ಜಮಖಂಡಿ

ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಜಗದ್ಗುರುಗಳ ಆಶೀರ್ವಚನ

ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಜಗದ್ಗುರುಗಳ ಆಶೀರ್ವಚನ

ಲೋಕದರ್ಶನ ವರದಿ 

ಜಮಖಂಡಿ: ದೇಶದ ಪ್ರಗತಿ ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ಸೈನಿಕರು, ರೈತರು, ಶಿಕ್ಷಕರು, ಕಾರ್ಮಿಕರು, ವಿಜ್ಞಾನಿಗಳು, ವೈದ್ಯರು ಹಾಗೂ ಉದ್ಯಮಿಗಳ ಪರಿಶ್ರಮ ಮತ್ತು ಸಾಧನೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಯೋಧರ ಮತ್ತು ರೈತರ ಕೊಡುಗೆ ಅಮೂಲ್ಯವಾದದ್ದು ಎಂದು ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ಉನ್ನತ ಸ್ಥಾನ ಗಳಿಸುವುದು ಉತ್ತಮ.

ಆದರೆ ಸಾಧನೆಯ ಹಾದಿಯಲ್ಲಿ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ಹಣ ಸಂಪಾದಿಸುವುದಷ್ಟೇ ಸಾಧನೆಯಲ್ಲ. ಗುರಿ, ಶಿಸ್ತು, ಜ್ಞಾನ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯೊಂದಿಗೆ ನಿರಂತರ ಪ್ರಯತ್ನಿಸುವುದೇ ನಿಜವಾದ ಸಾಧನೆ ಎಂದರು.ಸಾಧನ ಸಿರಿ ಪ್ರಶಸ್ತಿ ಪ್ರದಾನ ಶಿವಮೊಗ್ಗದ ಆಸರೆ ಟ್ರಸ್ಟ್‌ ಅಧ್ಯಕ್ಷ ಹಾಗೂ ಪತ್ರಕರ್ತ ಕೆ.ಎಂ. ಸತೀಶಗೌಡ ಅವರಿಗೆ ರಂಭಾಪುರಿ ಜಗದ್ಗುರುಗಳು ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ವಿವಿಧ ಮಠಗಳ ರೇಣುಕ ಶಿವಾಚಾರ್ಯರು, ಗುರುಪಾದ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ನಾಗಭೂಷಣ ಶಿವಾಚಾರ್ಯರು, ಗೌರಿಶಂಕರ ಶಿವಾಚಾರ್ಯರು, ವೀರಭದ್ರ ಶಿವಾಚಾರ್ಯರು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗಮ್ಮ ಹಿರೇಮಠ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಘು ಹಿರೇಮಠ ನಿರೂಪಿಸಿದರು.  


ಸುದ್ದಿ ಓದಿ