೆದಾರರು ಆದ್ಯತೆಯಿಂದ ನೋಡುತ್ತಾರೆ. ಇದೇ ಕಾರಣಕ್ಕೆ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಅನುದಾನದ ದೊಡ್ಡ ಭಾಗವನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಮೀಸಲಿಡುತ್ತವೆ. ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ “ಉಚಿತ ಆರೋಗ್ಯ ಹಾಗೂ ಉಚಿತ ಶಿಕ್ಷಣ ಬಲಪಡಿಸುವ ಕಾರ್ಯ ಅನಿವಾರ್ಯ. ಉಚಿತ ಆರೋಗ್ಯ ನಾಗರಿಕರ ಜೀವಿತಮಟ್ಟವನ್ನು ಬಲಪಡಿಸುವ ಮೂಲ ಮಾನವ ಹಕ್ಕು. ಮನುಷ್ಯ ಆರೋಗ್ಯವಾಗಿರುವಾಗ ಮಾತ್ರ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಲು ಸಾಧ್ಯ. ಆದರೆ ಬಡ ಮತ್ತು ಮಧ್ಯಮವರ್ಗದ ಜನರು ಚಿಕಿತ್ಸೆಗೆ ಅಗಾಧ ಹಣ ಖರ್ಚು ಮಾಡುವ ಪರಿಸ್ಥಿತಿ ಉಂಟಾದಾಗ, ಅದು ಅವರ ಆರ್ಥಿಕ ನೆಲೆಯನ್ನು ಕುಗ್ಗಿಸುತ್ತದೆ. ಅತಿಯಾದ ಚಿಕಿತ್ಸಾ ವೆಚ್ಚ, ಆಸ್ಪತ್ರೆಗೆ ದಾಖಲಾತಿ, ಓಷಧಿ ವೆಚ್ಚ ಇವೆಲ್ಲ ಸಾಮಾನ್ಯ ಕುಟುಂಬಕ್ಕೆ ದೊಡ್ಡ ಹೊರೆ.
ಶಿಕ್ಷಣ ಮತ್ತು ಆರೋಗ್ಯಶ್ರಿಸಮಾಜದ ಮೂಲಸೇವೆಗಳಾಗಿದ್ದರೂಶ್ರಿಇಂದಿನ ದಿನಗಳಲ್ಲಿ ಅವುಗಳ ವೆಚ್ಚಗಳು ಗಗನಕ್ಕೇರಿವೆ. ಶಾಲೆಗಳು ವಾಣಿಜ್ಯೀಕರಣಗೊಂಡಿವೆ, ಆಸ್ಪತ್ರೆಗಳು ದುಬಾರಿಯಾಗಿವೆ, ಓಷಧಿ ಕಂಪನಿಗಳು ಬೆಲೆ ಏರಿಕೆಯಲ್ಲಿ ನಿಬಂರ್ಧವಿಲ್ಲದ ಸ್ಥಿತಿಗೆ ತಲುಪಿವೆ. ಇದರ ಪರಿಣಾಮವಾಗಿ ಸಾಮಾನ್ಯ ಕುಟುಂಬಗಳು ಆರ್ಥಿಕ ಒತ್ತಡಕ್ಕೆ ತುತ್ತಾಗುತ್ತಿವೆ.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ಸಾಮಾನ್ಯ ನಾಗರಿಕರಿಗೆ ತೀರಿಸಲಾಗದ ಮಟ್ಟಕ್ಕೆ ಏರಿದ್ದು, ಹಲವಾರು ಶಾಲೆಗಳು ಮತ್ತು ಕಾಲೇಜುಗಳು ಜ್ಞಾನಕ್ಕಿಂತ ಶುಲ್ಕ ಸಂಗ್ರಹಣೆಯನ್ನು ಮುಖ್ಯ ಗುರುಯಾಗಿಸಿವೆ. ಹೃದಯದಲ್ಲಿ ಸೇವೆ ಕರುಣೆ, ಸಹಾನುಭೂತಿ ಇರುವಾಗ ಮಾತ್ರ ವೈಧ್ಯಕೀಯ ಕ್ಷೇತ್ರ ದೇವಾಲಯದಂತಿರುತ್ತದೆ. ಶಿಕ್ಷಣವು ಜ್ಞಾನ ಬೆಳಕನ್ನ ಪಸರಿಸುವ ದೀಪವಾಗಬೇಕು ಹೊರತು ಹಣದ ಮಾರಾಟದ ಅಂಗಡಿಯಲ್ಲ. ಸೇವಾ ಮನೋಭಾವ ಮತ್ತು ಮಾನವೀಯತೆ ಇರುವಾಗ ಸಮಾಜ ಬದುಕುತ್ತದೆ; ಅವು ಇಲ್ಲದಾಗ ಇದು ದುರಂತಕ್ಕೆ ದಾರಿಮಾಡಿಕೊಡುತ್ತದೆ.
