ಸ್ಮಶಾನದಲ್ಲಿ ಸಸಿ ನೆಟ್ಟು ನೀರುಣಿಸಿ ಸುಧಾರಣಾ ಸಂಕಲ್ಪ
ಮಹಾಲಿಂಗಪುರ: ಸ್ಥಳೀಯ ಹಿಂದೂ ರುದ್ರಭೂಮಿಯಲ್ಲಿ ಅಂದಾಜು 40 ಸಸಿ ನೆಟ್ಟು ನೀರುಣಿಸಿ ಸ್ಮಶಾನ ಸುಧಾರಣಾ ಸಂಕಲ್ಪದ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಪುರಸಭೆಯ ರಾಮಕೃಷ್ಣ ಹೆಗಡೆ ವಾಣಿಜ್ಯ ಮಳಿಗೆಗಳ ಹಂಬದಿಯಲ್ಲಿ ಹಿಂದೂ ರುದ್ರಭೂಮಿಯಲ್ಲಿ ಕೆಎಲ್ಇ ಪಿಯು ಕಾಲೇಜ್ ಎನ್ಎಸ್ಎಸ್ ವಿದ್ಯಾರ್ಥಿಗಳು, ಎಸ್ಸಿಪಿ ಪ್ರೌಢಶಾಲೆಯ 1994 ನೇ ಸಾಲಿನ ಎಸ್ಎಸ್ಎಲ್ಸಿ ಬ್ಯಾಚ್ ವಿದ್ಯಾರ್ಥಿಗಳು ಸ್ಮಶಾನದಲ್ಲಿ ಸಸಿಗಳನ್ನು ನೆಡುವ, ಶುಚಿಗೊಳಿಸುವ ಮತ್ತು ಅಂದ ಹೆಚ್ಚಿಸುವ ಸಂಕಲ್ಪದ ಕಾರ್ಯಕ್ರಮ ಮಾಡಿದರು.
ಪುರಸಭೆ ಸಹಕಾರದೊಂದಿಗೆ 40 ಸಸಿ ನೆಟ್ಟು ನೀರುಣಿಸಿದರು. ನೆಟ್ಟ ಗಿಡಗಳಿಗೆ ಸ್ಕೌಟ್ಸ್ ವಿದ್ಯಾರ್ಥಿಗಳೊಂದಿಗೆ ನಿಯಮಿತ ನೀರುಣಿಸುವುದಾಗಿ ಶಿಕ್ಷಕಿ ಸಪನಾ ಅನಿಗೋಳ ಸಂಕಲ್ಪ ಮಾಡಿದರು. ಸ್ಮಶಾನದ ಆವರಣದಲ್ಲಿ ಪ್ರತಿ ತಿಂಗಳು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಸ್ಮಶಾನದಲ್ಲಿ ಶ್ರಮದಾನ ಕೈಗೊಳ್ಳುವುದಾಗಿ ಆರ್.ಎಸ್.ಕಲ್ಲೋಳಿ ಸಂಕಲ್ಪ ಮಾಡಿದರು. ಸ್ಮಶಾನದ ಆವರಣದಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಿ ವಾತಾವರಣ ಶುದ್ದಿಗೊಳಿಸಲು ಕೈ ಜೋಡಿಸುವುದಾಗಿ 1994 ಬ್ಯಾಚ್ ವಿದ್ಯಾರ್ಥಿಗಳು ಸಂಕಲ್ಪ ಮಾಡಿದರು. ಸರಕಾರಿ ಎಂಪಿಎಸ್ ಶಾಲೆ, ಸರಕಾರಿ ಪಪೂ ಕಾಲೇಜ್, ಎಸ್ಸಿಪಿ ಪ್ರೌಢಶಾಲೆ, ಕೆಎಲ್ಇ ಪಿಯು ಕಾಲೇಜ್, ಪುರಸಭೆ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಶಿಕ್ಷಕ ಎಸ್.ಜಿ.ಜುಟನಟ್ಟಿ ಮಾತನಾಡಿ ಮಸಣವೆಂದರೆ ಜೀವನದ ಕೊನೆ ಎಂಬ ಭಯ ಮತ್ತು ನಕಾರಾತ್ಮಕ ಆಲೋಚನೆ ಬೇಡ, ಆಕ್ಸಿಜೆನ್ ಖಾಲಿಯಾದಾಗ ತಂದು ಹುಗಿಯುವ ಜಾಗದಲ್ಲೇ ಆಕ್ಸಿಜೆನ್ ಕೊಡುವ ಮರ ನೆಟ್ಟರೆ ಪರಿಸರ ಉತ್ತಮಗೊಂಡು ಮೌಢ್ಯತೆ ಅಳಿಯುತ್ತದೆ. ವಿದ್ಯಾರ್ಥಿಗಳು ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಪ್ರೌಢಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು, ಎಸ್ಸಿಪಿ ಪಪೂ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು, ಸರಕಾರಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಮಾಡಿದ ಸಂಕಲ್ಪನಾ ಅಭಿಯಾನದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಎಂ.ಮುಗಳಖೋಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸ್ಕೌಟ್ಸ್ ಕ್ಯಾಪ್ಟನ್ ಸಪನಾ ಅನಿಗೋಳ, ಶಿಕ್ಷಕ ಎಸ್.ಜಿ.ಜುಟನಟ್ಟಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಆರ್.ಎಸ್.ಕಲ್ಲೋಳಿ, ಉಪನ್ಯಾಸಕ ವಿಷ್ಣು ಬಡಿಗೇರ, ಉದ್ಯಮಿ ಈರಪ್ಪ ಬಡಿಗೇರ, 1994 ಬ್ಯಾಚ್ ವಿದ್ಯಾರ್ಥಿಗಳಾದ ಸಿದ್ದೇಶ್ವರ ಸೋನಾರ, ಭಗವಾನ್ ಬೆಳಗಾಂವಕರ, ಮುಕುಂದ ಮೂಡಲಗಿ, ಶಿವಾನಂದ ಕುಳ್ಳೊಳ್ಳಿ, ರಾಜಶೇಖರ ಶೆಟ್ಟರ, ರಮೇಶ ಹುಣಶ್ಯಾಳ ಪಾಲ್ಗೊಂಡಿದ್ದರು.