ಪುರಸಭೆ ಸಭಾಭವನದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ : ಸ್ನೇಹಲ್ ಅಂಗಡಿ ಕರೆ
ಮಹಿಳೆಯರು ತಮ್ಮಲ್ಲಿನ ಪ್ರತಿಭೆಯಿಂದ ಸಮಾಜ ಸುಧಾರಣೆಗೆ ಮುಂದಾಗಲಿ
ಮಹಾಲಿಂಗಪುರ 09: ಪ್ರತಿವರ್ಷ ಪುರಸಭೆಯು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿರುತ್ತದೆ, ಕಾರಣ ಮಹಿಳೆಯರು ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಎಂದು ಪುರಸಭಾಧ್ಯಕ್ಷೆ ಸ್ನೇಹಲ್. ಶಿವಾನಂದ. ಅಂಗಡಿ ಹೇಳಿದರು.
ಮಂಗಳವಾರ ಪುರಸಭೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಗಂಡನ ಅಲ್ಪ ಸಂಪಾದನೆಯಲ್ಲಿ ಬದುಕು ಸಾಗಿಸುವ ಸಾಕಷ್ಟು ಕುಟುಂಬಗಳಿವೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು, ಕಾರಣ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಪ್ರತಿಭೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು ಆಗ ಮಹಿಳಾ ಸಬಲೀಕರಣ ಯೋಜನೆಗೊಂದು ಮಹತ್ವ ಬರುತ್ತದೆ ಮತ್ತು ತಮ್ಮ ಮನೆಗಳ ಮುಂದೆ ಸ್ವಚ್ಛತೆ ಕಾಪಾಡಿಕೊಂಡು ವಾರ್ಡಗಳಲ್ಲಿರುವ ಉದ್ಯಾನವನಗಳನ್ನು ಸ್ವಚ್ಛಗೊಳಿಸಿ ಸ್ವಚ್ಛಂದ ಪರಿಸರ ರೂಪಿಸಿಕೊಳ್ಳಲು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ ಮಹಿಳೆ ಅಬಲೆಯಲ್ಲ ಸಬಲೆ. ಇಂದಿನ ಜಾಗತಿಕ ಮಟ್ಟದಲ್ಲಿ ಪ್ರತಿ ಹೆಣ್ಣು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಉನ್ನತ ಹುದ್ಧೆಗಳಲ್ಲಿ ಪುರುಷನ ಸರಿಸಮಾನವಾಗಿ ಕರ್ಯ ನಿರ್ವಹಿಸುತ್ತಿದ್ದಾಳೆ. ಮಹಿಳೆಯರು ಸಾರ್ವಜನಿಕ ಸಮಸ್ಯೆಗಳಿಗೆ ಹೆದರದೆ ಧೈರ್ಯದಿಂದ ಎದುರಿಸಬೇಕು, ಧೈರ್ಯವೇ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಹಿಳೆಯರು ಪುರಸಭೆ ಆದಿಯಾಗಿ ಸಂಘಗಳಿಂದ ಪಡೆದ ಹಣವನ್ನು ಸದ್ಭಳಕೆ ಮಾಡಿಕೊಂಡು ಶೀಘ್ರವಾಗಿ ಸಂದಾಯ ಮಾಡುವತ್ತಲೂ ಗಮನಹರಿಸಬೇಕು ಆಗ ಮಹಿಳಾ ಒಕ್ಕೂಟಗಳಿಗೆ ಅರ್ಥ ಬರುತ್ತದೆ ಎಂದರು.
ಸಮಾಜ ಸೇವಕಿ ವಿಜಯಲಕ್ಷ್ಮಿ . ಮಹಾಲಿಂಗಪ್ಪ. ಕುಳ್ಳೋಳ್ಳಿ ಮಾತನಾಡಿ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗದೆ ಮಹಿಳಾ ಸಂಘಟನೆಗಳು, ಸಮಾಜಗಳಲ್ಲಿ ಬೆರೆತು ಸಾಮಾಜಿಕ ಸುಧಾರಣೆಯಲ್ಲಿ ಹೆಣ್ಣು ಪುರುಷರಿಗಿಂತ ಕಡಿಮೆ ಏನಲ್ಲ ಎಂಬುವುದನ್ನು ಸಾಬೀತು ಪಡಿಸಬೇಕು. ಈ ಕಾರಣದಿಂದಲೇ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಗಮನಾರ್ಹ ವಿಷಯವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ, ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮಾತನಾಡಿದರು. ವೇದಿಕೆ ಮೇಲೆ ಪುರಸಭೆ ಸದಸ್ಯರಾದ ಸರಸ್ವತಿ ರಾಮೋಜಿ, ಲಕ್ಷಿ?? ಮುದ್ದಾಪೂರ, ಸಜನಸಾಬ ಪೆಂಡಾರಿ, ಶೇಖರ ಅಂಗಡಿ, ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ ಮತ್ತು ಸಿ.ಎಂ ಗೌಡರ, ಅರುಣಾ ಅಂಗಡಿ, ಈರ್ಪ ಚುರಮರಿ ಮತ್ತು ಪುರಸಭೆ ಸಿಬ್ಬಂದಿ ಎಸ್.ಎನ್ ಪಾಟೀಲ, ಮಠಪತಿ, ಬಿ.ವಾಯ್ ಮರ್ದಿ, ರಾಜೇಶ್ವರಿ ಸೋರಗಾಂವಿ, ಚನ್ನಮ್ಮ ಕಮತಗಿ, ರಾಮು ಮಾಂಗ ಇದ್ದರು.