ಈ ಹೊರೆ ಕಡಿಮೆ ಮಾಡಲು ಉಚಿತ ಆರೋಗ್ಯ ಸೇವೆ ಅವಶ್ಯಕ. ಸರಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉನ್ನತ ಮಟ್ಟದ ಸೇವೆಯನ್ನು ಉಚಿತವಾಗಿ ನೀಡಿದಾಗ ಗ್ರಾಮೀಣಹಿನಗರ ವ್ಯತ್ಯಾಸಗಳು ಕಡಿಮೆಯಾಗುತ್ತವೆ. ಬಡ ಜನರು ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುವುದಿಲ್ಲ. ಉಚಿತ ಆರೈಕೆ ಸೌಲಭ್ಯದಿಂದ ಶಿಶು ಮರಣ, ತಾಯಿ ಮರಣ ಪ್ರಮಾಣ ಕಡಿಮೆಯಾಗುತ್ತದೆ.
ಉಚಿತ ಲಸಿಕೆ, ತಪಾಸಣೆ ಶಿಬಿರಗಳು, ಗರ್ಭಿಣಿ ಮಹಿಳೆಯರಿಗೆ ಉಚಿತ ಚಿಕಿತ್ಸೆ, ವೃದ್ಧರಿಗೆ ಉಚಿತ ತಪಾಸಣೆ ಇವು ಆರೋಗ್ಯದ ಭಾಗ. ಈ ಸೇವೆಗಳು ದುಬಾರಿ ಚಿಕಿತ್ಸೆಯನ್ನು ತಪ್ಪಿಸಿ ಸರ್ಕಾರದ ಮೇಲಿನ ವೆಚ್ಚವನ್ನೂ ಕಡಿಮೆ ಮಾಡುತ್ತವೆ. ಉಚಿತ ವೈದ್ಯಸೇವೆ ಮಾತ್ರ ಸಾಲದು. ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಉಚಿತ ಪೋಷಕಾಂಶಯುಕ್ತ ಆಹಾರ, ಮಹಿಳೆಯರ ಪೋಷಣೆಶ್ರಿಇವುಗಳೆಲ್ಲ ಆರೋಗ್ಯ ಸುಧಾರಣೆಗೆ ಅಗತ್ಯ. ಸರ್ಕಾರದ ಕಾರ್ಯಕ್ರಮಗಳು ಸಮಾನವಾಗಿ ಸಾಮಾನ್ಯ ಜನರಿಗೆ ತಲುಪಿದಾಗ ಸಮಗ್ರ ಆರೋಗ್ಯ ಸುಧಾರಣೆ ಸಾಧ್ಯ.
