ಮಹಲಿಂಗಪುರ

ರಾಷ್ಟ್ರಮಟ್ಟದ ಸೈಕ್ಲಿಂಗ್ನಲ್ಲಿ ಬೆಳ್ಳಿಪದಕ ಗೆದ್ದ ಹೊನ್ನಪ್ಪ

ರಾಷ್ಟ್ರಮಟ್ಟದ ಸೈಕ್ಲಿಂಗ್ನಲ್ಲಿ ಬೆಳ್ಳಿಪದಕ ಗೆದ್ದ ಹೊನ್ನಪ್ಪ
ಬೆಳ್ಳಿಪದಕ ಗೆದ್ದ ಹೊನ್ನಪ್ಪ ಚಿದಾನಂದ ಧರ್ಮಟ್ಟಿ

* ನಾರನಗೌಡ ಉತ್ತಂಗಿ, 

ಮಹಾಲಿಂಗಪುರ20: ಹಳ್ಳಿಯ ಮಧ್ಯಮ ಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಯಾವುದೇ ಮೂಲ ಸೌಕರ್ಯ, ತರಬೇತಿ ಇಲ್ಲದೆ ಕೇವಲ ತನ್ನ ಪ್ರತಿಭೆ ಮತ್ತು ಆತ್ಮ ಬಲದಿಂದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ  ತಂದಿದ್ದಾನೆ.

ಹೌದು, ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಾರಾಪುರ ಗ್ರಾಮದ ಚಿದಾನಂದ ಧರ್ಮಟ್ಟಿ ಮತ್ತು ಶಾಂತಾ ಇವರ ಪುತ್ರನಾದ ಹೊನ್ನಪ್ಪ ಲಕ್ಷಾಂತರ ಹಣ ಖರ್ಚು  ಮಾಡಿ ಸೈಕ್ಲಿಂಗ್ ಸೈಕಲ್ ಖರೀದಿಸುವ ಶಕ್ತಿ ಇಲ್ಲದಿದ್ದರೂ, ಅತ್ಯಾಧುನಿಕ ಹಾಗೂ ಬೆಲೆಬಾಳುವ ಸೈಕಲನ್ನು ಹೊಂದಿದ್ದ ಇತರ ಕ್ರೀಡಾಪಟುಗಳನ್ನು ಮೀರಿಸಿ ಕೇವಲ ಕ್ರೀಡಾ ಶಾಲೆಯ ಶಿಕ್ಷಕರ ಸ್ಪೂರ್ತಿ  ಮತ್ತು ಅವಿರತ ಶ್ರಮದಿಂದಾಗಿ ತನಗೆ ತಾನೇ ಗುರುವಾಗಿ ಅಚಲ ಆತ್ಮವಿಶ್ವಾಸದಿಂದ ಜ. 7 ರಿಂದ 11 ರವರೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್  ಬಾಲಕರ ವಿಭಾಗದ 20 ಕಿ.ಮೀ. ಟೀಮ್ ಟ್ರಯಲ್ ನಲ್ಲಿ ತರುಣ ನಾಯಕ, ಯಲ್ಲೇಶ ಹುಡೇದ ಅವರೊಂದಿಗೆ 29.52 ನಿಮಿಷಗಳಲ್ಲಿ  ಗುರಿ ತಲುಪಿ ದ್ವಿತೀಯ ಸ್ಥಾನದ ಬೆಳ್ಳಿಪದಕ ಪಡೆದು ಕಿರಿಯ ವಯಸ್ಸು ಮತ್ತು ಕಡಿಮೆ ಅವಧಿಯಲ್ಲಿಯೇ ಹಿರಿಯ ಸಾಧನೆ ಮಾಡಿ ಮಿಂಚಿದ್ದಾನೆ. ಮುಂದೆ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾನೆ

ಕೇವಲ 6 ತಿಂಗಳಲ್ಲಿ ಸಾಧನೆ : 

ಸದ್ಯ ಚಂದರಗಿ ಕ್ರೀಡಾ ವಸತಿ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿರುವ ಹೊನ್ನಪ್ಪ ಕೇವಲ 6 ತಿಂಗಳಿನಿಂದ  ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ನಿತ್ಯ 4 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಸಾಧನೆ ಮಾಡಿದ್ದಾನೆ. 

ಹೊನ್ನಪ್ಪ ಭವಿಷ್ಯದ ಉತ್ತಮ ಕ್ರೀಡಾಪಟು:      

ಹೊನ್ನಪ್ಪ ಕೇವಲ 6 ತಿಂಗಳಲ್ಲಿ ಸೈಕ್ಲಿಂಗ್ ಕ್ರೀಡೆಯಲ್ಲಿ ತೋರುತ್ತಿರುವ ಆಸಕ್ತಿ, ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ. ಅಗತ್ಯ ಕ್ರೀಡಾ ಸೌಲಭ್ಯಗಳೊಂದಿಗೆ ಪ್ರೋತ್ಸಾಹ ನೀಡಿದರೆ ಹೊನ್ನಪ್ಪ ಭವಿಷ್ಯದಲ್ಲಿ ಭಾರತದ ಬೆಸ್ಟ್ ಸೈಕ್ಲಿಂಗ್ ರೈಡರ್ ಆಗುವದರಲ್ಲಿ ಅನುಮಾನವಿಲ್ಲ.

-ಭೀಮಶಿ ವಿಜಯನಗರ.

ಸೈಕ್ಲಿಂಗ್ ತರಬೇತಿದಾರರು. ಕ್ರೀಡಾ ವಸತಿ ಶಾಲೆ. ಕೆ.ಚಂದರಗಿ.

*ಮೊನ್ನೆ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ನಲ್ಲಿ ಇತರ ಕ್ರೀಡಾಪಟುಗಳಿಗಿರುವಂತೆ ಅತ್ಯಾಧುನಿಕ ಸೈಕಲ್ ಹೊಂದಿದ್ದರೆ ನನ್ನ ಮಗ ಖಂಡಿತವಾಗಿಯೂ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಬಂಗಾರದ ಪದಕ ತರುತ್ತಿದ್ದ ಆದರೆ ಆ ನಿಟ್ಟಿನಲ್ಲಿ ನಮಗೆ ಯಾರೂ ಸಹಾಯ ಮಾಡಲಿಲ್ಲ ಹಾಗಾಗಿ ಜನನಾಯಕರು ಅಥವಾ ಸರ್ಕಾರ, ಸಂಘ ಸಂಸ್ಥೆಗಳು ಸಹಾಯ ಮಾಡಿದರೆ ಖಂಡಿತವಾಗಿಯೂ ನನ್ನ ಮಗ ರಾಜ್ಯದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬಲ್ಲ : ಚಿದಾನಂದ ಧರ್ಮಟ್ಟಿ, ಸಾಧಕನ ತಂದೆ


ಸುದ್ದಿ ಓದಿ