ಮಹಲಿಂಗಪುರ

ಪಡಿತರ ಅಕ್ಕಿಯನ್ನು ಮೊದಲು ಜನನಾಯಕರು ತಿನ್ನಲಿ: ಡಾ ಹನುಮಂತ ಮಳ

ಪಡಿತರ ಅಕ್ಕಿಯನ್ನು ಮೊದಲು ಜನನಾಯಕರು ತಿನ್ನಲಿ: ಡಾ ಹನುಮಂತ ಮಳ

ಮಹಾಲಿಂಗಪುರ : ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಮೊದಲು ರಾಜಕಾರಣಿಗಳು ತಿನ್ನಲಿ ನಂತರ ಬಡ ಜನರಿಗೆ ನೀಡಲಿ ಎಂದು  ರಾಷ್ಟ್ರೀಯವಾದಿ ಡಾ.ಹನುಮಂತ ಮಳಲಿ ಸವಾಲು ಹಾಕಿದರು. 

ಸಿಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಲಿಂ.ಮಹಾದೇವಪ್ಪ ಮತ್ತು ಶಾಂತವ್ವ ಹುರಕಡ್ಲಿ ಇವರ ಸ್ಮರಣಾರ್ಥ ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕೃತಕ ಕೈ ಕಾಲು ಜೋಡಣೆ, ರಕ್ತದಾನ, ಹೃದಯ ಕಾಯಿಲೆ, ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ  ಶಿಬಿರದಲ್ಲಿ ಮಾತನಾಡಿದ ಅವರು, ಭಾರತ ಬ್ರಹ್ಮಾಂಡದ ಸ್ವರ್ಗ, ಚೀನಿಯರು ಈಗಲೂ ಸ್ವರ್ಗಕ್ಕೆ ಭಾರತ ಎಂದೇ ಕರೆಯುತ್ತಾರೆ, ತ್ಯಾಗ ಸೇವೆಯ ಮೇಲೆ ದೇಶ ನಿಂತಿದೆ, ಸೇವೆಯೇ ಶ್ರೇಷ್ಠ ಧರ್ಮ, ಜಗತ್ತಿನಲ್ಲಿ 21 ಲಕ್ಷ ವನಸ್ಪತಿ ಹೊಂದಿರುವ ಏಕೈಕ ದೇಶ ನನ್ನ ಭಾರತ ಸರ್ವರೋಗಕ್ಕೂ ಮದ್ದು, ಭಿಕ್ಷುಕಿ ಸಿಂಧೂ ತಾಯಿ ಭಿಕ್ಷೆ ಬೇಡಿ 1200 ಮಕ್ಕಳಿಗೆ ಶಿಕ್ಷಣ ನೀಡಿ 7 ಐಎಎಸ್ ಅಧಿಕಾರಿಗಳನ್ನು ದೇಶಕ್ಕೆ ಕೊಟ್ಟಿದ್ದಾರೆ ಆ ನಿಟ್ಟಿನಲ್ಲಿ ಕಾರ್ಯಕ್ರಮದ ರೂವಾರಿ ಚನ್ನಬಸು ಹುರಕಡ್ಲಿ ಅವರ ಸಮಾಜ ಸೇವೆ ಶ್ಲಾಘನೀಯ ಎಂದರು. 

ಧಾರವಾಡದ ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಶ್ರೀ ಮಾತನಾಡಿ, ಗ್ರಾಮೀಣ ಪ್ರದೇಶಗಳು ಆರೋಗ್ಯದ ತಾಣಗಳು, ಪ್ರಾಣಾಯಾಮದಿಂದ ಆರೋಗ್ಯ ಸಿದ್ಧಿ, ಅರಿಷಡ್ವರ್ಗಗಳು ಆರೋಗ್ಯಕ್ಕೆ ಕುತ್ತು ಎಂದರು. 

ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ  ಮಠದ ಶಿವಶಂಕರ ಶ್ರೀ ಮಾತನಾಡಿ, ರೋಗ ತಂದುಕೊಂಡು ಆಸ್ಪತ್ರೆಯಲ್ಲಿ ನರಳಾಡುವ ಬದಲು ನಿತ್ಯ 3-4 ತಾಸು ಯೋಗ ಮಾಡಿ ರೋಗ ಓಡಿಸಿ, ಭಾರತದ ಸಂಸ್ಕಾರ ದೊಡ್ಡದು, ಕ್ರಮ ತಪ್ಪಿದರೆ ಅನಾರೋಗ್ಯ ಖಂಡಿತ, ಪರೋಪಕಾರದಿಂದ ಜನ್ಮ ಸಾರ್ಥಕ ಎಂದರು. 

ಸುತ್ತಮುತ್ತಲ ಜಿಲ್ಲೆಗಳಿಂದಲೂ ಆಗಮಿಸಿದ್ದ ಸುಮಾರು 78 ಜನರಿಗೆ ಕೃತಕ ಕೈ ಕಾಲು ಉಚಿತ ಜೋಡಣೆ 58 ಜನರಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ನೂರು ಜನರಿಂದ ರಕ್ತದಾನ, ಕ್ಯಾನ್ಸರ್ ರೋಗಿಗಳಿಗೆ ಉಚಿತ ಔಷಧಿ ವಿತರಿಸಲಾಯಿತು. 

ಕಂಕಣವಾಡಿ ಮಾರುತಿ ಶರಣ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿದರು. 

ಬೀದರಿನ ಚಿದಂಬರಾಶ್ರಮದ ಸಿದ್ದಾರೂಢ ಮಠದ ಶಿವಕುಮಾರ ಶ್ರೀ ಸಾನಿಧ್ಯಲ್ಲಿ, ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ  ಸಮ್ಮುಖದಲ್ಲಿ ಖ್ಯಾತ ವೈದ್ಯ ಡಾ.ಅಜಿತ ಕನಕರಡ್ಡಿ, ನೇತ್ರಾಧಿಕಾರಿ ವಿಜಯ ಡೊಮನಾಳ, ಪುರಸಭಾಧ್ಯಕ್ಷ ಬಸವರಾಜ ಹಿಟ್ಟಿನಮಠ,ಚನ್ನಬಸು ಹುರಕಡ್ಲಿ,ಸವಿತಾ ಹುರಕಡ್ಲಿ,ಇತರರು ಇದ್ದರು. 

ಪತ್ರಕರ್ತ ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಾನಂದ ನೇಗಿನಾಳ ನಿರೂಪಿಸಿದರು. 


*ಸುಮಾರು ವರ್ಷದ ಕಾಲಿಲ್ಲದೆ ಜೀವನವೇ ಬೇಡವೆನಿಸಿತ್ತು ಆದರೆ ಇಂದು ಚನ್ನಬಸು ಹುರಕಡ್ಲಿ ನನಗೆ ಮತ್ತು ನನ್ನಂಥ ನೂರಾರು ರೋಗಿಗಳಿಗೆ ಕೃತಕ ಕೈಕಾಲು ಜೋಡಣೆ, ಕಣ್ಣಿನ ಚಿಕಿತ್ಸೆ, ಹೃದಯ ಚಿಕಿತ್ಸೆ ಸ್ವಂತ ಖರ್ಚುನಲ್ಲಿ ಕೊಡಿಸಿ ಮರುಜನ್ಮ ನೀಡಿದ್ದಾರೆ ಅವರಿಗೆ ನಾವು ಚಿರಋಣಿ: ಫಲಾನುಭವಿ 

ಸುದ್ದಿ ಓದಿ