ಅದರಂತೆ “ಉಚಿತ ಶಿಕ್ಷಣ” ದೀರ್ಘಕಾಲದ ಸಮಾನತೆ ಮತ್ತು ಸಬಲೀಕರಣದ ಬುನಾದಿ. ಶಿಕ್ಷಣವಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಜ್ಞಾನ, ಕೌಶಲ್ಯ, ಮೌಲ್ಯಗಳು, ವಿಚಾರಶಕ್ತಿ ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ ಲಭ್ಯವಾಗಬೇಕು. ಪದವಿ, ವೃತ್ತಿ ಶಿಕ್ಷಣ, ತಾಂತ್ರಿಕ ತರಬೇತಿ ಇವೆಲ್ಲ ಉಚಿತವಾಗಿ ಅಥವಾ ಕನಿಷ್ಠ ಶುಲ್ಕದಲ್ಲಿ ಸಿಗುವಂತಾಗಬೇಕು. ಆಗ ಮಾತ್ರ ಬಡ ವಿದ್ಯಾರ್ಥಿಗಳಿಗೂ ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗುತ್ತವೆ.
ಉಚಿತ ಶಿಕ್ಷಣದ ಜೊತೆ ಶಿಕ್ಷಕರ ತರಬೇತಿ, ಉತ್ತಮ ಪಠ್ಯಕ್ರಮ, ಪ್ರಯೋಗಶಾಲೆ, ಡಿಜಿಟಲ್ ಕ್ಲಾಸ್ರೂಮ್, ಪುಸ್ತಕಗಳು, ಗ್ರಂಥಾಲಯ ಇವೆಲ್ಲವೂ ಮುಖ್ಯ. ಕೇವಲ ಉಚಿತ ಶಿಕ್ಷಣ ಘೋಷಣೆ ಸಾಲದು; ಗುಣಮಟ್ಟದ ಶಿಕ್ಷಣ ಅಗತ್ಯ. ಇಂದಿನ ಯುಗ ತಂತ್ರಜ್ಞಾನದ ಯುಗ. ವಿದ್ಯಾರ್ಥಿಗಳಿಗೆ ಉಚಿತ ಡಿಜಿಟಲ್ ಸಾಧನಗಳು, ಇಂಟರ್ನೆಟ್, ಆನ್ಲೈನ್ ಪಠ್ಯವಸ್ತುಗಳು ಸಿಗುವುದರಿಂದ ಜ್ಞಾನ ಲೋಕ ವಿಸ್ತರಿಸುತ್ತದೆ. ಗ್ರಾಮ-ನಗರ ಅಂತರ ಕಡಿಮೆಯಾಗುತ್ತದೆ.
ಉಚಿತ ಆರೋಗ್ಯ ಶಿಕ್ಷಣ ಸರ್ಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವದು ಖಂಡಿತವಾದರೂ ಉಚಿತ ಸೇವೆಗಳು ಆದರೆ ದೀರ್ಘಾವಧಿಯಲ್ಲಿ ದೇಶಕ್ಕೆ ಬೃಹತ್ ಲಾಭ ಸಿಗುವುದು ಶತಸಿದ್ಧ.
ಶಿಕ್ಷಣದಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆರೋಗ್ಯದಿಂದ ಉತ್ಪಾದಕತೆ ಹೆಚ್ಚುತ್ತದೆ. ಮನೆಮಂದಿಗೆ ವೈದ್ಯಕೀಯ ಸಾಲದ ಬಾಧೆ ಕಡಿಮೆಯಾಗುತ್ತದೆ. ತಾಂತ್ರಿಕವಾಗಿ ಪರಿಣತ ಸಿಬ್ಬಂದಿ, ಆರೋಗ್ಯವಂತ ಕಾರ್ಮಿಕರಿಂದ ಕೈಗಾರಿಕೆಗಳು ಬೆಳೆಯುತ್ತವೆ. ದೇಶದ ಜಿಡಿಪಿ ಮೇಲೇರಲು ಅನುಕೂಲವಾಗುತ್ತದೆ.
