ಮಹಲಿಂಗಪುರ

ಮಂದಗತಿ ಬಸ್ ನಿಲ್ದಾಣದ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ಮಂದಗತಿ ಬಸ್ ನಿಲ್ದಾಣದ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ಬೇಗ ಮುಗಿಸಲು ತ್ವರಿತ ಕ್ರಮ: ಶಾಸಕರಿಂದ ಭರವಸೆ

ಮಹಾಲಿಂಗಪುರ 09: ಕಳೆದ ಎರಡು ವರ್ಷಗಳ ಹಿಂದೆ ಹಳೆಯ ಕೇಂದ್ರ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸ ನಿಲ್ದಾಣಕ್ಕೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ತ್ವರಿತ ಗತಿಯಲ್ಲಿ ಮುಗಿಯಬೇಕಾದ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದಕ್ಕೆ ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಈ ಬಸ್ ನಿಲ್ದಾಣಕ್ಕೆ ದಿನಂಪ್ರತಿ ಅಂದಾಜು 40ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಆಗಮಿಸುತ್ತಾರೆ. ಈ ಹಿಂದೆ ಅರ್ಧ ಶತಮಾನ ಕೇಂದ್ರ ಬಸ್ ನಿಲ್ದಾಣದ ಕಟ್ಟಡ ಶಿಥಿಲಗೊಂಡು ಜೀವಕ್ಕೆ ಅಪಾಯ ತಂದೊಡ್ಡಿತ್ತು. ಇದನ್ನು ಗಮನಿಸಿ ತೆರವುಗೊಳಿಸಲು ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಮುಖಂಡರು, ಸಾರ್ವಜನಿಕರು  ವರ್ಷನುಗಟ್ಟಲೆ ಮನವಿ ಹಾಗೂ ಹೋರಾಟ ಮಾಡಿ ಕಟ್ಟಡವನ್ನು ನೆಲ ಸಮಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ನಂತರ  ಶಾಸಕರಾದ ಸಿದ್ದು ಸವದಿ ಅಂದಾಜು 2  ವರ್ಷಗಳ ಹಿಂದೆ ಕಾಮಗಾರಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ನಂತರ ಗುತ್ತಿಗೆದಾರನಿಗೆ ಬಸ್ ನಿಲ್ದಾಣದ ಕಾಮಗಾರಿಯ ನೀಲನಕ್ಷೆಯ ಮಾದರಿಯನ್ನು ಪ್ರದರ್ಶಿಸಲು ಅನೇಕ ಮುಖಂಡರು ಕೋರಿದ್ದರು. ಗುತ್ತಿಗೆದಾರ ಯಾರ ಮಾತಿಗೂ ಕವಡೆಕಾಸಿನ ಕಿಮ್ಮತ್ತನ್ನು ನೀಡಲಿಲ್ಲ. ನಗರದ ಸಾರ್ವಜನಿಕರು ಬಸ್ ನಿಲ್ದಾಣ ಒಂದು ಬದಿಯಿಂದ ನಿರ್ಮಿಸಿದರೆ ಸಾಕಷ್ಟು ಸ್ಥಳಾವಕಾಶ ದೊರೆಯುತ್ತಿತ್ತು ಎಂಬ ಕೋರಿಕೆ ಇತ್ತು. ಮುಖಂಡರು, ಸಾರ್ವಜನಿಕರು ಅನೇಕ ಬಾರಿ ಇದರ ಬಗ್ಗೆ ಮಾಹಿತಿ ಕೇಳಿದರೂ ಸರಿಯಾಗಿ ಮಾಹಿತಿ ನೀಡದೆ ಕಟ್ಟಡವನ್ನು ಮಧ್ಯದಲ್ಲಿ ಕಟ್ಟಿ ಸಾರ್ವಜನಿಕರ ನಿರಾಶೆಗೆ ಕಾರಣರಾಗಿದ್ದಾರೆ. 

