ಮುಸ್ಲಿಮರಿಗೆ 2ಬಿ ಮೀಸಲಾತಿ ತಿದ್ದುಪಡಿ ಮಾಡಿದ್ದು ಖಂಡನೀಯ: ನದಾಫ
ಲೋಕದರ್ಶನ ವರದಿ,
ಜಮಖಂಡಿ01:ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2ಬಿ ಮೀಸಲಾತಿ ತಿದ್ದುಪಡಿ ಮಾಡಿದ್ದು ಖಂಡನೀಯ ಎಂದು ಅಂಜುಮನ-ಎ-ಇಸ್ಲಾಂ ತಾಲೂಕ ಘಟಕ ಅಧ್ಯಕ್ಷ ಝಾಕೀರ ನದಾಫ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಮುಸ್ಲಿ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ನೀಡಿರುವ ಶೇ.4 ರಷ್ಟು ಮೀಸಲಾತಿಯನ್ನು ತೆಗೆದು ಬೇರೆ ಸಮುದಾಯಕ್ಕೆ ನೀಡಿರುವ ವ್ಯವಸ್ಥೆಯನ್ನು ಮುಸ್ಲಿಂ ಸಮುದಾಯ ಒಪ್ಪುವದಿಲ್ಲ. ನಾವು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆ.
ನ್ಯಾ.ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ. ಕರ್ನಾಟಕದಲ್ಲಿ ಮುಸ್ಲಿಮರು ಉದ್ಯೋಗ, ಶಿಕ್ಷಣ, ಆರ್ಥಿಕವಾಗಿ ಮಾತ್ರ ಹಿಂದುಳಿದ ಸಮುದಾಯವಲ್ಲ ಸಾಮಾಜಿಕವಾಗಿ ಕೂಡ ಶೋಷಿತವಾಗಿದೆ. ಮತಗಳಿಕೆಗಾಗಿ ಓಲೈಸಲು ಮುಸ್ಲಿಂ ಮೀಸಲಾತಿ ವಿಭಜಿಸಿ ಒಕ್ಕಲಿಗ, ಲಿಂಗಾಯತ ವರ್ಗಗಳಿಗೆ ಕೊಟ್ಟಿರುವ ಸರ್ಕಾರದ ನೀತಿಯನ್ನು ಪ್ರಗತಿಪರರು ವಿರೋಧಿಸಿದ್ದಾರೆ. ಪ್ರವರ್ಗದಲ್ಲಿ ನೀಡಿದ್ದ 4ರಷ್ಟು ಮೀಸಲಾತಿಯನ್ನು ಆರ್ಥಿಕ ಸೇರ್ಪಡೆ ಮಾಡಿರುವುದು ಸಂವಿಧಾನ ಸಾಮಾಜಿಕ ಅಸಮಾನತೆಯ ನಿರ್ಣಯವಾಗಿದ್ದು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾ ರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಅನ್ವರ ಮೋಮಿನ, ಸಿಕಂದರ ಶೇಖ, ಸಾಧಿಕ ಮಾಲದಾರ, ಮುಸಾ ಮುಲ್ಲಾ, ದಾದಾಪೀರ ಮಂಗಲವಾಡಿ, ಇಪ್ರಾನ್ ಪಠಾಣ ಸಹಿತ ಹಲವರು ಇದ್ದರು.