ಫೈರಿಂಗ್ ಪಾತಕಿಗಳಿಗೆ ಉಗ್ರ ಶಿಕ್ಷೆಯಾಗಲಿ
ಮಹಾಲಿಂಗಪುರ : ಬೆಳಗಾವಿಯ ರಾಷ್ಟ್ರೀಯ ಹಿಂದೂ ಸೇನಾಹಾಗೂ ಶ್ರೀರಾಮ ಸೇನಾ ಮುಖಂಡರಾದ ರವಿ ಕೋಕಿತಕರ ಮತ್ತು ಮಹೇಶ ದೇಸೂರಕರ ಅವರ ಮೇಲೆ ಫೈರಿಂಗ್ ಮಾಡಿದ ಪಾತಕಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಶ್ರೀರಾಮ ಸೇನಾ ರಾಜ್ಯ ಪ್ರದಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಆಗ್ರಹಿಸಿದ್ದಾರೆ.
ಪಟ್ಟಣದ ಜಿಎಲ್ಬಿಸಿ ಅತಿಥಿಗೃಹದಲ್ಲಿ ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಹಿಂದೂ ಸೇನಾ ಅಧ್ಯಕ್ಷ ಧನಂಜಯ ದೇಸಾಯಿ ಉಪಸ್ಥಿತಿಯಲ್ಲಿ ಭಾನುವಾರ ನಡೆಯಬೇಕಿದ್ದ ಹಿಂದೂ ವಿರಾಟ ಸಮಾವೇಶ ವಿಫಲಗೊಳಿಸು ಉದ್ದೇಶದಿಂದ ಹಿಂದೂ ನಾಯಕರಿಗೆ ಧಕ್ಕೆ ತಂದು, ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಕೂದಲೆಳೆ ಅಂತರದಲ್ಲಿ ಹಿಂದೂ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಡಿನಲ್ಲಿ ಇತ್ತೀಚೆಗೆ ಹಿಂದೂ ಸಂಘಟನೆಗಳ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಾಗಿದೆ. ಇತಿಹಾಸ ಗಮನಿಸಿದರೆ ಹಿಂದುತ್ವಕ್ಕಾಗಿ ಹೋರಾಡಿದವರನ್ನು ನಾಶಗೊಳಿಸಿರಬಹುದು. ಆದರೆ ಹಿಂದುತ್ವವನ್ನು ಮಾತ್ರ ಯಾರಿಂದಲೂ ನಾಶಗೊಳಿಸಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗುತ್ತದೆ. ಮನೆಯ ಹಂಗು ತೊರೆದು ಹಿಂದುತ್ವದ ರಕ್ಷಣೆ ಮಾಡುತ್ತಿರುವ ಕಾರ್ಯಕರ್ತರ ರಕ್ಷಣೆ ಬಗ್ಗೆ ಜನಪ್ರತಿನಿಧಿಗಳು ಜವಾಬ್ದಾರಿ ತೋರಬೇಕಿದೆ. ದುಷ್ಕರ್ಮಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನಾ ಜಿಲ್ಲಾ ಉಪಾಧ್ಯಕ್ಷ ತಾನಾಜಿ ಕಿರಿಕಿರಿ, ತಾಲೂಕು ಅಧ್ಯಕ್ಷ ಅರ್ಜುನ ನಾಗರಾಳ, ರನ್ನಬೆಳಗಲಿ ಘಟಕ ಅಧ್ಯಕ್ಷ ಈಶ್ವರ ಕ್ವಾನ್ಯಾಗೋಳ, ಮಹಾಲಿಂಗಪುರ ನಗರ ಘಟಕ ಅದ್ಯಕ್ಷ ಸಿದ್ದು ಖೋತ, ರನ್ನಬೆಳಗಲಿ ಸಂಚಾಲಕ ಮಹಾಲಿಂಗ ಹೊಸಪೇಟಿ, ಅನಿಲ ಕಿರಿಕಿರಿ, ಚೇತನ ಬೋಸ್ಲೇ, ಬಸವರಾಜ ಹುನ್ನೂರ, ಶಿವಾನಂದ ಪೂಜೇರಿ, ಮಹಾಲಿಂಗಪ್ಪ ಲಾಲಿಬುಡ್ಡಿ ಇದ್ದರು.