ಬಡ ರೋಗಿಗಳು ಏನು ಪಾಪ ಮಾಡಿದ್ದಾರೆ : ಶಾಸಕ ಸಿದ್ದು ಸವದಿ ವಿಷಾದ
ವೈದ್ಯರ ಒಳಜಗಳ, ಹಳ್ಳ ಹಿಡಿದ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆ
ಮಹಾಲಿಂಗಪುರ 14: 30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, 6 ಜನ ವೈದ್ಯರು, 10 ಸ್ಟಾಫ್ ನರ್ಸ್ ಸೇರಿ ಒಟ್ಟು 30 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಮೂವರು ಹೆರಿಗೆ ಒಳ ರೋಗಿಗಳನ್ನು ಹೊರತುಪಡಿಸಿದರೆ ಚಿಕ್ಕಮಕ್ಕಳು, ಜನರಲ್ ಪೇಷಂಟ್ ಇಲ್ಲದೇ ಆಸ್ಪತ್ರೆ ಬಿಕೋ ಎನ್ನುತ್ತಿದೆ ಅಂದರೆ ಮಹಾಲಿಂಗಪುರ ರೋಗಮುಕ್ತವೇ ? ಹಾಗಿದ್ದರೆ ಇಷ್ಟು ಜನ ವೈದ್ಯರು ಏಕೆ ? ಎಂದು ಶಾಸಕ ಸಿದ್ದು ಸವದಿ ಕಿಡಿ ಕಾರಿದರು.
ಮಂಗಳವಾರ ಸಂಜೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆ ಸಮೇತ ಪರೀಶೀಲಿಸಿ ಮಾತನಾಡಿದ ಅವರು, ಮುಖ್ಯವೈದ್ಯಾಧಿಕಾರಿ ಹಾಗೂ ವೈದ್ಯರ ನಡುವಿನ ಒಳಜಗಳ, ಗುಂಪುಗಾರಿಕೆಯಿಂದ ಆಸ್ಪತ್ರೆ ಅವ್ಯಸ್ಥೆಯ ಆಗರವಾಗಿದ್ದು, ಬಡ ರೋಗಿಗಳು ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಒಣ ರಾಜಕೀಯ ಮತ್ತು ಒಳ ಜಗಳ ಬಿಟ್ಟು ಕರ್ತವ್ಯ ನಿರ್ವಹಿಸಿ ಇಲ್ಲದಿದ್ದರೆ ಇಲ್ಲಿಂದ ನಿರ್ಗಮಿಸಿ ಎಂದು ತಾಕೀತು ಮಾಡಿದರು.
ಮುಖ್ಯ ವೈದ್ಯಾಧಿಕಾರಿ ಸಿ.ಎಂ.ವಜ್ರಮಟ್ಟಿ, ಅರವಳಿಕೆ ತಜ್ಞ ಸಂಜೀವಕುಮಾರ ತೇಲಿ, ಸ್ತ್ರೀರೋಗ ತಜ್ಞ ಅಭಿನಂದನ್ ಡೋರ್ಲೆ ಶಾಸಕರು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರ ಎದುರೇ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಚ್ಚಾಡಿದ್ದರಿಂದ ಸಿಡಿಮಿಡಿಗೊಂಡ ಶಾಸಕ ಸಿದ್ದು ಸವದಿ, ನಿಮ್ಮನ್ನು ಇಲ್ಲಿ ಸೇರಿಸಿರುವುದು ಜಗಳ ಮಾಡಲು ಅಲ್ಲ, ಒಣ ಪ್ರತಿಷ್ಠೆಗಾಗಿ ಸಾರ್ವಜನಿಕರನ್ನು ಪ್ರಚೋದಿಸಿ ಆಸ್ಪತ್ರೆ ವಾತಾವರಣಕ್ಕೆ ಧಕ್ಕೆ ತರಬೇಡಿ, ಕಳೆದ 6 ತಿಂಗಳಿಂದ ಆರೋಗ್ಯ ರಕ್ಷಾ ಸಮಿತಿ ಇಲ್ಲ ಹಾಗಾಗಿ ಸಮಿತಿ ರಚಿಸಿ, ವೈದ್ಯರು ದೇವರಿದ್ದಂತೆ, ಸರ್ಕಾರಿ ಆಸ್ಪತ್ರೆಗಳು ದೇವಾಲಯಗಳಿದ್ದಂತೆ ಜನರ ಸೇವೆ ಮಾಡಿದರೆ ಸ್ವರ್ಗಕ್ಕೆ ಹೋಗುತ್ತೀರಿ ಹಾಗಾಗಿ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಉತ್ತಮ ಸೇವೆ ನೀಡಿ ಹೆಚ್ಚು ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುವಂತೆ ಶ್ರಮಿಸಿ ಎಂದರು.