ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ: ಜೀರಗಾಳೆ
ಮೂಡಲಗಿ 09: ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಧ್ಯಕ್ಷೆ ರಜನಿ ಜೀರಗಾಳೆ ಹೇಳಿದರು.
ಅವರು ವಡರಟ್ಟಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಪ್ರಗತಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸರ್ಕಾರಿ ಸಂಘ ಯಾದವಾಡ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಚೇತನ ಕ್ರೀಡಾ ಯುವಕ ಸಂಘ ಹೊಸಟ್ಟಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ ಅದನ್ನು ಗೌರವದಿಂದ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಎಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲವೋ ಅಲ್ಲಿ ಸ್ತ್ರೀ ನಾಲ್ಕು ಗೋಡೆಗಳ ಮಧ್ಯೆ ಬಂಧನದಲ್ಲಿದ್ದಾಳೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಗಾದೆಯಂತೆ ಮಹಿಳೆ ಉನ್ನತ ಸ್ಥಾನದಲ್ಲಿ ಇರಬೇಕಾದರೆ ಸಮಾಜದಲ್ಲಿ ಅವಳಿಗೆ ಶಿಕ್ಷಣ ಹಾಗೂ ವಿಶೇಷ ಸ್ಥಾನಮಾನ ನೀಡುವ ಅವಶ್ಯಕತೆ ಬಹಳ ಇದೆ ಎಂದು ಹೇಳಿದರು.
ಗೋಕಾಕದ ಮಹಿಳಾ ಸಾಹಿತಿ ಜಯಾ ಚುನುಮುರಿ ಮಾತನಾಡಿ ಬಸವಣ್ಣನವರ ಮತ್ತು ಶರಣರ ಕಾಲದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿತ್ತು. ಅಕ್ಕಮಹಾದೇವಿ ಪ್ರಥಮ ವಚನಕಾರ್ತಿ ಯಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ವಚನದ ಮೂಲಕ ಸಾರಿದರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಎಸ್ ಐ ಭಾಗೋಜಿ ಮಾತನಾಡಿ ಹಿಂದಿನ ಕಾಲದಲ್ಲಿ ಸತಿಸಹಗಮನ ಪದ್ಧತಿ ಇತ್ತು. ಸಮಾಜ ಸುಧಾರಕರ ಕಾರ್ಯದಿಂದಾಗಿ ಅಂತಹ ಅನಿಷ್ಟ ಪದ್ಧತಿಗಳು ದೂರವಾಗಿ ಇವತ್ತಿನ ಕಾಲದ ಮಹಿಳೆಯರು ಸ್ವತಂತ್ರವಾಗಿ ಬದುಕುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಗತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಿ ಮಾಳೆದ ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಘವೇಂದ್ರ ದೊಡ್ಡವಾಡ, ಉಪನ್ಯಾಸಕರಾದ ಎಮ್.ಜಿ.ದೇವಡಿ, ಎ.ವಿ.ಮೆಳವೆಂಕಿ, ಎಲ್.ಎಸ್.ವಾರೆಪ್ಪಗೊಳ, ಅಕ್ಕಮಹಾದೇವಿ ಮಾದರ ಶಾಂಭವಿ ದೇವರುಶಿ, ಲಕ್ಷ್ಮಿ ಜೋಕನಾಟ್ಟಿ ಹಾಗೂ ಉಪನ್ಯಾಸಕರು ಸಂಘಟಕರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಗೋಲಿ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮೆಡಲ್ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.