ಈ ಹಿಂದೆ ಕಟ್ಟಡ ಕಾಮಗಾರಿಯಲ್ಲಿ ಹಳೆಯ ಕಟ್ಟಡದ ಕಲ್ಲುಗಳನ್ನೇ ಪುನರ್ ಉಪಯೋಗಿಸಿಕೊಂಡು ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಹರಿದಾಡಿತ್ತು.ಒಟ್ಟಾರೆಯಾಗಿ ಆಡಳಿತವು ಗುತ್ತಿಗೆದಾರನಿಗೆ ಯಾವ ರೀತಿಯ ಮಾನದಂಡವನ್ನು ವಿಧಿಸಿದ್ದಾರೆ ಎಂಬುವುದು ಮಾತ್ರ ಜನರಿಗೆ ಗೊಂದಲದ ವಿಷಯವೇ ಆಗಿದೆ.

ಇರಲಿ ಕೆಲಸವನ್ನಾದರೂ ಶೀಘ್ರ ಮುಗಿಸಬೇಕಾಗಿತ್ತು ಮಾಡಿಲ್ಲ. ಕಾಮಗಾರಿ ವಿಳಂಬ ನೀತಿಗೆ ಕಾರಣವೇನು ? ಗೊತ್ತಾಗುತ್ತಿಲ್ಲ, ಒಟ್ಟಾರೆ ಬಸ್ ನಿಲ್ದಾಣಕ್ಕೆನೇ ಗರಬಡಿದಂತೆಯಾಗಿದೆ.ಇವರ ಈ ವಿಳಂಬ ನೀತಿಗೆ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಗೆ ತೊಂದರೆ ಅನುಭವಿಸಬೇಕಾಗಿದೆ.

ಅಭಿವೃದ್ಧಿ ವಿಷಯದಲ್ಲಿ ಏನಾದರೂ ಪಡೆಯಬೇಕಾದರೆ ಹೋರಾಟವನ್ನೇ ಮಾಡಬೇಕಾದ ದುರಾದೃಷ್ಟಿ ಮೊದಲಿನಿಂದಲೂ ಬಂದಿದೆ. ಇದಕ್ಕೆ ಕೊನೆ ಎಂದು ಎನ್ನುತ್ತಿದ್ದಾರೆ ಸಾರ್ವಜನಿಕರು.

ಆವರಣದ ಅಲ್ಲಲ್ಲಿ ಕಸಕಡ್ಡಿ,  ಮರಳು, ಕಲ್ಲುಗಳು, ಬಿದ್ದು ಪ್ರಯಾಣಿಕರಿಗೆ ನಿಲ್ಲಲು, ಕುಳಿತುಕೊಳ್ಳಲು ಸ್ಥಳಾವಕಾಶವೇ ಇಲ್ಲ. ಚಿಕ್ಕ ಮಕ್ಕಳು ಪಾಲಕ, ಪೋಷಕರ ಕಣ್ಣು ತಪ್ಪಿಸಿ ಓಡಾಟ ಮಾಡುವುದರಿಂದ ಹಾಗೂ ವೃದ್ಧರ ಜೀವ ಹಾನಿಯೂ ಸಂಭವಿಸುವ ಲಕ್ಷಣಗಳು ಗೋಚರವಾಗುತ್ತಿವೆ.

ನಿಲ್ದಾಣದ ಕೆಲ ಕಡೆಗಳಲ್ಲಿ ಜನರು ಅಸಹ್ಯ ಭಂಗಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಮುಜುಗರ ಉಂಟಾಗುತ್ತಿದ್ದು, ಮೂತ್ರ ಹಾಗೂ ಬಹಿರ್ದೆಸೆಯ ದುರ್ವಾಸನೆ ಅಲ್ಲದೆ ಧೂಳಿನಿಂದ ನಿಲ್ದಾಣದ ವಾತಾವರಣವೆಲ್ಲ ಹದಗೆಟ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಕಟ್ಟಡ ಕಾಮಗಾರಿ ನಡೆಯುತ್ತಿರುವುದು ನಿಜ. ಪ್ರಯಾಣಿಕರಿಗೆ ಉಪಹಾರ, ಚಹಾ, ಕುಡಿಯುವ ನೀರಿಗಾಗಿ ಪ್ರಯಾಣಿಕರು ಸದಾ ಟ್ರಾಫಿಕ್ ಜಾಮ್ ನಿಂದ ಕೂಡಿದ ರಸ್ತೆಯನ್ನು ದಾಟಿ ಹೋಗಬೇಕು. ಸ್ವಲ್ಪ ನಿರ್ಲಕ್ಷ್ಯ ತೋರಿದರೆ ಜೀವಕ್ಕೆ ಅಪಾಯವಂತೂ ಕಟ್ಟಿಟ್ಟ ಬುತ್ತಿ. ಆದ್ದರಿಂದ ಈ ಭಾಗದ ಶಾಸಕರಾದ ಸಿದ್ದು ಸವಧಿ ಹಾಗೂ ಸಂಬಂಧಿಸಿದ ಇಲಾಖೆ ಇತ್ತಕಡೆ ಗಮನ ಹರಿಸಿ ಬಹುದಿನಗಳ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಯನ್ನು ಜನ ರೊಚ್ಚಿಗೆದ್ದು ಹೋರಾಟ ಮಾಡುವ ಮೊದಲು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.

ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಮುಖಂಡರಾದ, ಯಲ್ಲಣ್ಣಗೌಡ ಪಾಟೀಲ್, ನಿಂಗಪ್ಪ ಬಾಳಿಕಾಯಿ, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ಪುಂಡ್ಲಿಕ್ ಗಡಿಕರ್, ಚೇತನ್ ಕಲಾಲ್, ಮಹಾಲಿಂಗ ಮಾಳಿ, ರಾಘು ಅಂಬಿ, ಆನಂದ ಬಂಡಿ, ಅಶೋಕ್ ತಳವಾರ್, ಕಿರಿಕಿರಿ, ಸೋರಗಾವಿ ಮುಂತಾದವರಿದ್ದರು.

01) ಯಲ್ಲನಗೌಡ ಪಾಟೀಲ್. ಪು.ಸ. ಸದಸ್ಯ, ಕಾಂಗ್ರೆಸ್ ನ ಹಿರಿಯ ಧುರೀಣ ಹಾಗೂ ನಿಂಗಪ್ಪ ಬಾಳಿಕಾಯಿ. ಜೆಡಿಎಸ್ ಧುರಿಣ.

ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿದರೆ, ನಿಲ್ಲಲು, ಕೂಡ್ರಲು ಕೂಡ ಸ್ಥಳವಿಲ್ಲ. ಇಕ್ಕಟ್ಟಾದ ಸ್ಥಳದಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಸಾಮಾನು ಸರಂಜಾಮುಗಳೊಟ್ಟಿಗೆ ನಿಲ್ಲಬೇಕು. ನಿಲ್ದಾಣದಲ್ಲಿ ಗಲೀಜು ಬೇರೆ ಅದರ ಗಬ್ಬುವಾಸನೆ ಸಹಿಸಲಸಾಧ್ಯವಾದದ್ದು. ಒಟ್ಟಾರೆ ನರಕಸದೃಶ ವಾತಾವರಣ. ಇದಕ್ಕೆ ಬೇಗ ಮುಕ್ತಿ ದೊರೆತು ಕಾಮಗಾರಿಯನ್ನು ಬೇಗ ಮುಗಿಸಿ, ಈ ಸ್ಥಳದಲ್ಲಿ ನಿರ್ಮಲ ವಾತಾವರಣ ಸೃಷ್ಟಿಯಾಗಿ, ಪ್ರಯಾಣಿಕರು ನೆಮ್ಮದಿಯಾಗಿ ಪ್ರಯಾಣಿಸಲು ಅನು ಮಾಡಿಕೊಡಬೇಕು.

02) ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ

ಬಸ್ ನಿಲ್ದಾಣದ ಕಾಮಗಾರಿಯ ಗುತ್ತಿಗೆದಾರನಿಗೆ ಈಗಾಗಲೇ ಎರಡು-ಮೂರು ಬಾರಿ ಖಡಕ ಸೂಚನೆಯನ್ನು ನೀಡಿದ್ದು, ಆದμÀ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ದೊರೆತ ಗತಿಯ ಕ್ರಮ ಕೈಗೊಳ್ಳುತ್ತೇನೆ.

ಸುದ್ದಿ ಓದಿ