ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಔದಾಯ ತೋರಬೇಕು: ಪ್ರಭು ಶ್ರೀ
ಮಹಾಲಿಂಗಪುರ: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯುವ ಔದಾರ್ಯ ತೋರಬೇಕು ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಹೇಳಿದರು.
ಸಮೀಪದ ರನ್ನಬೆಳಗಲಿಯ ಮಹಾಲಕ್ಷ್ಮೀ ಪೆಟ್ರೋಲಿಯಂ ಹಾಗೂ ಸಿ.ಎಂ.ಹೊಸೂರ ಟ್ರಾನ್ಸಪೋರ್ಟ್ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಹಾಲಕ್ಷ್ಮೀ ಪೂಜಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಕೆಲವರು ಕೆರೆಯ ನೀರನ್ನು ಕೂಡ ಚೆಲ್ಲಲು ಲೆಕ್ಕ ಹಾಕುತ್ತಾರೆ. ಅಂಥದ್ದರಲ್ಲಿ ವರ್ತಕನಾಗಿ, ಉದ್ಯಮಿಯಾಗಿ ಬಾನೆತ್ತರಕ್ಕೆ ಬೆಳೆದರೂ ಬೇರುಮಟ್ಟದ ಕಾರ್ಮಿಕರ ಬಗ್ಗೆ ಕಳಕಳಿ ಹೊಂದಿರುವ ಚನ್ನಬಸಪ್ಪ ಹೊಸೂರ ಅವರ ಔದಾರ್ಯ ಶ್ಲಾಘನೀಯ. ಅಂದಾಜು 250ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಇವರು ದೀಪಾವಳಿ ದಿನದಂದು ಪ್ರತಿಯೊಬ್ಬರಿಗೂ ಹೊಸ ಬಟ್ಟೆ, ಬೋನಸ್, ಸಿಹಿ ಖಾದ್ಯ ನೀಡಿ ಸನ್ಮಾನಿಸಿದ್ದಲ್ಲದೇ ಇಡೀ ದಿನ ಹೆದ್ದಾರಿ ಪಕ್ಕದಲ್ಲಿ ಸಾವಿರಾರು ಜನರಿಗೆ ಊಟ ಮತ್ತು ಉಪಹಾರ ಉಣಬಡಿಸಿ ದೀಪಾವಳಿಯ ಸಂಭ್ರಮವನ್ನು ಸ್ನೇಹಪೂರ್ವಕವಾಗಿ ಹಂಚಿಕೊಂಡಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ನಂತರ ಶ್ರೀ ಮಹಾಲಕ್ಷ್ಮೀ ಪೆಟ್ರೋಲಿಯಂ ವತಿಯಿಂದ 300 ರೂ. ಪಟ್ರೋಲ್ ತುಂಬಿಸಿದವರಿಗೆ 1 ಬೈಕ್, 1 ಸ್ಕೂಟಿ, 4 ಸೈಕಲ್ ಬಹುಮಾನವಿರುವ ಲಕ್ಕೀ ಡ್ರಾ ಟೋಕನ್ ಗೆ ಶ್ರೀಗಳು ಚಾಲನೆ ನೀಡಿದರು.
ಮಾಲೀಕ ಚನ್ನಬಸಪ್ಪ ಹೊಸೂರ ಮಾತನಾಡಿ, ನಾನು ಕೂಡ ತಳಮಟ್ಟದಿಂದಲೇ ಬೆಳೆದು ಬಂದವನು, ದುಡಿಯುವ ಕೈಗಳಿಗೆ, ನಂಬುವ ಮನಸುಗಳಿಗೆ ನಾನು ಯಾವಾಗಲೂ ಸ್ಪಂದಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಲಕ್ಷ್ಮೀ ಮೂರ್ತಿಗೆ ಪೂಜೆ ಸಲ್ಲಿಸುವ, ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಚಿಮ್ಮಡ ಗ್ರಾಮ, ರನ್ನಬೆಳಗಲಿ ಪಟ್ಟಣ ಹಾಗೂ ಮಹಾಲಿಂಗಪುರ ನಗರದ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.