ಜಿಲ್ಲಾಧ್ಯಕ್ಷರಾಗಿ ವೈ.ಶಿವಕುಮಾರ್ ಆಯ್ಕೆ
ಬಳ್ಳಾರಿ 16: ಕರ್ನಾಟಕ ರಾಜ್ಯ ಪ್ರಜಾ ಪರಿವರ್ತನೆ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸಿರುಗುಪ್ಪದ ವೈ.ಶಿವಕುಮಾರ್ ಅವರು ಆಯ್ಕೆ ಆಗಿದ್ದಾರೆ.
ಗಾಂಧಿಭವನದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು, ಹಿರಿಯರು, ಕಾರ್ಯಕರ್ತರು ಭಾಗಿಯಾಗಿದ್ದು ವೇದಿಕೆಯನ್ನು ರಚಿಸಲಾಯಿತು ಎಂದು ವೈ.ಶಿವಕುಮಾರ್ ತಿಳಿಸಿದ್ದಾರೆ.
ಈವೇಳೆ ಮಾತನಾಡಿದ ಅವರು ಹಿಂದುಳಿದ, ದಲಿತ, ಅಲೆಮಾರಿ ಮತ್ತು ಅರೆ ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳನ್ನು ಆಳುವ ಸರ್ಕಾರಗಳು ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೇ ಕಡೆಗಣಿಸುತ್ತಾ ಬರುತ್ತಿವೆ. ಶಿಕ್ಷಣ, ಉದ್ಯೋಗ, ನಿವೇಶನ ಇತ್ಯಾದಿ ಸೌಲಭ್ಯಗಳಿಲ್ಲದೇ ಈ ಸಮುದಾಯಗಳು ಅಳಿವಿನ ಅಂಚಿನಲ್ಲಿವೆ. ಹಿಂದುಳಿದ ಎಲ್ಲ ವರ್ಗ ಮತ್ತು ಜಾತಿಯ ಸಮುದಾಯಗಳು ಒಗ್ಗೂಡಬೇಕಾಗಿದೆ. ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಪಡೆಯಬೇಕಾಗಿದೆ. ಹೀಗಾಗಿ ವೇದಿಕೆ ರಚಿಸಲಾಗಿದೆ. ಎಲ್ಲ ಸಮುದಾಯಗಳ ಹಿರಿಯರ, ಧುರೀಣರ ಮಾರ್ಗದರ್ಶನದಲ್ಲಿ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಒಳಗೊಂಡಂತೆ ಎಲ್ಲ ಜನಪ್ರತಿನಿಧಿಗಳಿಗೆ ನಮ್ಮ ಸಮುದಾಯಗಳ ಸಮಸ್ಯೆಗಳನ್ನು ತಿಳಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಸಮನ್ವಯತೆ ಸಾಧಿಸಿ ಸಮಾಜದ ಸಬಲೀಕರಣಕ್ಕೆ ಶ್ರಮಿಸಲಾಗುತ್ತದೆ ಎಂದು ಶಿವಕುಮಾರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಳ್ಳಾರಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಸಿ ಆನಂದ್ ಕುಮಾರ್ ಕುಡತಿನಿ, ಉಪಾಧ್ಯಕ್ಷರಾಗಿ ಸಿ ಮಲ್ಲಿಕಾರ್ಜುನ ಕುಡತಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿರಾಗಿ ಜಿ ದಿವಾಕರ್ ಬಾಬು ಕುಡತಿನಿ ಇತರ ಸಂಘಟನೆ ಪದಾಧಿಕಾರಿಗಳು ಸಮಿತಿಯಲ್ಲಿದ್ದಾರೆ. ರಾಜ್ಯ ಸಮಿತಿ ನಿರ್ದೇಶನದ ಮೆರೆಗೆ ಆಯ್ಕೆ ಮಾಡಿ ಸಂಪೂರ್ಣವಾಗಿ ಕಾರ್ಯ ಚಟುವಟಿಕೆಗಳನ್ನು ಕಾನೂನು ಬದ್ದವಾಗಿ ಮಾಡಲು ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಡಲಾಯಿತು ಎಂದು ವೇದಿಕೆಯ ಮುಖಂಡರುಗಳು ತಿಳಿಸಿದ್ದಾರೆ.