ಬಳ್ಳಾರಿ

ಸ್ವಾಮಿಮಲೈ-ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ

ಸ್ವಾಮಿಮಲೈ-ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ

ಬಳ್ಳಾರಿ 29:  ಮರಿಯಮ್ಮನಹಳ್ಳಿಯ ಗುರುಪಾದೇಶ್ವರ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹಾಗೂ ಹಗರಿಬೊಮ್ಮನಹಳ್ಳಿಯ ಹಾಲಸಿದ್ದೇಶ್ವರ ಸ್ವಾಮಿಜಿಗಳ ನೇತೃತ್ವದಲ್ಲಿ ವಿಜಯನಗರ ನಾಗರೀಕ ವೇದಿಕೆಯ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ಕಬ್ಬಿಣ ಅದಿರಿನ ಕೊರತೆಯಿಂದ ಹಲವು ವರ್ಷಗಳಿಂದ ಬಂದ್ ಆಗಿದ್ದು, ಕಾರ್ಖಾನೆಯನ್ನು ಪುನರರಾಂಭಿಸಲು ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಕಾರ್ಖಾನೆಯ ಪುನರರಾಂಭಕ್ಕೆ ಅಗತ್ಯವಾಗಿರುವ ಅದಿರು ಪೂರೈಸಲು ಸಂಡೂರು ತಾಲೂಕಿನ ಸ್ವಾಮಿಮಲೈ-ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ.  

ಸ್ವಾಮಿಮಲೈ ಅರಣ್ಯ ಪ್ರದೇಶದ ದೇವದಾರಿಯಲ್ಲಿ 485.77 ಹೆಕ್ಟರ್ ಹಾಗೂ ರಾಮನಮಲೈ ಅರಣ್ಯ ಪ್ರದೇಶದ 60-70 ಹೆಕ್ಟರ್ ಅರಣ್ಯದಲ್ಲಿ ಗಣಿಗಾರಿಕೆ ನಡೆಸುವುದು ನಿಸರ್ಗದ ಮೇಲೆ ಎಸಗುವ ಘೋರ ಅತ್ಯಾಚಾರಕ್ಕೆ ಸಮಾನವಾಗಿದೆ.  

ಬಯಲುಸ್ವಾಮಿಯ ಬರದ ನಾಡಿನಲ್ಲಿರುವ ಸಂಡೂರಿನ ಕಿರು ಅರಣ್ಯ ಪ್ರದೇಶ ಅತ್ಯಂತ ವಿಶಿಷ್ಟವಾಗಿದೆ. ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕು ಎಂದು ಕರೆಯಲ್ಪಡುವ ಈ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಪ್ರಕೃತಿಯ ಸಮತೋಲನ ಏರುಪೇರಾಗುತ್ತದೆ.  

ಗಣಿಗಾರಿಕೆ ಆರಂಭವಾದರೆ 99330 ಮರಗಳು ನಾಶವಾಗಿ ಅಪರೂಪದ ವನ್ಯ ಜೀವಿಗಳ ಸಂತತಿಯೂ ಅಳಿಯಲಿದೆ. ಸ್ವಾಮಿಮಲೈ (ಕುಮಾರ ಸ್ವಾಮಿ ಗುಡ್ಡ) ಪಾಕೃತಿಕವಾಗಿ ಸಂಪತ್ಬರಿತವಾಗಿದ್ದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಗಿರಿಧಾಮವಾಗಿದೆ.  

ಇಂಥದೊಂದು ಅಪರೂಪದ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯದವೆಂದು ಘೋಷಿಸಿ ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಬೇಕೆಂಬುದು ಈ ಪ್ರದೇಶದ ಜನರ ಹಾಗೂ ನಿಸರ್ಗ ಪ್ರಿಯರ ಒತ್ತಾಸೆಯಾಗಿದೆ. ಈ ಪ್ರದೇಶದಲ್ಲಿ ಹಾಗೂ ಕುಮಾರಸ್ವಾಮಿ ದೇವಸ್ಥಾನದ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು 8 ವರ್ಷಗಳ ಹಿಂದೆ ನಾನು ದಿ: 10.11.2016ರಲ್ಲಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಮನವಿಗೆ ಸ್ಪಂಧಿಸಿದ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ದಿ: 17.11.1986 ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.  