ಉಚಿತ ಆರೋಗ್ಯ ಮತ್ತು ಶಿಕ್ಷಣ ಅಸಮಾನದ ಅಂತರವನ್ನು ಕಡಿಮೆ ಮಾಡುತ್ತದೆ, ಸಾಮಾಜಿಕ ನ್ಯಾಯವನ್ನು ಸ್ಥಾಪಿಸುತ್ತದೆ ಬಡ-ಶ್ರೀಮಂತ ವ್ಯತ್ಯಾಸವನ್ನು ಕಡಿಮೆ ಮಾಡುತ್ತದೆ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ ಅಲ್ಲದೆ ಗ್ರಾಮೀಣ ಜನತೆಗೆ ಅವಕಾಶಗಳನ್ನು ಹೆಚ್ಚಿಸುತ್ತದೆ ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ; ಅದು ವ್ಯಕ್ತಿತ್ವ ನಿರ್ಮಾಣ. ಉಚಿತ ಶಿಕ್ಷಣದಿಂದ ಯುವಕರಲ್ಲಿ ನೈತಿಕ ಮೌಲ್ಯಗಳು, ದೇಶಭಕ್ತಿ, ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಸಾಮಾಜಿಕ ಬದ್ಧತೆ ಇವೆಲ್ಲ ಬೆಳೆಸಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಫಿನ್ಲ್ಯಾಂಡ್, ನಾರ್ವೇ, ಕೆನಡಾ, ಜರ್ಮನಿ, ಜಪಾನ್ ಮುಂತಾದ ದೇಶಗಳ ಯಶಸ್ಸಿನ ಗುಟ್ಟು ತಮ್ಮ ನಾಗರೀಕರಿಗೆ ಉಚಿತ ಆರೋಗ್ಯಹಿಶಿಕ್ಷಣ ನೀಡಿರುವುದು. ಇಲ್ಲಿ ಶಿಕ್ಷಣ-ಆರೋಗ್ಯ ಸೇವೆ ಸಂಪೂರ್ಣ ಉಚಿತ, ಆಸ್ಪತ್ರೆಗಳು ಅತ್ಯುತ್ತಮ ಗುಣಮಟ್ಟದವಗಳಾಗಿದ್ದು, ಸರ್ಕಾರ ಜನರ ಆರೋಗ್ಯಹಿಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಆದ್ದರಿಂದ ಈ ರಾಷ್ಟ್ರಗಳು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ.
ಏರೋಪಿಯನ್ ಬಹುತೇಕ ವಿಕಸಿತ ದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣವನ್ನು ಮೂಲ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಜನರ ಕಲ್ಯಾಣವನ್ನು ಸರ್ಕಾರದ ಮುಖ್ಯ ಕರ್ತವ್ಯವೆಂದು ನೋಡಲಾಗುತ್ತದೆ. ಈ ದೇಶಗಳಲ್ಲಿ ಯೂನವರ್ಸಲ್ ಹೆಲ್ತ್ ಕೇರ್ ವ್ಯವಸ್ಥೆ ಪ್ರಬಲವಾಗಿದೆ ಅಂದರೆ ಪ್ರತಿಯೊಬ್ಬ ನಾಗರಿಕನಿಗೂ ವೈದ್ಯಕೀಯ ಚಿಕಿತ್ಸೆ ಲಭ್ಯ. ಆಸ್ಪತ್ರೆಗಳು, ತುರ್ತು ಚಿಕಿತ್ಸೆಗಳು, ಓಷಧಿ, ಶಸ್ತ್ರಚಿಕಿತ್ಸೆ ಮೊದಲಾದ ಸೇವೆಗಳು ಬಹುಕೇತ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಲಭ್ಯವಿರುತ್ತದೆ. ಇದಕ್ಕೆ ಹಣವು ಸಮಾನ ಮತ್ತು ಪಾರದರ್ಶನ ತೆರಿಗೆ ವ್ಯವಸ್ಥೆಯಿಂದ ಬರುತ್ತದೆ. ಜನರು ತೆರಿಗೆ ಪಾವತಿಸುತ್ತಾರೆ ಸರ್ಕಾರ ಅದನ್ನು ಜನರ ಸೇವೆಗೆ ಬಳಸುತ್ತದೆ. ಆರೋಗ್ಯ ಸೇವೆಯನ್ನು ವ್ಯವಹಾರವಾಗಿ ನೋಡುವ ಬದಲು ಜೀವ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ನಂಬುತ್ತಾರೆ.
