600 ಕೋಟಿ ಅನುದಾನ: ಯಡಿಯೂರಪ್ಪ ಸರ್ಕಾರ ಜನಪರ ಸರ್ಕಾರ: ಕಾರ್ಜೋಳ
ಮರಾಠಾ ಅಭಿವೃದ್ಧಿ ಮಂಡಳಕ್ಕೆ ವಿರೋಧ ಬೇಡ
ಮುದ್ದೇಬಿಹಾಳ ನವೆಂಬರ್ 23: ಕಳೆದ ವರ್ಷ ಅತಿವೃಷ್ಟಿ, ಪ್ರವಾಹದಿಂದ 35 ಸಾವಿರ ಕೋಟಿ ನಷ್ಟ, ಈ ವರ್ಷವೂ ಅದೇ ಮಳೆಯಿಂದ 25 ಸಾವಿರ ಕೋಟಿ ಹಾನಿಯ ಜೊತೆಗೆ ಕೊರೊನಾ ಆತಂಕ ಎದುರಾದರೂ ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರ ಪರವಾಗಿ ಹಾಗೂ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡದೇ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಖಾತೆ ಸಚಿವ ಗೋವಿಂದ ಕಾರ್ಜೋಳ ಹೇಳಿದರು. ಅವರು ಭಾನುವಾರ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಲೋಕೋಪಯೋಗಿ ಇಲಾಖೆಗಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಕೊರೊನಾ ಕಾರಣದಿಂದಾಗಿ ಸರ್ಕಾರದ ಆದಾಯ ಕೇವಲ ಶೇ.30 ಕ್ಕೆ ಕುಸಿದಿದೆ. ಇಂಥ ಕಠಿಣ ಆರ್ಥಿಕ ಪರಸ್ಥಿತಿಯಲ್ಲಿಯೂ ಸಹ ಚಿಕ್ಕ ಹಿಡುವಳಿದಾರರ ಖಾತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತೀ ವರ್ಷ 6000 ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರೂ,4000 ಗಳನ್ನು ನೇರವಾಗಿ ಹಾಕುತ್ತಿದೆ. ದೇಶದ 37 ಕೋಟಿ ಮಹಿಳೆಯರ ಜನಧನ ಖಾತೆಗೆ ರೂ. 500 ಜಮಾ ಮಾಡುವ ಮೂಲಕ ಜನಪರ ಕೆಲಸ ಮಾಡುತ್ತಿದೆ.
ಬಡ ಜನರ ತೊಂದರೆ ತಾಪತ್ರಯ ಅರಿತಿದ್ದ ಮೋದಿ ಸರ್ಕಾರ ದೇಶದ 12 ಕೋಟಿ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ. ಗ್ಯಾಸ್ ನೀಡಿದೆ ಎಂದವರು ಹೇಳಿದರು. ಈ ಹಿಂದೆ ಆಡಳಿತ ಮಾಡಿದ ಯಾವ ಸರ್ಕಾರಗಳೂ ರೈತರಿಗಾಗಿ ಕೆಲಸ ಮಾಡಿಲ್ಲ. ಆದರೆ ಎಲ್ಲ ಸಮಾಜದ ಹಿಂದುಳಿದ ವರ್ಗದವರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದವರು ಹೇಳಿದರು. ಶಾಸಕ ನಡಹಳ್ಳಿ ಅವರು ಪ್ರತೀ ಕಚೇರಿಗೆ ಅಲೆದು ಅನುದಾನ ತಂದು ಮತಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಈ ವರ್ಷ 200 ಕೋಟಿ ಅನುದಾನವನ್ನು ನೀಡಿದ್ದೇವೆ ಎಂದವರು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕೊರೊನಾ, ಅತೀ ಮಳೆಯಿಂದಾಗಿ ಮತಕ್ಷೇತ್ರದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಒಂದೇ ವರ್ಷದಲ್ಲಿ 90 ಕೋಟಿ ಅನುದಾನವನ್ನು ಮೂಲಭೂತ ಸೌಲಭ್ಯಗಳಿಗಾಗಿ ಕಾರ್ಜೋಳ ಅವರು ನೀಡಿದ್ದಾರೆ. ಅವಳಿ ಜಿಲ್ಲೆಗಳ ನೀರಾವರಿಗಾಗಿ 350 ಕೋಟಿ, ಜಲಜಾರಿ ಕುಡಿಯುವ ನೀರಿನ ಯೋಜನೆಗೆ 2500 ಕೋಟಿ ಹಣವನ್ನು ಸರ್ಕಾರ ನೀಡಿದೆ. 30 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಬಿದರಕುಂದಿ ಗ್ರಾಮದ ಕ್ರಾಸ್ ತನಕ ಚತುಷ್ಪದ ರಸ್ತೆ ನಂತರ ಅಗಸಬಾಳ ಕ್ರಾಸ್ ತನಕ ಗುಣಮಟ್ಟದ ಡಾಂಬರ್ ರಸ್ತೆ ಮಾಡಲಾಗುವುದು ಎಂದರು. ಇದರೊಂದಿಗೆ ಪಟ್ಟಣದಲ್ಲಿ ಇನ್ನೂ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ತಾಲ್ಲೂಕು ಪಂಚಾಯಿತಿ ಮಾಲೀಕತ್ವದಲ್ಲಿ ತಂಗಡಗಿ ರಸ್ತೆಯಲ್ಲಿರುವ 8 ಎಕರೆ ಪ್ರದೇಶದಲ್ಲಿ ಕಚೇರಿಗಳ ಸಂಕೀರ್ಣ ನಿರ್ಮಿಸಲು 30 ಕೋಟಿ ಹಣ ಮಂಜೂರು ಮಾಡುವಂತೆ ಇದಲ್ಲದೇ ಮನವಿ ಮಾಡಿದರು. ಇದಲ್ಲದೇ ಆರ್.ಎಂ.ಎಸ್.ಎ. ಶಾಲೆಗೆ ರಸ್ತೆ, ತಾಲ್ಲೂಕು ಕ್ರೀಡಾಂಗಣ ನಿರ್ಮಿಸುವ ಯೋಜನೆಗಳನ್ನು ಶೀಘ್ರದಲ್ಲಿಯೇ ಅನುಷ್ಠಾನ ಮಾಡುವುದಾಗಿ ಹೇಳಿದರು. ಕುಂಟೋಜಿಯ ಚನ್ನವೀರ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಸುನೀಲಕುಮಾರ, ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಂಬಾಯಿ ಹವಾಲ್ದಾರ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಸಗಿ, ತಾಳಿಕೋಟಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಹಾಂತಪ್ಪಗೌಡ ಪಾಟೀಲ, ಪ್ರಭು ಕಡಿ, ಶಿವಶಂಕರಗೌಡ ಹಿರೇಗೌಡರ, ನಿಂಗಪ್ಪಗೌಡ ಬಪ್ಪರಗಿ, ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಬಸವರಾಜ ಕುಂಬಾರ, ಶಾಂತಗೌಡ ಪಾಟೀಲ ನಡಹಳ್ಳಿ ಮತ್ತಿತರರು ಇದ್ದರು. ಸಂಗಮೇಶ ಶಿವಣಗಿ ನಾಡಗೀತೆ ಹಾಡಿದರು. ಲೋಕೋಪಯೋಗಿ ಇಲಾಖೆಯ ಇ.ಇ. ಬಿ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ ಪವಾರ ಸ್ವಾಗತಿಸಿದರು. ನಿರುಪಣೆ ಗೋಪಾಲ ಹೂಗಾರ