ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಶಶಿಕಲಾ ಜೊಲ್ಲೆ
ಚಿಕ್ಕೋಡಿ 03: ಎಲ್ಲರನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿದ ಹೆಣ್ಣು ಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು. ಮೊದಲು ಮನೆಯಿಂದ ಸಂಸ್ಕೃತಿಯನ್ನು ಕಲಿಸುವ ಹೆಣ್ಣು ಮಕ್ಕಳು ಅವರ ಬಗ್ಗೆ ಪ್ರತಿಯೊಬ್ಬರು ಗೌರವ ಬೆಳೆಸಿಕೊಳ್ಳಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.
ನಿಪ್ಪಾಣಿ ನಗರದ ಕೆಎಲ್ಇ ಆಶೀರ್ವಾದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ, ತಾಲೂಕಾಡಳಿತ ಮತ್ತು ನಗರಸಭೆ, ನಿಪ್ಪಾಣಿ ಇವರ ಸಹಯೋಗದಲ್ಲಿ ಆಯೋಜಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವ 2020-21 ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ವಾದ್ಯ ನುಡಿಸಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಶ್ರೀಮಂತ ಜನಪದ ಕಲೆ ಉಳಿಸಲು ಹೆಣ್ಣು ಮಕ್ಕಳಲ್ಲಿಯೂ ಕೂಡ ಹಲವಾರು ಜಾನಪದ ಕಲೆಗಳು ಅಡಗಿಕೊಂಡಿದ್ದು ಇಂತಹ ಉತ್ಸವಗಳಿಂದ ಹೆಣ್ಣು ಮಕ್ಕಳ ಕಲೆ ಅನಾವರಣಗೋಳ್ಳುತ್ತದೆ ಎಂದರು. ಮಹಿಳೆಯರ ಅಭಿವೃದ್ಧಿಗೆ ಸರ್ಕಾರವು ಕೂಡ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ದಿವ್ಯಸಾನಿಧ್ಯ ಪ್ರಾಣಲಿಂಗ ಮಹಾಸ್ವಾಮಿಗಳು ನಿಪ್ಪಾಣಿ ಮಾತನಾಡಿ ಜನ್ಮ ನೀಡಿದ ತಾಯಿ ಹೊತ್ತ ಭೂಮಿ, ಸಂಸ್ಕಾರ ನೀಡಿದ ಗುರುಗಳನ್ನು ನಾವೆಂದಿಗೂ ಮರೆಯಬಾರದು. ವಿಶೇಷವಾಗಿ ಮೂಲ ಜಾನಪದ ಕಲೆಗಳನ್ನು ನಾವು ನಮ್ಮ ತಾಯಂದಿರಿಂದ ಕಾಣುತ್ತೇವೆ. ಆ ನಿಟ್ಟಿನಲ್ಲಿ ಮಹಿಳೆಯರ ಕಲಾ ಪ್ರತಿಭೆಗೆ ಇಂತಹ ಮಹಿಳಾ ಉತ್ಸವ ಆಯೋಜಿಸಿದ್ದು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಜಯವಂತ ಭಾಟ್ಲೆ ವಹಿಸಿದರು. ತಹಶೀಲ್ದಾರರಾದ ಪ್ರಕಾಶ ಗಾಯಕವಾಡ, ನಗರಸಭೆ ಉಪಾಧ್ಯಕ್ಷರಾದ ನೀತಾ ವಿ. ಬಾಗಡೆ, ಪೌರಾಯುಕ್ತ ಮಹಾವೀರ ಬೋರನ್ನವರ, ಸಿ.ಪಿ.ಐ ಗುರುನಾಥ, ಸಿ.ಡಿ.ಪಿ.ಓ ಸುಮೀತ್ರಾ.ಡಿ. ಕ.ಸಾ.ಪ ಅಧ್ಯಕ್ಷ ವಿದ್ಯಾವತಿ ಜನವಾಡೆ, ಚಿಕ್ಕೋಡಿ ತಾಲೂಕಾ ವೈಧ್ಯಾಧಿಕಾರಿ ಡಾ. ಶಿಂಧೆ ಇದ್ದರು.
ಕಾರ್ಯಕ್ರಮದ ಅಂಗವಾಗಿ ವಸ್ತಪ್ರದರ್ಶನ ಮಳಿಗೆ, ಮಹಿಳೆಯರಿಗೆ ರಂಗೋಲಿ, ಚಿತ್ರಕಲೆ, ಆಹಾರ ತಯಾರಿಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಯಿತು. ಮಹಿಳೆಯರ ಜಾಗೃತಿಗಾಗಿ ವಿಚಾರ ಸಂಕೀರಣ, ಸಂವಾದ ಗೋಷ್ಠಿ, ಮತ್ತು ಕವಿಗೋಷ್ಠಿ ಜರುಗಿದವು. ವಿವಿಧ ಕಲಾ ತಂಡಗಳು ಸುಗಮಸಂಗೀತ, ನೃತ್ಯ ವೈವಿದ್ಯ, ಪೂಜಾ ಕುಣಿತ, ಚಿನಿಕೋಲು ನೃತ್ಯ, ಜಾನಪದ ನೃತ್ಯ, ಸಮೂಹ ಗಾಯನ, ನಂದಿ ಧ್ವಜ ಕುಣಿತ, ಚೌಡಕಿ ಪದ, ಕೋಲಾಟ, ವಚನ ಗಾಯನ, ಸಂಪ್ರದಾಯ ಪದ, ಭಜನಾ ಪದ, ತತ್ವಪದ, ದಾಸರ ಪದ, ಬಯಲಾಟ ಪದಗಳು, ಡೊಳ್ಳು ಕುಣಿತ, ಮುಂತಾದ ತಂಡಗಳು ವೈವಿಧ್ಯಮಯ ಕಲಾ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ರಂಜಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಶೈಲಾ ಕೋಕರಿ, ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಬಾಹುಬಲಿ ಲಕ್ಕನ್ನವರ ವಂದಿಸಿದರು.