ನೇಕಾರರು ಆಧುನಿಕರಣದತ್ತ ಒಲವು ತೋರಬೇಕು: ಹಿಟ್ಟಿನಮಠ
ಮಹಾಲಿಂಗಪುರ 04: ಹಗಲು 12 ತಾಸು ನೇಕಾರನ ಪರಿವಾರ ದುಡಿದರೂ ಅರೆ ಹೊಟ್ಟೆಯಲ್ಲಿ ಮಲಗುತ್ತಿದೆ, ಇದು ಬದಲಾಗಲು ನೇಕಾರರು ಆಧುನಿಕರಣದತ್ತ ಒಲವು ತೋರಬೇಕು ಆಗ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ನೇಕಾರರಿಗೆ ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಪಟ್ಟಣದ ಹಳೇ ಕೆಎಚ್ ಡಿಸಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬಡ ನೇಕಾರರಿಗೆ ಕಾರ್ಮಿಕ ಇಲಾಖೆಯ ಆಹಾರ ಕಿಟ್ ಗಳವಿತರಣಾ ಸಮಾರಂಭದಲ್ಲಿ ಮಾತನಾಡಿದರು. ನೇಕಾರನ ದುಡಿಮೆ ಕೇವಲ ಹೊಟ್ಟೆ ಪಾಡಿಗೆ ಸೀಮಿತವಾಗಿದೆ, ಬೀಡಾ ಅಂಗಡಿ, ಗಾರೆ ಕೆಲಸದವರು ಹಣ ಗಳಿಸಿ, ಸ್ಥಿತಿವಂತರಾಗಿದ್ದಾರೆ. ನೇಕಾರ ಕಾಲಕ್ಕೆ ತಕ್ಕಂತೆ ಆಧುನಿಕತೆಗೆ ಹೊಂದಿಕೊಂಡು ಸರ್ಕಾರದ ಸವಲತ್ತುಗಳೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು, ಆ ನಿಟ್ಟಿನಲ್ಲಿ ನೇಕಾರ ನಾಯಕರು, ಹಿರಿಯರು, ಅಧಿಕಾರಿಗಳು ನೇಕಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರಿಗೆ ಸಹಕಾರಿಯಾಗಬೇಕು ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಮೋದಿಜಿ ಅವರು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ ಯೋಜನೆ ನೇಕಾರರಿಗೆ ವರದಾನವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ನೇಕಾರ ಬಂಧುಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ 120 ಜನ ನೇಕಾರರಿಗೆ ಆಹಾರ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಪುರಸಭಾ ಸದಸ್ಯರಾದ ರವಿ ಜವಳಗಿ, ರಾಜು ಚಮಕೇರಿ, ಶಾಸಕರ ಆಪ್ತ ಕಾರ್ಯದರ್ಶಿ ಡಿ.ಎಚ್. ಸಂಕಾನಟ್ಟಿ, ಯೋಜನಾ ಆಡಳಿತಾಧಿಕಾರಿ ಬಿ.ಎಸ್.ಬಾಲನಾಯಕ, ಸುರೇಶ ಬೀಳಗಿ, ಜಿ.ಜಿ.ಖೋತ, ಶ್ರೀಶೈಲ ಬಾಡಗಿ, ಈರ್ಪ ಕಾಗಿ, ಮಹಾದೇವಪ್ಪ ಕಾಗಿ ಇತರರು ಇದ್ದರು.
ಬಡ ನೇಕಾರರ ಸಂಕಷ್ಟವನ್ನು ಅರಿತು ಕಾರ್ಮಿಕ ಇಲಾಖೆಯಿಂದ ಎರವಲು ಪಡೆದು ರಾಜ್ಯದ 3 ಸಾವಿರ ಬಡನೇಕಾರರಿಗೆ ಉಚಿತ ಆಹಾರದ ಕಿಟ್ ವಿತರಿಸುತ್ತಿರುವುದು ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿದ್ದು ಸವದಿ ಅವರ ಕಾರ್ಯ ಅಭಿನಂದನಾರ್ಹ-
ರವಿ ಜವಳಗಿ, ಪುರಸಭಾ ಸದಸ್ಯ.