ಜಮಖಂಡಿ

ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವ ವ್ಯವಸ್ಥೆಯಾಗಲಿ: ಬಸವರಾಜ ಬೊಮ್ಮಾಯಿ

ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವ ವ್ಯವಸ್ಥೆಯಾಗಲಿ: ಬಸವರಾಜ ಬೊಮ್ಮಾಯಿ

ಲೋಕದರ್ಶನ ವರದಿ 

ಜಮಖಂಡಿ 16 : ಬಸವಣ್ಣನವರು ಸಾರಿದ ದಯೆಯೇ ಧರ್ಮದ ಮೂಲವಯ್ಯ ಎಂಬ ಸಂದೇಶ ಹಾಗೂ ರೇಣುಕಾಚಾರ್ಯರ ಮಾನವಧರ್ಮದ ಆಶಯಗಳು ಒಂದೇ ಆಗಿವೆ. ಹೀಗಿರುವಾಗ ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ರಾಜಕೀಯದಲ್ಲಿ ಬೆಳೆಯಲು ಯಾರ ಅಭ್ಯಂತರವೂ ಇಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. 

ನಗರದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವಧರ್ಮ ಮಂಟಪದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೈತರಿಗೆ ನೀರು, ವಿದ್ಯುತ್‌ಒದಗಿಸುವುದರ ಜೊತೆಗೆ ಅವರ ಬೆಳೆಗಳಿಗೆ ಯೋಗ್ಯ ಬೆಲೆ ನೀಡುವುದು ಅಗತ್ಯ. ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಬದಲಾಗಿ ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತಹ ವ್ಯವಸ್ಥೆರೂಪಿಸಬೇಕು ಎಂದರು. 

ರೈತರ ಬೆವರು ಕೃಷ್ಣೆಯ ನೀರಿನೊಂದಿಗೆ ಭೂಮಿಯನ್ನು ಸೇರಿದಾಗ ಬಂಗಾರದ ಬೆಳೆ ಬರುತ್ತದೆ. ಹೀಗಾಗಿ ರೈತರ ಶ್ರಮಕ್ಕೆ ತಕ್ಕ ಮೌಲ್ಯ ದೊರೆಯುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ರೈತರು ಮಳೆ ಬಂದರೂ ಸಮಸ್ಯೆ, ಮಳೆ ಬಾರದಿದ್ದರೂ ಸಂಕಷ್ಟ ಎದುರಿಸುತ್ತಾರೆ. ಬೆಳೆ ಹೆಚ್ಚಾಗಿ ಬೆಳೆದರೂ ಬೆಲೆ ಕುಸಿತದ ಆತಂಕಕಾಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟ ನಿವಾರಣೆಗೆ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಚಿಂತನೆ ನಡೆಸಬೇಕು.ಸಮಸ್ಯೆಯ ಭಾಗವಾಗಿ ಉಳಿಯದೆ, ಪರಿಹಾರದ ಭಾಗವಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು. 

ಸಕ್ಕರೆ ಕಾರ್ಖಾನೆಗಳು ರೈತರ ಬದುಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ. ಹೀಗಾಗಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.ರೈತರಿಗೆ ಸೂಕ್ತ ದರ ದೊರೆಯುವಂತೆ ಕಾರ್ಖಾನೆಗಳ ಮಾಲೀಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. 


ಸುದ್ದಿ ಓದಿ