ಬಳ್ಳಾರಿ

ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಿ

ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಿ

ನ್ಯಾ.ಪುಷ್ಪಾಂಜಲಿದೇವಿ ಕರೆ | ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ 25: ನಮ್ಮ ದೇಶದ ಪ್ರಗತಿ ಹೆಚ್ಚಾಗಿ ಯುವಕರನ್ನು ಅವಲಂಬಿಸಿದೆ. ಇಂದಿನ ಯುವ ಜನರೇ ದೇಶದ ಆಸ್ತಿ, ನಮ್ಮ ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದಾರೆ. ನೀವು ರಾಷ್ಟ್ರದ ಬೆಳವಣಿಗೆಯ ಬಗ್ಗೆ ಯೋಚಿಸುವುದ ಮೂಲಕ ಪ್ರಪಂಚಕ್ಕೆ ಮಾದರಿಯಾಗುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡಲು ಕೈಜೋಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಹೆಚ್.ಪುಷ್ಪಾಂಜಲಿದೇವಿ ಕರೆ ನೀಡಿದರು.

ನಗರದ ಬಿ.ಡಿ.ಎ.ಎ ಫುಟ್ಬಾಲ್ ಸಭಾಂಗಣದಲ್ಲಿ ಸೋಮವಾರರಂದು ಜಿಲ್ಲಾಡಳಿತ, ಭಾರತ ಚುನಾವಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ನಿಮ್ಮ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ, ನಿಮ್ಮ ಆಶೋತ್ತರಗಳಿಗೆ ಬೆಲೆ ನೀಡುವ ನಾಯಕರನ್ನು ನೀವೇ ಆಯ್ಕೆ ಮಡಿಕೊಳ್ಳುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಿ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಯುವಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಮುಖಾಂತರ ಇಂದಿನ ಯುವಜನತೆಯನ್ನು ರಾಜಕೀಯ ಮತ್ತು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುತ್ತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನ ಮೂಲಭೂತ ಹಕ್ಕು; ನಿಮ್ಮ ಇತರೆ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಮತದಾನ ಮಾಡಿ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿಮಗಿರುವ ಒಂದು ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದÀರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರ್ಜುನ್ ಎಸ್.ಮಲ್ಲೂರ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆಯ ಅಂಗವಾಗಿ ಸಾಕ್ಷರತೆಗಾಗಿ ತಾಲೂಕು ಮಟ್ಟದ ಪ್ರಬಂಧ, ರಸಪ್ರಶ್ನೆ, ಪೋಸ್ಟರ್ ಮೇಕಿಂಗ್,ಕೋಲೇಜ್ ಮೇಕಿಂಗ್, ಹಾಗೂ ಭಿತ್ತಿಪತ್ರ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ತಶಸ್ತಿ ವಿತರಣೆ ಮಾಡಲಾಯಿತು.

ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತರಾದ ರಮೇಶ್ ಕೋನರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರರು ಇದ್ದರು.


ಸುದ್ದಿ ಓದಿ