ಈ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆಯು ಅದೇ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರ್ಣವಾಗಿ ಉಚಿತ ಮತ್ತು ಶಾಲೆಗಳ ಗುಣಮಟ್ಟ ಅತ್ಯುತ್ತಮ. ಶಿಕ್ಷಕರಿಗೆ ಪ್ರಾಮಾಣಿಕ ವೇತನ, ಉತ್ತಮ ತರಬೇತಿ ಹಾಗೂ ಶಾಲೆಗಳಲ್ಲಿರುವ ವೈಜ್ಞಾನಿಕ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸೌಕರ್ಯ, ಇವೆಲ್ಲವೂ ಸರ್ಕಾರದ ನಿರ್ವಹಣೆಯಲ್ಲಿವೆ. ಅನೇಕ ಯುರೋಪಿಯನ್ ದೇಶಗಳಲ್ಲಿ ವಿಶ್ವವಿದ್ಯಾಲಯ ಶಿಕ್ಷಣವು, ಕಡಿಮೆ ವೆಚ್ಚದಲ್ಲಿ ಅಥವಾ ಸಂಪೂರ್ಣವಾಗಿ ಉಚಿತವಾಗಿ ಲಭ್ಯ. ಜರ್ಮನಿ, ಫಿನ್‌ಲ್ಯಾಂಡ್, ನಾರ್ವೇ ಮುಂತಾದ ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಯ ಅಗತ್ಯ ತುಂಬಾ ಕಡಿಮೆ. ಪ್ರತಿಭಾಶಾಲಿಗಳಿಗೆ ಸರ್ಕಾರವೇ ವಿದ್ಯಾರ್ಥಿ ವೇತನ, ಸಂಶೋಧನಾ ಸಹಾಯ ನೀಡುತ್ತದೆ. ಆದ್ದರಿಂದ ಹಣದ ಕೊರತೆಯಿಂದ ಶಿಕ್ಷಣ ನಿಲ್ಲುವ ಸ್ಥಿತಿ ಬರುವುದಿಲ್ಲ.
ಈ ವ್ಯವಸ್ಥೆಗಳು ಯಶಸ್ವಿಯಾಗಿರುವುದಕ್ಕೆ ಎರಡು ಕಾರಣಗಳಿವೆ. ಒಂದು ಪಾರದರ್ಶಕ ಆಡಳಿತ ಮತ್ತು ನಾಗರಿಕರ ಜವಾಬ್ದಾರಿತನ, ಯೂರೋಪಿಯನ್ ಜನರು ತೆರಿಗೆ ಪಾವತಿಸುವುದು ಕೇವಲ ಕರ್ತವ್ಯವಲ್ಲ. ಅದು ಸಮಾಜಕ್ಕೆ ಕೊಡುಗೆ ಎಂದು ನೋಡುವ ಮನೋಭಾವವಿದೆ. ಸರ್ಕಾರವು ಆ ಹಣವನ್ನು ದುರುಪಯೋಗ ಮಾಡದೇ ಸಾರ್ವಜನಿಕ ಸುಧಾರಣೆಗೆ ಬಳಸುತ್ತದೆ. ಭ್ರಷ್ಟಾಚಾರ ಕಡಿಮೆ, ನಿಯಮ ಪಾಲನೆ ಹೆಚ್ಚು. ಹಕ್ಕು ಮತ್ತು ಕರ್ತವ್ಯ ಎರಡೂ ಸಮತೋಲನದಲ್ಲಿ ಇರುವುದರಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅತೀ ಗುಣಮಟ್ಟ ಉಳಿಸಿಕೊಂಡಿವೆ. ಇದೇ ಕಾರಣಕ್ಕೆ ಯೂರೋಪ ಮಾನವ ವೃದ್ಧಿ ಜೀವಿತಾವಧಿ ಮತ್ತು ಸಾಮಾಜಿಕ ಭದ್ರತೆಯಲ್ಲಿ ಜಗತ್ತಿಗೆ ಮಾದರಿಯಾಗಿದೆ.
