ರಾಯಬಾಗ ತಾಲೂಕಿನಲ್ಲಿ ಚಿಕ್ಕಮಕ್ಕಳ ಹಾಗೂ ಸ್ತ್ರೀರೋಗ ತಜ್ಞರಿಲ್ಲದೇ ಜನ ಕಂಗಾಲು
ಲೋಕದರ್ಶನ ವರದಿ
ರಾಯಬಾಗ 06 : ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕ್ಕಮಕ್ಕಳ ಹಾಗೂ ಸ್ತ್ರೀರೋಗ ತಜ್ಞವೈದ್ಯರಿಲ್ಲದಿರುವುದರಿಂದ ಮಕ್ಕಳು ಹಾಗೂ ಗರ್ಭಿಣಿಯರು ಉಚಿತ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದಾರೆ. 4.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ, 2 ವಿಧಾನಸಭೆ ಮತಕ್ಷೇತ್ರಗಳಿರುವ ರಾಯಬಾಗ ತಾಲೂಕಿನ ಜನತೆ ಉಚಿತ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ.
ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆ, ಕುಡಚಿ, ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರ. ಹಾರೂಗೇರಿ, ಹಿಡಕಲ್, ಚಿಂಚಲಿ, ಮೊರಬ, ಬ್ಯಾಕೂಡ ಮತ್ತು ನಸಲಾಪೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇನ್ನುಳಿದ 33 ಗ್ರಾಮಗಳಲ್ಲಿ ಸಬ್‌ಸೆಂಟರ್‌ಗಳಿದ್ದು, ಅಲ್ಲಿರುವ ಸಮುದಾಯ ಆರೋಗ್ಯಾಧಿಕಾರಿಗಳಿಂದ ಚಿಕಿತ್ಸೆ ಅಷ್ಟಕ್ಕಷ್ಟೆ ಎಂಬಂತಾಗಿದೆ. ದೊಡ್ಡ ತಾಲೂಕಿನಲ್ಲಿ ಒಬ್ಬರೂ ಚಿಕ್ಕಮಕ್ಕಳ ಹಾಗೂ ಸ್ತ್ರೀರೋಗ ತಜ್ಞವೈದ್ಯರಿಲ್ಲದಿರುವುದೇ ಖೇದಕರ. ಹಾರೂಗೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ವರ್ಷ ಕಳೆದರೂ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ.
ಮಳೆ ಎಫೆಕ್ಟ್ : ಆಗಾಗ್ಗೆ ಸುರಿಯುತ್ತಿರುವ ಮಳೆ, ಕಾರ್ಮೋಡದ ವಾತಾವರಣ, ತಂಪು ಗಾಳಿ, ನೆತ್ತಿ ಸುಡುವ ಬಿಸಿಲು ಸೇರಿ ಹವಾಮಾನ ವೈಪರೀತ್ಯದಿಂದ 15 ವರ್ಷದೊಳಗಿನ ಚಿಕ್ಕಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದ್ದು, ಕೆಮ್ಮು, ನೆಗಡಿ, ಶೀತಜ್ವರ, ತಲೆನೋವು, ಮೈಕೈನೋವು, ವಾಂತಿ ಸಮಸ್ಯೆ ಪಾಲಕರಲ್ಲಿ ಭಯ ಹುಟ್ಟಿಸಿದೆ. ಮಕ್ಕಳಲ್ಲಿನ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರುವ ಪಾಲಕರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಮಕ್ಕಳಿಗೆ ಕಾಣಿಸಿಕೊಳ್ಳುತ್ತಿರುವ ಈ ಸೋಂಕು ಜ್ವರಕ್ಕೆ ಖಾಸಗೀ ಆಸ್ಪತ್ರೆಗಳೂ ಫುಲ್ ರಶ್ ಆಗಿವೆ.