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 67 ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಯಾವುದೇ ಅರಣ್ಯ ಪ್ರದೇಶವಿಲ್ಲ. ಇಂಥಹ ಗಣಿಗಳಿಂದ ಅದಿರು ಪೂರೈಕೆ ಮಾಡಿ ಭದ್ರಾವತಿಯ ವಿ.ಐ.ಎಸ್‌.ಎಲ್‌. ಕಾರ್ಖಾನೆ ಪುನರ್ ಆರಂಭಕ್ಕೆ ಯಾರೂ ವಿರೋಧವಿಲ್ಲ.  

ಆದರೆ ಸ್ವಾಮಿಮಲೈ ಮತ್ತು ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಪ್ರಕೃತಿಯ ಅಮೂಲ್ಯ ಸಂಪತ್ತಿನ ವಿನಾಶದಿಂದ ಮಳೆ ಬೀಳುವ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಪ್ರಾಕೃತಿಕ ಮಾಲಿನ್ಯ ಉಂಟಾಗಿ ಜನರ ಆರೋಗ್ಯ ಮತ್ತು ಸಾಮಾಜಿಕ ಬದುಕಿನ ಮೇಲೆ ದುಷ್ಪರಿಣಾಮ ಬೀರುವುದರಿಂದ ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ನಮ್ಮ ಕಳಕಳಿಯ ಆಗ್ರಹವಾಗಿದೆ ಎಂದರು. 

ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ವಿಶೇಷ ಹಾಗೂ ಅಳಿವಿನಂಚಿನಲ್ಲಿರುವ ಓಷಧಿಯ ಸಸ್ಯ ಸಂಪತ್ತಿನ ಗಣಿ ಇಲ್ಲಿದೆ. ಚಿರತೆ, ಕರಡಿ, ಮುಳ್ಳು ಹಂದಿ, ಪುನುಗುಬೆಕ್ಕು, ಕೊಂಡಗುರಿ, ಚುಕ್ಕೆಪುನಗು, ನವಿಲುಗಳ ಹಿಂಡು ಹೀಗೆ ಅಪರೂಪದ ಜೀವ ವೈವಿದ್ಯದ ಸೊಬಗಿನ ಕಣಜ ಇದಾಗಿದೆ. ಚಾಲುಕ್ಯರ ಹಾಗೂ ರಾಷ್ಟರಕೂಟರ ಕಾಲದಲ್ಲಿ ನಿರ್ಮಿಸಲಾದ ಕುಮಾರಸ್ವಾಮಿ, ಪಾರ್ವತಿದೇವಿ, ನವಿಲುಸ್ವಾಮಿ ದೇಗುಲಗಳು ಇಲ್ಲಿವೆ. ಆದುದರಿಂದ ಕುಮಾರ ಸ್ವಾಮಿ ದೇವಸ್ಥಾನದ ಪರಿಸರ ಮತ್ತು ಪಾವಿತ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಯು.ಆಂಜನೇಯಲು, ಎ.ಪಂಪಣ್ಣ, ಎ.ರಾಮಚಂದ್ರ, ಗೌಡಣ್ಣನವರ್, ಡಾ.ಲಕ್ಷ್ಮಣ, ಡಿ.ವಿಶ್ವನಾಥ, ನಜೀರ್ ಸಾಬ್, ಸಣ್ಣ ಕಾಸಿ, ಹೆಚ್‌.ತಿಪ್ಪೇಸ್ವಾಮಿ, ಜಿ.ರಾಜೇಂದ್ರ, ಡಾ.ಶಶಿಕಾಂತ್  ಜೋಳೇಕರ್, ಕೆ.ವಿ.ರಾಮುಲು ಪ್ರಭಾಕರ್, ಎಂ.ಹೊನ್ನೂರ​‍್ಪ, ಜಿ.ರಮೇಶ, ಪಂಪಾಪತಿ, ಪಂಪನಗೌಡ, ಜಿ.ಜಂಬಣ್ಣ, ಪ್ರಭಾಕರ್, ಜಾಲಗಾರ ವೆಂಕಟೇಶ್, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