ಭಾರತವು ಉಚಿತ ಶಿಕ್ಷಣ ಮತ್ತು ಆರೋಗ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಜನಸಂಖ್ಯೆಯ ಪ್ರಮಾಣ, ಆರ್ಥಿಕ ವ್ಯತ್ಯಾಸ, ಮೂಲಸೌಕರ್ಯ ಕೊರತೆ ಇವು ಸವಾಲುಗಳನ್ನು ಸೃಷ್ಟಿಸಿರುವುದು ಅಷ್ಟೇ ಸತ್ಯ.
ಆದರೂ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣಶ್ರಿಇವೆರಡೂ ರಾಷ್ಟ್ರದ ಅತ್ಯಂತ ಶ್ರೇಷ್ಠ ಹೂಡಿಕೆಗಳು ಎನ್ನುವದರಲ್ಲಿ ಎರಡು ಮಾತಿಲ್ಲ. ಒಂದು ರಾಷ್ಟ್ರ ತನ್ನ ನಾಗರಿಕರ ಆರೋಗ್ಯವನ್ನು ಕಾಯುವುದು, ಅವರು ಕಲಿಯಲು ಸೂಕ್ತ ಅವಕಾಶಗಳನ್ನು ನೀಡುವುದೂ ಕೇವಲ ಮಾನವೀಯ ಕರ್ತವ್ಯವಷ್ಟೇ ಅಲ್ಲ; ಅದು ಆರ್ಥಿಕ ಹಾಗೂ ಸಮಾಜಿಕ ಪ್ರಗತಿಗೂ ಅಗತ್ಯ. ಒಬ್ಬ ಆರೋಗ್ಯವಂತ, ವಿದ್ಯಾವಂತ, ಜಾಗೃತ ನಾಗರಿಕನೇ ಉತ್ತಮ ಸಮಾಜವನ್ನು ನಿರ್ಮಿಸುತ್ತಾನೆ. ಉತ್ತಮ ಸಮಾಜವೇ ಉತ್ತಮ ರಾಷ್ಟ್ರವನ್ನು ನಿರ್ಮಿಸುತ್ತದೆ.
ಆದ್ದರಿಂದ “ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ” ದೇಶದ ಪ್ರಗತಿಗೆ ಪೂರಕ. ಇವುಗಳಲ್ಲಿ ಹೂಡಿಕೆ ಮಾಡಿದ ರಾಷ್ಟ್ರಗಳು ಸದಾ ಶಾಂತಿ, ಸಮಾನತೆ ಮತ್ತು ಆರ್ಥಿಕ ಬಲದ ದೃಷ್ಟಿಯಲ್ಲಿ ಶ್ರೇಷ್ಠ ಸ್ಥಾನದಲ್ಲಿರುತ್ತವೆ. ಇದು ಕೇವಲ ಸರ್ಕಾರದ ಹೊಣೆಗಾರಿಕೆ ಮಾತ್ರವಲ್ಲ; ಸಮಾಜ, ಸಂಸ್ಥೆಗಳು, ನಾಗರಿಕರು ಎಲ್ಲರೂ ಸೇರಿ “ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ ಈ ಎರಡು ಸ್ತಂಭಗಳನ್ನು ಬಲಪಡಿಸುವ ಪಾತ್ರವನ್ನು ನಿರ್ವಹಿಸಬೇಕು. ದೇಶದ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆಗಳ ಒಳಿತಿಗಾಗಿ, ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣವನ್ನು ಅತ್ಯುನ್ನತ ರಾಷ್ಟ್ರ ನೀತಿಯನ್ನಾಗಿ ಮಾಡುವುದು ಅವಶ್ಯಕ.