ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ; ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವುದು ಮುಖ್ಯ: ಶಾಸಕ ಡಿ.ಎಂ.ಹೊಳೆ
ರಾಯಬಾಗ, 03: ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಪ್ರದರ್ಶಿಸುವುದು ಮುಖ್ಯ ಎಂದು ಶಾಸಕ ಡಿ.ಎಂ.ಹೊಳೆ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಕೂಟದಲ್ಲಿ ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೆ ನ್ಯಾಯಯುತವಾಗಿ ತೀಪು ನೀಡಬೇಕು. ವಿದ್ಯಾರ್ಥಿಗಳು ಕ್ರೀಡೆಯನ್ನು ಸ್ಪರ್ಧೆಯ ಜೊತೆಗೆ ಶಿಸ್ತು ಮತ್ತು ಸೌಹಾರ್ದತೆಯ ವೇದಿಕೆಯಾಗಿ ಪರಿಗಣಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಕುಪ್ಪನವಾದಿ ಮುರುಘೇಂದ್ರ ವಸತಿ ಶಾಲೆಯ ಅಧ್ಯಕ್ಷ ಡಾ. ಕೆ.ಪಿ. ಧರಿಗೌಡ ಮಾತನಾಡಿ, ಧೈರ್ಯ, ಶಿಸ್ತು, ಸ್ವಯಂ ನಿಯಂತ್ರಣ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ಕ್ರೀಡಾಕೂಟಗಳ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಲು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.